ಅರಣ್ಯ ಜಾಗದಲ್ಲಿ ರಸ್ತೆ ಮಾಡಿ ಮದ್ಯದ ಅಂಗಡಿ ನಿರ್ಮಾಣ!
– ಮದ್ಯದಂಗಡಿಗೆ ಪರವಾನಿಗೆ ನೀಡಬಾರದು ಎಂದು ಹೋರಾಟ
– ಕೆಸ್ಲೂರು ಗ್ರಾಮದ ಹೊರಣಿಬೈಲು ನಿವಾಸಿಗಳ ವಿರೋಧ
– ನಮ್ಮೂರಿಗೆ ಮದ್ಯದಂಗಡಿ ಬೇಡ: ಅಧಿಕಾರಿಗಳಿಗೆ ಗ್ರಾಮಸ್ಥರ ಪತ್ರ
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ತಾಲ್ಲೂಕು, ಆಗುಂಬೆ ಹೋಬಳಿ ಅರೆಹಳ್ಳಿ ಪಂಚಾಯತಿಯ ಕೆಸ್ಲೂರು ಗ್ರಾಮದ ಹೊರಣಿಬೈಲಲ್ಲಿ ಅರಣ್ಯ ಭೂಮಿ ಕಡಿದು ಅಲ್ಲಿಗೆ ರಸ್ತೆ ನಿರ್ಮಾಣ ಮಾಡಿ ಮದ್ಯದಂಗಡಿ ತೆರೆಯುವ ಹುನ್ನಾರ ನಡೆಯುತ್ತಿದೆ. ಈ ಬಗ್ಗೆ ತಕ್ಷಣ ಗಮನ ಹರಿಸಿ ಮದ್ಯದ ಅಂಗಡಿ ನಿರ್ಮಾಣಕ್ಕೆ ಅವಕಾಶ ನೀಡಬಾರದು ಎಂದು ಗ್ರಾಮಸ್ಥರು ಅಗ್ರಹಿಸಿದ್ದಾರೆ.
ಗ್ರಾಮದಲ್ಲಿ ಸುಮಾರು 50 ಕುಟುಂಬಗಳಿದ್ದು, ಇವರಲ್ಲಿ ವಿವಿಧ ಧರ್ಮ, ವಿವಿಧ ಜಾತಿ ನಾಗರೀಕರಿದ್ದಾರೆ. ಹಿಂದಿನಿಂದಲು ಸೌಹಾರ್ದಯುತವಾಗಿ ಅನೋನ್ಯವಾಗಿ ಜೀವಿಸುತ್ತಿದ್ದು, ನೆಮ್ಮದಿಯ ಜೀವನಕ್ಕೆ ಧಕ್ಕೆ ತರಲೆಂದೇ,ಈ ಗ್ರಾಮದ ವ್ಯಾಪ್ತಿಯಲ್ಲಿ ನೂತನವಾಗಿ ಮದ್ಯದಂಗಡಿ ತೆರೆಯುವ ಹುನ್ನಾರ ನಡೆಯುತ್ತಿದೆ. ಈ ಉದ್ದೇಶಿತ ಮದ್ಯದಂಗಡಿಯು ಕಲ್ಮನೆ, ಶೃಂಗೇರಿ ರಾಜ್ಯ ಹೆದ್ದಾರಿಯ ಸಮೀಪದಲ್ಲೆ ಇದ್ದು, ಇದನ್ನು ಮರೆಮಾಚಿ, ಸರ್ವೆ ನಂ;72 ರ ಅರಣ್ಯ ಭೂಮಿಯ ಬೆಲೆ ಬಾಳುವ ಮರಗಳನ್ನು ಕಡಿದು ಸುಮಾರು ಅರ್ಧ ಕಿಲೋಮೀಟರ್ಗಳಷ್ಟು ಅಕ್ರಮ ರಸ್ತೆಯನ್ನು ನಿರ್ಮಿಸಲಾಗಿದೆ. ಅರಣ್ಯ ಇಲಾಖೆ ಈ ಬಗ್ಗೆ ಕ್ರಮ ಕೈಗೊಳ್ಳಬೇಕಿದೆ.
ಗ್ರಾಮೀಣ ಭಾಗದಲ್ಲಿ ಶಾಂತಿಯಿಂದ ಇದ್ದ ಪರಿಸರವನ್ನು ಹಾಳುಮಾಡುವ ಉದ್ದೇಶವನ್ನು ನಾವೆಲ್ಲರೂ ತೀವ್ರವಾಗಿ ಖಂಡಿಸುತ್ತೇವೆ ಎಂದು ಗ್ರಾಮಸ್ಥರು ಪತ್ರಿಕಾ ಹೇಳಿಕೆ ನೀಡಿದ್ದಾರೆ. ಈ ವಿಷಯವನ್ನು ಕುರಿತು ಜಿಲ್ಲಾ ಅರಣ್ಯಧಿಕಾರಿಗಳು, ಜಿಲ್ಲಾಧಿಕಾರಿಗಳು, ಜಿಲ್ಲಾ ಅಬಕಾರಿ ಉಪಆಯಕ್ತರು ಹಾಗೂ ಚುನಾಯಿತ ಜನಪ್ರತಿನಿಧಿಗಳಿಗೆ ದಾಖಲೆಯೊಂದಿಗೆ ಅರ್ಜಿ ಸಲ್ಲಿಸಿರುತ್ತೇವೆ. ಹಾಗೆಯೇ ಅರಣ್ಯ ಇಲಾಖೆಯು ಸದರಿ ಅಕ್ರಮ ರಸ್ತೆಯನ್ನು ಮುಚ್ಚಿ ಶಾಶ್ವತವಾಗಿ ಟ್ರಂಚ್ ಹೊಡೆಸಬೇಕೆಂದು ತೀರ್ಥಹಳ್ಳಿ ತಾಲ್ಲೂಕು, ಆಗುಂಬೆ ಹೋಬಳಿ ಅರೆಹಳ್ಳಿ ಪಂಚಾಯತಿಯ, ಕೆಸ್ಲೂರು ಗ್ರಾಮದ, ಹೊರಣಿಬೈಲು ನಿವಾಸಿಗಳು ವಿನಂತಿಸಿಕೊಂಡಿದ್ದಾರೆ.
ಹೊರಣೆಬೈಲು ಗ್ರಾಮಸ್ಥರು ನೆಮ್ಮದಿ ಜೀವನ ನಡೆಸುತ್ತಿದ್ದೇವೆ. ನೂತನವಾಗಿ ಮದ್ಯದಂಗಡಿ ನಡೆಸಲು ಪ್ರಭಾವಿ ವ್ಯಕ್ತಿಗಳು ಅಕ್ರಮವಾಗಿ ಪ್ರಯತ್ನಿಸುತ್ತಿದ್ದು, ಅದಕ್ಕೆ ಪೂರಕವಾಗಿ ತಮ್ಮ ಇಲಾಖೆಯಿಂದ ಅನುಮತಿ ನೀಡಿದಲ್ಲಿ ನಮಗೆ ನಮ್ಮ ಮನೆಯಲ್ಲಿ ವಾಸ ಮಾಡಲು ಸಾಧ್ಯವಾಗದು. ಅಲ್ಲದೇ ಈ ಪರಿಸರದಲ್ಲಿ 50ಕ್ಕೂ ಹೆಚ್ಚು ಮುಸ್ಲಿಂ ಮತ್ತು ಹಿಂದೂ ಬಾಂಧವರ ಮನೆಗಳಿದ್ದು, ತುಂಬ ಅನ್ನೋನ್ಯವಾಗಿ ಜೀವನ ನಡೆಸುತ್ತಿದ್ದೇವೆ. ನಮ್ಮ ಪರಿಸರದ ಶಾಲಾ ಮಕ್ಕಳು ಅದೇ ದಾರಿಯಲ್ಲಿ ಶಾಲೆಗೆ ಮತ್ತು ಅಲ್ಲೇ ಪಕ್ಕದಲ್ಲಿರುವ ಮದ್ರಸ ಮತ್ತು ಮಸೀದಿಗೆ ಓಡಾಡುತ್ತಿರುತ್ತಾರೆ. ತಕ್ಷಣದಿಂದಲೇ ತಾವುಗಳು ಸದರಿ ಸ್ಥಳಕ್ಕೆ ಭೇಟಿ ನೀಡಿ ನಮ್ಮ ಮತ್ತು ಸಾರ್ವಜನಿಕರ ಅಹವಾಲುಗಳನ್ನು ಪಡೆದು ಯಾವುದೆ ಪರವಾನಿಗೆ ನೀಡದೇ ಸ್ಥಗಿತಗೊಳಿಸಲು ಕ್ರಮವನ್ನು ಜರುಗಿಸಬೇಕಾಗಿ ಅಧಿಕಾರಿಗಳಲ್ಲಿ ಕೂಡ ಗ್ರಾಮಸ್ಥರು ಮನವಿ ಮಾಡಿದ್ದಾರೆ.