ಕರಾವಳಿ ಟಾಪ್ ನ್ಯೂಸ್
– ಕಾಸರಗೋಡು: ಲಾರಿ ಹರಿದು ಇಬ್ಬರು ಮಕ್ಕಳು ಸಹಿತ ಐವರು ಮೃತ್ಯು
– ಕಾರ್ಕಳ: ದುರ್ಗಾ ಫಾಲ್ಸ್ಗೆ ಬಂದಿದ್ದ ವಿದ್ಯಾರ್ಥಿ ನೀರು ಪಾಲು!
– ನಲ್ಲೂರು: ಹೊಳೆಗೆ ಹಾರಿ ಮಹಿಳೆ ಆತ್ಮಹತ್ಯೆ
– ಮಂಗಳೂರು : ಬೈಕ್ ಡಿಕ್ಕಿಯಾಗಿ ಪಾದಚಾರಿ ಮೃತ್ಯು
NAMMUR EXPRESS NEWS
ಕಾಸರಗೋಡು: ತ್ರಿಶೂರಿನ ನಾಟಿಗ ಜಿ.ಕೆ. ಥಿಯೇಟರ್ ಪರಿಸರದ ರಾಷ್ಟ್ರೀಯ ಹೆದ್ದಾರಿಯ ಮೇತುವೆಯಲ್ಲಿ ಮರ ಸಾಗಿಸುತ್ತಿದ್ದ ಲಾರಿಯೊಂದು ನಿಯಂತ್ರಣ ಕಳೆದುಕೊಂಡು ರಸ್ತೆ ಬದಿಯಲ್ಲಿ ನಿದ್ದೆ ಮಾಡಿದ್ದವರ ಮೇಲೆ ಹರಿದು ಇಬ್ಬರು ಮಕ್ಕಳು ಸಹಿತ ಐವರು ಮೃತಪಟ್ಟ ಘಟನೆ ನಡೆದಿದೆ.
ಮೃತಪಟ್ಟವರು ಕಾಳಿಯಪ್ಪನ್ (50), ನಾಗಮ್ಮ (39), ಬಂಗಾಳಿ (20), ಜೀವನ್(4) ಮತ್ತು ಇನ್ನೊಂದು ಮಗು ಎಂದು ತಿಳಿದು ಬಂದಿದೆ. ಮೃತರು ಗೋವಿಂದಪುರಂ ಚೆಮ್ಮಣಂತೋಡ್ ನಿವಾಸಿಗಳು ಎಂದು ತಿಳಿದು ಬಂದಿದೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
* ಕಾರ್ಕಳ: ದುರ್ಗಾ ಫಾಲ್ಸ್ಗೆ ಬಂದಿದ್ದ ವಿದ್ಯಾರ್ಥಿ ನೀರು ಪಾಲು!
ಕಾರ್ಕಳ : ದುರ್ಗಾ ಗ್ರಾಮ ಪಂಚಾಯತ್ ವ್ಯಾಪ್ತಿಯ ದುರ್ಗಾ ಫಾಲ್ಸ್ಗೆ ಬಂದಿದ್ದ ವಿದ್ಯಾರ್ಥಿಯೋರ್ವ ನೀರು ಪಾಲಾದ ಆಘಾತಕಾರಿ ಘಟನೆ ನ. 28ರಂದು ಮಧ್ಯಾಹ್ನ ಸಂಭವಿಸಿದೆ. ಉಡುಪಿಯ ಮಿಲಾಗ್ರೀಸ್ ಕಾಲೇಜಿನ ದ್ವಿತೀಯ ವರ್ಷದ ಬಿ.ಕಾಂ. ವಿದ್ಯಾರ್ಥಿ ಜಾಯಲ್ ಡಯಾಸ್ (19) ಮೃತ ವಿದ್ಯಾರ್ಥಿ. 7 ಮಂದಿ ವಿದ್ಯಾರ್ಥಿಗಳ ತಂಡ ದುರ್ಗಾ ಫಾಲ್ಸ್ಗೆ ಬಂದಿದ್ದು, ನೀರಿನಲ್ಲಿ ಆಟವಾಡುತ್ತಿದ್ದ ಸಂದರ್ಭ ಜಾಯಲ್ ಡಯಾಸ್ ಆಯ ತಪ್ಪಿ ನೀರು ಪಾಲಾಗಿದ್ದಾನೆ ಎನ್ನಲಾಗುತ್ತಿದೆ. ಕಾರ್ಕಳ ಗ್ರಾಮಾಂತರ ಠಾಣಾ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ. ಇನ್ನಷ್ಟು ಹೆಚ್ಚಿನ ಮಾಹಿತಿ ತಿಳಿದು ಬರಬೇಕಾಗಿದೆ.
* ನಲ್ಲೂರು : ಹೊಳೆಗೆ ಹಾರಿ ಮಹಿಳೆ ಆತ್ಮಹತ್ಯೆ
ಕಾರ್ಕಳ : ಹೊಳೆಗೆ ಹಾರಿ ಮಹಿಳೆಯೋರ್ವರು ಆತ್ಮಹತ್ಯೆ ಮಾಡಿಕೊಂಡ ಘಟನೆ ನ. 27ರಂದು ನಲ್ಲೂರಿನಲ್ಲಿ ಸಂಭವಿಸಿದೆ. ಬೋರ್ಕಟ್ಟೆ ನಿವಾಸಿ ಲೀಲಾ (71) ಆತ್ಮಹತ್ಯೆಗೆ ಶರಣಾದವರು. ಇವರು ಕಳೆದ 7 ವರ್ಷಗಳ ಹಿಂದೆ ಬಿದ್ದು ತಲೆಗೆ ಏಟಾದ ಕಾರಣ ನರ ದೌರ್ಬಲ್ಯದಿಂದ ಬಳಲುತ್ತಿದ್ದರು. ಇದೇ ಕಾರಣವಾಗಿ ಜೀವನದಲ್ಲಿ ಜುಗುಪ್ಪೆಗೊಂಡು ಮನೆಯ ಬಳಿಯಿರುವ ಹೊಳೆಯ ನೀರಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
* ಮಂಗಳೂರು : ಬೈಕ್ ಡಿಕ್ಕಿಯಾಗಿ ಪಾದಚಾರಿ ಮೃತ್ಯು
ಮಂಗಳೂರು: ನಗರದ ಹೊರವಲಯದ ಅಡ್ಯಾರುಕಟ್ಟೆ ಬಳಿ ಬೈಕ್ ಡಿಕ್ಕಿಯಾಗಿ ಪಾದಚಾರಿಯೋರ್ವರು ಮೃತಪಟ್ಟ ಘಟನೆ ಸಂಭವಿಸಿದೆ. ಮೃತ ವ್ಯಕ್ತಿ ಅಬ್ದುಲ್ ಖಾದರ್ (60) ಎಂದು ತಿಳಿದು ಬಂದಿದೆ. ಅವರು ರಸ್ತೆ ದಾಟುತ್ತಿದ್ದಾಗ ಮಂಗಳೂರು ಕಡೆಗೆ ಸಂಚರಿಸುತ್ತಿದ್ದ ಬೈಕ್ ಡಿಕ್ಕಿಯಾಗಿದೆ ಎಂದು ತಿಳಿದು ಬಂದಿದೆ. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡು ಪ್ರಜ್ಞಾಹೀನರಾಗಿದ್ದ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಅದಾಗಲೇ ಅವರು ಮೃತಪಟ್ಟಿರುವುದಾಗಿ ತಿಳಿದು ಬಂದಿದೆ. ಈ ಕುರಿತು ಮಂಗಳೂರು ಸಂಚಾರ ದಕ್ಷಿಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.