- ಆಗಸ್ಟ್ನಿಂದ ಮಹಿಳೆಯರಿಗೆ ಕೋಣ ಓಡಿಸುವ ತರಬೇತಿ
- ದಕ್ಷಿಣ ಕನ್ನಡ ಕಂಬಳ ಅಕಾಡೆಮಿಯಿಂದ ಮಹತ್ವದ ಪ್ರಯೋಗ
NAMMUR EXPRESS NEWS
ಮಂಗಳೂರು: ದಕ್ಷಿಣ ಕನ್ನಡ ಕಂಬಳ ಅಕಾಡೆಮಿಯಿಂದ ಮಹತ್ವದ ಪ್ರಯೋಗವೊಂದಕ್ಕೆ ಸಿದ್ಧತೆ ನಡೆದಿದೆ.
ಕರಾವಳಿಯ ಪ್ರಮುಖ ಕ್ರೀಡೆ ಕಂಬಳದಲ್ಲಿ ಮಹಿಳೆಯರು ಕೂಡ ಕೋಣಗಳನ್ನು ಓಡಿಸಲು ತರಬೇತಿ ಶುರುವಾಗಲಿದೆ.
ಈಗ ಪುರುಷರಷ್ಟೇ ಕಂಬಳದ ಕೋಣಗಳನ್ನು ಓಡಿಸುತ್ತಿದ್ದರು. ಇನ್ನು ಮಹಿಳೆಯರು ಈ ಕ್ಷೇತ್ರಕ್ಕೂ ಇಳಿಯಲಿದ್ದಾರೆ. ಮೊದಲ ಬಾರಿಗೆ ಮಹಿಳೆಯರು ಕಂಬಳದ ಕೋಣಗಳನ್ನು ಓಡಿಸಲಿದ್ದು, ಅವರಿಗೆ ತರಬೇತಿ ನೀಡಲು ದಕ್ಷಿಣ ಕನ್ನಡ ಕಂಬಳ ಅಕಾಡೆಮಿ ಸಿದ್ಧತೆ ನಡೆಸಿದೆ. ಆಗಸ್ಟ್ನಲ್ಲಿಮಹಿಳೆಯರಿಗೆ ತರಬೇತಿ ಪ್ರಾರಂಭವಾಗಲಿದೆ ಎಂದು ಮೂಲಗಳು ತಿಳಿಸಿವೆ.
ಕರ್ನಾಟಕ, ತಮಿಳುನಾಡು ಮತ್ತು ಮಹಾರಾಷ್ಟ್ರ ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆ-1960 ತಿದ್ದುಪಡಿಗಳನ್ನು ಸುಪ್ರೀಂ ಕೋರ್ಟ್ ಮಾನ್ಯ ಮಾಡಿ ಎತ್ತಿನಗಾಡಿ ಓಟದ ಜತೆಗೆ ಗೂಳಿ ಪಳಗಿಸುವ ಕ್ರೀಡೆಗಳಾದ ಜಲ್ಲಿಕಟ್ಟು ಮತ್ತು ಕಂಬಳಕ್ಕೆ ಅವಕಾಶ ನೀಡಿದೆ. ಈ ಹಿನ್ನೆಲೆಯಲ್ಲಿ ಕಂಬಳಕ್ಕೆ ಮತ್ತಷ್ಟು ರಂಗು ಬಂದಿದೆ.
ಕಂಬಳಕ್ಕೆ ಇದೀಗ ಕಾನೂನು ಮಾನ್ಯತೆ ಸಿಕ್ಕಿರುವುದರಿಂದ ಕಂಬಳ ಅಕಾಡೆಮಿ ಮಹಿಳೆಯರಿಗೆ ಕ್ರೀಡೆಯಲ್ಲಿ ತರಬೇತಿ ನೀಡಲು ಮುಂದೆ ಬಂದಿದೆ. 15 ರಿಂದ 20 ಮಹಿಳೆಯರು ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಉತ್ಸುಕರಾಗಿದ್ದಾರೆ.
ಮಹಿಳೆಯರು ತರಬೇತಿ ಪಡೆಯಲು ಉತ್ಸುಕ
ಕಂಬಳ ನಿರೂಪಕ, ತೀರ್ಪುಗಾರ ಮತ್ತು ಜಿಲ್ಲಾ ಕಂಬಳ ಸಮಿತಿಯ ಮಾಜಿ ಪ್ರಧಾನ ಕಾರ್ಯದರ್ಶಿ ವಿಜಯ್ ಕುಮಾರ್ ಕಂಗಿನಮನೆ ಈ ಬಗ್ಗೆ ಮಾಹಿತಿ ನೀಡಿದ್ದು
ನಾವು ಅನೇಕ ವರ್ಷಗಳಿಂದ ನಮ್ಮ ಅಕಾಡೆಮಿಯಲ್ಲಿ ಪುರುಷರಿಗೆ ತರಬೇತಿ ನೀಡುತ್ತಿದ್ದೇವೆ. ಕಂಬಳದಲ್ಲಿ ಭಾಗವಹಿಸಲು ಮಹಿಳೆಯರಿಗೂ ಅವಕಾಶ ನೀಡಲಾಗುತ್ತದೆ.ವೈದ್ಯಕೀಯ ಮತ್ತು ಫಿಟ್ಟೆಸ್ ಪರೀಕ್ಷೆಗಳಿಗೆ ಒಳಗಾದ ನಂತರ ಮಹಿಳೆಯರಿಗೆ ತರಬೇತಿ ನೀಡಲು ನಾವು ತರಬೇತುದಾರರ ಸಹಾಯವನ್ನು ಪಡೆಯುತ್ತೇವೆ. ಎಲ್ಲ ಸುರಕ್ಷತಾ ಮಾನದಂಡಗಳು ಮತ್ತು ಡ್ರೆಸ್ ಕೋಡ್ಗಳನ್ನು ಅನುಸರಿಸಲಾಗುವುದು ಎಂದು ಹೇಳಿದ್ದಾರೆ