- ಚಿಕ್ಕಮಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ
- ಕುಟುಂಬಕ್ಕೆ ಪರಿಹಾರ ನೀಡಲು ಪತ್ರಕರ್ತರ ಅಗ್ರಹ
- ಪತ್ರಕರ್ತರಿಗೆ, ಅವರ ಕುಟುಂಬಕ್ಕೆ ಲಸಿಕೆ ಬೇಕು..!
ಚಿಕ್ಕಮಗಳೂರು: ಕರೋನಾಕ್ಕೆ ರಾಜ್ಯದಲ್ಲಿ ಹತ್ತಾರು ಪತ್ರಕರ್ತರು ಬಲಿಯಾಗಿದ್ದು, ಕುಟುಂಬದ ನೂರಾರು ಮಂದಿ ಸಾವನ್ನು ಕಂಡಿದ್ದಾರೆ. ಫ್ರಂಟ್ ಲೈನ್ ಕರೋನಾ ವಾರಿಯರ್ಸ್ ಆಗಿ ಸೇವೆ ಸಲ್ಲಿಸುತ್ತಿದ್ದ ಕೊಪ್ಪದ ಪತ್ರಕರ್ತ ಸಾಧಿಕ್ (47) ಚಿಕ್ಕಮಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದಾರೆ. ಅವರಿಗೆ ಚಿಕ್ಕ ಮಕ್ಕಳಿದ್ದಾರೆ.
ಕಳೆದ ಎರಡು ವಾರದ ಹಿಂದೆ ಉಸಿರಾಟ ಸಮಸ್ಯೆಯಿಂದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕರೋನಾ ಪರೀಕ್ಷೆಯಲ್ಲಿ ಪಾಸಿಟಿವ್ ವರದಿ ಬಂದ ನಂತರ ಕೊರೊನಾ ವಾರ್ಡ್ ನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಹೆಚ್ಚಿನ ಚಿಕಿತ್ಸೆಗೆ ಚಿಕ್ಕಮಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಮೃತರಾಗಿದ್ದಾರೆ.
ಮೃತರು ಕೊಪ್ಪದಲ್ಲಿ ಹಲವು ವರ್ಷಗಳಿಂದ ಪತ್ರಕರ್ತರಾಗಿ ಕಾರ್ಯ ನಿರ್ವಹಿಸಿದ್ದರು. ಕೊಪ್ಪ ಸೇರಿ ಮಲೆನಾಡಿನ ನೂರಾರು ಸಮಸ್ಯೆಗಳಿಗೆ ದನಿಯಾಗಿದ್ದರು. ಇತ್ತೀಚೆಗೆ ಮೇಲಿನಪೇಟೆಯಲ್ಲಿ ವಾಹನಗಳ ಹೊಗೆ ತಪಾಸಣೆ ಕೇಂದ್ರವನ್ನು ತೆರೆದು ಉದ್ಯಮಕ್ಕೆ ಶುರು ಮಾಡಿದ್ದರು. ಕೊಪ್ಪದ ಕಾರ್ಯನಿರತ ಪತ್ರಕರ್ತ ಸಂಘದ ಕಾರ್ಯದರ್ಶಿ ಸಹ ಆಗಿದ್ದರು. ಸಮಾಜದ ಎಲ್ಲಾ ಜನರ ಜತೆ ಉತ್ತಮ ಒಡನಾಟ ಹೊಂದಿದ್ದರು. ನಮ್ಮೂರ್ ಎಕ್ಸ್ಪ್ರೆಸ್ ಮಾಧ್ಯಮದ ಹಿತೈಷಿಗಳು ಕೂಡ ಆಗಿದ್ದ ಸಾದಿಕ್ ಅವರ ನಿಧನಕ್ಕೆ ಎಲ್ಲಾ ಪತ್ರಕರ್ತರ ಪರವಾಗಿ ಸಂತಾಪ ಸೂಚಿಸುತ್ತೇವೆ. ಶೃಂಗೇರಿ ಶಾಸಕ ರಾಜೇಗೌಡ, ಮಾಜಿ ಸಚಿವ ಜೀವರಾಜ್, ಕಾಂಗ್ರೆಸ್ ನಾಯಕ ಸುಧೀರ್ ಕುಮಾರ್ ಮುರೊಳ್ಳಿ ಸಂತಾಪ ಸೂಚಿಸಿದ್ದಾರೆ.
ಪತ್ರಕರ್ತ ಸಾಧಿಕ್ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡುವಂತೆ ಚಿಕ್ಕಮಗಳೂರು ಜಿಲ್ಲೆಯ ಪತ್ರಕರ್ತರು ಮುಖ್ಯಮಂತ್ರಿಗಳನ್ನು ಒತ್ತಾಯಿಸಿದ್ದಾರೆ.
ವ್ಯಾಕ್ಸಿನ್ ಇನ್ನು ಸಿಕ್ಕಿಲ್ಲ: ಸಿಎಂ ಯಡಿಯೂರಪ್ಪ ರಾಜ್ಯದ ಪತ್ರಕರ್ತರನ್ನು ಫ್ರಂಟ್ ಲೈನ್ ವಾರಿಯರ್ಸ್ ಎಂದು ಘೋಷಣೆ ಮಾಡಿ ಪತ್ರಕರ್ತರು ಹಾಗೂ ಕುಟುಂಬದವರಿಗೆ ಆಧ್ಯತೆ ಮೇಲೆ ಲಸಿಕೆ ನೀಡಬೇಕು ಎಂದು ಹೇಳಿದ್ದರು. ಆದರೆ ಮಲೆನಾಡಿನ ಯಾವ ತಾಲೂಕಲ್ಲಿ ಕೂಡ ಪತ್ರಕರ್ತರಿಗೆ ಲಸಿಕೆ ವ್ಯವಸ್ಥೆ ಆಗಿಲ್ಲ.
ತಕ್ಷಣ ಈ ಬಗ್ಗೆ ಸ್ಥಳೀಯ ಆಡಳಿತ, ಶಾಸಕರು ಗಮನ ಹರಿಸಬೇಕು ಎಂಬುದು ನಮ್ಮ ಕಳಕಳಿ.