ಎತ್ತಿಗೆ ಕಟ್ಟಿದ ಹಗ್ಗ ಜೀವ ತೆಗೆಯಿತು!
– ಸೊರಬ: ಎತ್ತು ಮೈ ತೊಳೆಯಲು ಹೋದ ಯುವಕ ನೀರುಪಾಲು!
– ಚಿಕ್ಕಮಗಳೂರು: ಪ್ರವಾಸಕ್ಕೆ ಬಂದ ಟಿಟಿ ಡ್ರೈವರ್ ಸಾವು
– ಶಿವಮೊಗ್ಗ : ಚಿರತೆ ಸಂಚಾರದಿಂದ ಭಯಭೀತರಾದ ಗ್ರಾಮಸ್ಥರು
NAMMUR EXPRESS NEWS
ಸೊರಬ: ಕೆರೆಯಲ್ಲಿ ಎತ್ತಿಗೆ ಮೈ ತೊಳೆಯಲು ಹೋದ ಯುವಕ ಕೆರೆ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ ಸೊರಬ ತಾಲೂಕಿನ ಆನವಟ್ಟಿ ಹೋಬಳಿಯ ಕೋಟೆಕೊಪ್ಪ ಗ್ರಾಮದಲ್ಲಿ ನಡೆದಿದೆ.
ಕೋಟೆಕೊಪ್ಪ ಗ್ರಾಮದ ನಿವಾಸಿ ಸಂತೋಷ (28) ಮೃತಪಟ್ಟ ಯುವಕ ಎಂದು ಗುರುತಿಸಲಾಗಿದೆ. ಗ್ರಾಮದ ಕೆರೆಯಲ್ಲಿ ಎತ್ತಿನ ಮೈ ತೊಳೆಯಲು ಯುವಕ ತೆರಳಿದ್ದು, ಈ ವೇಳೆ ಎತ್ತು ಗಾಬರಿಗೊಂಡು ಓಡಿ ಹೋಗಿದೆ.
ಎತ್ತಿನ ಹಗ್ಗವು ಸಂತೋಷ್ ಕಾಲಿಗೆ ಸುತ್ತಿಕೊಂಡು, ಈಜಲು ಸಾಧ್ಯವಾಗದೆ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ. ಘಟನಾ ಸ್ಥಳಕ್ಕೆ ಅಗ್ನಿಶಾಮಕ ದಳ ತಂಡ ಭೇಟಿಯಿತ್ತು, ಕೆರೆಯಲ್ಲಿ ಶೋಧ ಕಾರ್ಯಾಚರಣೆ ನಡೆಸಿ ಶವ ಪತ್ತೆ ಹಚ್ಚಿದೆ. ಈ ಸಂಬಂಧ ಸೊರಬ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
– ಚಿಕ್ಕಮಗಳೂರು: ಹೃದಯಾಘಾತದಿಂದ ಸಾವು
ಚಿಕ್ಕಮಗಳೂರು : ಟಿಟಿ ಡ್ರೈವರ್ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಬೆಂಗಳೂರಿನ ಟಿಟಿ ಡ್ರೈವರ್ ಚಿಕ್ಕಮಗಳೂರಿಗೆ ಪ್ರವಾಸಿಗರನ್ನು ಕರೆ ತಂದಾಗ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಅವಿನಾಶ್ (25) ಮೃತ ದುರ್ದೈವಿ. ಬೆಂಗಳೂರಿನ ಸೋಮನಹಳ್ಳಿ ಮೂಲದ ಅವಿನಾಶ್ ಮೂರು ವರ್ಷದ ಹಿಂದೆ ಮದುವೆಯಾಗಿದ್ದು, 2 ವರ್ಷದ ಮಗು ಇದೆ. ಪ್ರವಾಸಿಗರನ್ನು ಹೋಂ ಸ್ಟೇ ಬಳಿ ಬಿಟ್ಟು ಬಂದ ಬಳಿಕ ಹೃದಯಾಘಾತದಿಂದ ಕುಸಿದು ಬಿದ್ದಿದ್ದಾರೆ. ಕೂಡಲೇ ಆಸ್ಪತ್ರೆಗೆ ಸೇರಿಸಲು ಪ್ರಯತ್ನಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
– ಶಿವಮೊಗ್ಗ : ಚಿರತೆ ಸಂಚಾರದಿಂದ ಭಯಭೀತರಾದ ಗ್ರಾಮಸ್ಥರು!
ಶಿವಮೊಗ್ಗ : ಶಿವಮೊಗ್ಗ ನಗರದ ಹೊರವಲಯ ಗೆಜ್ಜೇನಹಳ್ಳಿ ಗ್ರಾಮದ ಸುತ್ತಮುತ್ತಲಿನ ಪ್ರದೇಶದಲ್ಲಿ ಚಿರತೆ ಸಂಚರಿಸುತ್ತಿರುವ ಮಾಹಿತಿ ಕೇಳಿಬಂದಿದ್ದು, ಇದು ಸ್ಥಳೀಯ ಗ್ರಾಮಸ್ಥರಲ್ಲಿ ತೀವ್ರ ಆತಂಕಕ್ಕೆ ಎಡೆ ಮಾಡಿಕೊಟ್ಟಿದೆ. ಮೇಯಲು ತೆರಳಿದ್ದ ಆಕಳೊಂದರ ಮೇಲೆ ಚಿರತೆ ದಾಳಿ ನಡೆಸಿದೆ. ಅದೃಷ್ಟವಶಾತ್ ಚಿರತೆ ದಾಳಿಯಿಂದ ಆಕಳು ತಪ್ಪಿಸಿಕೊಂಡು ಬಂದಿದೆ. ಆಕಳ ಮೈಮೇಲೆ ಪರಚಿದ ಗಾಯಗಳಾಗಿವೆ’ ಎಂದು ಸ್ಥಳೀಯ ನಿವಾಸಿಯೂ ಆದ ಕೋಟೆಗಂಗೂರು ಗ್ರಾಮ ಪಂಚಾಯ್ತಿ ಅಧ್ಯಕ್ಷ ದೂದ್ಯನಾಯ್ಕ್ ಅವರು ತಿಳಿಸಿದ್ದಾರೆ.
‘ಗ್ರಾಮದ ಜನವಸತಿ ಪ್ರದೇಶದ ಬಳಿಯೇ ಚಿರತೆ ಸಂಚಾರ ನಡೆಸುತ್ತಿರುವ ಮಾಹಿತಿಗಳಿವೆ. ಕೆಲ ಗ್ರಾಮಸ್ಥರು ಗಮನಿಸಿದ್ದಾರೆ. ಚಿರತೆ ಭೀತಿಯಿಂದ ಹೊಲಗದ್ದೆ, ತೋಟಗಳಿಗೆ ಗ್ರಾಮಸ್ಥರು ಹೋಗಲು ಭಯ ಪಡುವಂತಾಗಿದೆ’ ಎಂದು ಗ್ರಾಮದ ಯುವ ಮುಖಂಡ ಟೀಕ್ಯಾನಾಯ್ಕ್ ಅವರು ಹೇಳಿದ್ದಾರೆ. ತಕ್ಷಣವೇ ಅರಣ್ಯ ಇಲಾಖೆಯು ಸ್ಥಳಕ್ಕಾಗಮಿಸಿ ಪರಿಶೀಲಿಸಬೇಕು. ಜನವಸತಿ ಪ್ರದೇಶಕ್ಕೆ ಚಿರತೆ ಆಗಮಿಸದಂತೆ ಸೂಕ್ತ ಮುನ್ನೆಚ್ಚರಿಕೆ ಕ್ರಮಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.