ಒತ್ತುವರಿ ತೆರವು: ಆ.17ರಂದು ಶೃಂಗೇರಿ ಕ್ಷೇತ್ರ ಬಂದ್?!
– ಒತ್ತುವರಿ ತೆರವು ವಿರುದ್ದ 17ರಂದು ಬೃಹತ್ ಪ್ರತಿಭಟನೆ
– ಮಲೆನಾಡು ರೈತ ಹಿತರಕ್ಷಣಾ ವೇದಿಕೆ ಕರೆ: ಬಿಜೆಪಿ, ಜೆಡಿಎಸ್, ಸಂಘಟನೆಗಳ ಸಾಥ್
– ಕೊಪ್ಪದ ಮುಖ್ಯ ಬೀದಿಯಲ್ಲಿ ಪ್ರತಿಭಟನೆ
NAMMUR EXPRESS NEWS
ಕೊಪ್ಪ: ಮಲೆನಾಡನ್ನು ಕಾಡುತ್ತಿರುವ ಒತ್ತುವರಿ ಸಮಸ್ಯೆ, ಸೆಕ್ಷನ್ 4, ಡೀಮ್ಸ್ ಮತ್ತು ಸೊಪ್ಪಿನಬೆಟ್ಟ ಸಮಸ್ಯೆ, ಕಸ್ತೂರಿ ರಂಗನ್ ವರದಿ, ಪರಿಸರ ಸೂಕ್ಷ್ಮ ವಲಯ ಸೇರಿದಂತೆ ವಿವಿಧ ವಿಷಯಗಳನ್ನು ಮುಂದಿಟ್ಟುಕೊಂಡು ಮಲೆನಾಡು ನಾಗರಿಕ ರೈತ ಹಿತರಕ್ಷಣಾ ಸಮಿತಿ ವತಿಯಿಂದ ಶೃಂಗೇರಿ ಕ್ಷೇತ್ರ ಬಂದ್ಗೆ ಆ.17ರ ಶನಿವಾರದಂದು ಕರೆ ನೀಡಲಾಗಿದೆ ಎಂದು ಸಮಿತಿಯ ಅಧ್ಯಕ್ಷ ನಾಗೇಶ್ ಎಂ.ಎನ್ ತಿಳಿಸಿದ್ದಾರೆ.
ಅನಾದಿ ಕಾಲದಿಂದ ಮಲೆನಾಡಲ್ಲಿ ಕಾಡನ್ನು ಪೋಷಿಸಿಕೊಂಡು ಬದುಕು ಕಟ್ಟಿಕೊಂಡು ಬರುತ್ತಿದ್ದ ಜನರಿಗೆ ಸರ್ಕಾರಗಳು ತರುತ್ತಿರುವ ಕಾಯ್ದೆಗಳು ಮುಳುವಾಗುತ್ತಿದೆ. ಈ ಕಾರಣಗಳಿಂದ ಶೃಂಗೇರಿ ವಿಧಾನ ಸಭಾ ಕ್ಷೇತ್ರದ ಕೊಪ್ಪ, ಎನ್.ಆರ್.ಪುರ, ಶೃಂಗೇರಿ, ಜಯಪುರ, ಬಾಳೆಹೊನ್ನೂರು ಭಾಗದಲ್ಲಿ ಸ್ವಯಂ ಪ್ರೇರಿತವಾಗಿ ಬಂದ್ ಮಾಡಲಾಗುತ್ತದೆ. ವರ್ತಕರು, ಬಸ್ ಮಾಲೀಕರು, ಆಟೋ ಮಾಲೀಕರು, ವಿವಿಧ ಸಂಘ ಸಂಸ್ಥೆಗಳು ಬಂದ್ ಬೆಂಬಲವನ್ನು ಸೂಚಿಸಿದ್ದಾರೆ ಎಂದು ತಿಳಿಸಿದರು.
ಆ.17ರ ಶನಿವಾರ ಕೊಪ್ಪದ ಮುಖ್ಯ ಬೀದಿಯಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಲಾಗುತ್ತದೆ. ನಂತರದಲ್ಲಿ ಕೊಪ್ಪದ ಮುಖ್ಯ ಬಸ್ ನಿಲ್ದಾಣದಲ್ಲಿ ಸಭೆ ನಡೆಸಿ ಹಕ್ಕೊತ್ತಾಯವನ್ನು ಮಾಡಲಾಗುತ್ತದೆ. ಕ್ಷೇತ್ರದ ವಿವಿಧ ಭಾಗದಿಂದ ಸಾವಿರಾರು ಸಂಖ್ಯೆಯಲ್ಲಿ ರೈತರು, ಸಾರ್ವಜನಿಕರು ಪಕ್ಷಾತೀತವಾಗಿ ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ಅರಣ್ಯ ಮತ್ತು ಕಂದಾಯ ಭೂಮಿಯ ಬಗ್ಗೆ ಇಲಾಖೆಯಲ್ಲಿಯೇ ಗೊಂದಲವಿರುವ ಹೊತ್ತಲ್ಲಿ ಜಿ.ಪಿ.ಎಸ್ ಮೂಲಕ ಜಂಟಿ ಸರ್ವೆಗೆ ಮುಂದಾಗಿದ್ದಾರೆ. ಜಿ.ಪಿ.ಎಸ್ ಸರ್ವೆಯಲ್ಲಿಯೂ ಸಹ ಓವರ್ಲ್ಯಾಪ್ ಆಗುವ ಸಾಧ್ಯತೆ ಹೆಚ್ಚಿರುತ್ತದೆ. ಆದ್ದರಿಂದ ಇಲಾಖೆಯ ಸರ್ವೆಗಳು ಚೈನ್ ಮೂಲಕ ಗಡಿ ಗುರುತು ಮಾಡುವುದರ ಮೂಲಕ ಸರ್ವೆ ಕಾರ್ಯ ನಡೆಸಬೇಕು ಎಂದು ಒತ್ತಾಯಿಸಿದರು. ಮೀಸಲು ಅರಣ್ಯ, ಡೀಮ್ಸ್ ಫಾರೆಸ್ಟ್, ಸೊಪ್ಪಿನ ಬೆಟ್ಟ, ಒತ್ತುವರಿ, ಕಸ್ತೂರಿ ರಂಗನ್ ವರದಿ, ಪರಿಸರ ಸೂಕ್ಷ್ಮ ಪ್ರದೇಶ, ಹುಲಿ ಯೋಜನೆ ಹಾಗೂ ಇತರ ಮಲೆನಾಡ ನಿವಾಸಿಗಳ ವಿರುದ್ಧ ಸರ್ಕಾರ ಕಾನೂನು, ಕಾಯ್ದೆಗಳನ್ನು ರೂಪಿಸಿಕೊಂಡು ಒಕ್ಕಲೆಬ್ಬಿಸುವ ಹುನ್ನಾರ ಮಾಡುತ್ತಿದೆ. ಇದರ ವಿರುದ್ಧ ಕೊಪ್ಪದಿಂದ ವಿಧಾನಸೌಧಕ್ಕೆ ಮುಟ್ಟುವಂತಹ ಕೂಗು ಹಾಕಲಿದ್ದೇವೆ ಎಂದರು.
ಶೃಂಗೇರಿ, ಎನ್. ಆರ್. ಪುರ, ಖಾ0ಡ್ಯ ಹೋಬಳಿಯಲ್ಲಿ ಬಂದ್
ರೈತ ಪರವಾದ ಈ ಹೋರಾಟಕ್ಕೆ ಬಹುತೇಕ ಸಂಘಟನೆಗಳು ಕೈ ಜೋಡಿಸಿವೆ. ಬಿಜೆಪಿ, ಜೆಡಿಎಸ್ ಪಕ್ಷ ಕೂಡ ಬೆಂಬಲ ನೀಡಿದೆ.