ಯಕ್ಷಗಾನ ಮೇಳಗಳ ತಿರುಗಾಟ ಶುರು!
– ಕರಾವಳಿ, ಮಲೆನಾಡಲ್ಲಿ ಇನ್ನು ಚಂಡೆ ಸದ್ದು
– ಚಳಿ ನಡುವೆ ಯಕ್ಷಗಾನ ಪ್ರಿಯರಿಗೆ ಸಂಭ್ರಮ
NAMMUR EXPRESS NEWS
ಮಂಗಳೂರು/ ಉಡುಪಿ: ಕರಾವಳಿ ಮತ್ತು ಮಲೆನಾಡಿನ ಮೆಚ್ಚಿನ ಕಲೆ ಯಕ್ಷಗಾನದ ಸಂಭ್ರಮ ಇದೀಗ ಶುರುವಾಗಿದೆ. ಈಗಾಗಲೇ ಕೆಲವು ಮೇಳಗಳು ತಿರುಗಾಟ ಆರಂಭಿಸಿದ್ದರೆ, ನವೆಂಬರ್ 13ರಿಂದ 29ರ ನಡುವೆ ಇನ್ನಷ್ಟು ಮೇಳಗಳು ಸಂಚಾರ ಹೊರಡಲಿವೆ. ಹೊಸ ಪ್ರಸಂಗ, ಹೊಸ ಕಲಾವಿದರು ಮೇಳದಲ್ಲಿ ಸ್ಥಾನ ಪಡೆಯು ವುದು, ಈಗಾಗಲೇ ಮೇಳದಲ್ಲಿ ಇದ್ದವರಿಗೆ ವೇಷದ ಸ್ಥಾನದಲ್ಲಿ ಭಡ್ತಿ ದೊರೆಯುವುದು, ಭಾಗವತರು ಹಾಗೂ ಹಿಮ್ಮೇಳ ಕಲಾ ವಿದರ ಬದಲಾವಣೆ, ಕಟೀಲಿನ 6 ಮೇಳಗಳಲ್ಲಿ ನಡೆಯುವ ಆಂತರಿಕ ವರ್ಗಾವಣೆ, ಆರಂಭವಾಗುವ ಹೊಸ ಮೇಳಗಳು, ಅದಕ್ಕೆ ಸೇರ್ಪಡೆಯಾಗುವ ಕಲಾವಿದರು ಯಾರು ಎಂಬುದರ ಬಗ್ಗೆ ಚರ್ಚೆ ನಡೆಯುತ್ತಿದೆ.
ಧರ್ಮಸ್ಥಳ ಮೇಳದ ತಿರುಗಾಟ ಆರಂಭ
ಧರ್ಮಸ್ಥಳ ಮೇಳ ನ.3ರಿಂದ ಕ್ಷೇತ್ರದಲ್ಲಿ ಸೇವೆಯಾಟ ಆರಂಭಿಸಿದ್ದು, ನ.21ರಿಂದ ಕ್ಷೇತ್ರದ ಹೊರಗಡೆಗೆ ತಿರುಗಾಟ ಹೊರಡಲಿದೆ. ಕಮಲಶಿಲೆ ಮೇಳ ನ.5ರಂದು ಸೇವೆಯಾಟ ಆರಂಭಿಸಿದ್ದು ಬೆಂಗಳೂರಿನಲ್ಲಿ ನ. 17ರ ವರೆಗೆ ಬೆಂಗಳೂರಿನಲ್ಲಿ ಪ್ರದರ್ಶನ ನೀಡಲಿದೆ. ನ. 5ರಂದು ಹಟ್ಟಿಯಂಗಡಿ, ಪಾವಂಜೆ ಮೇಳ ನ.13, ಕೋಟ ಮೇಳ ನ.17, ಮಾರಣಕಟ್ಟೆ ಮೇಳ ನ.18ರಿಂದ, ಸಾಲಿಗ್ರಾಮ ನ. 18ರಿಂದ, ಹನುಮಗಿರಿ ಮೇಳ ನ.20ರಿಂದ, ಪೆರ್ಡೂರು ನ.20ರಿಂದ ತಿರುಗಾಟ ಶುರು ಮಾಡಲಿದೆ.ಗೆಜ್ಜೆಗಿರಿ ಮೇಳ ನ.22ರಂದು ಸೇವೆಯಾಟ ಮಾಡಿ ಡಿ.25ರ ವರೆಗೆ ಗೋವಾ, ಗುಜರಾತ್, ಮುಂಬಯಿ ಮೊದಲಾದೆಡೆ ಪ್ರದರ್ಶನ ನೀಡಲಿದೆ.
– ಇನ್ನೊಂದು ಡೇರೆ ಮೇಳ ಆರಂಭ
ತೆಂಕುತಿಟ್ಟಿನಲ್ಲಿ ಪ್ರಸ್ತುತ ಯಾವುದೇ ಡೇರೆ ಮೇಳ ಇಲ್ಲ ಬಡಗುತಿಟ್ಟಿನಲ್ಲಿ ಪೆರ್ಡೂರು ಹಾಗೂ ಸಾಲಿಗ್ರಾಮ ಮೇಳಗಳಿದ್ದು, ಕಳೆದ ಬಾರಿಯ ಬಯಲಾಟ ಮೇಳ ಮೆಕ್ಕೆಕಟ್ಟು ಮೇಳ ಈ ಬಾರಿ ಡೇರೆ ಮೇಳವಾಗಲಿದೆ. ಬೈಂದೂರಿನ ಕಳವಾಡಿಯಿಂದ ನೂತನ ಮೇಳವೊಂದು ಆರಂಭವಾಗಲಿದೆ. ಪಾವಂಜೆ ಎರಡನೆ ಮೇಳ ಆರಂಭವಾಗುವ ಪ್ರಸ್ತಾವನೆ ಇದ್ದರೂ ಇನ್ನೂ ಅಧಿಕೃತ ತೀರ್ಮಾನ ಆಗಿಲ್ಲ.
7, 200 ಆಟ ದೇವಿ ಮಹಾತ್ಮೆ 1,000 ಪ್ರದರ್ಶನ
ಕರಾವಳಿಯಲ್ಲಿ 40 ಕ್ಕೂ ಅಧಿಕ ಮೇಳಗಳಿದ್ದು, ಪ್ರತಿ ವರ್ಷ 7,200ಕ್ಕೂ ಅಧಿಕ ಪ್ರದರ್ಶನ ನೀಡುತ್ತವೆ. ಇಷ್ಟೊಂದು ಪ್ರದ ರ್ಶನಗಳಲ್ಲಿ 1,000ಕ್ಕೂ ಅಧಿಕ ಶ್ರೀ ದೇವಿ ಮಹಾತ್ಮೆಯೇ ಇರುತ್ತದೆ. ಕಟೀಲಿನ 6 ಮೇಳಗಳು ತಲಾ 100ರಂತೆ 600 ಪ್ರದರ್ಶನ ನೀಡಿದರೆ, ಮಂದಾರ್ತಿ, ಪಾವಂಜೆ, ಹನುದುಗಿರಿ ಸಹಿತ ಇತರ ಮೇಳಗಳು 400 ಕ್ಕೂ ಅಧಿಕ ಪ್ರದರ್ಶನ ನೀಡುತ್ತವೆ.
ಮಲೆನಾಡಲ್ಲಿ ಮೇಳಗಳ ಸಂಭ್ರಮ
ಮಲೆನಾಡಲ್ಲೂ ಹೊಸನಗರ, ಸಿಗಂದೂರು, ಸೀತೂರು, ಹೊಸಹಳ್ಳಿ ಸೇರಿದಂತೆ ಅನೇಕ ಮೇಳಗಳು ಸೇವೆ ಸಲ್ಲಿಸುತ್ತಿವೆ.