ತೀರ್ಥಹಳ್ಳಿ ಮುಖ್ಯ ಬಸ್ ನಿಲ್ದಾಣ: ಯಾಕೆ ಹೀಗಣ್ಣಾ..?!
- ಬಸ್ ಸ್ಟ್ಯಾಂಡ್ ಬಳಿ ನೂರೆಂಟು ಸಮಸ್ಯೆ
- ಧೂಳಿಗೆ ಮೂಗಿಗೆ ಬಡಿದು ಅನಾರೋಗ್ಯ ಹೆಚ್ಚಳ
- ಕುಡಿಯುಲು ನೀರಿಲ್ಲ.. ಭದ್ರತೆ ಕೇಳೋರಿಲ್ಲ…!
NAMMUR EXPRESS NEWS
ತೀರ್ಥಹಳ್ಳಿ : ತೀರ್ಥಹಳ್ಳಿ ಪಟ್ಟಣದ ಮುಖ್ಯ ಬಸ್ ನಿಲ್ದಾಣ ಇಡೀ ಪಟ್ಟಣಕ್ಕೆ ಕಳೆ ತರುವಂತಹ ಪ್ರಮುಖ ಜಾಗ. ಪ್ರತಿ ದಿನ ಸಾವಿರಾರು ಪ್ರಯಾಣಿಕರು ಭೇಟಿ ನೀಡುತ್ತಿದ್ದಾರೆ. ಜೊತೆಗೆ ತೀರ್ಥಹಳ್ಳಿಯ ಅಂದ ಚಂದ ಹೇಳುವ ಜಾಗವು ಇದಾಗಿದೆ. ಆದರೆ ಇತ್ತೀಚೆಗೆ ಇಲ್ಲಿನ ಅವ್ಯವಸ್ಥೆಯಿಂದಾಗಿ ಪಟ್ಟಣದ ಮುಖ್ಯ ಬಸ್ ನಿಲ್ದಾಣ ಸುದ್ದಿಯಲ್ಲಿದೆ.
ಕಳೆದೊಂದು ತಿಂಗಳಿಂದ ನಿಂತಿದ್ದ ತೀರ್ಥಹಳ್ಳಿ ಪಟ್ಟಣದ ಮುಖ್ಯ ಬಸ್ ನಿಲ್ದಾಣದ ಪ್ರಮುಖ ಹೋಟೆಲ್ ಮತ್ತೆ ಶುರುವಾಗಿದ್ದು, ಹೊಸ ಕಳೆ ಸಿಕ್ಕಿದೆ. ಆದ್ರೆ ಬಸ್ ನಿಲ್ದಾಣದ ಸುತ್ತಮುತ್ತಲಿನ ಅವ್ಯವಸ್ಥೆ ಈಗ ಹಲವು ಅನುಮಾನಗಳಿಗೆ ಕಾರಣವಾಗಿದೆ.
ಬಸ್ ನಿಲ್ದಾಣದಲ್ಲಿ ಲೀಕೇಜ್ ಹಾಗೂ ಪ್ಲಂಬಿಂಗ್, ಸಿಸಿಟಿವಿ ಸರಿ ಇಲ್ಲ. ಇತ್ತೀಚಿಗೆ ಮಾಡಿದ ಹೊಸ ಟಾರು ಪೂರ್ತಿ ಕಿತ್ತು ಹೋಗಿದೆ.
ನೀರು ಕುಡಿಯಲು ಕಷ್ಟ ಕಷ್ಟ!: ಮುಖ್ಯ ಬಸ್ ನಿಲ್ದಾಣದಲ್ಲಿರುವ ನೀರಿನ ಕೇಂದ್ರ ಸರಿ ಇಲ್ಲ. ಈ ಹಿಂದೆ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರೂ ಕೂಡ ಪ್ರಯೋಜನವಾಗಿಲ್ಲ. ಸ್ಥಳೀಯ ಅಂಗಡಿ ಮಾಲೀಕರುಗಳು, ಜನತೆ ಈ ಬಗ್ಗೆ ಹಲವು ಬಾರಿ ದೂರು ನೀಡಿದ್ದಾರೆ. ಆದರೂ ಕ್ರಮ ತೆಗೆದುಕೊಳ್ಳುವಲ್ಲಿ ಆಡಳಿತ ವಿಫಲವಾಗಿದೆ.
ಬೈಕ್ ಕಳ್ಳತನ!: ಇನ್ನು ಇಲ್ಲಿ ಬೈಕ್ ಕಳ್ಳತನ ಸೇರಿದಂತೆ ಅನೇಕ ಕಳ್ಳತನಗಳು ನಡೆಯುತ್ತಿವೆ. ಕಾಲೇಜು ವಿದ್ಯಾರ್ಥಿಗಳ ಅಸಹ್ಯ ವರ್ತನೆ ಹಾಗೂ ಕುಡುಕರ ಹಾವಳಿ, ಇತರೆ ಚಟುವಟಿಕೆಗಳು ನಡೆದರೂ ಇಲ್ಲಿ ವ್ಯವಸ್ಥಿತವಾದ ಸಿಸಿಟಿವಿ ಇಲ್ಲ.
ಪೊಲೀಸ್ ಚೌಕಿ ಇದ್ದರೂ ಇಲ್ಲಿ ಕೇಳೋರಿಲ್ಲ ಹೇಳೋರಿಲ್ಲ ಎಂಬಂತಾಗಿದೆ. ಹೀಗಾಗಿ ಪಟ್ಟಣದ ಮರ್ಯಾದೆಯುತವಾದ ಜಾಗವನ್ನು ಮತ್ತಷ್ಟು ಸುವ್ಯವಸ್ಥಿತ ಮಾಡಬೇಕು ಎನ್ನುವುದು ಜನರ ಆಗ್ರಹವಾಗಿದೆ.
ಬಸ್ ನಿಲ್ದಾಣ ಕಾಮಗಾರಿ ಗೋಲ್ಮಾಲ್!?
ಪಟ್ಟಣ ಪಂಚಾಯಿತಿ ಅನುದಾನದಿಂದ ತೀರ್ಥಹಳ್ಳಿ ಮುಖ್ಯ ಬಸ್ ನಿಲ್ದಾಣಕ್ಕೆ ಹಲವು ಲಕ್ಷಗಳ ವೆಚ್ಚದಲ್ಲಿ ಕಾಮಗಾರಿಯನ್ನು ಮಾಡಲಾಗಿದೆ. ಆದರೆ ಇಲ್ಲಿ ಪೈಂಟ್ ಮಾತ್ರ ಮಾಡಲಾಗಿದ್ದು, ಯಾವುದೇ ಉತ್ತಮ ರೀತಿಯಲ್ಲಿ ನಿರ್ವಹಣೆ ಮಾಡಿಲ್ಲ. ಮಳೆಗಾಲದಲ್ಲಿ ಮತ್ತೆ ಹಳ್ಳದಂತಾಗುವ ಬಸ್ ನಿಲ್ದಾಣ ಅನೇಕರಿಗೆ ಅಸಹ್ಯವನ್ನು ಹುಟ್ಟಿಸಿದೆ. ಇನ್ನು ಮುಖ್ಯ ಬಸ್ ನಿಲ್ದಾಣದ ಮುಂಭಾಗ ಟಾರ್ ಹಾಕಲಾಗಿದ್ದು ಟಾರ್ ಸಂಪೂರ್ಣ ಹೋಗಿದೆ. ಇದರಿಂದಾಗಿ ಜನತೆಗೆ ಕಿರಿಕಿರಿಯಾಗುತ್ತಿದೆ. ಧೂಳು ಇಲ್ಲಿನ ಜನರ ಬದುಕನ್ನು ತೆಗೆಯುತ್ತಿದೆ. ತಕ್ಷಣ ಸಂಬಂಧ ಪಟ್ಟವರು ಗಮನಿಸಬೇಕಿದೆ.
ಬಸ್ ನಿಲ್ದಾಣದ ಮುಂಭಾಗವಿರುವ ಚರಂಡಿ ಹಾಗೂ ವಾಲ್ ಗಳು ಸಂಪೂರ್ಣ ಶಿಥಿಲಗೊಂಡಿವೆ ಇದರ ಬಗ್ಗೆ ಕೂಡ ಗಮನಿಸಬೇಕೆಂಬುದು ಸ್ಥಳೀಯರ ಆಗ್ರಹವಾಗಿದೆ. ಒಟ್ಟಿನಲ್ಲಿ ಇಡೀ ತೀರ್ಥಹಳ್ಳಿಯನ್ನು ಅಂದಗಾಣಿಸುವ ಮುಖ್ಯ ಬಸ್ ನಿಲ್ದಾಣಕ್ಕೆ ಮತ್ತಷ್ಟು ಹೊಸ ಕಳೆ ಸಿಗಬೇಕಿದೆ. ಈ ನಿಟ್ಟಿನಲ್ಲಿ ಗೃಹ ಸಚಿವರು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಜನಪ್ರತಿನಿಧಿಗಳು ತಕ್ಷಣ ಗಮನ ವಹಿಸಬೇಕು ಇಲ್ಲವಾದಲ್ಲಿ ಈ ಬಗ್ಗೆ ಹೋರಾಟವನ್ನು ಹಮ್ಮಿಕೊಳ್ಳುವುದಾಗಿ ಸ್ಥಳೀಯರು ಹೇಳಿದ್ದಾರೆ.