- ಕರಾವಳಿ ಜಿಲ್ಲೆಗಳಲ್ಲಿ ಜೂ.1ರಿಂದ ಜು.31ವರೆಗೆ ಮೀನುಗಾರಿಕೆ ನಿಷೇಧ!
- ಮೀನು ಸಂತಾನೋತ್ಪತ್ತಿ ಸಮಯದಲ್ಲಿ ಮೀನುಗಾರಿಕೆ ಇಲ್ಲ
NAMMUR EXPRESS NEWS
ಮಂಗಳೂರು: ಎಂದಿನಂತೆ ಪಶ್ಚಿಮ ಕರಾವಳಿಯಲ್ಲಿ ಮೀನುಗಾರಿಕಾ ಋತು ಮುಕ್ತಾಯವಾಗಿದೆ. ಜಿಲ್ಲೆಗಳಲ್ಲಿ ಜೂ.1ರಿಂದ ಜು.31ರ ವರೆಗೆ ಆಳಸಮುದ್ರ ಮೀನುಗಾರಿಕೆಗೆ ನಿಷೇಧ ಹೇರಲಾಗಿದೆ. ಈ ಹಿನ್ನೆಲೆಯಲ್ಲಿ ಮೀನಿನ ದರ ಗಗನಕ್ಕೇರುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.
ಕರ್ನಾಟಕದ ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡಗಳಲ್ಲಿ ಮೀನುಗಾರಿಕೆ ಪ್ರಮುಖ ಉದ್ಯಮ. ಮೀನುಗಾರಿಕಾ ಋತುವಿನಲ್ಲಿ ಸಾವಿರಾರು ಕೋಟಿ ವಹಿವಾಟು ನಡೆಯುವ ಈ ಉದ್ಯಮದಲ್ಲಿ ವರ್ಷದಲ್ಲಿ ಎರಡು ತಿಂಗಳ ರಜಾ ಅವಧಿ ಇರುತ್ತದೆ. ಪ್ರತಿ ವರ್ಷ ಆಗಸ್ಟ್ ತಿಂಗಳಿಂದ ಮೇ ತಿಂಗಳವರೆಗೆ ಪಶ್ಚಿಮ ಕರಾವಳಿಯಲ್ಲಿ ಮೀನುಗಾರಿಕೆ ಮಾಡಲು ಅವಕಾಶ ಇರುತ್ತದೆ.ಈ ಸಂದರ್ಭದಲ್ಲಿ ಪಶ್ಚಿಮ ಕರಾವಳಿಯಿಂದ ಸಾವಿರಾರು ಮೀನುಗಾರಿಕಾ ಬೋಟ್ಗಳು ಆಳ ಸಮುದ್ರ ಮೀನುಗಾರಿಕೆ ನಡೆಸುತ್ತವೆ. ಆಳ ಮೀನುಗಾರಿಕಾ ಉದ್ಯಮಕ್ಕೆ ಜೂನ್ ಮತ್ತು ಜುಲೈ ತಿಂಗಳು ರಜಾ ಅವಧಿಯಾಗಿದೆ. ಈ ಅವಧಿಯಲ್ಲಿ ಮೀನುಗಾರಿಕೆ ನಡೆಸದಂತೆ ಸರ್ಕಾರ ನಿಷೇಧ ವಿಧಿಸುತ್ತದೆ.
ಜೂನ್ 1 ರಿಂದ 61 ದಿನಗಳ ಕಾಲ ನಿಷೇಧ ಹೇರಲಾಗುತ್ತದೆ. ಈ ಅವಧಿಯಲ್ಲಿ ಆಳ ಸಮುದ್ರ ಮೀನುಗಾರಿಕೆ ನಡೆಸುವ ಡೀಪ್ ಸೀ ಬೋಟ್ ಮತ್ತು ಪರ್ಸಿನ್ ಬೋಟ್ಗಳು ಮೀನುಗಾರಿಕೆಗೆ ತೆರಳುವಂತಿಲ್ಲ. ಬೋಟ್ಗಳನ್ನು ಆಯಾ ಬಂದರುಗಳಲ್ಲಿ ಮತ್ಸೋದ್ಯಮಿಗಳು ಲಂಗರು ಹಾಕುತ್ತಾರೆ.
ಮಳೆಗಾಲದ ಆರಂಭದ ಎರಡು ತಿಂಗಳ ಅವಧಿಯಲ್ಲಿ ಮೀನುಗಳು ಸಂತಾನೋತ್ಪತ್ತಿ ಮಾಡುವ ಸಮಯವಾಗಿರುತ್ತದೆ. ಮೀನುಗಳು ಈ ಅವಧಿಯಲ್ಲಿ ಮೊಟ್ಟೆಯನ್ನಿಡುವುದರಿಂದ ಅವುಗಳ ಸಂತತಿ ಹೆಚ್ಚಲಿದೆ. ಈ ಸಂದರ್ಭದಲ್ಲಿ ಮೀನುಗಾರಿಕೆ ನಡೆಸಿದರೆ ಮೀನುಗಳ ಸಂತತಿ ಕಡಿಮೆ ಆಗಿ ಮತ್ಸ್ಯ ಕ್ಷಾಮ ಆಗುವ ಸಾಧ್ಯತೆ ಇದೆ. ಇದರ ಜೊತೆಗೆ ಮಳೆಗಾಲದ ಆರಂಭದ ಈ ಅವಧಿಯಲ್ಲಿ ಅರಬ್ಬಿ ಸಮುದ್ರ ರೌದ್ರಾವತಾರ ತಾಳಿರುತ್ತದೆ. ಭಾರಿ ಗಾತ್ರದ ಅಲೆಗಳು ಮತ್ತು ಸಮುದ್ರದ ರೌದ್ರಾವತಾರ ಮೀನುಗಾರರಿಗೆ ಮತ್ತು ಮೀನುಗಾರಿಕೆ ಬೋಟ್ಗಳಿಗೆ ಅಪಾಯ ಉಂಟು ಮಾಡುತ್ತದೆ. ಈ ಕಾರಣದಿಂದಾಗಿ ಮೀನುಗಾರರು ಈ ಅವಧಿಯಲ್ಲಿ ಮೀನುಗಾರಿಕೆಗೆ ತೆರಳದೆ ರಜೆಯಲ್ಲಿರುತ್ತಾರೆ.
ಮೀನುಗಾರಿಕಾ ನಿಷೇಧದ ಹಿನ್ನೆಲೆಯಲ್ಲಿ ಬಹುತೇಕ ಯಾಂತ್ರಿಕ ಬೋಟುಗಳು ಮಂಗಳೂರು ದಕ್ಕೆಯಲ್ಲಿ ಲಂಗರು ಹಾಕಿವೆ. ಇದರಿಂದಾಗಿ ಎರಡು ತಿಂಗಳ ಕಾಲ ಮೀನು ಪ್ರಿಯರಿಗೆ ಸಮಸ್ಯೆಗಳು ಎದುರಾಗಲಿವೆ.
ಮೀನುಗಾರಿಕೆಗೆ ನಿಷೇಧ ಇರುವುದರಿಂದ ಮೀನು ಮಾರಾಟ ಶೇ.20-30ರಷ್ಟು ಕಡಿಮೆಯಾಗುವ ಸಾಧ್ಯತೆಗಳಿವೆ. ಅಲ್ಲದೆ, ಮತ್ತೊಂದೆಡೆ ಬೇಡಿಕೆ ಹೆಚ್ಚಾಗಿ ಪೂರೈಕೆ ಕಡಿಮೆ ಇರುವುದರಿಂದ ಮೀನಿನ ದರ ಕೂಡ ಗಗನಕ್ಕೇರುವ ಸಾಧ್ಯತೆಗಳಿವೆ.
ಮಂಗಳೂರು, ಒಡಿಶಾ, ಮಹಾರಾಷ್ಟ್ರ, ಗೋವಾ ಮತ್ತು ಇತರ ಕರಾವಳಿ ಪ್ರದೇಶಗಳಿಂದ ನಿಯಮಿತವಾಗಿ 500 ರಿಂದ 600 ಕೆಜಿ ಮೀನುಗಳನ್ನು ಖರೀದಿ ಮಾಡಲಾಗುತ್ತದೆ. ನಿಷೇಧದ ಸಮಯದಲ್ಲಿ ಕೇವಲ 200 ರಿಂದ 250 ಕೆಜಿ ಮೀನುಗಳಷ್ಟೇ ಪಡೆಯಲು ಸಾಧ್ಯವಾಗುತ್ತದೆ. ಈ ಅವಧಿಯಲ್ಲಿ ಬೆಲೆಗಳೂ ಕೂಡ ಹೆಚ್ಚಾಗಿರುತ್ತದೆ.
ಕಾರ್ಕಳದಲ್ಲಿ ಮೀನು ಲಾರಿ ಅಪಘಾತ
ಮೀನು ಸಾಗಿಸುತ್ತಿದ್ದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿಯಾದ ಘಟನೆ ನಲ್ಲೂರು ಪರಪ್ಪಾಡಿಯಲ್ಲಿ ನಡೆದಿದ್ದು, ಈ ಘಟನೆಯಲ್ಲಿ ಇಬ್ಬರಿಗೆ ಗಂಭೀರ ಗಾಯಗಳಾಗಿವೆ.
ಮಲ್ಪೆ ಕಡೆಯಿಂದ ಬೆಂಗಳೂರಿಗೆ ಮೀನು ಸಾಗಿಸುತ್ತಿದ್ದ ಲಾರಿ ಪಾಜೆಗುಡ್ಡೆ ಇಳಿಜಾರಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿಯಾಗಿದೆ. ಬಿದ್ದ ರಭಸಕ್ಕೆ ಲಾರಿಯಲ್ಲಿದ್ದ ಮೀನುಗಳು ಚೆಲ್ಲಾಪಿಲ್ಲಿಯಾಗಿ ಬಿದ್ದುಕೊಂಡಿದೆ.ಈ ವಾಹನದಲ್ಲಿ ಚಾಲಕ ಸೇರಿದಂತೆ ಮೂವರಿದ್ದು, ಅವರಲ್ಲಿ ಇಬ್ಬರಿಗೆ ಗಂಭೀರ ಗಾಯಗಳಾಗಿವೆ. ಮೂವರಲ್ಲಿ ಓರ್ವನನ್ನು ಶೃಂಗೇರಿ ಮೂಲದ ನಯಾಜ್ ಅಹಮದ್ ಎಂದು ಗುರುತಿಸಲಾಗಿದೆ. ಗಾಯಾಳುಗಳನ್ನು ಗ್ರಾಮ ಪಂಚಾಯತ್ ನ ಸದಸ್ಯ ಸುಮಿತ್ ನಲ್ಲೂರು ಸೇರಿದಂತೆ ಸ್ಥಳೀಯರು ಕಾರ್ಕಳ ಆಸ್ಪತ್ರೆಗೆ ದಾಖಲಿಸಿದ್ದಾರೆ