ಮಂಗನ ಕಾಯಿಲೆಗೆ ಕಾಫಿನಾಡಿನಲ್ಲಿ ಮತ್ತೊಂದು ಬಲಿ
– ಮೂಡಿಗೆರೆ: ಅಕ್ರಮವಾಗಿ ನಾಡ ಬಂದೂಕು ಇಟ್ಟುಕೊಂಡಿದ್ದ ವ್ಯಕ್ತಿ ಬಂಧನ
NAMMUR EXPRESS NEWS
ಕೊಪ್ಪ: ಮಂಗನ ಕಾಯಿಲೆಗೆ ಕಾಫಿನಾಡು ಚಿಕ್ಕಮಗಳೂರಲ್ಲಿ ಮತ್ತೊಂದು ಬಲಿಯಾಗಿದೆ. ಕೊಪ್ಪ ತಾಲೂಕಿನ ಬಿಂತ್ರವಳ್ಳಿ ಗ್ರಾಮದ ರತ್ನ (68) ಎಂಬುವವರು ಮೃತಪಟ್ಟಿದ್ದಾರೆ. ತೀವ್ರ ಜ್ವರದಿಂದ ಬಳಲುತ್ತಿದ್ದ ರತ್ನ ಅವರು ರಕ್ತ ಪರೀಕ್ಷೆಯಲ್ಲಿ ಮಂಗನ ಕಾಯಿಲೆ ಇರುವುದು ದೃಢವಾಗಿತ್ತು. ಈ ಹಿನ್ನೆಲೆ ಮಣಿಪಾಲದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾರೆ. ಚಿಕ್ಕಮಗಳೂರಿನಲ್ಲಿ ಮಂಗನಕಾಯಿಲೆಗೆ ಮತ್ತೊಂದು ಬಲಿಯನ್ನು ಪಡೆದಂತೆ ಆಗಿದ್ದು, ಇದೀಗ ಜಿಲ್ಲೆಯಲ್ಲಿ ಸಾವಿನ ಸಂಖ್ಯೆ 4 ಕ್ಕೆ ಏರಿಕೆ ಆಗಿದೆ. ಮಲೆನಾಡು ಭಾಗದಲ್ಲಿ ದಿನದಿಂದ ದಿನಕ್ಕೆ ಮಂಗನಕಾಯಿಲೆ ಹೆಚ್ಚುತ್ತಿದ್ದು, ಕೊಪ್ಪ , ಎನ್.ಆರ್.ಪುರ, ಶೃಂಗೇರಿ ತಾಲೂಕಿನಲ್ಲಿ ಕಾಯಿಲೆ ಹೆಚ್ಚುತ್ತಿದೆ. ಸದ್ಯ ಆಸ್ಪತ್ರೆಯಲ್ಲಿ 11 ಕೆ.ಎಫ್.ಡಿ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ.
ಮೂಡಿಗೆರೆ: ಅಕ್ರಮವಾಗಿ ನಾಡ ಬಂದೂಕು ಇಟ್ಟುಕೊಂಡಿದ್ದ ವ್ಯಕ್ತಿ ಬಂಧನ
ಮೂಡಿಗೆರೆ: ಅಕ್ರಮವಾಗಿ ಪರವಾನಗಿ ಇಲ್ಲದೆ ನಾಡ ಬಂದೂಕು ಇಟ್ಟುಕೊಂಡಿದ್ದ ವ್ಯಕ್ತಿಯನ್ನು ಬಂಧಿಸಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಣಕಲ್ ಹೋಬಳಿಯಲ್ಲಿ ನಡೆದಿದೆ. ಬಸನಿ ಹೆಗ್ಗುಡ್ಲು ಗ್ರಾಮದ ಲೋಕೇಶ್ (41) ಮನೆಯಲ್ಲಿ ಯಾವುದೇ ಪರವಾನಗಿ ಇಲ್ಲದೆ ಅಕ್ರಮವಾಗಿ ನಾಡ ಬಂದೂಕು ಮತ್ತು ಚರೆಯನ್ನು ಇಟ್ಟುಕೊಂಡಿದ್ದ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿ ಒಂಟಿ ನಳಿಕೆಯ ಒಂದು ನಾಡ ಬಂದೂಕು ಹಾಗೂ 12 ಚರೆಯನ್ನು ವಶಪಡಿಸಿಕೊಂಡು ಭಾರತೀಯ ಶಸ್ತ್ರಾಸ್ತ್ರ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.