ಟಾಪ್ ನ್ಯೂಸ್ ಮಲ್ನಾಡ್
– ಚಿಕ್ಕಮಗಳೂರು: ಕಾಡಾನೆಗಳಿಂದ ನಿಷೇಧಾಜ್ಞೆ!
– 11 ಗ್ರಾಮಗಳಲ್ಲಿ ನಿಷೇಧಾಜ್ಞೆ ಜಾರಿ
– ಶಿವಮೊಗ್ಗ: ಡಿಜಿಟಲ್ ಜಾಲದಲ್ಲಿ ಯುವತಿಗೆ 4 ಲಕ್ಷ ರೂ. ವಂಚನೆ
– ಶಿಕಾರಿಪುರ: ಪತಿಯೇ ಪತ್ನಿಯನ್ನು ಟವೆಲಿನಿಂದ ಕುತ್ತಿಗೆ ಬಿಗಿದು ಹತ್ಯೆ
– ಸೊರಬ : ಆಕಸ್ಮಿಕ ಬೆಂಕಿ ತಗುಲಿ ಅಪಾರ ಪ್ರಮಾಣದ ನಷ್ಟ
– ತೀರ್ಥಹಳ್ಳಿ : ಸಾಗುವಾನಿ ನಾಟ ಸಾಗಣೆ: ವಶ
NAMMUR EXPRESS NEWS
ತೀರ್ಥಹಳ್ಳಿ: ತಾಲೂಕಿನ ಮಂಡಗದ್ದೆಯಲ್ಲಿ ರಾತ್ರಿ ಸಾಗುವಾನಿ ನಾಟವನ್ನು ಅಕ್ರಮವಾಗಿ ಕಡಿದು ಸಾಗಿಸುತ್ತಿರುವ ವಾಹನವನ್ನು ವಶಪಡಿಸಿಕೊಂಡಿರುವ ಮಂಡಗದ್ದೆ ಅರಣ್ಯ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಕಳೆದ ರಾತ್ರಿ ಮಂಡಗದ್ದೆ ಅರಣ್ಯದಲ್ಲಿ ಸಾಗುವಾನಿ ಮರವನ್ನು ಅಕ್ರಮವಾಗಿ ಕಡಿದು ಸಾಗಿಸುತ್ತಿದ್ದ ಮಹೇಂದ್ರ ಗೂಡ್ಸ್ ವಾಹನವನ್ನು ಅರಣ್ಯ ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ದಾಳಿಯಲ್ಲಿ ಡಿ ಆರ್ ಎಫ್ ಸುಹಾಸ್ ಮತ್ತು ದುರ್ಗಪ್ಪ, ಮಹದೇವ ಕಣ್ಣೂರು, ಡ್ರೈವರ್ ನವೀನ್ ಮುಂತಾದವರು ಇದ್ದರು ಎಂದು ತಿಳಿದು ಬಂದಿದೆ.
– ಚಿಕ್ಕಮಗಳೂರು: 11 ಗ್ರಾಮಗಳಲ್ಲಿ ನಿಷೇಧಾಜ್ಞೆ ಜಾರಿ
ಚಿಕ್ಕಮಗಳೂರು : ಕಾಡಾನೆಗಳು ಬೀಡುಬಿಟ್ಟಿರುವ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಚಿಕ್ಕಮಗಳೂರು ತಾಲೂಕಿನ ತುಡುಕೂರು, ಆಲ್ದೂರುಪುರ, ಹೊಸಹಳ್ಳಿ, ತೋರಣಮಾವು ಮತ್ತು ಚಿತ್ತುವಳ್ಳಿ ಸೇರಿದಂತೆ 11 ಗ್ರಾಮಗಳಲ್ಲಿ ನಿಷೇಧಾಜ್ಞೆ ಜಾರಿ ಮಾಡಿದೆ. ಶನಿವಾರ ರಂದು ಮಧ್ಯಾಹ್ನ ಕಾಫಿ ತೋಟದಲ್ಲಿ ಹಾದುಹೋಗಿದ್ದ ವಿದ್ಯುತ್ ತಂತಿ ತುಳಿದು ಕಾಡಾನೆ ಮೃತಪಟ್ಟಿತ್ತು. ಸಾವನ್ನಪ್ಪಿದ ಸಲಗದ ಬಳಿ ಇರುವ 23 ಕಾಡಾನೆಗಳು ಬೀಡು ಬಿಟ್ಟಿವೆ. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ 11 ಗ್ರಾಮಗಳಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.
– ಶಿವಮೊಗ್ಗ: ಡಿಜಿಟಲ್ ಜಾಲದಲ್ಲಿ ಯುವತಿಗೆ 4 ಲಕ್ಷ ರೂ. ವಂಚನೆ
ಶಿವಮೊಗ್ಗ: ಡಿಜಿಟಲ್ ಅರೆಸ್ಟ್ಗೆ ಶಿವಮೊಗ್ಗದ ಯುವತಿ ಸಿಲುಕಿದ್ದು ಬರೋಬ್ಬರಿ ನಾಲ್ಕು ಲಕ್ಷ ರೂ. ಕಳೆದುಕೊಂಡಿದ್ದಾರೆ. 23 ವರ್ಷದ ಯುವತಿಗೆ ಪ್ರತಿಷ್ಠಿತ ಕೊರಿಯರ್ ಸಂಸ್ಥೆಯ ಉದ್ಯೋಗಿ ಎಂದು ಹೇಳಿಕೊಂಡು ವ್ಯಕ್ತಿಯೊಬ್ಬ ಕರೆ ಮಾಡಿ 4 ಲಕ್ಷ ರೂ. ವಂಚಿಸಿರುವ ಘಟನೆ ನಡೆದಿದೆ. ಮುಂಬೈನಿಂದ ಇರಾನ್ಗೆ ತಮ್ಮ ಹೆಸರಿನಲ್ಲಿ ಪಾರ್ಸಲ್ ಹೋಗುತ್ತಿದ್ದು ಅದರಲ್ಲಿ ಡ್ರಗ್ಸ್ ಇರುವುದಾಗಿ ನಂಬಿಸಿ ವಿಚಾರಣೆ ನೆಪದಲ್ಲಿ ವಂಚಕರು ಹಣ ವರ್ಗಾಯಿಸಿಕೊಂಡಿದ್ದಾರೆ. ಮುಂಬೈ ಸೈಬರ್ ಪೊಲೀಸ್ ಎಂದು ಕರೆ ಮಾಡಿ ಯುವತಿಯ ಬ್ಯಾಂಕ್ ಖಾತೆಯಿಂದ 4 ಲಕ್ಷ ರೂ. ಹಣ ವರ್ಗಾಯಿಸಿಕೊಂಡು ವಂಚಿಸಲಾಗಿದೆ. ಯುವತಿ ಹೆಸರಿನಲ್ಲಿ ಇರಾನ್ ಗೆ ಪಾರ್ಸಲ್ ಹೋಗುತ್ತಿದೆ. ಆ ಬಗ್ಗೆ ಮುಂಬೈ ಸೈಬರ್ ಕ್ರೈಮ್ ಪೊಲೀಸರು ಮಾತನಾಡುತ್ತಾರೆಂದು ಕರೆಯನ್ನು ಕನೆಕ್ಟ್ ಮಾಡಿದ್ದ. ಪೊಲೀಸರಂತೆ ಮಾತನಾಡಿದ ಮತ್ತೊಬ್ಬ ವ್ಯಕ್ತಿ, ಪಾರ್ಸಲ್ನಲ್ಲಿ ಒಂದು ಲ್ಯಾಪ್ಟಾಪ್, 5 ಕ್ರೆಡಿಟ್ ಕಾರ್ಡ್, 420 ಗ್ರಾಂ ಡ್ರಗ್ಸ್ ಇದೆ. ಈ ಬಗ್ಗೆ ವಿಚಾರಣೆ ಮಾಡಬೇಕೆಂದು ಬೆದರಿಕೆ ಹಾಕಿದ್ದ. ವಿಚಾರಣೆ ನೆಪದಲ್ಲಿ ಯುವತಿಯ ಬ್ಯಾಂಕ್ ಖಾತೆಯಿಂದ ತಕ್ಷಣ ಸಾಲಕ್ಕೆ ಆನ್ಲೈನ್ನಲ್ಲಿ ಅರ್ಜಿ ಸಲ್ಲಿಸುವಂತೆ ಸೂಚಿಸಿದ್ದ. ಯುವತಿಯ ಬ್ಯಾಂಕ್ ಖಾತೆಗೆ 3.80 ಲಕ್ಷ ರೂ. ಸಾಲ ದೊರೆತಿತ್ತು. ಪೊಲೀಸ್ ಸೋಗಿನಲ್ಲಿ ಮಾತನಾಡುತ್ತಿದ್ದ ವ್ಯಕ್ತಿ ಎರಡು ಬ್ಯಾಂಕ್ ಖಾತೆಯ ವಿವರ ನೀಡಿ ಅವುಗಳಿಗೆ ತಲಾ ಎರಡು ಲಕ್ಷ ರೂ. ವರ್ಗಾಯಿಸುವಂತೆ ಸೂಚಿಸಿದ್ದ. ಅಂತೆಯೇ ಯುವತಿ ಹಣ ವರ್ಗಾಯಿಸಿದ್ದಳು. ಬಳಿಕ ವಂಚನೆಗೆ ಒಳಗಾಗಿರುವುದು ಅರಿವಾಗುತ್ತಿದ್ದಂತೆ ಯುವತಿ ಜಯನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
– ಶಿಕಾರಿಪುರ: ಪತಿಯೇ ಪತ್ನಿಯನ್ನು ಟವೆಲ್ ನಿಂದ ಕುತ್ತಿಗೆ ಬಿಗಿದು ಹತ್ಯೆ
ಶಿಕಾರಿಪುರ: ಊಟ ಬಿಡಿಸದ ಹಿನ್ನೆಲೆಯಲ್ಲಿ ಶಿಕಾರಿಪುರ ತಾಲೂಕಿನ ಅಂಬ್ಲಿಗೋಳದಲ್ಲಿ ಪತಿಯೇ ಪತ್ನಿಯನ್ನು ಟವೆಲ್ ನಿಂದ ಕುತ್ತಿಗೆ ಬಿಗಿದು ಹತ್ಯೆ ಮಾಡಿದ್ದಾನೆ. ಅಂಬ್ಲಿಗೋಳದ ಗೌರಮ್ಮ(29) ಕೊಲೆಯಾದ ಮಹಿಳೆ. ಆಕೆಯ ಪತಿ ಮನು ಕೊಲೆ ಮಾಡಿದ್ದು ಶಿಕಾರಿಪುರ ಗ್ರಾಮಾಂತರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಗೌರಮ್ಮ ಗಾರ್ಮೆಂಟ್ಸ್ ಗೆ ಕೆಲಸಕ್ಕೆ ಹೋಗುತ್ತಿದ್ದಳು. ಸಂಜೆ ವೇಳೆ ಮನೆಯಲ್ಲಿದ್ದ ಗೌರಮ್ಮಳಿಗೆ ಮನು ಊಟ ಬಡಿಸುವಂತೆ ಕೇಳಿದ್ದ. ಆದರೆ ಫೋನ್ ಮಾತನಾಡುತ್ತಿದ್ದ ಕಾರಣ ಊಟ ಬಡಿಸಲು ನಿರಾಕರಿಸಿದ್ದಳು. ಈ ವೇಳೆ ಇಬ್ಬರ ನಡುವೆ ಜಗಳ ನಡೆದಿದ್ದು, ಮಾತಿಗೆ ಮಾತು ಬೆಳೆದು ಮನು, ಗೌರಮ್ಮಳ ಕುತ್ತಿಗೆಗೆ ಟವೆಲ್ ನಿಂದ ಬಿಗಿದು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ.
– ಸೊರಬ : ಆಕಸ್ಮಿಕ ಬೆಂಕಿ ತಗುಲಿ ಅಪಾರ ಪ್ರಮಾಣದ ನಷ್ಟ
ಸೊರಬ : ಆಕಸ್ಮಿಕ ಬೆಂಕಿ ತಗುಲಿ ಮನೆಯ ಹಿಂಭಾಗದಲ್ಲಿ ನಿಲ್ಲಿಸಿದ್ದ ಕಾರೊಂದು ಸಂಪೂರ್ಣ ಸಂಪೂರ್ಣ ಸುಟ್ಟುಕರಲಾಗಿದ್ದು, ಅಪಾರ ಪ್ರಮಾಣದಲ್ಲಿ ನಷ್ಟ ವಾಗಿರುವ ಘಟನೆ ತಾಲೂಕಿನ ಉಳವಿ ಗ್ರಾಮದಲ್ಲಿ ನಡೆದಿದೆ. ಉಳವಿ ಗ್ರಾಮದ ನಾಸೀರ್ ಸಾಬ್ಬಾನ್ ಸಾಬ್ ಎಂಬುವವರಿಗೆ ಸೇರಿದ ಮನೆಯ ಹಿಂಭಾಗದಲ್ಲಿ ನಿಲ್ಲಿಸಿದ್ದ ಓಮಿನಿ ಕಾರಿಗೆ ಆಕಸ್ಮಿಕ ಬೆಂಕಿ ತಗುಲಿದೆ. ಪರಿಣಾಮ ಕಾರು ಸುಟ್ಟು ಕರಕಲಾಗಿದ್ದು, ನೂತನ ಮನೆ ನಿರ್ಮಾಣಕ್ಕಾಗಿ ಸಂಗ್ರಹಿಸಿಟ್ಟಿದ್ದ ಮರಗಳು, ಬೋರ್ ವೆಲ್ ಪೈಪುಗಳು, ಶುಂಠಿ ಕಣಕ್ಕೆ ಬಳಸುವ ಪ್ಲಾಸ್ಟಿಕ್ ಚೀಲಗಳು ಹಾಗೂ ಮನೆಯ ಹಿಂಭಾಗ ಸಂಪೂರ್ಣ ಸುಟ್ಟು ಹೋಗಿದೆ. ಸುಮಾರು ಐದು ಲಕ್ಷ ರೂ., ನಷ್ಟವಾಗಿದೆ ಎಂದು ಅಂದಾಜಿಸಲಾಗಿದ್ದು, ಬೆಂಕಿ ತಗುಲಿರುವ ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಹೆಚ್ಚಿನ ಅನಾಹುತ ಆಗುವುದನ್ನು ತಪ್ಪಿಸಿದ್ದಾರೆ.