ಮದುವೆಗೆ ಹುಡುಗಿ ಹುಡುಕುವ. ನಕಲಿ ಗ್ಯಾಂಗ್ ಅರೆಸ್ಟ್!
– ಮದುವೆ ಇಲ್ಲದಿದ್ರು ತೊಂದರೆ ಇಲ್ಲ… ಲಕ್ಷ ಲಕ್ಷ ಕಳೆದುಕೊಳ್ಳಬೇಡಿ
– ಶಿಕ್ಷಕಿಗೆ ಅಶ್ಲೀಲ ಮೆಸೇಜ್: ಶಿಕ್ಷಕನಿಗೆ ಧರ್ಮದೇಟು!
– ಅಂಗನವಾಡಿ ಬೆಲ್ಲದಲ್ಲಿ ಸತ್ತ ಇಲಿ ಪತ್ತೆ!
– ರಾಜ್ಯದಲ್ಲಿ 1 ವರ್ಷಕ್ಕೆ 68,450 ಹೆಚ್ಐವಿ ಕೇಸ್!
NAMMUR EXPRESS NEWS
ತುಮಕೂರು: ತುಮಕೂರು ಜಿಲ್ಲೆ ಗುಬ್ಬಿ ಪೊಲೀಸರ ಭರ್ಜರಿ ಕಾರ್ಯಾಚರಣೆಯಲ್ಲಿ ತುಮಕೂರು ಸೇರಿದಂತೆ ರಾಜ್ಯದ ಹಲವೆಡೆ ಹಲವರನ್ನು ಯಾಮಾರಿಸಿದ್ದ ತಂಡ ಅಂದರ್ ಆಗಿದೆ. 3 ವರ್ಷದಲ್ಲಿ ಐದು ಮದುವೆ ಮಾಡಿಕೊಂಡಿದ್ದ ಐನಾತಿ ಮದುಮಗಳು ಕೂಡ ಆರೆಸ್ಟ್ ಆಗಿದ್ದಾಳೆ.
ಮದುವೆಯಾಗಿ ವಂಚಿಸುವ ನಕಲಿ ಹೆಣ್ಣು ಹಾಗೂ ಗ್ಯಾಂಗ್ನ ಕಥೆ ಇದು.ಇಲ್ಲಿ ಎಂಟು ಜನ ಹುಡುಗಿ ಕಡೆಯವರು ಬರುತ್ತಾರೆ. ಹೆಣ್ಣು ತೋರಿಸುತ್ತಾರೆ. ಮದುವೆಯನ್ನೂ ಮಾಡಿಸುತ್ತಾರೆ. ಮದುವೆಯಾದ ನಾಲ್ಕೂ ದಿನಕ್ಕೆ ಮದುಮಗಳು ವರನ ಮನೆಯಲ್ಲಿದ್ದ ಹಣ, ಒಡವೆಯನ್ನೆಲ್ಲ ಎತ್ತಿಕೊಂಡು ಪರಾರಿಯಾಗ್ತಾಳೆ. ತುಮಕೂರಿನಲ್ಲಿ ಇಂಥ ದೋಖಾ ಮ್ಯಾರೇಜ್ ಕಂಪನಿ ಪತ್ತೆಯಾಗಿದೆ. ಮದುವೆ ವಯಸ್ಸು ಮೀರಿದ ಯುವಕರೇ ಈ ದೋಖಾ ಗ್ಯಾಂಗಿನ ಟಾರ್ಗೆಟ್ ಆಗಿದ್ದು ಮದುವೆ ಹೆಸರಲ್ಲಿ ವಂಚನೆ ಮಾಡುತ್ತಿದ್ದ ತಂಡವನ್ನು ಪೊಲೀಸರು ಜೈಲಿಗಟ್ಟಿದ್ದಾರೆ
ತುಮಕೂರು ಜಿಲ್ಲೆ ಗುಬ್ಬಿ ತಾಲ್ಲೂಕಿನ ಅತ್ತಿಗಟ್ಟೆ ಗ್ರಾಮದಲ್ಲಿ ಇಂಥದೊಂದು ವಂಚನೆಯ ಮದುವೆ ನಡೆದಿತ್ತು. ಗ್ರಾಮದ ಪಾಲಾಕ್ಷಯ್ಯ ಎಂಬವರು ತಮ್ಮ ಮಗ ದಯಾನಂದಮೂರ್ತಿಗೆ 37 ವರ್ಷ ದಾಟಿದರೂ ಹೆಣ್ಣು ಸಿಗದೇ ನೊಂದಿದ್ದರು. ಕುಷ್ಟಗಿ ಮೂಲದ ಬಸವರಾಜು ಎಂಬಾತನ ಮೂಲಕ ಹುಬ್ಬಳ್ಳಿಯ ಲಕ್ಷ್ಮಿ ಎಂಬಾಕೆಯ ಪರಿಚಯವಾಗಿತ್ತು. ಮದುವೆ ಪ್ರೋಕರ್ ಕೆಲಸ ಮಾಡುತ್ತಿದ್ದ ಲಕ್ಷ್ಮಿ ಬಳಿ ಮಗನಿಗೆ ಹೆಣ್ಣು ತೋರಿಸುವಂತೆ ಪಾಲಾಕ್ಷಯ್ಯ ಕೇಳಿಕೊಂಡಿದ್ದರು.
ಇವರ ಪರಿಸ್ಥಿತಿ ನೋಡಿ ಮೋಸ ಮಾಡುವ ತೀರ್ಮಾನ ಮಾಡಿದ ಲಕ್ಷ್ಮೀ, ಹುಬ್ಬಳ್ಳಿಯಲ್ಲಿ ಒಬ್ಬಳು ಒಳ್ಳೆ ಹುಡುಗಿ ಇದ್ದಾಳೆ. ಆಕೆಗೆ ತಂದೆ-ತಾಯಿ ಇಲ್ಲ. ನೀವೇ ಮದುವೆ ಮಾಡಿಕೊಳ್ಳಬೇಕೆಂದು ಸುಳ್ಳು ಹೇಳಿದ್ದಳು. ಕೋಮಲಾ ಎಂಬ ಹೆಸರಿನಲ್ಲಿ ಹುಡುಗಿಯ ಫೋಟೋ ಕಳುಹಿಸಿದ್ದಳು. ಬಳಿಕ ಹುಡುಗಿಯನ್ನು ಗಂಡಿನ ಮನೆಗೆ ಕರೆದುಕೊಂಡು ಬಂದಿದ್ದಳು. ಆಕೆಯ ಸಂಬಂಧಿಕರು ಎಂದು ಇನ್ನೂ ಐದಾರು ಜನರನ್ನು ಕರೆತಂದಿದ್ದಳು. ಕಳೆದ ವರ್ಷ ನವೆಂಬರ್ 11ರಂದು ಅತ್ತಿಗಟ್ಟೆಗೆ ಬಂದಿದ್ದ ನಕಲಿ ಕುಟುಂಬ ಅಂದೇ ಮದುವೆ ಮಾತುಕತೆ ನಡೆಸಿತ್ತು. ಮರುದಿನ ಮುಂಜಾನೆಯೇ ಮದುವೆಯನ್ನೂ ಮಾಡಿ ಮುಗಿಸಿದ್ದರು. ಮಗನಿಗೆ ಹೆಣ್ಣು ಸಿಗದೇ ಹೈರಾಣಾಗಿದ್ದ ದಯಾನಂದಮೂರ್ತಿ ಕುಟುಂಬ ದಿಢೀರ್ ಮದುವೆಗೆ ಒಪ್ಪಿಕೊಂಡು ಗ್ರಾಮದಲ್ಲಿ ಮದುವೆ ಮಾಡಿದ್ದರು. ಹೆಣ್ಣು ಸಿಕ್ಕ ಖುಷಿಯಲ್ಲಿ ಹಿಂದೆಮುಂದೆ ಯೋಚಿಸದೆ ಮದುವೆ ಮಾಡಿಸಿದ್ದರು. ಮದುವೆಗೆ ಸುಮಾರು 200ಕ್ಕೂ ಹೆಚ್ಚು ಜನ ಸೇರಿದ್ದು, ಹೆಣ್ಣಿಗೆ ಚಿನ್ನದ ಸರ, ತಾಳಿ, ಕಿವಿಗೆ ಓಲೆ ನೀಡಿದ್ದರು.ವಧುವಿಗೆ 25 ಗ್ರಾಂ ಚಿನ್ನಾಭರಣ ಹಾಕಲಾಗಿತ್ತು. ಹೆಣ್ಣುತೋರಿಸಿದ ಪ್ರೋಕರ್ ಲಕ್ಷ್ಮಿಗೆ 1.5 ಲಕ್ಷ ಹಣ ನೀಡಿದ್ದರು. ಹೆಣ್ಣಿನ ಕಡೆಯವರು ಅಂತ 8 ಜನರನ್ನು ಬ್ರೋಕರ್ ಲಕ್ಷ್ಮಿ
ಕರೆ ತಂದಿದ್ದಳು. ಮದುವೆ ಮುಗಿದ ಎರಡು ದಿನದ ನಂತರ ಸಂಪ್ರದಾಯದ ನೆಪ ಹೇಳಿ ಹಣ-ಚಿನ್ನದ ಒಡವೆ ಸಹಿತ ಮದುಮಗಳನ್ನ ಕರೆದುಕೊಂಡು ಹೋಗಿದ್ದರು. ವಾರ ಕಳೆದರೂ ಸೊಸೆ ವಾಪಸ್ ಬಂದಿರಲಿಲ್ಲ.ಆತಂಕಗೊಂಡ ಪಾಲಾಕ್ಷಯ್ಯ ಹುಬ್ಬಳ್ಳಿಗೆ ಹೋಗಿ ವಿಚಾರಿಸಿದಾಗ, ನಡೆದದ್ದು ನಕಲಿ ಮದುವೆ, ಬಂದವರು ದೋಖಾ ಗಿರಾಕಿಗಳು ಎಂಬ ಸತ್ಯ ಬಯಲಾಗಿದೆ. ವಾಪಸ್ ಗುಬ್ಬಿಗೆ ಬಂದ ಪಾಲಾಕ್ಷಯ್ಯ ಎಲ್ಲರ ವಿರುದ್ಧ ದೂರು ನೀಡಿದ್ದರು. ಸದ್ಯ ನಾಲ್ವರನ್ನೂ ಬಂಧಿಸಿ ಗುಬ್ಬಿ ಪೊಲೀಸರು ಜೈಲಿಗಟ್ಟಿದ್ದಾರೆ.
ಶಿಕ್ಷಕಿಗೆ ಅಶ್ಲೀಲ ಮೆಸೇಜ್: ಶಿಕ್ಷಕನಿಗೆ ಧರ್ಮದೇಟು!
ರಾಯಚೂರು: ಶಿಕ್ಷಕಿಗೆ ಅಶ್ಲೀಲ ಮೆಸೇಜ್ ಕಳುಹಿಸಿ ಲೈಂಗಿಕ ಕಿರುಕುಳ ನೀಡುತ್ತಿದ್ದ ಕಾಮುಕ ಶಿಕ್ಷಕನನ್ನು ಸಾರ್ವಜನಿಕರು ಹಿಡಿದು ಧರ್ಮದೇಟು ನೀಡುರುವ ಘಟನೆ ರಾಯಚೂರು ಹೊರವಲಯದಲ್ಲಿ ನಡೆದಿದೆ.
ರಾಯಚೂರು ಹೊರವಲಯದಲ್ಲಿರುವ ಆದರ್ಶ ಸರ್ಕಾರಿ ಶಾಲೆಯ ಸಹ ಶಿಕ್ಷಕ ಮೊಹಬೂಬ್ ಅಲಿ ಎಂಬಾತ ಅದೇ ಶಾಲೆಯಲ್ಲಿ ಅತಿಥಿ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಮಹಿಳೆಗೆ ಲೈಂಗಿಕ ಕಿರುಕುಳ ನೀಡುತ್ತಿದ್ದ.ಅಶ್ಲೀಲ ಮೆಸೇಜ್ ಕಳುಹಿಸಿ, ಮಂಚಕ್ಕೆ ಕರೆದಿದ್ದ. ಶಿಕ್ಷಕನ ಕಿರುಕುಳದ ಬಗ್ಗೆ ಶಿಕ್ಷಕಿ ಮನೆಯಲ್ಲಿ ತಿಳಿಸಿದ್ದರು.
ವಿಷಯ ಗೊತ್ತಾಗುತ್ತಿದ್ದಂತೆ ಶಿಕ್ಷಕಿ ಕುಟುಂಬದವರು ಹಾಗೂ ಸಂಬಂಧಿಕರು ಶಾಲೆ ಬಳಿ ಆಗಮಿಸಿ ಶಿಕ್ಷಕ ಮೆಹಬೂಬ ಅಲಿಯನ್ನು ಹಿಡಿದು ಹಿಗ್ಗಾಮುಗ್ಗಾ ಥಳಿಸಿ ಬುದ್ದಿ ಕಲಿಸಿದ್ದಾರೆ. ಮಾಡಿದ ತಪ್ಪಿಗೆ ಆರೋಪಿ ಶಿಕ್ಷಕಿ ಕಾಲಿಗೆ ಬಿದ್ದು ಕ್ಷಮೆ ಕೇಳಿದ್ದಾನೆ. ಅಲ್ಲದೇ ತಪ್ರೊಪ್ಪಿಗೆ ಪತ್ರ ಬರೆದು ಎಲ್ಲರ ಬಳಿ ಕ್ಷಮೆ ಕೋರಿದ್ದಾನೆ. ಸದ್ಯ ಶಿಕ್ಷಕ ತಪ್ರೊಪ್ಪಿಗೆ ಪತ್ರ ಬರೆದು ಕಾಲಿಗೆ ಬಿದ್ದು ಕ್ಷಮೆ ಕೇಳಿದ್ದರಿಂದ ಆತನ ವಿರುದ್ಧ ಪೊಲೀಸರಿಗೆ ದೂರು ನೀಡಲಾಗಿಲ್ಲ ಎಂದು ತಿಳಿದುಬಂದಿದೆ.
ಅಂಗನವಾಡಿ ಬೆಲ್ಲದಲ್ಲಿ ಸತ್ತ ಇಲಿ ಪತ್ತೆ!
ಗುಡಿಬಂಡೆ ತಾಲೂಕಿನ ಹಂಪಸಂದ್ರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗರುಡಾಚಾರ್ಲಹಳ್ಳಿ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಇತ್ತೀಚೆಗೆ ವಿತರಿಸಲಾದ ಬೆಲ್ಲದ ಪೊಟ್ಟಣದಲ್ಲಿ ಸತ್ತ ಇಲಿ ಪತ್ತೆಯಾಗಿದೆ ಎಂಬ ಆರೋಪ ಕೇಳಿ ಬಂದಿದೆ. ಗರ್ಭಿಣಿಯರು, ಬಾಣಂತಿಯರಿಗೆ ಅಂಗನವಾಡಿ ಕೇಂದ್ರದಲ್ಲಿ ಈ ಪೊಟ್ಟಣಗಳನ್ನು ವಿತರಿಸಲಾಗಿತ್ತು.
ಗರುಡಾಚಾರ್ಲಹಳ್ಳಿ ಗ್ರಾಮದ ನಿವಾಸಿ ರತ್ನಮ್ಮ ಎಂಬುವರಿಗೆ ನೀಡಿದ ಎರಡು ಬೆಲ್ಲದ ಪೊಟ್ಟಣಗಳ ಪೈಕಿ ಒಂದರಲ್ಲಿ ಈ ಸತ್ತ ಇಲಿ ಕಂಡುಬಂದಿವೆ. ಕೂಡಲೇ ಅವರು ಪೊಟ್ಟಣಗಳನ್ನು ಅಂಗನವಾಡಿ ಕಾರ್ಯಕರ್ತೆ ಗಮನಕ್ಕೆ ತಂದಿದ್ದಾರೆ.
ರಾಜ್ಯದಲ್ಲಿ 1 ವರ್ಷಕ್ಕೆ 68,450 ಹೆಚ್ಐವಿ ಕೇಸ್!
ಬೆಂಗಳೂರು: ರಾಜ್ಯದಲ್ಲಿ ಕಳೆದ ಒಂದು ವರ್ಷದ ಅವಧಿಯಲ್ಲಿ 68,450 ಹೆಚ್ಐವಿ ಪ್ರಕರಣ ವರದಿಯಾಗಿವೆ ಎಂದು ಆರೋಗ್ಯ ಇಲಾಖೆ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.
ಹೆಚ್ಐವಿ ಸೋಂಕಿನ ಬಗ್ಗೆ ಯುವಜನತೆ ಸೇರಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಆರೋಗ್ಯ ಇಲಾಖೆ ವತಿಯಿಂದ ಹಮ್ಮಿಕೊಂಡಿರುವ ಎರಡು ತಿಂಗಳ ಅಂತರಾಷ್ಟ್ರೀಯ ಯುವ ದಿನಾಚರಣೆ ಹಾಗೂ ಹೆಚ್ಐವಿ ತಡೆ ಪ್ರಚಾರಾಂದೋಲನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ದೇಶದಲ್ಲಿ ಹೆಚ್ಐವಿ ಸೋಂಕು ಹರಡುವಿಕೆ ಕಡಿಮೆಯಾಗಿದೆ. ಆದರೂ, 2023 -24ನೇ ಸಾಲಿನಲ್ಲಿ ರಾಜ್ಯದಲ್ಲಿ 68,450 ಕೇಸು ವರದಿಯಾಗಿದ್ದು, ದೇಶದಲ್ಲಿರುವ 24.44 ಲಕ್ಷ ಸೋಂಕಿತರ ಪೈಕಿ ಕರ್ನಾಟಕದಲ್ಲಿ 2.28 ಲಕ್ಷ ಸೋಂಕಿತರಿದ್ದಾರೆ. 1.91 ಲಕ್ಷ ಜನ ನಿಯಮಿತವಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.