ಟಾಪ್ 4 ನ್ಯೂಸ್ ಮಲ್ನಾಡ್
– ಮತ್ತೆ ಆರಂಭವಾಯ್ತು ಮಂಗನ ಕಾಯಿಲೆ!
– ತೀರ್ಥಹಳ್ಳಿ ಬಸವಾನಿ ಅರಣ್ಯ ಪ್ರದೇಶದಲ್ಲಿ ಪತ್ತೆ
– ಹೊಸನಗರ : ಹೊಂಡಕ್ಕೆ ಬಿದ್ದು ಸವಾರ ಸಾವು
– ಶಿವಮೊಗ್ಗ : ಟಿವಿ ರಿಮೋಟ್ ಸಿಗದಿದ್ದ ಕಾರಣಕ್ಕೆ ಬಾಲಕಿ ಆತ್ಮಹತ್ಯೆ
– ಶಿವಮೊಗ್ಗ : ಶೂ ಒಳಗಿಂದ ಹೆಡೆ ಎತ್ತಿದ ನಾಗರಹಾವು!
NAMMUR EXPRESS NEWS
ತೀರ್ಥಹಳ್ಳಿ: ತೀರ್ಥಹಳ್ಳಿ ತಾಲ್ಲೂಕಿನಲ್ಲಿ ವರ್ಷದ ಮೊದಲ ಕೆ.ಎಫ್.ಡಿ ಪ್ರಕರಣ ದಾಖಲಾಗಿದೆ. ಬಸವಾನಿ ಅರಣ್ಯ ಪ್ರದೇಶದಲ್ಲಿ ಸಂಗ್ರಹಿಸಿದ ಉಣ್ಣೆಗಳ ಮಾದರಿ ಪರೀಕ್ಷೆಯಲ್ಲಿ ಉಣ್ಣೆಗಳಲ್ಲಿ ಕೆಎಫ್ಡಿ ಪಾಸಿಟಿವ್ ದೃಢ ಪಟ್ಟಿದೆ. ಈ ಸಂಬಂಧ ಅಧಿಕಾರಿಗಳು ಇನ್ನಷ್ಟು ಮುನ್ನೆ ಚ್ಚರಿಕೆ ವಹಿಸಿದ್ದಾರೆ. ಕೆಎಫ್ಡಿ ಬಾಧಿತ ಗ್ರಾಮಗಳ ಸುತ್ತಲಿನ ಪ್ರದೇಶಗಳಲ್ಲಿ ರೋಗ ನಿಯಂತ್ರಣದ ಉದ್ದೇಶದಿಂದ ಆಶಾ ಕಾರ್ಯಕರ್ತೆಯರು ಮನೆಗಳಿಗೆ ತೆರಳಿ ಮಾಹಿತಿ ನೀಡುತ್ತಿದ್ದಾರೆ. ರೋಗ ಲಕ್ಷಣ ಕಂಡು ಬಂದಿರುವ ಪ್ರದೇಶದಲ್ಲಿ 600 ಬಾಟಲಿ ಡಿಎಂಪಿ ತೈಲ ಸರಭರಾಜು ಮಾಡಲಾಗಿದೆ. ಮಾದರಿ ಪರೀಕ್ಷೆಯಲ್ಲಿ ಉಣ್ಣೆಯಲ್ಲಿ ಕೆಎಫ್ ಡಿ ಕಂಡುಬಂದಿದೆ. ಈ ನಿಟ್ಟಿನಲ್ಲಿ ಜನರು ಆತಂಕ ಪಡುವ ಅಗತ್ಯವಿಲ್ಲ ಎಂದು ತಾಲ್ಲೂಕು ವೈದ್ಯಾಧಿಕಾರಿ ಕೆ.ಟಿ. ಅನಿಕೇತ್ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಬದಲಾದ ವಾತಾವರಣದಲ್ಲಿ ಕೆಎಫ್ಡಿ ಹರಡುವ ಸಂಭವನೀಯತೆಯ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಆರೋಗ್ಯ ಇಲಾಖೆ ಉಣ್ಣೆಗಳ ಮಾದರಿ ಪರೀಕ್ಷೆ ನಡೆಸಿತ್ತು. ಹೀಗೆ ಸಂಗ್ರಹಿಸಿದ ಟಿಕ್ ಅಥವಾ ಉಣ್ಣೆಗ ಳನ್ನು ಪುಣೆಯ ರಾಷ್ಟ್ರೀಯ ವೈರಾಲಜಿ ಸಂಸ್ಥೆಗೆ ಪರೀಕ್ಷೆ ಗಾಗಿ ಕಳಹಿಸಲಾಗಿತ್ತು. ಅಲ್ಲಿಂದ ಬಂದ ವರದಿಯ ಬಳಿ ಕ ಇದೀಗ ಆರೋಗ್ಯ ಇಲಾಖೆ ಇನ್ನಷ್ಟು ಅಲರ್ಟ್ ಆಗಿದೆ.
– ಹೊಸನಗರ : ಹೊಂಡಕ್ಕೆ ಬಿದ್ದು ಸವಾರ ಸಾವು!
ಹೊಸನಗರ : ಹೊಸನಗರ ತಾಲ್ಲೂಕು ಅರಸಾಳು ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಹಾರೋಹಿತ್ತಲು ಬಳಿಯಲ್ಲಿ ವ್ಯಕ್ತಿಯೊಬ್ಬರು ಹಳ್ಳಕ್ಕೆ ಬಿದ್ದು ಸಾವನ್ನಪ್ಪಿದ್ದಾರೆ. ಡೈರಿಗೆ ಹಾಲು ಹಾಕಿ ಮನೆಗೆ ವಾಪಸ್ ಆಗುತ್ತಿದ್ದ ಅವರು ಬೈಕ್ ಸಮೇತ ಹಳ್ಳಕ್ಕೆ ಬಿದ್ದಿದ್ದಾರೆ. ಇಲ್ಲಿನ ಕಡೆಗದ್ದೆ ಸಮೀಪದ ಗೇರುಗಲ್ಲು ಗ್ರಾಮದ ನಿವಾಸಿ 55 ವರ್ಷದ ದೇವೇಂದ್ರಪ್ಪ ಸಂಜೆ ಡೈರಿಗೆ ಹಾಲು ಹಾಕಲು ತೆರಳಿದ್ದರು. ಆ ಬಳಿಕ ಮನೆಗೆ ವಾಪಸ್ ಬರುವಾಗ, ಈ ಘಟನೆ ಸಂಭವಿಸಿದೆ. ರಸ್ತೆಯಲ್ಲಿ ಬರುತ್ತಿದ್ದ ಅವರು ನಿಯಂತ್ರಣ ತಪ್ಪಿ ರಸ್ತೆ ಪಕ್ಕದಲ್ಲಿರುವ ಹೊಂಡಕ್ಕೆ ಬಿದ್ದಿದ್ದಾರೆ. ಹೊಂಡದಲ್ಲಿ ನೀರು ತುಂಬಿತ್ತು. ಪರಿಣಾಮ ಅಲ್ಲಿಯೇ ಅವರು ಸಾವನ್ನಪ್ಪಿದ್ದಾರೆ.
– ಶಿವಮೊಗ್ಗ : ಟಿವಿ ರಿಮೋಟ್ ಸಿಗದಿದ್ದ ಕಾರಣಕ್ಕೆ ಬಾಲಕಿ ಆತ್ಮಹತ್ಯೆ
ಶಿವಮೊಗ್ಗ: ಟಿವಿ ರಿಮೋಟ್ ಸಿಗಲಿಲ್ಲವೆಂಬ ಕಾರಣಕ್ಕೆ 16 ವರ್ಷದ ಬಾಲಕಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ವರದಿಯಾಗಿದೆ. ಸೂಳೆಬೈಲಿನಲ್ಲಿ ಸಹನಾ ಎಂಬ 16 ವರ್ಷದ ಬಾಲಕಿ ಇಲಿ ಪಾಶಾಣ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಅಜ್ಜಿ ರಿಮೋಟ್ ಕೊಡಲಿಲ್ಲವೆಂಬ ಕಾರಣಕ್ಕೆ ಬಾಲಕಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದು ಬಂದಿದೆ. ಟಿವಿ ರಿಮೋಟ್ ನೀಡದೆ ಬುದ್ದಿ ವಾದಹೇಳಿದ ಅಜ್ಜಿ ಮಾತಿನಿಂದ ಬೇಸರಗೊಂಡ ಬಾಲಕಿ ಇಲಿಪಾಶಣ ಸೇವಿಸಿದ್ದಾಳೆ ಎಂದು ತಿಳಿದು ಬಂದಿದೆ. ಸಣ್ಣಪುಟ್ಟ ಜಗಳಗಳು ಮಕ್ಕಳ ಮೇಲೆ ಪರಿಣಾಮ ಬೀರುತ್ತಿರುವುದು ಪೋಷಕರಿಗೆ ಸವಾಲಾಗಿಯೇ ಉಳಿದಿದೆ. ಬಾಲಕಿಯನ್ನ ಕಳೆದುಕೊಂಡ ಕುಟುಂಬದ ಆಕ್ರಂಧನ ಮುಗಿಲುಮುಟ್ಟಿದೆ. ಆಕೆಯನ್ನ ಮೆಗ್ಗಾನ್ ಗೆ ದಾಖಲಿಸಿದ್ದರೂ ಕೂಡ ಚಿಕಿತ್ಸೆ ಫಲಕಾರಿಯಾಗದೆ ಬಾಲಕಿ ಸಾವನ್ನಪ್ಪಿದ್ದಾಳೆ. ಪ್ರಕರಣ ತುಂಗ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಸಹನಾ ವಿದ್ಯಾರ್ಥಿನಿಯಾಗಿರಲಿಲ್ಲ ಎಂದು ತಿಳಿದು ಬಂದಿದೆ.
– ಶಿವಮೊಗ್ಗ: ಶೂ ಒಳಗಿಂದ ಹೆಡೆ ಎತ್ತಿದ ನಾಗರ ಹಾವು!
ಶಿವಮೊಗ್ಗ : ಶೂ ಒಳಗೆ ಅಡಗಿ ಕೂತಿದ್ದ ಒಂದು ಅಡಿ ಉದ್ದದ ನಾಗರ ಹಾವನ್ನು ಸ್ನೇಕ್ ಕಿರಣ್ ರಕ್ಷಿಸಿದ್ದಾರೆ. ಶಿವಮೊಗ್ಗ ನಗರದ ಸಾಗರ ರಸ್ತೆಯಲ್ಲಿರು ಆದಾಯ ತೆರಿಗೆ ಇಲಾಖೆ ಕ್ವಾರ್ಟರ್ಸ್ನ ಸೇವಂತ್ ಎಂಬುವವರ ಮನೆ ಬಳಿ ಹಾವು ಕಾಣಿಸಿಕೊಂಡಿತ್ತು. ಸ್ಥಳಕ್ಕೆ ಆಗಮಿಸಿ ಸ್ನೇಕ್ ಕಿರಣ್ ಹಾವಿಗಾಗಿ ಎಲ್ಲೆಡೆ ಹುಡುಕಿದರು. ಮನೆ ಬಳಿ ಇಟ್ಟಿದ್ದ ಶೂ ಪರಿಶೀಲಿಸಿದಾಗ ಅದರೊಳಗೆ ಹಾವು ಅವಿತಿರುವುದು ಗೊತ್ತಾಗಿದೆ. ಕೂಡಲೆ ಶೂ ಒಳಗಿನಿಂದ ಹಾವನ್ನು ರಕ್ಷಿಸಿದ್ದಾರೆ.