- ಲಸಿಕೆ ಇಲ್ಲದಿದ್ರೂ ಸಚಿವರ ಬಾಯಿ ಪ್ರಚಾರ!
- ಆಶಾ ಕಾರ್ಯಕರ್ತೆಯರ ಸೇವೆಗೆ ಬೆಲೆ ಇಲ್ವೇ..?
- ಯುವ ಚಿಂತಕ ಶಶಾಂಕ್ ಹೆಗ್ಡೆ ಪ್ರಶ್ನೆ
ತೀರ್ಥಹಳ್ಳಿ: ಕರೋನಾದ ತುರ್ತು ನಡುವೆ ಆಡಳಿತದ ಗೊಂದಲ ಮತ್ತು ಸಚಿವರು, ಶಾಸಕರ ಹೇಳಿಕೆ ಗೊಂದಲದಿಂದ ಜನತೆಗೆ ತೊಂದರೆಯಾಗುತ್ತಿದೆ. ಲಸಿಕೆ ಒಂದು ದಿನ ಕೊಟ್ಟು ಮತ್ತೆ ಮಾರನೇ ದಿನ ಇರುವುದಿಲ್ಲ. ಟಿವಿಯಲ್ಲಿ ಸಚಿವರು ಲಸಿಕೆ, ಆಕ್ಸಿಜನ್, ಬೆಡ್ ಕೊರತೆ ಇಲ್ಲ ಎಂದು ಹೇಳಿಕೆ ನೀಡುತ್ತಿರುವುದೇ ಎಲ್ಲಾ ಸಮಸ್ಯೆಗಳಿಗೆ ಕಾರಣವಾಗುತ್ತಿದೆ ಎಂದು ಮಲೆನಾಡಿನ ಯುವ ಚಿಂತಕ, ರಾಜಕಾರಣಿ ಶಶಾಂಕ್ ಹೆಗ್ಡೆ ಗುಡ್ಡೆಕೇರಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ನಮ್ಮೂರ್ ಎಕ್ಸ್ಪ್ರೆಸ್ ಮಧ್ಯಮದ ಜತೆ ಮಾತನಾಡಿದ ಅವರು, ತಾಲೂಕು ಕೇಂದ್ರದಲ್ಲಿ ಲಸಿಕೆ ಇದೆ ಎಂದು ಜನ ಮುಂಜಾನೆ ಮುಗಿ ಬೀಳುತ್ತಾರೆ. ಲಸಿಕೆ ಇದೆ ಎಂದು ಗೊಂದಲ ಮಾಡಬೇಡಿ. ಇಲ್ಲವಾದರೆ ಸತ್ಯ ಒಪ್ಪಿಕೊಳ್ಳಿ. ಜನತೆಗೆ ತೊಂದರೆ ಆಗಬಾರದು. ಜನರಿಗೆ ಲಸಿಕೆ ನೀಡಲು ಸಾಧ್ಯವಾಗದಿದ್ದರೆ, ಅವೈಜ್ಞಾನಿಕ ಮಾಹಿತಿ ನೀಡುವುದನ್ನು ನಿಲ್ಲಿಸಬೇಕು ಎಂದು ಅವರು ಹೇಳಿದ್ದಾರೆ.
ಬಿಜೆಪಿ ನಾಯಕರು ಲಸಿಕೆಯ ಕುರಿತಂತೆ ತಪ್ಪುಸಂದೇಶಗಳನ್ನು ಹರಡುತ್ತಿರುವ ಮಾಹಿತಿಗಳು ಬರುತ್ತಿವೆ. ಲಸಿಕಾ ಕೇಂದ್ರದ ಮುಂದೆ ಜನ ಸೇರುತ್ತಾರೆ. ಕೊನೆಗೆ ಲಸಿಕೆ ಇಲ್ಲದೆ ಮನೆಗೆ ಬರುವ ಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಿದ್ದಾರೆ.
ಆಶಾ ಕಾರ್ಯಕರ್ತರು, ಅಂಗನವಾಡಿ ಶಿಕ್ಷಕಿಯರ ಗೋಳು: ಪದೇ ಪದೇ ಗ್ರಾಮ ಮಟ್ಟದಲ್ಲಿ ಟಾಸ್ಕ್ ಪೋರ್ಸ್ ಸಭೆ ನಡೆಸುವ ಮೂಲಕ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಶಿಕ್ಷಕಿಯರಿಗೆ ತೊಂದರೆ ಆಗುತ್ತಿದೆ. ಮೊದಲೇ ವಾಹನ ವ್ಯವಸ್ಥೆ ಇಲ್ಲ. ಕೆಲವೊಮ್ಮೆ ಸಭೆಯೇ ನಡೆಯಲ್ಲ. 50-100 ಜನ ಸೇರುವುದರಿಂದ ಕರೋನಾ ಹರಡುವ ಸಾಧ್ಯತೆ ಇದೆ. ತೀರ್ಥಹಳ್ಳಿ ಆಡಳಿತ ಈ ಬಗ್ಗೆ ಗಮನ ಹರಿಸಿ ಮೊಬೈಲ್ ಮೂಲಕವೇ ಮಾಹಿತಿ ನೀಡುವುದು ಒಳಿತು ಎಂದು ಶಶಾಂಕ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಆಶಾ ಕಾರ್ಯಕರ್ತೆಯರು, ಅಂಗನವಾಡಿ ಶಿಕ್ಷಕಿಯರು, ವೈದ್ಯ ಸಿಬ್ಬಂದಿಗೆ ಅಗತ್ಯ ಸುರಕ್ಷತಾ ವಸ್ತು ಕೊಡಬೇಕು. ಕರೋನಾ ತುರ್ತು ಪರಿಸ್ಥಿತಿಯಲ್ಲಿ ಅವರ ಸೇವೆಗೆ ಸರಕಾರ ಬೆಲೆ ಕೊಡಬೇಕು ಎಂಬುದು ನಮ್ಮೂರ್ ಎಕ್ಸ್ಪ್ರೆಸ್ ಅಗ್ರಹ.