ಮೈಸೂರು ದಸರಾಗೆ ಕ್ಷಣಗಣನೆ..ಸಜ್ಜಾದವು ಆನೆ!
- ಅದ್ದೂರಿ ದಸರಾಗೆ ಚಾಲನೆ: ರಾಷ್ಟ್ರಪತಿ ಆಗಮನ
- 2 ವರ್ಷದಿಂದ ನಿಂತಿದ್ದ ದಸರಾ ಈ ವರ್ಷ ಜೋರು
- ಶೃಂಗೇರಿ, ಮಂಗಳೂರು ಸೇರಿ ರಾಜ್ಯದಲ್ಲಿ ಹಬ್ಬ
NAMMUR EXPRESS NEWS
ಮೈಸೂರು/ಬೆಂಗಳೂರು: ವಿಶ್ವ ವಿಖ್ಯಾತ ನಾಡಹಬ್ಬ ಮೈಸೂರು ದಸರಾಕ್ಕೆ ಕ್ಷಣಗಣನೆ ಆರಂಭವಾಗಿದೆ. ಜೊತೆಗೆ ರಾಜ್ಯದ ಮಂಗಳೂರು, ಶೃಂಗೇರಿ, ಸಿಗಂದೂರು, ಹೊರನಾಡು, ಧರ್ಮಸ್ಥಳ ಸೇರಿ ರಾಜ್ಯದ ಪ್ರತಿ ಊರಲ್ಲೂ ದಸರಾ ಸಂಭ್ರಮ ಶುರುವಾಗಲಿದೆ.
ಮೈಸೂರಲ್ಲಿ ಸೋಮವಾರ ದಸರಾಗೆ ಚಾಲನೆ ಸಿಗಲಿದ್ದು ರಾಷ್ಟ್ರಪತಿ ದ್ರೌಪದಿ ಮುರ್ಮು ಉದ್ಘಾಟನೆ ಮಾಡಲಿದ್ದಾರೆ. ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ಜಂಬೂ ಸವಾರಿ ಮೆರವಣಿಗೆಗೆ ದಿನ ಗಣನೆ ಆರಂಭವಾಗಿದೆ. ಈ ಬಾರಿ ಜಂಬೂ ಸವಾರಿ ಮೆರವಣಿಗೆ ವಿದ್ಯುತ್ ದೀಪಾಲಂಕಾರದ ನಡುವೆ ಸಾಗಲಿರುವುದು ವಿಶೇಷ. ಮೆರವಣಿಗೆಗಾಗಿ ಕ್ಯಾಪ್ಟನ್ ಅಭಿಮನ್ಯು ಮತ್ತು ಟೀಂ ಭರ್ಜರಿ ತಾಲೀಮು ನಡೆಸುತ್ತಿವೆ.
2 ವರ್ಷದಿಂದ ಕರೋನಾದಿಂದ ದಸರಾ ಮಹೋತ್ಸವದ ಸಂಭ್ರಮ ಮಂಕಾಗಿ ಹೋಗಿದ್ದು, ದಸರಾ ಮಹೋತ್ಸವದ ಎಲ್ಲಾ ಸಾಂಸ್ಕೃತಿಕ ಕಾರ್ಯಕ್ರಮಗಳು ರದ್ದಾಗಿದ್ದವು. ಅಲ್ಲದೇ ದಸರಾ ಪ್ರಮುಖ ಆಕರ್ಷಣೆಯಾದ ಜಂಬೂ ಸವಾರಿ ಮೆರವಣಿಗೆ ಕೇವಲ ಅರಮನೆ ಆವರಣಕ್ಕೆ ಮಾತ್ರ ಸೀಮಿತವಾಗಿತ್ತು. ಪ್ರತಿ ವರ್ಷದಂತೆ ಈ ಬಾರಿಯೂ ಅರಮನೆಯ ಆವರಣದಿಂದ ಬನ್ನಿಮಂಟಪದವರೆಗೆ ಸಾಗಲಿದೆ. ಮೂರನೇ ಬಾರಿಗೆ ಅಂಬಾರಿ ಹೊರುತ್ತಿರುವ ಅಭಿಮನ್ಯು 6.30 ಕಿಲೋಮೀಟರ್ ಜಂಬೂಸವಾರಿ ಮೆರವಣಿಗೆಯಲ್ಲಿ ಗಾಂಭೀರ್ಯದ ರಾಜನಡಿಗೆ ಹಾಕಲಿದ್ದಾನೆ. ಸಂಜೆ 5 ಗಂಟೆ 7ನಿಮಿಷದಿಂದ 5.18ರ ವರೆಗೆ ಸಲ್ಲುವ ಶುಭ ಮೀನಾ ಲಗ್ನದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಗಣ್ಯರು ಅಂಬಾರಿಯಲ್ಲಿ ಕೂತ ನಾಡದೇವತೆ ಚಾಮುಂಡೇಶ್ವರಿಗೆ ಪುಷ್ಪಾರ್ಚಾನೆ ಸಲ್ಲಿಸಿ, ಜಂಬೂ ಸವಾರಿ ಮೆರವಣಿಗೆ ಚಾಲನೆ ನೀಡಲಿದ್ದಾರೆ.
ರಾಷ್ಟ್ರಪತಿ ಭೇಟಿ ಹಿನ್ನೆಲೆಯಲ್ಲಿ ಬೆಳಿಗ್ಗೆ 11.30ರಿಂದ ಸಾರ್ವಜನಿಕರಿಗೆ ಚಾಮುಂಡಿ ಬೆಟ್ಟದಲ್ಲಿ ದೇವರ ದರ್ಶನಕ್ಕೆ ನಿರ್ಬಂಧ ವಿಧಿಸಲಾಗಿದೆ. ಉದ್ಘಾಟನಾ ಕಾರ್ಯಕ್ರಮ ಮುಗಿದ ನಂತರ ಎಂದಿನಂತೆ ದರ್ಶನಕ್ಕೆ ಅವಕಾಶ ಇರಲಿದೆ ಎಂದು ಜಿಲ್ಲಾಧಿಕಾರಿ ಡಾ.ಬಗಾದಿ ಗೌತಮ್ ಮಾಹಿತಿ ನೀಡಿದ್ದಾರೆ.