- ಎಲ್ಲಾ ಇಲಾಖಾಧಿಕಾರಿಗಳ ಸಭೆ ಕರೆದ ಆರಗ
- ತೀರ್ಥಹಳ್ಳಿ ಅಭಿವೃದ್ಧಿಗೆ ಹೊಸ ಹೆಜ್ಜೆ ನಿರೀಕ್ಷೆ
- ಉದ್ಯೋಗ ಸೃಷ್ಟಿಗೆ ಆರಗ ಮಾಸ್ಟರ್ ಪ್ಲಾನ್?!
- ಕ್ಷೇತ್ರದ ಟಾಪ್ 10 ಸಮಸ್ಯೆ ಬಗ್ಗೆ ಕ್ರಮ ಕೈಗೊಳ್ಳಿ ಸಾರ್!
NAMMUR EXPRESS EXCLUSIVE
ತೀರ್ಥಹಳ್ಳಿ: ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಅವರು ಇದೀಗ ರಾಜ್ಯ ಸರ್ಕಾರದ ಟಾಪ್ 2 ಸ್ಥಾನದಲ್ಲಿದ್ದಾರೆ. ಇದು ಕ್ಷೇತ್ರಕ್ಕೆ ಹೆಮ್ಮೆಯ ವಿಚಾರ. ಈ ನಡುವೆ ಅವರ ತವರು ಕ್ಷೇತ್ರದಲ್ಲಿ ಕೂಡ ಬೆಟ್ಟದಷ್ಟು ಸಮಸ್ಯೆಗಳಿವೆ. ಇನ್ನು ಗೃಹ ಸಚಿವರಾದ ಮೇಲೆ ಕ್ಷೇತ್ರದಲ್ಲಿ ಕೆಲಸ ಮಾಡಲು ಆಗುತ್ತಿಲ್ಲ ಎಂಬ ಮಾತನ್ನು ಅವರೇ ಹೇಳಿದ್ದಾರೆ. ಈ ನಡುವೆ ಸೋಮವಾರ ಬೆಳಗ್ಗೆ ತೀರ್ಥಹಳ್ಳಿಯ ಶಾಂತವೇರಿ ಗೋಪಾಲ ಗೌಡ ರಂಗ ಮಂದಿರದಲ್ಲಿ ಮಳೆಹಾನಿ, ಕೋವಿಡ್, ಎಲ್ಲಾ ಇಲಾಖೆಗಳ ಅಭಿವೃದ್ಧಿ ಸೇರಿದಂತೆ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆ ನಡೆಸಲಿದ್ದಾರೆ.
ಗೃಹ ಮಂತ್ರಿ ಆರಗ ಕ್ಷೇತ್ರ ತೀರ್ಥಹಳ್ಳಿ ಆದರೂ ಹೊಸನಗರದ ಒಂದು ಹೋಬಳಿ ಸೇರಿಕೊಂಡಿದೆ. ಹೀಗಾಗಿ ಅಲ್ಲಿಯೂ ಅಭಿವೃದ್ಧಿ ಆಗಬೇಕಿದೆ.
ಆರಗ ಅವರು 4 ಬಾರಿ ಶಾಸಕರಾಗಿ ಮೊದಲ ಬಾರಿಗೆ ಸಚಿವರಾಗಿದ್ದಾರೆ. ಅನುಭವ, ಅರ್ಹತೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದಾರೆ. ಇದೀಗ ಅವರು ತವರು ಕ್ಷೇತ್ರದ ಅಭಿವೃದ್ಧಿ ಕಡೆಗೂ ಒಂದು ಕಣ್ಣು ಇಡಬೇಕಿದೆ. ಆದರೆ ಸಮಯ ಆಗುತ್ತಿಲ್ಲ ಎಂಬುದು ಮೇಲ್ನೋಟಕ್ಕೆ ಕಾಣುತ್ತಿದೆ. ಅದೇನೇ ಇರಲಿ ಕ್ಷೇತ್ರದ ಗಂಭೀರ ಸಮಸ್ಯೆಗಳ ಬಗ್ಗೆ ನಮ್ಮೂರ್ ಎಕ್ಸ್ಪ್ರೆಸ್ ಬೆಳಕು ಚೆಲ್ಲಿದ್ದು ಇಂದಿನ ಸಭೆಯಲ್ಲಿ ಈ ಬಗ್ಗೆ ಚರ್ಚೆ ಆಗುವ ಸಾಧ್ಯತೆಗಳಿವೆ.
ಆಗುಂಬೆ ಭಾಗದಲ್ಲಿ ಕಾಡು ಆನೆ ಕಾಟ!
ತೀರ್ಥಹಳ್ಳಿ ತಾಲೂಕು ಮೇಗರವಳ್ಳಿ ಅರಣ್ಯಾಧಿಕಾರಿಗಳ ವ್ಯಾಪ್ತಿಯ ಆಗುಂಬೆ ಸಮೀಪದ ಮಲ್ಲಂದೂರು ಗ್ರಾಮದಲ್ಲಿ ಕಾಡಾನೆ ಕಾಟ ಹೆಚ್ಚಾಗಿದೆ.
ಇತ್ತೀಚಿಗೆ ವೆಂಕಟೇಶ್ ಮತ್ತು ಇನ್ನಿಬ್ಬರ ರೈತರ ತೋಟಕ್ಕೆ ನುಗ್ಗಿ ಅಡಿಕೆ ಗಿಡ ಬಾಳೆ ಸಸಿಗಳನ್ನು ನಾಶ ಮಾಡಿದೆ. ಈ ಹಿಂದೆ ಆರಗ ಅವರೇ ಈ ಕಾಡಾನೆ ಕಾಟಕ್ಕೆ ಶಾಶ್ವತ ಪರಿಹಾರ ನೀಡುವುದಾಗಿ ಭರವಸೆ ನೀಡಿದ್ದರು.
ಮರಳು ದಂಧೆಗೆ ಹಾಕ್ತಾರಾ ಕಡಿವಾಣ?
ತೀರ್ಥಹಳ್ಳಿ ಮತ್ತು ಹೊಸನಗರ ಮರಳು ಮಾಫಿಯಾದ ಭದ್ರಕೋಟೆಗಳಾಗಿವೆ. ಮರಳು ಅಕ್ರಮ ಅಪರಾಧ ಹಾಗೂ ಕಾನೂನು ಸುವ್ಯವಸ್ಥೆಗೆ ಧಕ್ಕೆ ತರುವ ಕೆಲಸಕ್ಕೆ ಕಾರಣವಾಗಬಹುದು. ಈ ದಂಧೆಯಲ್ಲಿ ಎಲ್ಲಾ ಪಕ್ಷದವರು ಸ್ನೇಹಿತರು. ಹೀಗಾಗಿ ಗೃಹ ಮಂತ್ರಿಗಳ ಹೆಸರು ದುರುಪಯೋಗ ಆಗುವ ಸಾಧ್ಯತೆಗಳಿವೆ. ಹೀಗಾಗಿ ಅಕ್ರಮಕ್ಕೆ ಕಡಿವಾಣ ಹಾಕುವ ಸಾಧ್ಯತೆಗಳಿವೆ.
ಹಕ್ಕುಪತ್ರ, ಬಗರ್ ಹುಕುಂ ಬಗೆ ಹರಿಯುತ್ತಾ?
ಮಲೆನಾಡಿನ ರೈತರು, ಜನರ ಬಹು ವರ್ಷಗಳ ಬೇಡಿಕೆ ಹಕ್ಕು ಪತ್ರ, ಬಗರ್ ಹುಕುಂ ಮಂಜೂರಾತಿ, 94 ಸಿ, ಅರಣ್ಯ ಹಕ್ಕು ಸೇರಿ ಸಾವಿರಾರು ಅರ್ಜಿಗಳು ಧೂಳು ಹಿಡಿದು ಬಿದ್ದಿವೆ. ಇನ್ನು ಅರಣ್ಯ ಇಲಾಖೆ ಸಮಸ್ಯೆ, ಅಭಯಾರಣ್ಯ, ಕಸ್ತೂರಿ ರಂಗನ್ ವರದಿ ಇವು ಮಲೆನಾಡಿನ ಕೆಲವು ರೈತರಿಗೆ ಮಾರಕವಾಗಿದೆ. ಈ ಸಮಸ್ಯೆಗೆ ಪರಿಹಾರ ಸಿಗುತ್ತಾ ಎಂಬ ಆಶಾಭಾವನೆ ಇದೆ. ಇನ್ನು ಭೂ ನ್ಯಾಯ ಮಂಡಳಿ ಇನ್ನು ನೇಮಕ ಆಗಿಲ್ಲ. ರೈತರ ಸಾವಿರಾರು ಅರ್ಜಿಗಳು ಧೂಳು ತಿನ್ನುತ್ತಿವೆ.
ಪೊಲೀಸ್ ಇಲಾಖೆ ಹೈ ಟೆಕ್!?
ಶಿವಮೊಗ್ಗ, ತೀರ್ಥಹಳ್ಳಿ ಠಾಣೆ ಸೇರಿ ಮಲೆನಾಡಿನ ಎಲ್ಲಾ ಠಾಣೆಗಳಿಗೆ ಆಧುನಿಕ ಟಚ್ ಕೊಡಬೇಕು. ಸಾಧನಗಳು, ಮಲೆನಾಡಿನಲ್ಲಿ ಗಾಳಿ ಮಳೆಯಲ್ಲಿ ಕೆಲಸ ಮಾಡುವ ಪೊಲೀಸರಿಗೆ ಬೂಟು, ರೈನ್ ಕೋಟ್ ನೀಡುಬೇಕು. ಸಿಬ್ಬಂದಿ ಕೊರತೆ ತುಂಬಬೇಕು.
ಹಗರಣ ಆದ್ರೆ ಯಾರು ಹೊಣೆ?
ತೀರ್ಥಹಳ್ಳಿ ಕ್ಷೇತ್ರದಲ್ಲಿ ಜ್ಞಾನೇಂದ್ರ ಅವರ ಕೆಲಸಗಳನ್ನು ಯಾರು ಮಾಡ್ತಾರೆ ಎಂಬ ಕುತೂಹಲ ಇದೆ. ಆರಗ ಅವರು ಬೆಂಗಳೂರಿನಲ್ಲಿ ಇರಬೇಕಾದ ಕಾರಣ ಸ್ಥಳೀಯರ ನೋವು, ನಲಿವು, ಅಹವಾಲು ಸ್ವೀಕಾರ ಆಗಬೇಕು. ಅದರಲ್ಲಿ ಯಾವುದೇ ಕಪ್ಪುಚುಕ್ಕೆ ಬರದೇ ನಡೆಸುವುದು, ಅದನ್ನು ಮ್ಯಾನೇಜ್ ಮಾಡುವುದು ಆರಗ ಅವರಿಗೆ ಸವಾಲಿನ ಕೆಲಸವಾಗಿದೆ. ಈ ಸ್ಥಾನಕ್ಕಾಗಿ ಹಲವರು ಲಾಭಿ ಕೂಡ ಮಾಡುತ್ತಿದ್ದಾರೆ.
ಪಾರ್ಕಿಂಗ್ ಅವ್ಯವಸ್ಥೆ: ಸಿಸಿಟಿವಿ ಇಲ್ಲ
ತೀರ್ಥಹಳ್ಳಿಗೆ ಕಿಮ್ಮನೆ ಅವಧಿಯಲ್ಲಿ ಉತ್ತಮ ರಸ್ತೆ ನಿರ್ಮಾಣ ಆಗಿದೆ. ಆದರೆ ಪಾರ್ಕಿಂಗ್ ಸಮಸ್ಯೆ ಜನರಿಗೆ ಕಿರಿಕಿರಿ ಉಂಟು ಮಾಡಿದೆ. ಪ್ರತಿ ದಿನ ಒಂದಲ್ಲ ಒಂದು ಅಪಘಾತ ಇದ್ದೆ ಇರುತ್ತದೆ. ಹೀಗಾಗಿ ಪಾರ್ಕಿಂಗ್ ವ್ಯವಸ್ಥೆ ಮಾಡುವುದು ಒಂದು ದೊಡ್ಡ ಕೆಲಸ. ಜತೆಗೆ ಮುಖ್ಯ ಬಸ್ ನಿಲ್ದಾಣ ಸೇರಿ ಅನೇಕ ಕಡೆ ಸಿಸಿ ಟಿವಿ ಜೋಡಣೆ ಕೂಡ ಆಗಬೇಕಿದೆ.
ಉದ್ಯೋಗ ಸೃಷ್ಟಿ ಇಲ್ಲ!
ತೀರ್ಥಹಳ್ಳಿ ಸೇರಿ ಸುತ್ತಮುತ್ತ ಸುಮಾರು 4-5 ತಾಲೂಕುಗಳಲ್ಲಿ 2 ಲಕ್ಷಕ್ಕೂ ಅಧಿಕ ಮಂದಿ ನಿರುದ್ಯೋಗಿಗಳಿದ್ದಾರೆ. ಕರೋನಾ ಹಿನ್ನೆಲೆ ನಿರುದ್ಯೋಗ ಸಮಸ್ಯೆ ಹೆಚ್ಚಾಗಿದೆ. ಪ್ರತಿ ಮನೆಯಲ್ಲಿ ಒಬ್ಬರು ಕೆಲಸ ಕಳೆದುಕೊಂಡಿದ್ದಾರೆ. ಡಿಗ್ರಿ, ಇಂಜಿನಿಯರ್ ಓದುದವರಿಗೂ ಕೆಲಸ ಸಿಗುತ್ತಿಲ್ಲ. ಬೆಂಗಳೂರಲ್ಲಿಯೂ ಅವಕಾಶ ಇಲ್ಲ. ಹೀಗಾಗಿ ಉದ್ಯೋಗ ಸೃಷ್ಟಿಯ ಯೋಜನೆ, ಕೈಗಾರಿಕಾ ವಲಯ, ಟೂರಿಸಂ ಹಬ್, ಐಟಿಬಿಟಿ, ಬಿಪಿಒದಂತಹ ಸಾವಿರಾರು ಉದ್ಯಮ ಸೃಷ್ಟಿ ಮಾಡುವ ಯೋಜನೆಗೆ ಕೈ ಹಾಕಿ ಸ್ಥಾನಕ್ಕೆ ಗೌರವ ತಂದುಕೊಳ್ಳಬೇಕಿದೆ.
ರಸ್ತೆ, ಚರಂಡಿ, ಸಮುದಾಯ ಭವನ ಬೇಡ!
ಕರೋನಾ ಬಳಿಕ ಉದ್ಯೋಗ ಕಳೆದುಕೊಂಡು ಉದ್ಯಮ ಕಳೆದುಕೊಂಡು ಜನ ಬೀದಿಗೆ ಬಿದ್ದಿದ್ದಾರೆ. ಈ ಸಂದರ್ಭದಲ್ಲಿ ಜನರಿಗೆ ಆರೋಗ್ಯ, ಉದ್ಯೋಗ ಬೇಕಿದೆ. ಆದರೆ ಗುತ್ತಿಗೆದಾರರಿಗೆ ಹಣ ಮಾಡಿಕೊಡುವ ರಸ್ತೆ, ಚರಂಡಿ,ಸಮುದಾಯ ಭವನಗಳು ಸಧ್ಯಕ್ಕೆ ಅವಶ್ಯಕತೆ ಇಲ್ಲ ಎಂಬ ಅಭಿಪ್ರಾಯ ಜನರಿಂದ ಕೇಳಿ ಬಂದಿದೆ.
ಸರ್ಕಾರಿ ಕಚೇರಿ ಲಂಚಾವಾತಾರ!
ತೀರ್ಥಹಳ್ಳಿ ಸೇರಿದಂತೆ ಬಹುತೇಕ ಸರ್ಕಾರಿ ಕಚೇರಿಗಳಲ್ಲಿ ಲಂಚ, ಭ್ರಷ್ಟಾಚಾರ ಹೆಚ್ಚಾಗಿದೆ.ಸಾಮಾನ್ಯ ಜನರ ಕೆಲಸ ಆಗುವುದಿಲ್ಲ. ಹಣ ಕೊಟ್ಟರೆ ಬೇಗ ಕೆಲಸ ಆಗುತ್ತದೆ. ಇದು ಗೃಹ ಮಂತ್ರಿಗಳಿಗೂ ಶೋಭೆ ತರುವುದಿಲ್ಲ. ಹೀಗಾಗಿ ಅದಕ್ಕೆ ಕಡಿವಾಣ ಹಾಕಬೇಕಿದೆ.
ನೆಟ್ವರ್ಕ್ ಇಲ್ಲ.. ಆನ್ಲೈನ್ ಪಾಠ ಕೇಳಂಗಿಲ್ಲ!
ತೀರ್ಥಹಳ್ಳಿ ಮತ್ತು ಹೊಸ ನಗರ ತಾಲೂಕುಗಳಲ್ಲಿ ಮೊಬೈಲ್ ನೆಟ್ವರ್ಕ್ ಸಂಪೂರ್ಣ ಹದಗೆಟ್ಟಿದೆ. ಯಾವ ಊರಲ್ಲೂ ಸರಿಯಾಗಿ ನೆಟ್ವರ್ಕ್ ಸಿಗಲ್ಲ. ಜಿಯೋ, ಬಿಎಸ್ಎನ್ಎಲ್ ಎಲ್ಲಾ ಕಡೆ ಇದ್ದರೂ ನೂರಾರು ಹಳ್ಳಿಗಳಲ್ಲಿ ನೆಟ್ವರ್ಕ್ ಇಲ್ಲ. ಇದರಿಂದ ಕರೋನಾದಿಂದ ಆನ್ಲೈನ್ ಶಿಕ್ಷಣ ಪಡೆಯುತ್ತಿರುವ ಹಳ್ಳಿಯ ಮಕ್ಕಳಿಗೆ ತೊಂದರೆ ಆಗಿದೆ. ವರ್ಕ್ ಫ್ರಮ್ ಹೋಂ ಕೆಲಸ ಮಾಡಲಾಗದೆ ನೂರಾರು ಮಂದಿ ಕೆಲಸ ಕಳೆದುಕೊಂಡಿದ್ದಾರೆ. ಯಾವುದೇ ಕೆಲಸಗಳು ಸರಿಯಾಗಿ ಆಗುತ್ತಿಲ್ಲ. ತೀರ್ಥಹಳ್ಳಿ ಪಟ್ಟಣದಲ್ಲೂ ನೆಟ್ವರ್ಕ್ ಸರಿ ಇಲ್ಲ. ಹೀಗಾಗಿ ಕಂಪನಿಗಳ ಜತೆ ಮಾತುಕತೆ ನಡೆಸಿ ಅವುಗಳ ಸಾಮರ್ಥ್ಯ ಹೆಚ್ಚಿಸಬೇಕು. ಟವರ್ ಸಂಖ್ಯೆ ಹೆಚ್ಚಳವಾಗಬೇಕು ಎಂಬ ಅಗ್ರಹ ಜನರಿಂದ ವ್ಯಕ್ತವಾಗಿದೆ.
ಏನಂತಾರೆ ಆರಗ?: ನಾಲ್ಕು ಬಾರಿ ಶಾಸಕನಾಗಿ, 5 ಬಾರಿ ಸೋಲು ಕಂಡರೂ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿದ್ದೇನೆ. ತೀರ್ಥಹಳ್ಳಿ ಎಲ್ಲಾ ಪಟ್ಟಣ, ತಾಲೂಕುಗಳಿಗಿಂತ ಅಭಿವೃದ್ಧಿಯಲ್ಲಿ ಮುಂದಿದೆ. ಈಗ ನನಗೆ ಜವಾಬ್ದಾರಿ ಹೆಚ್ಚಿದೆ. ಇನ್ನಷ್ಟು ಅಭಿವೃದ್ಧಿ ಮಾಡಲು ಅವಕಾಶ ಸಿಕ್ಕಿದೆ. ಸರಕಾರ ಮತ್ತು ಎಲ್ಲರ ಸಹಕಾರದೊಂದಿಗೆ ಅಭಿವೃದ್ಧಿ ಕೆಲಸಗಳನ್ನು ಮಾಡುತ್ತೇನೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.
ಜನ ಪ್ರತಿನಿಧಿಗಳು ಏನಂತಾರೆ?: ನಮ್ಮ ನಾಯಕರಾದ ಆರಗ ಜ್ಞಾನೇಂದ್ರ ಅವರು ಕ್ಷೇತ್ರದ ಅಭಿವೃದ್ಧಿ ಕೆಲಸಗಳನ್ನು 40 ವರ್ಷಗಳಿಂದ ಮಾಡಿಕೊಂಡು ಬಂದಿದ್ದಾರೆ. ಈಗ ಉತ್ತಮ ಅವಕಾಶ ಸಿಕ್ಕಿದೆ. ಇನ್ನು ಹೆಚ್ಚು ಅಭಿವೃದ್ಧಿ ಮಾಡುತ್ತಾರೆ ಎಂಬ ನಿರೀಕ್ಷೆ ಇದೆ.
- ಮಹೇಶ್ ಮೇಲಿನಕೊಪ್ಪ
ಸದಸ್ಯರು, ಬೆಜ್ಜವಳ್ಳಿ ಗ್ರಾಮ ಪಂಚಾಯತ್
ಎಲ್ಲಾ ವಿಭಿನ್ನ ಸುದ್ದಿ ನಮ್ಮೂರ್ ಎಕ್ಸ್ಪ್ರೆಸ್ ಮಾಧ್ಯಮದಲ್ಲಿ ಮಾತ್ರ. ರಾಜ್ಯದ ಮುಂಚೂಣಿ ಮಾಧ್ಯಮ ಸಂಸ್ಥೆ.
ಜಾಹಿರಾತಿಗಾಗಿ: 9480181535. ಸುದ್ಧಿಗಾಗಿ: 9481949101.