- 1000ಕ್ಕೂ ಹೆಚ್ಚು ಮಂದಿ ಸಹಕಾರಿಗಳು ಹಾಜರ್
- ನನ್ನದು ತಂತಿ ಮೇಲಿನ ನಡಿಗೆ: ವಿಜಯ್ ದೇವ್
NAMMUR EXPRESS
ತೀರ್ಥಹಳ್ಳಿ: ಮೇರು ವ್ಯಕ್ತಿತ್ವದ ಕಠಿಣ ಪರಿಶ್ರಮಿ, ಸಹಕಾರಿ ನಾಯಕ, ಸಹಕಾರಿ ರಂಗದ ಭೀಷ್ಮ ವಿಜಯದೇವ್ ಅವರಿಗೆ ತೀರ್ಥಹಳ್ಳಿಯಲ್ಲಿ ಎಲ್ಲಾ ಸಹಕಾರಿಗಳಿಂದ ಸನ್ಮಾನ ನಡೆಯಿತು. ತೀರ್ಥಹಳ್ಳಿ ಸೇರಿದಂತೆ ರಾಜ್ಯದ ನೂರಾರು ಸಹಕಾರಿ ನಾಯಕರು ಹಾಜರಿದ್ದು ಅಪೂರ್ವ ಕ್ಷಣಗಳನ್ನು ಸವಿದರು. ಮೆಚ್ಚಿನ ನಾಯಕನಿಗೆ ಸನ್ಮಾನ ಮಾಡಿದರು.
ಸಹಕಾರಿ ರತ್ನ ವಿಜಯದೇವ್ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದ ವಿಜಯದೇವ್, ಸಹಕಾರಿ ಕ್ಷೇತ್ರವನ್ನು ಮುನ್ನಡೆಸುವುದು ತಂತಿಯ ಮೇಲೆ ನಡಿಗೆಯಿದ್ದಂತೆ. ಸವಾಲು, ಸಂಕಷ್ಟಗಳಿಗೆ ಅಂಜದೆ ಮುನ್ನುಗ್ಗುವ ಛಾತಿಯುಳ್ಳವರು ಮಾತ್ರ ಸಹಕಾರಿಯನ್ನು ಮುನ್ನಡೆಸಲು ಸಾಧ್ಯ. ನೆಂಟಸ್ತಿಕೆ, ವಸೂಲಿಬಾಜಿಗೆ ಎಂದೂ ಕಟ್ಟುಬೀಳದೆ ಸಹಕಾರಿಯನ್ನು ಮುನ್ನಡೆಸಿದ್ದೇನೆ. ಈ ವರ್ಷ ಸಹ್ಯಾದ್ರಿ ಸಂಸ್ಥೆ 6 ಕೋಟಿ ನಿವ್ವಳ ಲಾಭಗಳಿಸಿದೆ. ಮುಂದಿನ ವರ್ಷ ಲಾಭದ ಪ್ರಮಾಣ 10 ಕೋಟಿಗೆ ತಲುಪಿಸುವ ಆತ್ಮವಿಶ್ವಾಸವಿದೆ ಎಂದು ಸಹಕಾರಿ ರತ್ನ ಬಸವಾನಿ ವಿಜಯದೇವ್ ಹೇಳಿದರು.
ಮಲೆನಾಡ ಸಹಕಾರಿ ಕ್ಷೇತ್ರದಲ್ಲಿ ದಿಗ್ಗಜರಾಗಿ, ನೂರಾರು ಸಹಕಾರ ಸಂಸ್ಥೆಗಳನ್ನು ಬೆಳೆಸಿರುವ ಸಹಕಾರಿ ರತ್ನ ಪ್ರಶಸ್ತಿ ಪುರಸ್ಕೃತ ಬಸವಾನಿ ವಿಜಯದೇವ್ ಅವರಿಗೆ ತಾಲೂಕಿನ ಸಮಸ್ತ ಸಹಕಾರಿ ಕ್ಷೇತ್ರದ ವತಿಯಿಂದ ತೀರ್ಥಹಳ್ಳಿಯ ಶಾಂತವೇರಿ ಗೋಪಾಲ ಗೌಡ ರಂಗಮಂದಿರದಲ್ಲಿ ಸನ್ಮಾನ ಹಮ್ಮಿಕೊಳ್ಳಲಾಗಿತ್ತು. ಸಹ್ಯಾದ್ರಿ ಸಂಸ್ಥೆಯ ವತಿಯಿಂದ ರೈತರಿಗೆ ಅಗತ್ಯ ಸೌಲಭ್ಯಗಳನ್ನು ತಲುಪಿಸಲು ಅಪಾರ ಶ್ರಮವಹಿಸಿದ್ದೇನೆ. ಸಹಕಾರಿ ಸಂಸ್ಥೆ ಮುನ್ನಡೆಸಲು ಬೆಂಬಲವಾಗಿ ನಿಂತ ಎಲ್ಲರಿಗೂ ಧನ್ಯವಾದ ಅರ್ಪಿಸುತ್ತೇನೆ ಎಂದರು.
ಸಹಕಾರಿ ನಾಯಕ ಮಂಜುನಾಥ ಗೌಡ ಮಾತನಾಡಿ, ವಿಜಯದೇವ್ ಸಾರಥ್ಯದಲ್ಲಿ ಕೇವಲ ಮೂರ್ನಾಲ್ಕು ಕೋಟಿ ಬಂಡವಾಳದಲ್ಲಿ ಆರಂಭಗೊಂಡ ಶರಾವತಿ ಸಂಸ್ಥೆ ಬಳಿಕ ಸಹ್ಯಾದ್ರಿ, ಸಮೃದ್ಧಿ ಸಂಸ್ಥೆಗಳ ಸ್ಥಾಪನೆಗೆ ನಾಂದಿಯಾಯಿತು. ಈಗ ಈ ಸಂಸ್ಥೆಗಳ ವಹಿವಾಟು 1300 ಕೋಟಿಯನ್ನು ಮೀರಿದೆ. ತೀರ್ಥಹಳ್ಳಿ ತಾಲೂಕಿನಲ್ಲಿ ವಿಜಯದೇವ್ ತಮ್ಮ ಕ್ರಾಂತಿಕಾರಿ ಆಲೋಚನೆಗಳ ಮೂಲಕ ಸಹಕಾರಿ ಕ್ಷೇತ್ರವನ್ನು ಯಶಸ್ಸಿನ ದೆಸೆಯತ್ತ ಕೊಂಡೊಯ್ದಿದ್ದಾರೆ. ಮೇಲ್ನೋಟಕ್ಕೆ ಕಠಿಣ ಎನ್ನಿಸುವ ಅವರ ವ್ಯಕ್ತಿತ್ವದ ಆಳದಲ್ಲಿ ಮಾನವೀಯ ಕಳಕಳಿಗಳು ಅಡಕವಾಗಿದೆ. ಅವರು ಮೇರು ಸಾಧಕ, ಕಠಿಣ ಪರಿಶ್ರಮಿ. ಒಂದೇ ರೀತಿಯ ವ್ಯಾಪಾರ, ವಹಿವಾಟು ನೆಚ್ಚಿಕೊಂಡರೆ ಉದ್ಯಮಿ ಬೆಳೆಯಲು ಸಾಧ್ಯವಿಲ್ಲವೆಂದು ಹತ್ತಾರು ಉದ್ಯಮಗಳನ್ನು ಹುಟ್ಟುಹಾಕಿದರು. ಯುವ ಉದ್ಯಮಿಗಳಿಗೆ, ಸಹಕಾರ ಕ್ಷೇತ್ರದ ಆಡಳಿತಗಾರರಿಗೆ ಅವರು ಮಾದರಿ ಎಂದು ಶ್ಲಾಘಿಸಿದರು.
ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ಬಸವಾನಿ ಪಿಇಲ್ಡಿ ಬ್ಯಾಂಕ್ ಮಾಜಿ ನಿರ್ದೇಶಕ ಭಾಸ್ಕರ ಉಪಾಧ್ಯಯ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ರಾಜ್ಯ ಸಹಕಾರಿ ಕೃಷಿ, ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಅಧ್ಯಕ್ಷ ಅಧ್ಯಕ್ಷ ಕೃಷ್ಣಕುಮಾರ್, ಅಪೇಕ್ಸ್ ಬ್ಯಾಂಕ್ ಉಪಾಧ್ಯಕ್ಷ ಹರೀಶ್ ಗೌಡ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಚನ್ನವೀರಪ್ಪ, ಮಾಜಿ ಶಾಸಕ ಕಡಿದಾಳ್ ದಿವಾಕರ್, ತೀರ್ಥಹಳ್ಳಿ ಟಿಎಪಿಸಿಎಂಎಸ್ ಅಧ್ಯಕ್ಷ ನಾಗರಾಜ್ ಶೆಟ್ಟಿ ಇತರರು ಇದ್ದರು.
ರಾಜ್ಯದ, ಮಲೆನಾಡಿನ ಎಲ್ಲಾ ಸುದ್ದಿಗಳಿಗೆ NAMMUR EXPRESS ” ಫೇಸ್ಬುಕ್ ಮತ್ತು ಯೂಟ್ಯೂಬ್ ಚಾನೆಲ್ ಲೈಕ್ ಮಾಡಿ , ಸಬ್ಸೈಬ್ ಆಗಿ , ವಾಟ್ಸಾಪ್ನಲ್ಲಿ ಎಲ್ಲಾ ನಿಮ್ಮ ಊರಿನ ಸುದ್ದಿ ಪಡೆಯಲು 9481949101ಗೆ ನಿಮ್ಮ ಹೆಸರು , ಊರು , ತಾಲೂಕು ವಾಟ್ಸಾಪ್ ಮಾಡಿರಿ. ನಿಮ್ಮ ಎಲ್ಲಾ ಸ್ನೇಹಿತರು ಹಾಗೂ ಗ್ರೂಪ್ಗಳಿಗೆ ಶೇರ್ ಮಾಡಿರಿ. ಧನ್ಯವಾದಗಳು.