ಮಲ್ನಾಡ್ ಟಾಪ್ ನ್ಯೂಸ್
– ಸಾಗರ: ರಸ್ತೆ ಅಪಘಾತದಲ್ಲಿ ಶಿಕ್ಷಕಿ ಸಾವು
– ಜಯಪುರ: ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪಿಗೆ ಜೈಲು ಶಿಕ್ಷೆ
– ಸೊರಬ : ಬಾರಿ ಮಳೆಯಿಂದ ಸಿಡಿಲು ಬಡಿದು ಜಾನುವಾರು ಸಾವು
– ಸಾಗರ: ಬೈಕ್ ಹಾಗೂ ಅಶೋಕಾ ಲೈಲ್ಯಾಂಡ್ ವಾಹನ ಡಿಕ್ಕಿಯಾಗಿ ಮಾವ- ಅಳಿಯ ಸಾವು
– ಶಿವಮೊಗ್ಗ : ಮಾದಕ ವಸ್ತು ಗಾಂಜಾ ಮಾರುತ್ತಿದ್ದ ಇಬ್ಬರ ಬಂಧನ
– ಎನ್ .ಆರ್. ಪುರ: ಸಾಗುವಾನಿ ಮರಗಳ ಕಳ್ಳತನ ಮಾಡಿದ ಆರೋಪಿಗಳ ಬಂಧನ
NAMMUR EXPRESS NEWS
ಸಾಗರ : ತಾಲೂಕಿನ ಸಿರಿವಂತೆ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕಿ ಶಕುಂತಲಾ (29) ಚನ್ನಗಿರಿ ತಾಲ್ಲೂಕಿನ ಮಾವಿನಕಟ್ಟೆ ಸಮೀಪ ನಡೆದ ರಸ್ತೆ ಅಪಘಾತದಲ್ಲಿ ಶುಕ್ರವಾರ ಬೆಳಗ್ಗೆ ಸಾವನ್ನಪ್ಪಿದ್ದಾರೆ. ಶಿವಮೊಗ್ಗದಲ್ಲಿ ಹೊರಟಿದ್ದ ಅವರು, ನಡೆಯುತ್ತಿದ್ದ ಚನ್ನಗಿರಿಯ ತರಬೇತಿಗೆ ಮಾವಿನಕಟ್ಟೆಯಲ್ಲಿ ಬಸ್ಸಿಗಾಗಿ ಕಾಯುತ್ತಿದ್ದರು. ಈ ವೇಳೆ ಲಾರಿಯೊಂದು ಶಕುಂತಲಾ ಅವರಿಗೆ ಡಿಕ್ಕಿ ಹೊಡೆದಿದೆ. ತಕ್ಷಣ ಅವರನ್ನು ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೇ ಶಿಕ್ಷಕಿ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.
ಶಕುಂತಲಾ ಅವರು ಸಿರಿವಂತೆ ಶಾಲೆಯಲ್ಲಿ ಇಂಗ್ಲಿಷ್ ಬೋಧಿಸುತ್ತಿದ್ದರು. ಕಳೆದ ವರ್ಷವಷ್ಟೆ ಶಿಕ್ಷಣ ಇಲಾಖೆಗೆ ನೇಮಕಾತಿಗೊಂಡಿದ್ದರು.
– ಜಯಪುರ: ಅಪ್ರಾಪ್ತ ಬಾಲಕಿಗೆ ಲೈಂಗಿಕ ಕಿರುಕುಳ
ಜಯಪುರ: ಅಂಗಡಿ ಮಾಲೀಕನಿಂದ ಅಪ್ರಾಪ್ತ ಬಾಲಕಿಯೋರ್ವಳಿಗೆ ಲೈಂಗಿಕ ಕಿರುಕುಳ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಹನೀಫ್ ಗೆ 3 ವರ್ಷ ಕಾರಾಗೃಹ ಶಿಕ್ಷೆ ಹಾಗೂ 25000/- ದಂಡ ಹಾಗೂ ನೊಂದ ಬಾಲಕಿಗೆ 25000/- ಹಣವನ್ನು ಪರಿಹಾರ ಮೊತ್ತವಾಗಿ ನೀಡುವಂತೆ ಜಿಲ್ಲಾ ಸತ್ರ ನ್ಯಾಯಾಲಯ ಮತ್ತು ftsc-1 ನ್ಯಾಯಾಲಯ ಆದೇಶಿಸಿದೆ. ಕಳೆದ ವರ್ಷ ಡಿಸೆಂಬರ್ ತಿಂಗಳಿನಲ್ಲಿ ಅಂಗಡಿಗೆ ವಸ್ತುಕೊಳ್ಳಲು ಬಂದ ಅಪ್ರಾಪ್ತ ಬಾಲಕಿಗೆ ಆರೋಪಿ ಹನೀಫ್ ಲೈಂಗಿಕ ಕಿರುಕುಳ ನೀಡಿದ್ದು , ಈ ಕುರಿತು ಬಾಲಕಿ ಪೋಷಕರಿಗೆ ತಿಳಿಸಿದ್ದಳು. ಸಂತ್ರಸ್ಥ ಬಾಲಕಿಯ ಪೋಷಕರು ಆರೋಪಿಯ ವಿರುದ್ದ ಜಯಪುರ ಠಾಣೆಗೆ ದೂರು ನೀಡಿದ್ದರು. ಕೂಡಲೇ ಕಾರ್ಯಪ್ರವೃತ್ತರಾದ ಜಯಪುರ ಪೊಲೀಸ್ ಠಾಣೆಯ ಪಿಎಸ್ ಐ ಅಂಬರೀಶ್ ಆರೋಪಿಯನ್ನು ಬಂಧಿಸಿ, ಪೋಕ್ಸೋ ಹಾಗೂ ಐಪಿಸಿ 354 ಖಾಯ್ದೆ ಯಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು. ಇದೀಗ ಜಿಲ್ಲಾ ಸತ್ರ ನ್ಯಾಯಾಲಯ ಮತ್ತು ftsc-1 ನ್ಯಾಯಾಲಯ ಆರೋಪಿ ಹನೀಫ್ ಗೆ 3 ವರ್ಷ ಕಾರಾಗೃಹ ಶಿಕ್ಷೆ ಹಾಗೂ 25000/- ದಂಡ ಹಾಗೂ ನೊಂದ ಬಾಲಕಿಗೆ 25000/- ಹಣವನ್ನು ಪರಿಹಾರ ಮೊತ್ತವಾಗಿ ನೀಡುವಂತೆ ಆದೇಶಿಸಿದೆ.
– ಸೊರಬ : ಬಾರಿ ಮಳೆಯಿಂದ ಸಿಡಿಲು ಬಡಿದು ಜಾನುವಾರು ಸಾವು
ಸೊರಬ: ಸೊರಬ ತಾಲ್ಲೂಕಿನ ಎಲ್ಲಡೆ ಬಾರಿ ಮಳೆಯಿಂದಾಗಿ ದೊಡ್ಡ ಅನಾಹುತ ಎದುರಾಗಿದೆ. ಎಡಬಿಡದೆ ಸುರಿದ ಮಳೆ, ಗುಡುಗು, ಸಿಡಿಲ ಅರ್ಭಟಕ್ಕೆ ತಂಡಿಗೆ ಗ್ರಾಮದ ಎರಡು ಜಾನುವಾರು ಆಹುತಿಯಾಗಿವೆ. ತಂಡಿಗೆ ಗ್ರಾಮದ ಯುವರಾಜಗೌಡ ಅವರಿಗೆ ಸೇರಿದ ಕೊಟ್ಟಿಗೆಯಲ್ಲಿ ಕಟ್ಟಿದ್ದ ಒಂದು ಎಮ್ಮೆ ಮತ್ತು ಒಂದು ಹಸುವಿಗೆ ಸಿಡಿಲು ಬಡಿದು ಆ ಜಾನುವಾರು ಸಾವನ್ನಪ್ಪಿದೆ.
– ಸಾಗರ: ಬೈಕ್ ಹಾಗೂ ಅಶೋಕಾ ಲೈಲ್ಯಾಂಡ್ ವಾಹನ ಡಿಕ್ಕಿಯಾಗಿ ಮಾವ- ಅಳಿಯ ಸಾವು
ಸಾಗರ : ತಾಲ್ಲೂಕು ಆನಂದಪುರದ ಸಮೀಪ ಭೀಕರ ಅಪಘಾತ ಸಂಭವಿಸಿದೆ. ಬೆಳಂದೂರು ಸಮೀಪ ನಡೆದ ಈ ಘಟನೆಯಲ್ಲಿ ಮಾವ- ಅಳಿಯ ಇಬ್ಬರು ಸಾವನ್ನಪ್ಪಿದ್ದಾರೆ. ಬೈಕ್ ಹಾಗೂ ಅಶೋಕಾ ಲೈಲ್ಯಾಂಡ್ ವಾಹನದ ಡಿಕ್ಕಿಯಾಗಿದೆ. ವಾಸಪ್ಪ (50) ಮತ್ತು ಅವರ ಅಳಿಯ ಸಾನ್ನಪ್ಪಿದವರು. ಬೆಳಂದೂರು ಗ್ರಾಮದಿಂದ ಟಿವಿಎಸ್ ಎಕ್ಸೆಲ್ ಬೈಕ್ ನಲ್ಲಿ ಇಬ್ಬರು ಆನಂದಪುರದ ಕಡೆ ತೆರಳುತ್ತಿದ್ದರು. ಆನಂದಪುರದಿಂದ ತ್ಯಾಗರ್ತಿ ಕಡೆ ತೆರಳುತ್ತಿದ್ದ ಅಶೋಕ್ ಲೇಲ್ಯಾಂಡ್ ದೋಸ್ತ್ ವಾಹನ ಬರುತ್ತಿತ್ತು. ಎರಡು ವಾಹನಗಳ ನಡುವೆ ಡಿಕ್ಕಿಯಾಗಿದೆ. ವಿಷಯ ತಿಳಿದು ಸ್ಥಳಕ್ಕೆ ತೆರಳಿದ ಪೊಲೀಸರು ಪರಿಶೀಲನೆ ನಡೆಸಿದರು.
– ಶಿವಮೊಗ್ಗ : ಮಾದಕ ವಸ್ತು ಗಾಂಜಾ ಮಾರುತ್ತಿದ್ದ ಇಬ್ಬರ ಬಂಧನ
ಶಿವಮೊಗ್ಗ : ನಗರದ ಕುವೆಂಪು ನಗರದಲ್ಲಿ ಇಬ್ಬರು ವ್ಯಕ್ತಿಗಳು ಮಾದಕ ವಸ್ತು ಗಾಂಜಾವನ್ನು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿಯ ಮೇರೆಗೆ ಗ್ರಾಮಾಂತರ ಸಿಪಿಐ ಸತ್ಯನಾರಾಯಣ ನೇತೃತ್ವದ ಸಿಬ್ಬಂದಿಗಳ ತಂಡವು ಸ್ಥಳಕ್ಕೆ ಹೋಗಿ ದಾಳಿ ನಡೆಸಿ, ಮಾದಕ ವಸ್ತು ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಬಂಧಿಸಿದೆ. ಬಸವನಗುಡಿಯ ಭರತ್ ಟಿ ಅಲಿಯಾಸ್ ಜಾನ್ ಭರತ್ (27) ಮತ್ತು ರಾಗಿಗುಡ್ಡದ ನರಸಿಂಹ ಎಸ್ ಅಲಿಯಾಸ್ ದಾಸ (39) ಅವರನ್ನು ದಸ್ತಗಿರಿ ಮಾಡಿ, ಆರೋಪಿತರಿಂದ ಅಂದಾಜು ಮೌಲ್ಯ 28,000 ರೂಗಳ 668 ಗ್ರಾಂ ತೂಕದ ಒಣ ಗಾಂಜಾ ಮತ್ತು ರೂ 400 ನಗದು ಹಣವನ್ನು ಅಮಾನತ್ತು ಪಡಿಸಿಕೊಂಡು ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
– ಎನ್ .ಆರ್. ಪುರ: ಸಾಗುವಾನಿ ಮರಗಳ ಕಳ್ಳತನ, ಆರೋಪಿಗಳ ಬಂಧನ
ಎನ್ .ಆರ್ ಪುರ: ಅಕ್ರಮವಾಗಿ ಸಾಗುವಾನಿ ಮರವನ್ನು ಕಡಿತಲೆ ಮಾಡಿ ಕಳ್ಳ ಸಾಗಾಣಿಕೆ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಎನ್. ಆರ್ ಪುರ ತಾಲೂಕಿನ ಬಾಳೆಹೊನ್ನೂರು ಹೋಬಳಿ ಅಳೇಹಳ್ಳಿ ಗ್ರಾಮದ ವ್ಯಾಪ್ತಿಯಲ್ಲಿ ನಡೆದಿದೆ. ಬಾಳೆಹೊನ್ನೂರು ಹೋಬಳಿ ಅಳೇಹಳ್ಳಿ ಗ್ರಾಮದ 8ನೇ ಮೈಲಿಕಲ್ಲು ವ್ಯಾಪ್ತಿಯ ಕೂಸ್ಕಲ್ ಮೀಸಲು ಅರಣ್ಯ ಪ್ರದೇಶದಲ್ಲಿ ಸಾಗುವಾನಿ ನೆಡುತೋಪಿನಲ್ಲಿ ಮಧ್ಯರಾತ್ರಿ ಸಾಗವಾನಿ ಮರವೊಂದನ್ನು ಅಕ್ರಮವಾಗಿ ಕಡಿತಲೆ ಮಾಡಿ ಕಳ್ಳ ಸಾಗಾಣಿಕೆ ಮಾಡುತ್ತಿದ್ದ ಆರೋಪಿಗಳನ್ನು ಚಿಕ್ಕಗ್ರಹಾರ ವಲಯದ ಅರಣ್ಯ ಇಲಾಖೆ ಅಧಿಕಾರಿ ಹಾಗೂ ಸಿಬ್ಬಂದಿಗಳು ಬಂಧಿಸಿ ಮಹಿಂದ್ರ ಜೀತೊ ವಾಹನ ಮತ್ತು ಬೆಲೆ ಬಾಳುವ ಸ್ವತ್ತನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ.