ದಕ್ಷಿಣ ಕನ್ನಡ ಜಿಲ್ಲೆ ರಸ್ತೆ ಅಭಿವೃದ್ಧಿಗೆ ಚೌಟ ರೂಟ್ ಮ್ಯಾಪ್!
– ನೂತನ ಸಂಸದ ಕ್ಯಾ. ಬ್ರಿಜೇಶ್ ಚೌಟ ಅಧಿಕಾರಿಗಳೊಂದಿಗೆ ಸಭೆ
– ಅಡ್ಡಹೊಳೆ-ಬಿಸಿರೋಡ್ ಕಾಮಗಾರಿ ಪೂರ್ಣಗೊಳಿಸಲು ಗಡುವು
– ಹೆದ್ದಾರಿ ಕಾಮಗಾರಿ ನಿಧಾನಕ್ಕೆ ಅಧಿಕಾರಿಗಳ ವಿರುದ್ಧ ಅಸಮಾಧಾನ
– ಜನರ ಸೇವೆ ಮಾಡಲು ಅವಕಾಶ ಸಿಕ್ಕಿದೆ: ಚೌಟ ಸಂತಸ
NAMMUR EXPRESS NEWS
ಮಂಗಳೂರು: ಲೋಕಸಭಾ ಸದಸ್ಯರಾಗಿ ಆಯ್ಕೆಗೊಂಡಿರುವ ದಕ್ಷಿಣ ಕನ್ನಡದ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ಬುಧವಾರ ಜಿಲ್ಲೆಯಲ್ಲಿ ನಡೆಯುತ್ತಿರುವ ವಿವಿಧ ರೂಟ್ಗಳಲ್ಲಿನ ಹೆದ್ದಾರಿ ಕಾಮಗಾರಿಗಳ ಪ್ರಗತಿ ಕುರಿತಂತೆ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಸೇರಿದಂತೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದಾರೆ.
ಸಭೆಯಲ್ಲಿ ಮಾತನಾಡಿರುವ ಸಂಸದರು, ಜಿಲ್ಲೆಯಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಹೆದ್ದಾರಿಗೆ ಸಂಬಂಧಪಟ್ಟ ಎಲ್ಲಾ ಕಾಮಗಾರಿಗಳನ್ನು ಯೋಜನಾ ಬದ್ಧವಾಗಿ ಮತ್ತು ವ್ಯವಸ್ಥಿತವಾಗಿ ನಡೆಸುವಂತೆ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದ್ದಾರೆ.
ಜಿಲ್ಲೆಯಲ್ಲಿ ಬಿ.ಸಿ.ರೋಡ್-ಅಡ್ಡಹೊಳೆ, ಸಾಣೂರು -ಬಿಕರ್ನಕಟ್ಟೆ, ಪೂಂಜಾಲಕಟ್ಟೆ- ಚಾರ್ಮಾಡಿ ಸೇರಿದಂತೆ ವಿವಿಧ ಮಹತ್ವದ ಹೆದ್ದಾರಿ ಕಾಮಗಾರಿಗಳು ನಡೆಯುತ್ತಿವೆ. ಈ ಯೋಜನೆಗಳು ಪೂರ್ಣಗೊಂಡರೆ ಜಿಲ್ಲೆಯ ಸಂಪರ್ಕ ವ್ಯವಸ್ಥೆಯಲ್ಲಿ ಮಹತ್ವದ ಪ್ರಗತಿ ಆಗಲಿದೆ ಎಂದರು.
ಬಿ.ಸಿ.ರೋಡ್ – ಅಡ್ಡಹೊಳೆ ಹೆದ್ದಾರಿ ಕಾಮಗಾರಿ ಪ್ರಗತಿ ಪರಿಶೀಲನೆ ನಡೆಸಿದ ಸಂಸದರು ಕಾಮಗಾರಿಗಳನ್ನು ಅಲ್ಲಲ್ಲಿ ನಡೆಸುವ ಮೊದಲು ವ್ಯವಸ್ಥಿತವಾಗಿ ಸಾರ್ವಜನಿಕರಿಗೆ ಸಮಸ್ಯೆ ಆಗದಂತೆ ಕೆಲಸ ಮಾಡಬೇಕು. ಸಂಪೂರ್ಣ ಕಾಮಗಾರಿಯನ್ನು ಸಂಘಟಿತವಾಗಿ ನಿರ್ವಹಿಸಬೇಕು ಎಂದು ತಾಕೀತು ಮಾಡಿದರು.
ಬಿ.ಸಿ.ರೋಡ್ನಿಂದ ಮಾಣಿ ವರೆಗಿನ ಹೆದ್ದಾರಿ ಕಾಮಗಾರಿಯನ್ನು ನಿರ್ವಹಿಸುತ್ತಿರುವ ಶೈಲಿಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಸಂಸದರು, ಸಾರ್ವಜನಿಕರ ತಾಳ್ಮೆ ಪರೀಕ್ಷಿಸಿ ಕಾಮಗಾರಿ ನಡೆಸುವುದು ಬೇಡ. ಕಳೆದ ಹಲವು ತಿಂಗಳಿಂದ ಬಸ್, ದ್ವಿಚಕ್ರ ವಾಹನದಲ್ಲಿ ಸಂಚರಿಸುವ ಸಾರ್ವಜನಿಕರು ತೀವ್ರ ಸಮಸ್ಯೆ ಎದುರಿಸುತ್ತಿದ್ದಾರೆ. ರಾಷ್ಟ್ರೀಯ ಹೆದ್ದಾರಿ ಇಲಾಖೆಯು ತನ್ನ ಸಂಪೂರ್ಣ ಸಾಮರ್ಥ್ಯ, ಮಾನವ ಸಂಪನ್ಮೂಲ ಹಾಗೂ ಯಂತ್ರೋಪಕರಣಗಳನ್ನು ಬಳಸಿಕೊಂಡು ಕಾಮಗಾರಿ ನಿರ್ವಹಿಸಬೇಕು. ಜುಲೈ 5ರ ಒಳಗೆ ಮೆಲ್ಕಾರ್, ಕಲ್ಲಡ್ಕ, ಮಾಣಿ ಮತ್ತು ಉಪ್ಪಿನಂಗಡಿ ಜಂಕ್ಷನ್ನಲ್ಲಿ ಸುಗಮ ಸಂಚಾರಕ್ಕೆ ಮತ್ತು ಸಾರ್ವಜನಿಕರ ಓಡಾಟಕ್ಕೆ ಇರುವ ಎಲ್ಲಾ ಸಮಸ್ಯೆಗಳನ್ನು ಪರಿಹರಿಸಬೇಕೆಂದು ಗಡುವು ನೀಡಿದ್ದಾರೆ.
ಕಾರ್ಕಳ – ಮೂಡಬಿದ್ರೆ – ಮಂಗಳೂರು ಹೆದ್ದಾರಿಯಲ್ಲಿ ಚತುಷ್ಪಥ ಕಾಮಗಾರಿಯಲ್ಲಿ ಸಮಸ್ಯೆ ಇರುವ ಸ್ಥಳಗಳನ್ನು ಹೊರತುಪಡಿಸಿ ಉಳಿದೆಡೆ ಕಾಮಗಾರಿಗಳನ್ನು ತ್ವರಿತ ಗತಿಯಲ್ಲಿ ಪೂರ್ಣಗೊಳಿಸಲು ಸೂಚಿಸಿದರು. ಮೂಡಬಿದ್ರೆ ಬೈಪಾಸ್ ನಿರ್ಮಾಣಕ್ಕೆ ಭೂಸ್ವಾಧೀನಗೊಂಡ ಜಮೀನನ್ನು ಹೆದ್ದಾರಿ ಪ್ರಾಧಿಕಾರಕ್ಕೆ ಶೀಘ್ರವೇ ಹಸ್ತಾಂತರಿಸಲು ಅಧಿಕಾರಿಗಳಿಗೆ ತಿಳಿಸಿದರು.
ಕೂಳೂರು ಸೇತುವೆ ಕಾಮಗಾರಿ ಹಾಗೂ ಹೊಸ ಸೇತುವೆ ಬಗ್ಗೆ ಸಂಸದರು ಮಾಹಿತಿ ಪಡೆದರು. ಕಾಮಗಾರಿ ಸದ್ಯಕ್ಕೆ ಸ್ಥಗಿತಗೊಂಡಿರುವುದಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಯೋಜನಾ ನಿರ್ದೇಶಕ ಅಬ್ದುಲ್ಲಾ ಜಾವೇದ್ ಅಝ್ಮಿ ತಿಳಿಸಿದರು. ಇದೊಂದು ಗಂಭೀರ ವಿಷಯವಾಗಿದ್ದು, ಹೆದ್ದಾರಿ ಪ್ರಾಧಿಕಾರದ ಉನ್ನತ ಅಧಿಕಾರಿಗಳ ಗಮನಕ್ಕೆ ತರಲು ಸಂಸದರು ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.
ಕೊಟ್ಟಾರ ಚೌಕಿ ಸರ್ವಿಸ್ ರಸ್ತೆ, ಕೆಪಿಟಿ ಓವರ್ ಪಾಸ್, ಪದುವಾ ಜಂಕ್ಷನ್, ನಂತೂರು ಮೇಲ್ಸೇತುವೆ ಬಗ್ಗೆ ಪರಿಶೀಲನೆ ನಡೆಸಿದ ಅವರು ಈ ಬಗ್ಗೆ ಶೀಘ್ರವೇ ಪ್ರತ್ಯೇಕ ಸಭೆ ಕರೆದು ಎಲ್ಲಾ ಗೊಂದಲವನ್ನು ಬಗೆಹರಿಸಿ ಕಾಮಗಾರಿಗಳಿಗೆ ಚಾಲನೆ ನೀಡಲಾಗುವುದು ಎಂದು ಹೇಳಿದರು. ಕೆಪಿಟಿ ಜಂಕ್ಷನ್ ಕಾಮಗಾರಿ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.
ಬಿ.ಸಿ.ರೋಡ್ನಿಂದ ಸುರತ್ಕಲ್ ವರೆಗಿನ ಹೆದ್ದಾರಿಯನ್ನು ಪ್ರಸ್ತುತ ಹೆದ್ದಾರಿ ಪ್ರಾಧಿಕಾರವೇ ನಿರ್ವಹಿಸುತ್ತಿದೆ. ಈ ರಸ್ತೆಯ ನಿರ್ವಹಣೆಯ ಬಗ್ಗೆ ಸಾರ್ವಜನಿಕರಲ್ಲಿ ವ್ಯಾಪಕ ಅಸಮಾಧಾನವಿದೆ. ಈ ನಿಟ್ಟಿನಲ್ಲಿ ಇದರ ನಿರ್ವಹಣೆಯನ್ನು ಬೇರೆ ಏಜೆನ್ಸಿಗಳಿಗೆ ನೀಡಲು ಸಾಧ್ಯವಿದೆಯೇ ಎಂಬುದರ ಬಗ್ಗೆ ಪರಿಶೀಲಿಸುವಂತೆ ಅವರು ಸೂಚಿಸಿದರು.
ಪೂಂಜಾಲಕಟ್ಟೆ – ಚಾರ್ಮಾಡಿ ಹೆದ್ದಾರಿ ಕಾಮಗಾರಿ ಸಂದರ್ಭ ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಬೇಕು. ಈ ಬಗ್ಗೆ ಜನಪ್ರತಿನಿಧಿಗಳಿಗೆ ಮತ್ತು ಸ್ಥಳೀಯ ಗ್ರಾಮ ಪಂಚಾಯತಿಗಳಿಗೆ ಸರಿಯಾದ ಮಾಹಿತಿ ನೀಡಬೇಕು. ಸಮಸ್ಯೆಗಳನ್ನು ಸ್ಥಳೀಯವಾಗಿ ಬಗೆಹರಿಸಬೇಕು ಎಂದು ಅವರು ಸೂಚಿಸಿದರು.
ಲೋಕೋಪಯೋಗಿ ಇಲಾಖೆ ರಾಷ್ಟ್ರೀಯ ಹೆದ್ದಾರಿ ವಿಭಾಗದ ಅಧಿಕಾರಿ ಶಿವಪ್ರಸಾದ್ ಅಜಿಲ ಮಾತನಾಡಿ, ಇಲ್ಲಿ ಸುಗಮ ಸಂಚಾರಕ್ಕೆ ಬೇಕಾದ ತಾತ್ಕಾಲಿಕ ಕಾಮಗಾರಿಗಳನ್ನು ನಡೆಸಲಾಗಿದೆ. ಗುರುವಾಯನಕೆರೆ – ಉಜಿರೆ ವರೆಗೆ 9 ಕಿ.ಮೀ ಸರ್ವಿಸ್ ರಸ್ತೆಯು ಯೋಜನೆಯಲ್ಲಿದೆ. ಪ್ರಸ್ತುತ ಸುಗಮ ಸಂಚಾರಕ್ಕೆ ಅಡ್ಡಿಯಾಗಿದ್ದ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಲಾಗಿದೆ ಎಂದು ಮಾಹಿತಿ ನೀಡಿದರು.
ದಕ್ಷಿಣ ಕನ್ನಡ ಜಿಲ್ಲೆಯ ಸೇವೆ ಮಾಡುವ ಅವಕಾಶ ಸಿಕ್ಕಿದೆ
ದಕ್ಷಿಣ ಕನ್ನಡದ ಜಿಲ್ಲೆಯ ಅಭಿವೃದ್ಧಿಗೆ ಸಾಕಷ್ಟು ಅವಕಾಶಗಳಿದ್ದು, ಈ ನಿಟ್ಟಿನಲ್ಲಿ ಜಿಲ್ಲೆಯ ಸೇವಕನಾಗಿ ಕೆಲಸ ಮಾಡುವ ಅವಕಾಶ, ಶಕ್ತಿ ಹಾಗೂ ಬಹುದೊಡ್ಡ ಜವಾಬ್ದಾರಿ ದೊರೆತಿದೆ ಎಂದು ದಕ್ಷಿಣ ಕನ್ನಡ ನೂತನ ಸಂಸದ ಬ್ರಿಜೇಶ್ ಚೌಟ ಹೇಳಿದ್ದಾರೆ.
ಮಂಗಳೂರು ಮಹಾನಗರ ಪಾಲಿಕೆ ಕಚೇರಿಯಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು. ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ ನನ್ನಂತ ಸಾಮಾನ್ಯ ವ್ಯಕ್ತಿಗೆ ಸಂಸತ್ ಸದಸ್ಯನಾಗಲು ಸಾಧ್ಯವಾಗಿದ್ದರೆ ಅದಕ್ಕೆ ಪ್ರಜಾಪ್ರಭುತ್ವದ ಶಕ್ತಿ ಕಾರಣವಾಗಿದೆ. ಮತದಾರರು ನನ್ನ ಮೇಲೆ ಇಟ್ಟಿರುವ ನಂಬಿಕೆ, ನನ್ನ ಪಕ್ಷದ ನಾಯಕರು ಹಾಗೂ ಕಾರ್ಯಕರ್ತರ ಪ್ರೀತಿ, ಸರ್ಕಾರ ಮತ್ತು ಶ್ರಮ, ತುಳುನಾಡಿನ ದೈವಮ ದೇವರ ಆಶಿರ್ವಾದ ಕಾರಣವಾಗಿದೆ. ಜನಪ್ರತಿನಿಧಿಯಾಗಿ ನನಗೆ ಏನು ಅನುಭವವಿಲ್ಲ. ಇನ್ನೂ ಕಲಿಯುವುದು ಬಹಳಷ್ಟು ಇದೆ ಎಂದರು.
ವಿಕಸಿತ ದಕ್ಷಿಣ ಕನ್ನಡ ಜಿಲ್ಲೆಯ ಕನಸು ನನ್ನದಾಗಿದೆ. ಮಂಗಳೂರು ನಗರದ ಅಭಿವೃದ್ಧಿಗೆ ಕೇಂದ್ರ ಸರ್ಕಾರದ ಅನುದಾನವನ್ನು ದೊರಕಿಸಿ ಕೊಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ. ಮೊದಲ ಪ್ರಗತಿ ಪರಿಶೀಲನಾ ಸಭೆ ನಡೆಸಿ ಅನುಷ್ಠಾನ ಹಂತದಲ್ಲಿರುವ ಯೋಜನೆಗಳ ವಿವರ, ಅಭಿವೃದ್ಧಿ ಕಾಮಗಾರಿಗಳ ಅನುಷ್ಠಾನಕ್ಕೆ ಎದುರಾಗಿರುವ ಅಡೆ-ತಡೆಗಳ ಬಗ್ಗೆ ವಿವರ ಪಡೆಯುವುದಾಗಿ ಹೇಳಿದರು.
ನಗರ ಅಭಿವೃದ್ಧಿಗೆ ಯೋಜನೆ ತಯಾರಿಸುವ ಹಂತದಲ್ಲಿ ಒಂದೇ ಮುಖದ ಬಗ್ಗೆ ಚಿಂತನೆ ಸರಿಯಲ್ಲ. ಹಾಗೆ ಮಾಡಿದರೆ ಅದು ಐತಿಹಾಸಿಕ ಪ್ರಮಾದವಾಗುತ್ತದೆ. ನಗರದ ಅಭಿವೃದ್ಧಿಗೆ ಸರ್ವತೋಮುಖ ಯೋಜನೆ ಅಗತ್ಯ ಎಂದರು.
ಕಾರ್ಗಿಲ್ ವಿಜಯೋತ್ಸವಕ್ಕೆ 25 ವರ್ಷಗಳಾಗುತ್ತಿರುವ ಈ ಸಂದರ್ಭದಲ್ಲಿ ಮಂಗಳೂರಿನಲ್ಲಿ ಉತ್ತಮವಾದ ಯುದ್ಧ ಸ್ಮಾರಕವಾಗಬೇಕು ಎಂದು ಹೇಳಿದರು.
ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು ಅಧ್ಯಕ್ಷತೆ ವಹಿಸಿದ್ದರು. ಪಾಲಿಕೆ ಸದಸ್ಯರಿಂದ ಚೌಟ ಅವರನ್ನು ಅಭಿನಂದಿಸಲಾಯಿತು.