ಶೃಂಗೇರಿಯಲ್ಲಿ ಭದ್ರಾವತಿ ಮೂಲದ 10 ನೇ ಕ್ಲಾಸ್ ವಿದ್ಯಾರ್ಥಿ ಆತ್ಮಹತ್ಯೆ!
– ಪರೀಕ್ಷೆಗೆ ಹಾಜರಾಗದೆ ಪಿಜಿಯಲ್ಲಿ ಆತ್ಮಹತ್ಯೆ: ಕಾರಣ ನಿಗೂಢ
– ಕಳಸದಲ್ಲಿ ತೋಟದಲ್ಲಿದ್ದ ರೈತನಿಗೆ ಕಾಡು ಕೋಣ ತಿವಿದು ಗಾಯ!
NAMMUR EXPRESS NEWS
ಶೃಂಗೇರಿ: ಶಿವಮೊಗ್ಗ ಜಿಲ್ಲೆಯ ಭದ್ರಾವತಿ ಮೂಲದ 10ನೇ ಕ್ಲಾಸ್ ವಿದ್ಯಾರ್ಥಿಯೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲ್ಲೂಕಿನಲ್ಲಿ ನಡೆದಿದೆ.
ಧ್ರುವ ಎಸ್ ಕೆ (16) ಆತ್ಮಹತ್ಯೆ ಮಾಡಿಕೊಂಡ ಎಸ್.ಎಸ್.ಎಲ್.ಸಿ ವಿದ್ಯಾರ್ಥಿ. ಶೃಂಗೇರಿಯ ಶಾಲೆಯೊಂದರಲ್ಲಿ 10ನೇ ತರಗತಿ ವ್ಯಾಸಾಂಗ ಮಾಡುತ್ತಿದ್ದ ಧ್ರುವ, ಸೋಮವಾರ ಮಧ್ಯಾಹ್ನ 11:30 ಸುಮಾರಿಗೆ ಪಿಜಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಸೋಮವಾರ ಶಾಲೆಯಲ್ಲಿ ಪೂರ್ವಸಿದ್ಧತಾ ಪರೀಕ್ಷೆ ಇದ್ದು, ಆದರೆ, ದ್ರುವ ಗೈರುಹಾಜರಾಗಿದ್ದಾನೆ. ಗೈರುಹಾಜರಾದ ಕಾರಣ ಶಾಲೆಯಿಂದ ಧ್ರುವನ ಪೋಷಕರಿಗೆ ಕರೆ ಮಾಡಿದ್ದಾರೆ. ನಂತರ ಪೋಷಕರು ಧ್ರುವ ಉಳಿದಿರುವ ಬಾಯ್ಸ್ ಪಿಜಿಯ ಮಾಲೀಕರಿಗೆ ಕರೆ ಮಾಡಿದ್ದಾರೆ. ಪಿಜಿಯ ಮಾಲೀಕರು ನೋಡಿದಾಗ ಆತ್ಮಹತ್ಯೆ ಮಾಡಿಕೊಂಡಿರುವ ವಿಷಯ ಬೆಳಕಿಗೆ ಬಂದಿದೆ. ಆದರೆ, ಆತ್ಮಹತ್ಯೆಗೆ ಕಾರಣ ತಿಳಿದುಬಂದಿಲ್ಲ. ಘಟನಾ ಸ್ಥಳಕ್ಕೆ ಶೃಂಗೇರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ತೋಟದಲ್ಲಿದ್ದ ರೈತನಿಗೆ ಕಾಡು ಕೋಣ ತಿವಿದು ಗಾಯ!
ಕಳಸ: ತಾಲೂಕಿನ ಮುಜೇಕಾನು ಸಮೀಪದಲ್ಲಿ ತೋಟದ ಕೆಲಸಕ್ಕೆ ಹೋಗಿದ್ದ ಕಾರ್ಮಿಕರ ಮೇಲೆ ಕಾಣುಕೋಣ ದಾಳಿ ಮಾಡಿ ತಿವಿದು ಒಬ್ಬರಿಗೆ ಗಂಭೀರ ಗಾಯವಾದ ಘಟನೆ ಭಾನುವಾರ ನಡೆದಿದೆ. ನಲ್ಲಿತೋಟ ಸುಬ್ರಮಣ್ಯ ಎಂಬುವರ ತೋಟದ ಕೆಲಸಕ್ಕೆ ತೆರಳಿದ್ದ ವೇಳೆ ಕಾಡುಕೋಣ ದಾಳಿ ಮಾಡಿದೆ. ಈ ಸಂದರ್ಭದಲ್ಲಿ ಸುಬ್ಬೇಗೌಡ (65) ಎಂಬ ಕಾರ್ಮಿಕನಿಗೆ ಏಕಾಏಕಿ ನುಗ್ಗಿ ಕೋಡಿನಿಂದ ತಿವಿದು ಎತ್ತಿ ದೂರಕ್ಕೆ ಎಸೆದ ಪರಿಣಾಮ ಸುಬ್ಬೇಗೌಡರಿಗೆ ಗಂಭೀರ ಗಾಯಗಳಾಗಿವೆ. ಅವರ ಜೊತೆಯಲ್ಲಿದ್ದ ಇನ್ನೊಬ್ಬ ಕಾರ್ಮಿಕ ಮಂಜಪ್ಪ ಮೆಣಸಿನಬಳ್ಳಿ ಮರೆಯಲ್ಲಿ ಅವಿತು ತಪ್ಪಿಸಿಕೊಂಡಿದ್ದಾರೆ. ಕಾಡು ಕೋಣ ದಾಳಿಗೆ ಸುಬ್ಬೇಗೌಡರವರ ತಲೆ, ಕುತ್ತಿಗೆ ಭಾಗದಲ್ಲಿ ಗಂಭೀರ ಗಾಯವಾಗಿದ್ದು, ಬೆನ್ನು ಮೂಳೆಗೆ ಪೆಟ್ಟಾಗಿದೆ. ಚಿಕಿತ್ಸೆಗಾಗಿ ಮಂಗಳೂರಿನ ಅಸ್ಪತ್ರೆಗೆ ದಾಖಲಿಸಲಾಗಿದೆ.