- ಶಿವಮೊಗ್ಗ ಜಿಲ್ಲೆ ಜೂ.7ರವರೆಗೆ ಲಾಕ್ ಡೌನ್
- ಚಿಕ್ಕಮಗಳೂರು ಜಿಲ್ಲೆಯಲ್ಲಿ ಈಗಾಗಲೇ ಜಾರಿ
- ಎರಡು ಜಿಲ್ಲೆಯಲ್ಲಿ ಎಷ್ಟು ಕೇಸ್.. ಎಷ್ಟು ಸಾವು?
- ಲಾಕ್ ವೇಳೆ ಏನಿರುತ್ತೆ…? ಏನಿರಲ್ಲ..?
- ಮೊದಲ ವರದಿ ಮಾಡಿದ ನಿಮ್ಮ ಮಾಧ್ಯಮ!
ಮಲೆನಾಡು: ಒಂದು ವಾರಗಳ ಕಾಲ ಮಲೆನಾಡು ಸಂಪೂರ್ಣ ಸ್ತಬ್ದವಾಗಲಿದೆ. ಈಗಾಗಲೇ ಕರೋನಾ ನಿಯಂತ್ರಣಕ್ಕೆ ಚಿಕ್ಕಮಗಳೂರು ಜಿಲ್ಲೆ ಸಂಪೂರ್ಣ ಬಂದ್ ಆಗಿದ್ದು, ಸೋಮವಾರದಿಂದ ಶಿವಮೊಗ್ಗ ಜಿಲ್ಲೆ ಸಂಪೂರ್ಣ ಬಂದ್ ಆಗಲಿದೆ. ನಮ್ಮೂರ್ ಎಕ್ಸ್ಪ್ರೆಸ್ ಈ ಬಗ್ಗೆ ಎಲ್ಲಾ ಮಾಧ್ಯಮಗಳಿಗಿಂತ ಮೊದಲೇ ವರದಿ ಮಾಡಿತ್ತು. ಕಳೆದ ವಾರವೇ ಜಿಲ್ಲೆಯಲ್ಲಿ ಲಾಕ್ ಡೌನ್ ಮಾಡುವ ಚರ್ಚೆ ಇದೆ ಎಂಬ ವರದಿ ಮಾಡಿದ್ದೆವು.
ಬಂದ್ ಹೇಗೆ..?: ಇಷ್ಟು ದಿನ ಬೆಳಗ್ಗೆ 10 ಗಂಟೆವರೆಗೆ ಅಗತ್ಯ ವಸ್ತು ಖರೀದಿಗೆ ಅವಕಾಶ ನೀಡಲಾಗಿತ್ತು. ಭಾನುವಾರ ಬೆಳಗ್ಗೆಯಿಂದ ಮಧ್ಯಾಹ್ನ 1ರವರೆಗೆ ಮಾತ್ರ ಅವಕಾಶ ನೀಡಲಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಮಾತನಾಡಿ, ಔಷಧಿ ಅಂಗಡಿಗಳು, ನೆರೆಹೊರೆಯಲ್ಲಿರುವ ತರಕಾರಿ, ಹಾಲು, ದಿನಸಿ ಅಂಗಡಿಗಳಿಗೆ ಮಾತ್ರ ಅವಕಾಶ ನೀಡಲಾಗುವುದು. ಸಗಟು ದಿನಸಿ ಮಳಿಗೆಗಳು, ಎಪಿಎಂಸಿಯಲ್ಲಿ ಮಾರಾಟಕ್ಕೆ ಅವಕಾಶ ಇರುವುದಿಲ್ಲ. ಆದರೆ, ಚಿಲ್ಲರೆ ಅಂಗಡಿಗಳಿಗೆ ಅವರು ಸರಕುಗಳನ್ನು ನೇರವಾಗಿ ಪೂರೈಕೆ ಮಾಡಬಹುದಾಗಿದೆ. ತಳ್ಳುಗಾಡಿಗಳಲ್ಲಿ ಬೆಳಗ್ಗೆ 6ರಿಂದ ಸಂಜೆ 6ರ ವರೆಗೆ ನಿಗದಿಪಡಿಸಲಾಗಿರುವ ಪ್ರದೇಶ ವ್ಯಾಪ್ತಿಯಲ್ಲಿ ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ.
ಅವಶ್ಯಕ ಸೇವೆಗಳಿಗೆ ಗುರುತಿಸಲಾಗಿರುವ ಸರ್ಕಾರಿ ಕಚೇರಿಗಳನ್ನು ಹೊರತುಪಡಿಸಿ ಬೇರೆ ಯಾವುದೇ ಕಚೇರಿಗಳು ಇರುವುದಿಲ್ಲ. ಬ್ಯಾಂಕ್ ಸೇವೆ ಇರಲಿದೆ.
ಹೊಟೇಲ್ ನಲ್ಲಿ ಪಾರ್ಸೆಲ್ ಸೇವೆಗೆ ಅವಕಾಶವಿದೆ. ಮಾರ್ಗಸೂಚಿ ಪ್ರಕಾರ ಮದುವೆಗೆ ಅವಕಾಶವಿದೆ. ಆದರೆ ಮದುವೆಗೆ ಸಂಬಂಧಿಸಿದ ಸಮಾರಂಭಗಳು, ಗೃಹಪ್ರವೇಶ ಇತ್ಯಾದಿಗಳಿಗೆ ಅನುಮತಿ ಇರುವುದಿಲ್ಲ.
ಕಾನೂನು ಉಲ್ಲಂಘಿಸಿ ಸಮಾರಂಭಗಳನ್ನು ಆಯೋಜಿಸುವವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.
ಹಳ್ಳಿಗಳಲ್ಲೂ ಬೈಕ್ ಅಥವಾ ವಾಹನ ಓಡಾಟ ನಿರ್ಬಂಧ ಹೇರಲಾಗಿದೆ.
ಶಿವಮೊಗ್ಗ ಜಿಲ್ಲೆಯಲ್ಲಿ 699 ಜನರಲ್ಲಿ ಶನಿವಾರ ಸೋಂಕು ಪತ್ತೆಯಾಗಿದ್ದು ಇದರಿಂದ ಜಿಲ್ಲೆಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 7249ಕ್ಕೇರಿದೆ.
2470 ಜನರಿಗೆ ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ. ಇದರಲ್ಲಿ 1354 ಜನರಿಗೆ ನೆಗೆಟಿವ್ ಬಂದಿದೆ. ಇಂದು ಜಿಲ್ಲೆಯಲ್ಲಿ 14 ಜನ ಕೊರೊನಾ ಸೋಂಕಿಗೆ ಕೊನೆಯುಸಿರೆಳೆದಿದ್ದಾರೆ. ಇದರಿಂದ ಇದುವರೆಗೆ ಜಿಲ್ಲೆಯಲ್ಲಿ ಕೊರೊನಾ ಸೋಂಕಿನಿಂದ ಸಾವನ್ನಪ್ಪಿದವರ ಸಂಖ್ಯೆ 782ಕ್ಕೇರಿದೆ. 2622 ಜನ ಮನೆಯಲ್ಲಿಯೇ ಐಸೋಲೇಷನ್ ಆಗಿದ್ದಾರೆ.
ಶಿವಮೊಗ್ಗ 261,ಭದ್ರಾವತಿ 154, ಶಿಕಾರಿಪುರ 49, ತೀರ್ಥಹಳ್ಳಿ 30, ಸೊರಬ 71, ಹೊಸನಗರ 14, ಸಾಗರ 60, ಇತರೆ ಜಿಲ್ಲೆ 30.
ಕಾಫಿ ನಾಡಲ್ಲಿ 843 ಕೇಸ್:
ಚಿಕ್ಕಮಗಳೂರು ಜಿಲ್ಲೆಯಲ್ಲಿ ಶನಿವಾರ ಒಟ್ಟು 843 ಕೇಸ್ ದಾಖಲಾಗಿದೆ. ಚಿಕ್ಕಮಗಳೂರು 260, ಕಡೂರು 169, ತರೀಕೆರೆ 191, ನರಸಿಂಹ ರಾಜಪುರ 77, ಮೂಡಿಗೆರೆ 96, ಕೊಪ್ಪ 30, ಶೃಂಗೇರಿ 20 ಪ್ರಕರಣ ದಾಖಲಾಗಿದೆ.ಜಿಲ್ಲೆಯಲ್ಲಿ ಜೂನ್ 7ರವರೆಗೆ ಸಂಪೂರ್ಣ ಲಾಕ್ ಡೌನ್ ಇದೆ.