ಕರಾವಳಿ ಟಾಪ್ ನ್ಯೂಸ್
ಪುತ್ತೂರು: ಗೌರಿ ಹೊಳೆ ಬಳಿ ಸ್ಕೂಟರ್ ನಿಲ್ಲಿಸಿ ಯುವಕ ನಾಪತ್ತೆ!
– ಹೊಳೆಗೆ ಹಾರಿದನೋ..? ಮೃತದೇಹಕ್ಕಾಗಿ ಶೋಧ
– ಬೆಳ್ತಂಗಡಿ: ಮಳೆಯಿಂದಾಗಿ ಶಿಶಿಲೇಶ್ವರ ದೇವಸ್ಥಾನಕ್ಕೆ ನುಗ್ಗಿದ ನೀರು!
– ಮಂಗಳೂರು: ಸರ್ಕಾರಿ ಬಸ್ ಮೇಲೆ ಉರುಳಿ ಬಿದ್ದ ಮರ!
– ಕಟೀಲು ಕ್ಷೇತ್ರಕ್ಕೆ ಬಾಲಿವುಡ್ ನಿರ್ದೇಶಕಿ ಏಕ್ತಾ ಕಪೂರ್ ಭೇಟಿ!
– ಮಂಗಳೂರು: ಮೊಗೇರ್ ಕುದ್ರು ಗ್ರಾಮ ಜಲಾವೃತ…!
NAMMUR EXPRESS NEWS
ಪುತ್ತೂರು: ಹೊಳೆಗೆ ಹಾರಿ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದ್ದು, ಈ ಘಟನೆ ಪುತ್ತೂರು-ಸವಣೂರು ರಸ್ತೆಯ ಸರ್ವೆಯ ತುಂಬಿ ಹರಿಯುವ ಗೌರಿ ಹೊಳೆ ಬಳಿ ನಡೆದಿದೆ. ಅಗ್ನಿ ಶಾಮಕ ದಳದವರು ಸ್ಥಳಕ್ಕೆ ಧಾವಿಸಿದ್ದು ಹೊಳೆಯಲ್ಲಿ ಸನ್ಮಿತ್ ಮೃತದೇಹಕ್ಕಾಗಿ ಹುಡುಕಾಟ ಆರಂಭಿಸಿದ್ದಾರೆ.
ಮುಕ್ರಂಪಾಡಿಯ ಇಂಡಸ್ಟ್ರಿಯಲ್ ಎಸ್ಟೇಟ್ ಬಳಿಯ ಮಹೀಂದ್ರ ಶೋರೂಂ ನ ಉದ್ಯೋಗಿ ಸನ್ಮಿತ್ (21) ಹೊಳೆಗೆ ಹಾರಿದ ಯುವಕನಾಗಿದ್ದಾನೆ. ಈತನ ಸ್ಕೂಟರ್ ಹೊಳೆಯ ಬದಿಯಿಂದ 150ಮೀ ದೂರದಲ್ಲಿ ನಿಲ್ಲಿಸಿದ್ದು ಅದರಲ್ಲಿ ಮೊಬೈಲ್ ಫೋನ್, ಪರ್ಸ್, ಹೆಲ್ಮೆಟ್, ಟಿಫಿನ್ ಬಾಕ್ಸ್ ಸಹಿತ ಪತ್ತೆಯಾಗಿದೆ.
ಕುದ್ಮಾರು ಗ್ರಾಮದ ತೆಕ್ಕಿತ್ತಡಿ ನಿವಾಸಿ ಚಂದ್ರ ಗೌಡ ಎಂಬವರ ಪುತ್ರನಾಗಿರುವ ಸನ್ಮಿತ್ ಮಹೇಂದ್ರ ಶೋರೂಂ ನಲ್ಲಿ ಉದ್ಯೋಗಿಯಾಗಿದ್ದು ಕೆಲಸಕ್ಕೆ ಹಾಜರಾಗಿದ್ದ. ಪ್ರತಿದಿನ ಸಂಜೆ 6.30ರ ವೇಳೆಗೆ ಮನೆ ಸೇರುತ್ತಿದ್ದ ಸನ್ಮಿತ್ ನಿನ್ನೆಯ ದಿನ ತಂದೆಗೆ ಕರೆಮಾಡಿ ಮನೆ ತಲುಪುವಾಗ ರಾತ್ರಿ 10 ಗಂಟೆಯಾಗಬಹುದೆಂದು ತಿಳಿಸಿದ್ದ. ರಾತ್ರಿ 11 ಗಂಟೆಯಾದರೂ ಮಗ ಮನೆಗೆ ಬಾರದಿದ್ದಾಗ ತಂದೆ ಮತ್ತೆ ಸನ್ಮಿತ್ ಮೊಬೈಲ್ ಗೆ ಕರೆ ಮಾಡಿದ್ದು, ಕರೆ ಸ್ವೀಕರಿಸುತ್ತಿರಲಿಲ್ಲ
ರಾತ್ರಿ 1 ರವರೆಗೂ ಮಗ ಬಾರದಿದ್ದಾಗ ಪರಿಚಯದವರೊಂದಿಗೆ ಕಾರಿನಲ್ಲಿ ಮಗನನ್ನು ಹುಡುಕುತ್ತಾ ಬಂದಿದ್ದಾರೆ. ಈ ವೇಳೆ ಸರ್ವೆ ಹೊಳೆ ಬಳಿ ಮಗನ ಸ್ಕೂಟರ್ ಕಂಡು ಸಂಶಯಗೊಂಡ ತಂದೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿದಾಗ ಸ್ಕೂಟರ್ ಮತ್ತು ಅದರಲ್ಲಿದ್ದ ವಸ್ತುಗಳು ಸನ್ಮಿತ್ ಗೆ ಸೇರಿದ್ದೆಂದು ಖಚಿತವಾಗಿದೆ. ಅಗ್ನಿ ಶಾಮಕ ದಳದವರು ಸ್ಥಳಕ್ಕೆ ಧಾವಿಸಿದ್ದು ಹೊಳೆಯಲ್ಲಿ ಸನ್ಮಿತ್ ಮೃತದೇಹಕ್ಕಾಗಿ ಹುಡುಕಾಟ ಆರಂಭಿಸಿದ್ದಾರೆ. ಸನ್ಮಿತ್ ನಿಜವಾಗಿಯೂ ಹೊಳೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆಯೇ? ಆತ್ಮಹತ್ಯೆ ಮಾಡಿಕೊಂಡಿದ್ದಾದರೂ ಯಾಕೆ? ಎನ್ನುವ ಪ್ರಶ್ನೆಗೆ ಪೊಲೀಸ್ ತನಿಖೆಯ ಬಳಿಕ ಉತ್ತರ ಸಿಗಬೇಕಾಗಿದೆ.
ಬೆಳ್ತಂಗಡಿ: ಮಳೆಯಿಂದಾಗಿ ಶಿಶಿಲೇಶ್ವರ ದೇವಸ್ಥಾನಕ್ಕೆ ನುಗ್ಗಿದ ನೀರು!
ಬೆಳ್ತಂಗಡಿ: ಎಡೆಬಿಡದೇ ಸುರಿದ ಮಳೆಯಿಂದಾಗಿ ಬೆಳ್ತಂಗಡಿ ತಾಲೂಕಿನ ಶಿಶಿಲೇಶ್ವರ ದೇವಸ್ಥಾನದ ಒಳಗೆ ನೀರು ನುಗ್ಗಿದೆ.
ದೇವಾಲಯದ ಪಕ್ಕದಲ್ಲೇ ಕಪಿಲಾ ನದಿ ಹರಿಯುತ್ತಿರುವ ಕಾರಣ ನದಿಯಲ್ಲಿ ನೀರಿನ ಮಟ್ಟ ಏರಿಕೆಯಾಗಿ ಪ್ರಾಂಗಣದವರೆಗೆ ನೀರು ತುಂಬಿದೆ. ಭಾರೀ ಮಳೆಯಿಂದಾಗಿ ಪ್ರವಾಹದ ಭೀತಿ ಎದುರಾಗಿದ್ದು, ಬೆಳ್ತಂಗಡಿ ತಾಲೂಕಿನಲ್ಲಿ ಇಂದು ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ.
ಬೆಳ್ತಂಗಡಿ: ಮಧ್ಯ ಹೊಂಡಕ್ಕೆ ಬಿದ್ದು ಸಿಲುಕಿದ ಲಾರಿ!
ಬೆಳ್ತಂಗಡಿ : ಅವೈಜ್ಞಾನಿಕ ಕಾಮಗಾರಿಯಿಂದ ಪುಂಜಾಲಕಟ್ಟೆ – ಚಾರ್ಮಾಡಿ ರಸ್ತೆಯಲ್ಲಿ ಹಲವರು ಅಪಘಾತಗಳು ನಡೆಯುತ್ತಿದ್ದು. ಹಲವು ದೂರುಗಳು ಬಂದ್ರು ಅತ್ತ ಗುತ್ತಿಗೆದಾರ – ಇತ್ತ ಅಧಿಕಾರಿಗಳು ನಿದ್ದೆ ಮಂಪರಿನಲ್ಲಿದ್ದಾರೆ.
ಬೆಳ್ತಂಗಡಿ ತಾಲೂಕಿನ ಮುಂಡಾಜೆ ಗ್ರಾಮದ ಸೀಟು ಕಾಡು ಎಂಬಲ್ಲಿ ಜು.19 ರಂದು ಅವೈಜ್ಞಾನಿಕ ರಸ್ತೆ ಕಾಮಗಾರಿಯಿಂದ ಚಲಿಸುತ್ತಿದ್ದ ಲಾರಿ ರಸ್ತೆಯ ಮಧ್ಯ ಇರುವ ಹೊಂಡಕ್ಕೆ ಚಕ್ರ ಸಿಲುಕಿ ಜಖಂ ಆಗಿರುವ ಘಟನೆ ನಡೆದಿದೆ. ಘಟನೆಯ ಬಗ್ಗೆ ಮಾಹಿತಿ ತಿಳಿದ ಬೆಳ್ತಂಗಡಿ ತಹಶೀಲ್ದಾರ್ ಪೃಥ್ವಿ ಸಾನಿಕಂ ಸ್ಥಳಕ್ಕೆ ಹೋಗಿ ಕಾಮಗಾರಿಯ ಇಂಜಿನಿಯರನ್ನು ಸ್ಥಳಕ್ಕೆ ತರಾಟೆಗೆ ತೆಗೆದುಕೊಂಡು ಲಾರಿಯನ್ನು ತಕ್ಷಣ ಕ್ರೇನ್ ಮೂಲಕ ಸ್ಥಳಾಂತರಿಸಲು ಎಚ್ಚರಿಕೆ ನೀಡಿದರು.
ಘಟನಾ ಸ್ಥಳಕ್ಕೆ ಮಾಹಿತಿ ತಿಳಿದು ಬೆಳ್ತಂಗಡಿ ತಹಶೀಲ್ದಾರ್ ಪೃಥ್ವಿ ಸಾನಿಕಂ , ಧರ್ಮಸ್ಥಳ ಸಬ್ ಇನ್ಸೆಕ್ಟರ್ ಕಿಶೋರ್.ಪಿ.ಗೌಡ, ಬೆಳ್ತಂಗಡಿ ಸಂಚಾರಿ ಸಬ್ ಇನ್ಸೆಕ್ಟರ್ ಅರ್ಜುನ್ ಮತ್ತು ಸಿಬ್ಬಂದಿಗಳು ಇದ್ದರು.
ಮಂಗಳೂರು: ಸರ್ಕಾರಿ ಬಸ್ ಮೇಲೆ ಉರುಳಿ ಬಿದ್ದ ಮರ!
ಮಂಗಳೂರು: ಮಳೆಯಿಂದಾಗಿ ಸರ್ಕಾರಿ ಬಸ್ ಮೇಲೆ ಮರ ಉರುಳಿ ಬಿದ್ದ ಘಟನೆ ಮಂಗಳೂರಿನಲ್ಲಿ ಸಂಭವಿಸಿದೆ.
ನಂತೂರಿನಲ್ಲಿ ಎಂಬಲ್ಲಿ ಬಸ್ ನ ಮೇಲೆ ಮರ ಉರುಳಿ ಬಿದ್ದಿದ್ದು, ಬಸ್ ನಲ್ಲಿದ್ದ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ.
ಮರ ಉರುಳಿ ಬಿದ್ದ ಪಕ್ಕದಲ್ಲೇ ಆಟೋ ರಿಕ್ಷಾ ಪಾರ್ಕಿಂಗ್ ಜನ ಕೂಡಾ ಅದೃಷ್ಟವಶಾತ್ ಅಪಾಯದಿಂದ ಪಾರಾಗಿದ್ದಾರೆ.
ಕಟೀಲು ಕ್ಷೇತ್ರಕ್ಕೆ ಬಾಲಿವುಡ್ ನಿರ್ದೇಶಕಿ ಏಕ್ತಾ ಕಪೂರ್ ಭೇಟಿ!
ಕಟೀಲು: ದಕ್ಷಿಣ ಕನ್ನಡ ಜಿಲ್ಲೆಯ ಪ್ರಸಿದ್ದ ಕ್ಷೇತ್ರ ಕಟೀಲು ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನಕ್ಕೆ ಬಾಲಿವುಡ್ ನಿರ್ದೇಶಕಿ ಹಾಗೂ ನಿರ್ಮಾಪಕಿ ಏಕ್ತಾ ಕಪೂರ್ ಜು.19ರಂದು ಭೇಟಿ ನೀಡಿದ್ದಾರೆ.
ತಮ್ಮ ಕುಟುಂಬದ ಜೊತೆ ಮೊದಲ ಬಾರಿಗೆ ಕ್ಷೇತ್ರಕ್ಕೆ ಭೇಟಿ ನೀಡಿರುವ ಅವರು ಶ್ರೀದೇವಿಗೆ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ದೇವಸ್ಥಾನದ ವತಿಯಿಂದ ದೇವಿಯ ವಿಶೇಷ ವಸ್ತ್ರ ನೀಡಿ ಅವರನ್ನು ಗೌರವಿಸಲಾಯಿತು.
ಕೆಲ ಹೊತ್ತು ದೇವಸ್ಥಾನದಲ್ಲಿ ತನ್ನ ಕುಟುಂಬದ ಜೊತೆ ಸಮಯ ಕಳೆದ ಅವರು ನಂತರ ಅಲ್ಲಿಂದ ಈ ಕ್ಷೇತ್ರದ ಹತ್ತಿರದಲ್ಲೇ ಇರುವ ಶಿಬರೂರು ಕೊಡಮಣಿತ್ತಾಯ ದೈವಸ್ಥಾನಕ್ಕೆ ಭೇಟಿ ನೀಡಿದರು. ಅಲ್ಲಿಯೂ ಇವರನ್ನು ಕ್ಷೇತ್ರದ ವತಿಯಿಂದ ಗೌರವಿಸಲಾಯಿತು.
ಮಂಗಳೂರು: ಮೊಗೇರ್ ಕುದ್ರು ಗ್ರಾಮಕ್ಕೆ ಜಿಲ್ಲಾಡಳಿತ ಭೇಟಿ
ಮಂಗಳೂರು: ನಿನ್ನೆ ಫಲ್ಗುಣಿ ನದಿ ನೀರು ನುಗ್ಗಿದ್ದ ಪರಿಣಾಮ ಜಲಾವೃತಗೊಂಡಿರುವ ಮಂಗಳೂರು ತಾಲೂಕಿನ ಮೊಗೇರ್ ಕುದ್ರು ಗ್ರಾಮಕ್ಕೆ ಇಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲೈ ಮುಗಿಲನ್ ಭೇಟಿ ನೀಡಿದ್ದಾರೆ.
ನೀರು ತುಂಬಿಕೊಂಡಿರುವ ಕಾರಣ ದೋಣಿ ಮೂಲಕ ಗ್ರಾಮಕ್ಕೆ ತೆರಳಿದ ಜಿಲ್ಲಾಧಿಕಾರಿ ಮುಲೈ ಮುಗಿಲನ್, ಜಿ.ಪಂ. ಸಿಇಒ ಡಾ. ಆನಂದ್ ಮತ್ತು ಮಂಗಳೂರು ಎಸಿ ಹರ್ಷವರ್ಧನ್ ಸಂತ್ರಸ್ತರ ಜೊತೆ ಮಾತುಕತೆ ನಡೆಸಿದ್ದಾರೆ.
ಫಲ್ಗುಣಿ ನದಿಗೆ ಅಡ್ಡಲಾಗಿ ಕಟ್ಟಿರುವ ಕಿಂಡಿ ಅಣೆಕಟ್ಟಿನಿಂದ ಸೃಷ್ಟಿಯಾಗುತ್ತಿರುವ ಸಮಸ್ಯೆಯನ್ನು ಜಿಲ್ಲಾಡಳಿತಕ್ಕೆ ಸಂತ್ರಸ್ಥರು ಈ ವೇಳೆ ವಿವರಿಸಿದ್ದಾರೆ.
ಮಳೆಗಾಲ ಮುಗಿದ ಕೂಡಲೇ ಸಭೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿರುವ ಜಿಲ್ಲಾಧಿಕಾರಿ, ಸಂತ್ರಸ್ತರಾಗಿರುವ 80 ಜನರನ್ನು ಸ್ಥಳಾಂತರಕ್ಕೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಸುಮಾರು 30ಕ್ಕೂ ಹೆಚ್ಚು ಮನೆಗಳಿಗೆ ಸಮಸ್ಯೆ ಎದುರಾಗಿದ್ದು, ಮನೆಗಳಿಗೆ ಭೇಟಿ ನೀಡಿದ ಜಿಲ್ಲಾಧಿಕಾರಿ ವೃದ್ಧರನ್ನು ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಮನವೊಲಿಸಿದ್ದಾರೆ.