ಟಾಪ್ 5 ನ್ಯೂಸ್ ಮಲ್ನಾಡ್
– ಶಿವಮೊಗ್ಗ : ಕುಡಿದ ಅಮಲಿನಲ್ಲಿ ಎಟಿಎಂ ಕಳ್ಳತನಕ್ಕೆ ಯತ್ನ ..!
– ರಿಪ್ಪನ್ಪೇಟೆ: ಸಾರ್ವಜನಿಕ ರಸ್ತೆಗೆ ಖಾಸಗಿ ವ್ಯಕ್ತಿಗಳಿಂದ ಅಡ್ಡಿ, ಪ್ರಶ್ನಿಸಿದವರ ಮೇಲೆ ಹಲ್ಲೆ
– ಶಿವಮೊಗ್ಗ : ಸಿರಿಗೆರೆ ವ್ಯಾಪ್ತಿಯಲ್ಲಿ ಐದು ಕಾಡಾನೆ ಪ್ರತ್ಯಕ್ಷ ಗ್ರಾಮಸ್ಥರಿಗೆ ಆತಂಕ
– ಕಳಸ: ಅಡಿಕೆ ಹಾಗೂ ಚಿನ್ನ ಕಳ್ಳತನ ಆರೋಪಿಗಳ ಬಂಧನ…!
– ಮೂಡಿಗೆರೆ: ಚಾಲಕನ ನಿಯಂತ್ರಣ ತಪ್ಪಿ ಬಸ್ ಮರಕ್ಕೆ ಡಿಕ್ಕಿ
NAMMUR EXPRESS NEWS
ಶಿವಮೊಗ್ಗ: ರಾಜ್ಯದ್ಯಂತ ಇತ್ತೀಚಿನ ದಿನಗಳಲ್ಲಿ ಬ್ಯಾಂಕ್ ಎಟಿಎಂ ಗಳಲ್ಲಿ ದರೋಡೆ ಕಳ್ಳತನ ಪ್ರಕರಣಗಳು ನಿರಂತರವಾಗಿ ನಡೆಯುತ್ತಿದ್ದು ಈಗಲೂ ಕೂಡ ಹಲವು ಪ್ರಕರಣಗಳಲ್ಲಿ ಆರೋಪಿಗಳು ಪತ್ತೆಯಾಗಿಲ್ಲ. ಭಾನುವಾರ ತಡರಾತ್ರಿ ಸುಮಾರು ಹತ್ತರಿಂದ ಹನ್ನೊಂದು ಗಂಟೆ ಸುಮಾರಿಗೆ ನಗರದ ನೆಹರು ರಸ್ತೆಯಲ್ಲಿರುವ ಕೆನರಾ ಬ್ಯಾಂಕ್ ನ ಎಟಿಎಂ ಗೆ ಒಬ್ಬ ವ್ಯಕ್ತಿ ಬಂದು ಕಳ್ಳತನ ಮಾಡಲು ಪ್ರಯತ್ನ ಮಾಡಿ ಎಟಿಎಂನ ಸೈರನ್ ಹೊಡೆದುಕೊಂಡ ನಂತರ ಆತ ಓಡಿ ಹೋಗಿದ್ದಾನೆ ಎನ್ನುವ ಮಾಹಿತಿ ಲಭ್ಯವಾಗಿತ್ತು. ಪೊಲೀಸ್ ಇಲಾಖೆ ಕೂಡ ಆತನನ್ನು ತೀವ್ರ ಹುಡುಕಾಟ ನಡೆಸಿ ಕೊನೆಗೂ ಬಂಧಿಸಿದ್ದಾರೆ ಎನ್ನುವ ಮಾಹಿತಿ ಇದೆ. ಶಿವಮೊಗ್ಗದ ಸ್ಮಾರ್ಟ್ ಸಿಟಿ ಕಾರ್ಯನಿರ್ವಹಿಸಲು ಬಂದ ಬಿಹಾರ ಮೂಲದ ವ್ಯಕ್ತಿ ರಾತ್ರಿ ಕುಡಿದ ಅಮಲಿನಲ್ಲಿ ಹಣ ಬಿಡಿಸಲು ಎಟಿಎಂಗೆ ತೆರಳಿದ್ದಾನೆ ಆಗ ಹಣ ಬರದೇ ಇದ್ದಾಗ ಎಟಿಎಂ ನನ್ನು ಓಪನ್ ಮಾಡಲು ಪ್ರಯತ್ನಿಸಿದ್ದಾನೆ, ಆ ಪ್ರಯತ್ನದಲ್ಲಿದ್ದಾಗ ಎಟಿಎಂನ ಸೈರನ್ ಹೊಡೆದುಕೊಂಡಿದೆ ಆಗ ಆತ ಅಲ್ಲಿಂದ ಹೊರಟು ಹೋಗಿದ್ದಾನೆ. ಈತನ ಬೆನ್ನು ಹತ್ತಿ ಪೊಲೀಸರು ಹುಡುಕಾಟ ನಡೆಸಿದ್ದಾರೆ ಕೊನೆಗೂ ಆತ ಸಿಕ್ಕಿಬಿದ್ದಿದ್ದಾನೆ.ಈತ ನಿಜವಾಗಲೂ ಹಣ ಬಿಡಿಸಲು ಹೋಗಿ ಕುಡಿದ ಮತ್ತಿನಲ್ಲಿ ಬ್ಯಾಂಕ್ ನ ಎಟಿಎಂ ಕೀಳಲು ಪ್ರಯತ್ನ ನಡೆಸಿದನಾ ಅಥವಾ ಇದು ಮೊದಲ ಪ್ರಯತ್ನ ಮಾಡಿ ಮುಂದೆ ದೊಡ್ಡ ಯತ್ನಕ್ಕೆ ಕೈಹಾಕಲು ಪ್ರಯತ್ನಪಟ್ಟಿರಬಹುದಾ, ಬಿಹಾರ ಮೂಲದ ವ್ಯಕ್ತಿಯಾಗಿರುವುದರಿಂದ ಅನುಮಾನಗಳು ಹೆಚ್ಚಾಗಿವೆ ಪೊಲೀಸರ ತನಿಖೆಯಿಂದ ಎಲ್ಲವೂ ಹೊರಬರಬೇಕಾಗಿದೆ.
– ರಿಪ್ಪನ್ಪೇಟೆ: ಸಾರ್ವಜನಿಕ ರಸ್ತೆಗೆ ಖಾಸಗಿ ವ್ಯಕ್ತಿಗಳಿಂದ ಅಡ್ಡಿ ಪ್ರಶ್ನಿಸಿದವರ ಮೇಲೆ ಹಲ್ಲೆ
ರಿಪ್ಪನ್ಪೇಟೆ : ಗ್ರಾಮ ಪಂಚಾಯತ್ ವತಿಯಿಂದ ಸಾರ್ವಜನಿಕ ಉದ್ದೇಶಕ್ಕಾಗಿ ನಿರ್ಮಿಸಿದ ರಸ್ತೆಯನ್ನು ಅಕ್ರಮಿಸಿ ಮಣ್ಣಿನ ತಡೆಗೋಡೆ ನಿರ್ಮಿಸಿ ಸಾರ್ವಜನಿಕರಿಗೆ ತೊಂದರೆ ನೀಡುವುದರ ಜೊತೆಗೆ ಪ್ರಶ್ನಿಸಲು ತೆರಳಿದ ಗ್ರಾಮಸ್ಥರ ಮೇಲೆ ಹಲ್ಲೆಗೆ ಯತ್ನಿಸಿರುವವರ ವಿರುದ್ಧ ಸೂಕ್ತ ಕಾನೂನು ಕೈಗೊಳ್ಳುವಂತೆ ಗ್ರಾಮಸ್ಥರು ಪಟ್ಟಣದ ಪೊಲೀಸ್ ಠಾಣೆ ಮೆಟ್ಟಿಲೇರಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಬಾಳೂರು ಗ್ರಾಮ ಪಂಚಾಯತ್ನ ಕಾಳೇಶ್ವರ ಗ್ರಾಮದಲ್ಲಿ ನಡೆದಿದೆ. ಕಾಳೇಶ್ವರ ಗ್ರಾಮದಲ್ಲಿ ಸುಮಾರು 9 ಕ್ಕೂ ಅಧಿಕ ಕುಟುಂಬಗಳು ಜೀವನ ನಡೆಸುತ್ತಿದೆ. ಇಲ್ಲಿನ ನಿವಾಸಿಗಳಿಗೆ ತಮ್ಮ ಮನೆಗಳಿಗೆ ತೆರಳಲು ಗ್ರಾಮ ಪಂಚಾಯತ್ ನ ಮಣ್ಣು ರಸ್ತೆ ಸಂಪರ್ಕವಿದ್ದು, ಈ ರಸ್ತೆಯನ್ನೇ ಅನೇಕ ವರ್ಷಗಳಿಂದ ಸಂಪರ್ಕ ರಸ್ತೆಯಾಗಿ ನಿವಾಸಿಗಳು ಉಪಯೋಗಿಸುತ್ತಿದ್ದಾರೆ. ಅಲ್ಲದೆ ಈ ರಸ್ತೆಯ ಕಾಮಗಾರಿ ಯೋಜನೆಯಡಿ 2018ನೇ ಸಾಲಿನಲ್ಲಿ ಸುಮಾರು 97000 ರೂ. ವೆಚ್ಚದಲ್ಲಿ ರಸ್ತೆ ಕಾಮಗಾರಿ ಮಾಡಲಾಗಿತ್ತು. ಪ್ರಸ್ತುತ ಈ ರಸ್ತೆಯನ್ನು ಜ25 ರಂದು ಕಾಳೇಶ್ವರ ಗ್ರಾಮದ ವ್ಯಕ್ತಿಗಳಾದ ಮೀನಾಕ್ಷಪ್ಪ ಹಾಗೂ ಕುಟುಂಬಸ್ಥರು ಏಕಾಏಕಿ ಅಕ್ರಮವಾಗಿ ಸರ್ಕಾರಿ ಸ್ಥಳದಲ್ಲಿ ಹಾದು ಹೋಗಿರುವ ಗ್ರಾಮಪಂಚಾಯತ್ ನ ಅನುದಾನಿತ ರಸ್ತೆಯಲ್ಲಿ ಟಿಪ್ಪರ್ ಮೂಲಕ ಅಲ್ಲಲ್ಲಿ ಅಕ್ರಮವಾಗಿ ತಂದ ಮಣ್ಣನ್ನು ಗುಡ್ಡೆ ಹಾಕುವ ಮೂಲಕ ರಸ್ತೆಯನ್ನು ಸಂಪೂರ್ಣ ಮುಚ್ಚಿದ್ದು. ಅಲ್ಲದೆ ಸರ್ಕಾರಿ ಸ್ಥಳವನ್ನು ಅಕ್ರಮವಾಗಿ ಭೂ ಸ್ವಾಧೀನ ಮಾಡಿಕೊಂಡು ಈ ರಸ್ತೆಯಲ್ಲಿ ತಿರುಗಾಡದಂತೆ ಮಾಡಿದ್ದಾರೆ ಈ ಬಗ್ಗೆ ವಿಚಾರಿಸಲು ಹೋದ ನಮ್ಮ ಮೇಲೆ ದೊಣ್ಣೆ ಹಾಗೂ ರಾಡ್ ನಿಂದ ಹಲ್ಲೆಗೆ ಮುಂದಾಗಿದ್ದಾರೆ ಎಂದು ದೂರು ಸಲ್ಲಿಸಿದ್ದಾರೆ.
– ಶಿವಮೊಗ್ಗ : ಸಿರಿಗೆರೆ ವ್ಯಾಪ್ತಿಯಲ್ಲಿ ಐದು ಕಾಡಾನೆ ಪ್ರತ್ಯಕ್ಷ ಗ್ರಾಮಸ್ಥರಿಗೆ ಆತಂಕ
ಶಿವಮೊಗ್ಗ : ಶಿವಮೊಗ್ಗದ ಸಿರಿಗೆರೆ ಭಾಗದಲ್ಲಿ ಐದು ಕಾಡಾನೆಗಳು ಕಾಣಿಸಿಕೊಂಡಿವೆ. ಇವುಗಳನ್ನ ಹಾಯ್ ಹೊಳೆ ಭಾಗಕ್ಕೆ ಡ್ರೈವ್ ಮಾಡಲು ಇಲಾಖೆ ಕಾರ್ಯಾಚರಣೆಗೆ ಇಳಿದಿದೆ. ಸಿರಿಗೆರೆ ವ್ಯಾಪ್ತಿಯ ಬಿಲ್ಗುಣಿಯ ಬಳಸಕೆರೆಯ ಬಳಿ ಐದು ಕಾಡಾನೆ ಕಾಣಿಸಿಕೊಂಡು ಹಳ್ಳಿಗರಿಗೆ ಭಯ ಉಂಟು ಮಾಡಿದೆ. ಇಂದು ಬೆಳಿಗ್ಗೆ ಕೆರೆಯ ಬಳಿ ಕಾಡಾನೆಗಳ ಲದ್ದಿಕಂಡಿದ್ದು ಗ್ರಾಮಸ್ಥರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ಮಾಹಿತಿ ಲಭ್ಯವಾದ ಬೆನ್ನಲ್ಲೇ ಕಾಡಾನೆಗಳನ್ನ ಓಡಿಸಲು ಇಲಾಖೆ ತಂಡ ರಚಿಸಿಕೊಂಡು ಕಾರ್ಯಾಚರಣೆಗೆ ಇಳಿದಿದೆ. ಪಟಾಕಿ ಮತ್ತು ತಮಟೆಗಳನ್ನ ಬಾರಿಸುವ ಮೂಲಕ ಆನೆಗಳನ್ನ ಓಡಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಕಾಡಾನೆಗಳನ್ನ ಸ್ಥಳಾಂತರಿಸಿ ಎಂದು ಆಗ್ರಹಿಸಿ ಎರಡು ದಿನಗಳ ಹಿಂದೆ ಬಿಜೆಪಿ ಸಿಸಿಎಫ್ ಕಚೇರಿ ಎದುರು ಪ್ರತಿಭಟನೆ ನಡೆಸಿತ್ತು. ಪ್ರತಿಭಟನೆಯ ವೇಳೆ ಸಿಸಿಎಫ್ ಹನುಮಂತಪ್ಪನವರು 10 ಆನೆಗಳಿವೆ ಇಲಾಖೆ ಓಡಿಸಲಾಗುವುದು ಎಂದು ಭರವಸೆ ನೀಡಿದ್ದರು. ಭರವಸೆಯ ಬೆನ್ನಲ್ಲೇ ಐದು ಕಾಡಾನೆ ಕಾಣಿಸಿಕೊಂಡು ಗ್ರಾಮಸ್ಥರನ್ನ ಆತಂಕಕ್ಕೊಳಪಡಿಸಿವೆ.
– ಕಳಸ: ಅಡಿಕೆ ಹಾಗೂ ಚಿನ್ನ ಕಳ್ಳತನ ಆರೋಪಿಗಳ ಬಂಧನ…!
ಕಳಸ: ಅಡಿಕೆ ಹಾಗೂ ಚಿನ್ನ ಕಳ್ಳತನ ಮಾಡಿದ್ದ ಮೂವರು ಆರೋಪಿಗಳನ್ನು ಬಂಧಿಸಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನಲ್ಲಿ ನಡೆದಿದೆ. ಕಿರಣ್ (27), ರವಿ (50), ನಿತೇಶ್ ಯು (33) ಬಂಧಿತ ಆರೋಪಿಗಳು. ಕಳಸ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 9 ಚೀಲ ಅಡಿಕೆ ಹಾಗೂ 10 ಗ್ರಾಂ ಚಿನ್ನ ಕಳ್ಳತನ ಮಾಡಿದ್ದ ಮೂವರು ಆರೋಪಿಗಳನ್ನು ಜಿಲ್ಲಾ ಎಸ್ಪಿ ವಿಕ್ರಂ ಅಮಟೆ, ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಕೃಷ್ಣಮೂರ್ತಿ.ಜಿ ಅವರ ಮಾರ್ಗದರ್ಶನದಲ್ಲಿ ಆರೋಪಿಗಳನ್ನು ಬಂಧಿಸಿ ಚಿನ್ನದ ಜುಮಕಿ ಹಾಗೂ ಮಾಟಿ, ಬೆಳ್ಳಿಯ ಕಾಲುಗೆಜ್ಜೆ, 9 ಮೂಟೆ ಗೋಟು ಅಡಿಕೆ ಒಟ್ಟು 62500/- ರೂ ಮೌಲ್ಯದ ಸ್ವತ್ತನ್ನು ವಶಪಡಿಸಿಕೊಂಡಿದ್ದಾರೆ. ಇನ್ನು ಈ ಕಾರ್ಯಾಚಾರಣೆಯಲ್ಲಿ ಕೊಪ್ಪ ಉಪ ವಿಭಾಗದ ಪೊಲೀಸ್ ಉಪಾಧೀಕ್ಷಕರು ಬಾಲಾಜಿ ಸಿಂಗ್, ಆಲ್ದೂರು ಪೊಲೀಸ್ ವೃತ್ತ ನಿರೀಕ್ಷಕರು ಸೊಮೇಗೌಡ ರವರ ನೇತೃತ್ವದಲ್ಲಿ ಕಳಸ ಪೊಲೀಸ್ ಠಾಣೆಯ ಪಿ.ಎಸ್.ಐ ಬಾಬು.ಎಸ್.ಅಗೇರ, ಆದರ್ಶ ಕುಮಾರ್ ಜಿ.ಆರ್, ಸಿಬ್ಬಂಧಿಗಳಾದ ಪ್ರಮೋದ್, ಗಿರೀಶ್, ವಿಶ್ವನಾಥ್ ಪಾಳೆಗಾರ್, ಸಿದ್ದಪ್ಪ ಕರಂಡಿ, ಶಿವಕುಮಾರ್, ಸುನಿಲ್ .ವೈ, ಚಾಲಕ ಕಾಶಿನಾಥ್ ಇದ್ದರು.
– ಮೂಡಿಗೆರೆ: ಚಾಲಕನ ನಿಯಂತ್ರಣ ತಪ್ಪಿ ಬಸ್ ಮರಕ್ಕೆ ಡಿಕ್ಕಿ
ಮೂಡಿಗೆರೆ: ಚಾಲಕನ ನಿಯಂತ್ರಣ ತಪ್ಪಿ ಪ್ರವಾಸಿಗರಿದ್ದ ಬಸ್ ಮರಕ್ಕೆ ಡಿಕ್ಕಿಯಾಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಿದರಹಳ್ಳಿ ಗ್ರಾಮದಲ್ಲಿ ನಡೆದಿದೆ. ಚಿಕ್ಕಮಗಳೂರು ಪ್ರವಾಸಕ್ಕೆ ಬಂದಿದ್ದ ಮೈಸೂರು ಜಯದೇವ ಆಸ್ಪತ್ರೆ ಸಿಬ್ಬಂದಿಗಳು ಧರ್ಮಸ್ಥಳಕ್ಕೆ ತೆರಳುವಾಗ ಬಿದರಹಳ್ಳಿ ಗ್ರಾಮದ ಬಳಿ ಬಿದರಹಳ್ಳಿ ಗ್ರಾಮದ ಬಳಿ ಮರಕ್ಕೆ ಡಿಕ್ಕಿಯಾಗಿದೆ. ಪರಿಣಾಮ ನಾಲ್ವರು ಪ್ರವಾಸಿಗರಿಗೆ ಗಂಭೀರ ಗಾಯವಾಗಿದ್ದು, ಮೈಸೂರು ಆಸ್ಪತ್ರೆಗೆ ರವಾನಿಸಲಾಗಿದೆ. 11 ಜನರಿಗೆ ಸಣ್ಣಪುಟ್ಟ ಗಾಯವಾಗಿದ್ದು, ಮೂಡಿಗೆರೆ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೂಡಿಗೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.