ಟಾಪ್ ನ್ಯೂಸ್ ಕರ್ನಾಟಕ
– ಸ್ವಾತಂತ್ರ್ಯ ದಿನದ ಆಚರಣೆಗೆ ಕೆಲವೆಡೆ ಬಿಸಿಲ ಬೇಗೆಯ ಎಫೆಕ್ಟ್ .!
– ಹೆಚ್ಚಾದ ಬಿಸಿಲ ತಾಪಮಾನ ಕುಸಿದು ಬಿದ್ದ ವಿದ್ಯಾರ್ಥಿಗಳು .!
– ವಿಜಯಪುರದಲ್ಲಿ ಧ್ವಜಾರೋಹಣದ ವೇಳೆ ಹೊಡೆದಾಟ!
– ಹಾಸನದಲ್ಲಿ 2500 ಅಡಿ ಉದ್ದದ ತ್ರಿವರ್ಣ ಧ್ವಜ ಪ್ರದರ್ಶನ
– ತುಮಕೂರು: ಪ್ಯಾಲಿಸ್ತೀನ್ ಬಾವುಟ ಹಾರಿಸಲು ಯತ್ನ
NAMMUR EXPRESS NEWS
78ನೆ ಸ್ವಾತಂತ್ರ್ಯ ದಿನದ ಸಂಭ್ರಮಾಚರಣೆಯ ರಂಗು ಎಲ್ಲೆಡೆಯೂ ಆವರಿಸಿದ್ದು ಹಬ್ಬದ ವಾತಾವರಣ ಹಲವೆಡೆ ಮನೆ ಮಾಡಿದ್ರೆ, ಕೆಲವೆಡೆ ಬಿಸಿಲ ಬೇಗೆಗೆ ಬೆಂಡಾಗಿ ಮಕ್ಕಳು ಕುಸಿದು ಬಿದ್ದಿರುವ ಘಟನೆಯೂ ನಡೆದಿದೆ.
ಚಿಕ್ಕಬಳ್ಳಾಪುರ ನಗರದ ಸರ್. ಎಂ. ವಿ ಕ್ರೀಡಾಂಗಣದಲ್ಲಿ ಸಚಿವ ಡಾ ಎಂ. ಸಿ ಸುಧಾಕರ್ ಸ್ವಾತಂತ್ರ್ಯ ದಿನಾಚರಣೆ ಕುರಿತು ಭಾಷಣ ಮಾಡುತ್ತಿದ್ದರು. ಈ ವೇಳೆ ತುಂಬ ಹೊತ್ತು ಬಿಸಿಲಿನಲ್ಲೇ ನಿಂತಿದ್ದ ಮಕ್ಕಳು ಸುಸ್ತಾಗಿ ಕುಸಿದು ಬಿದ್ದಿದ್ದಾರೆ. ಕುಸಿದು ಬಿದ್ದ ಮಕ್ಕಳನ್ನು ಆಂಬ್ಯುಲೆನ್ಸ್ ಮೂಕ ಆಸ್ಪತ್ರೆಗೆ ಸಾಗಿಸಿದ್ದಾರೆ. ಮಹಿಳಾ ತುಕಡಿಯ ನೇತೃತ್ವ ವಹಿಸಿದ್ದ ಪಿಎಸ್ಐ ನಾಗಮ್ಮ ಅವರು ವಿಪರೀತ ಸ್ಟೇಡಿಯಂನಲ್ಲಿ ನಿಂತಿದ್ದಾಗ ಬಿಸಿಲಿನ ತಾಪಕ್ಕೆ ನಿತ್ರಾಣವಾಗಿ ಬಿದ್ದರು. ತಕ್ಷಣ ಓಡಿಹೋಗಿ ವೈದ್ಯಕೀಯ ಸಿಬ್ಬಂದಿ ಚಿಕಿತ್ಸೆ ನೀಡಿದ್ದಾರೆ. ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು
ರಾಯಚೂರಿನಲ್ಲಿಯೂ ಕುಸಿದು ಬಿದ್ದ ಮಕ್ಕಳು
ರಾಯಚೂರಿನಲ್ಲಿ 78 ನೇ ಸ್ವಾತಂತ್ರ್ಯ ದಿನಾಚರಣೆ ಸಂಭ್ರಮದ ಕಾರ್ಯಕ್ರಮದ ವೇಳೆ ಬಿಸಿಲಿನ ತಾಪಕ್ಕೆ ಮಕ್ಕಳಿಬ್ಬರು ಕುಸಿದು ಬಿದ್ದಿದ್ದರು. ಕೂಡಲೇ ಇಬ್ಬರು ಮಕ್ಕಳನ್ನು ಆಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ರವಾನೆ ಮಾಡಲಾಯಿತು. ರಾಯಚೂರಿನ ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಘಟನೆ ನಡೆದಿದೆ.
ವಿಜಯಪುರದಲ್ಲಿ ಧ್ವಜಾರೋಹಣದ ವೇಳೆ ಹೊಡೆದಾಟ
ವಿಜಯಪುರದಲ್ಲಿ ಧ್ವಜಾರೋಹಣ ಮಾಡುತ್ತಿರುವ ಸಂದರ್ಭದಲ್ಲಿ ಹುಡುಗರ ನಡುವೆ ಗಲಾಟೆ ನಡೆದಿದೆ. ವಿಜಯಪುರ ಜಿಲ್ಲಾ ಕ್ರೀಡಾಂಗಣದಲ್ಲಿ ಸಚಿವ ಎಂ ಬಿ ಪಾಟೀಲ್ ಭಾಷಣ ವೇಳೆ ಯುವಕರು ಪರಸ್ಪರ ಹೊಡೆದಾಡಿಕೊಂಡಿದ್ದಾರೆ. ಧ್ವಜಾರೋಹಣ ನೋಡಲು ಬಂದಿದ್ದ ಹುಡುಗರ ನಡುವೆ ಕ್ಷುಲ್ಲಕ ಕಾರಣಕ್ಕೆ ಗಲಾಟೆಯಾಗಿದೆ. ಹೊಡೆದಾಡಿಕೊಳ್ಳುತ್ತಿದ್ದ, ಓರ್ವನನ್ನ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ಬಿಸಿಲು ಜಾಸ್ತಿ ಆಗಿ ಕುಸಿದು ಬಿದ್ದ ಮಕ್ಕಳು!
ಸ್ವಾತಂತ್ರ್ಯ ದಿನದ ಧ್ವಜಾರೋಹಣ ವೇಳೆ ವಿಪರೀತ ಬಿಸಿಲಿನ ತಾಪಕ್ಕೆ ಮಕ್ಕಳು ನಿತ್ರಾಣವಾಗಿ ಕುಸಿದುಬಿದ್ದ ಘಟನೆ ತೀರ್ಥಹಳ್ಳಿಯಲ್ಲಿ ನಡೆದಿದೆ. ಯು.ಆರ್ . ಅನಂತಮೂರ್ತಿ ಪ್ರೌಢಶಾಲೆಯ ಕ್ರೀಡಾಂಗಣದಲ್ಲಿ ತಾಲೂಕು ದಂಡಾಧಿಕಾರಿಗಳ ಭಾಷಣದ ನಂತರದಲ್ಲಿ ಮಕ್ಕಳು ಕುಸಿದು ಬಿದ್ದಿದ್ದಾರೆ. ತಹಸೀಲ್ದಾರ್ ಜಕ್ಕಣ್ಣ ಗೌಡರ್ ರವರು ಸ್ವಾತಂತ್ರ್ಯ ದಿನಾಚರಣೆ ಕುರಿತು ಭಾಷಣ ಮಾಡಿ ಮುಗಿಸಿದ್ದರು. ಇದಕ್ಕೂ ಮೊದಲು ಧ್ವಜಾರೋಹಣ ನಂತರ ಮಕ್ಕಳ ಪಥಸಂಚಲನ ಹೀಗೆ ತುಂಬ ಹೊತ್ತು ಬಿಸಿಲಿನಲ್ಲೇ ನಿಂತಿದ್ದ ಮಕ್ಕಳು ಸುಸ್ತಾಗಿ ಕುಸಿದು ಬಿದ್ದಿದ್ದಾರೆ.
ಹಾಸನದಲ್ಲಿ 2500 ಅಡಿ ಉದ್ದದ ತ್ರಿವರ್ಣ ಧ್ವಜ ಪ್ರದರ್ಶನ
ಹಾಸನ:ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿಹಾಸನದಲ್ಲಿ 2500 ಅಡಿ ಉದ್ದ ಧ್ವಜ ಪ್ರದರ್ಶನ ಮಾಡಿರುವುದು ಗಮನಸೆಳೆಯಿತು. ಜಿಲ್ಲಾಡಳಿತ ಹಾಗೂ ವಿವಿಧ ಸಂಘ-ಸಂಸ್ಥೆಗಳಿಂದ ಆಯೋಜಿಸಿದ್ದ ಕಾರ್ಯಕ್ರಮಲ್ಲಿ ಬೃಹತ್ ್ವಜ ಹಿಡಿದು 3000 ಸಾವಿರ ವಿದ್ಯಾರ್ಥಿಗಳು ಮೆರವಣಿಗೆಯಲ್ಲಿ ಸಾಗಿದರು.
ಹಾಸನ ನಗರದ ಪ್ರಮುಖ ರಸ್ತೆಗಳಲ್ಲಿ ಬಾವುಟ ಹಿಡಿದು ವಿದ್ಯಾರ್ಥಿಗಳು ಸಾಗಿದರು. ಡಿಸಿ ಕಚೇರಿ ಮುಂಭಾಗದಿಂದ ಎನ್.ಆರ್.ವೃತ್ತ, ಹೇಮಾವತಿ ಪ್ರತಿಮೆ ಮೂಲಕ ಜಿಲ್ಲಾ ಕ್ರೀಡಾಂಗಣದವರೆಗೂ ಧ್ವಜ ಹಿಡಿದು ಮೆರವಣಿಗೆಯಲ್ಲಿ ವಿದ್ಯಾರ್ಥಿಗಳು ಸಾಗಿದರು.
ತುಮಕೂರು: ಪ್ಯಾಲಿಸ್ತೀನ್ ಬಾವುಟ ಹಾರಿಸಲು ಯತ್ನ!
ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ದೇಶಾದ್ಯಂತ ತ್ರಿವರ್ಣ ಧ್ವಜ ಹಾರಿಸಿ ಸಂಭ್ರಮಿಸುತ್ತಿರುವ ಸಂದರ್ಭದಲ್ಲಿ ಜಿಲ್ಲೆಯ ಕುಣಿಗಲ್ನಲ್ಲಿ ಕೆಲ ಯುವಕರು ಪ್ಯಾಲಿಸ್ತೀನ್ ಬಾವುಟ ಹಾರಿಸಲು ಯತ್ನಿಸಿರುವುದು ಕಂಡುಬಂದಿದೆ. ಇದಕ್ಕೆ ಸ್ಥಳೀಯ ಯುವಕರು ವ್ಯಾಪಕ ವಿರೋಧ ವ್ಯಕ್ತಪಡಿಸಿದ್ದಾರೆ.
ಕುಣಿಗಲ್ ಪಟ್ಟಣದ ಸರ್ಕಾರಿ ಶಾಲಾ ಮೈದಾನದಲ್ಲಿ ತಾಲೂಕು ಆಡಳಿತದಿಂದ ಧ್ವಜಾರೋಹಣ ಕಾರ್ಯಕ್ರಮ ನಡೆಯುತ್ತಿತ್ತು. ಈ ವೇಳೆ ಮತ್ತೊಂದು ಕಡೆ ಕೆಲ ಯುವಕರ ಗುಂಪು ಪ್ಯಾಲಿಸ್ತೀನ್ ಬಾವುಟ ಹಾರಿಸಲು ಯತ್ನಿಸಿದೆ. ಅದಕ್ಕೆ ಮತ್ತೊಂದು ಯುವಕರ ತಂಡ ವ್ಯಾಪಕ ವಿರೋಧ ವ್ಯಕ್ತಪಡಿಸಿದ್ದು, ಇವತ್ತು ಪ್ಯಾಲೇಸ್ತೀನ್ ಧ್ವಜ ಹಾರಿಸುತ್ತಾರೆ, ನಾಳೆ ಪಾಕಿಸ್ತಾನ ಧ್ವಜ ಹಾರಿಸುತ್ತಾರೆ. ಹಾರಿಸುವುದರೆ ಭಾರತ ಧ್ವಜ ಹಾರಿಸಿ, ಇಲ್ಲದಿದ್ದರೆ ವಿವಾದವಾಗಲಿದೆ ಎಂದು ಯುವಕರಿಗೆ ಬುದ್ಧಿ ಹೇಳಿದ್ದಾರೆ.