ಬ್ಯಾಂಕಿಂಗ್ ಕಾಯ್ದೆ ತಿದ್ದುಪಡಿ ಮಸೂದೆಗೆ ಸೂಚನೆ
– ಲೋಕಸಭೆಯಲ್ಲಿ ಈ ಮಸೂದೆ ಅಂಗೀಕಾರ
– ಬ್ಯಾಂಕ್ ಖಾತೆದಾರರಿಗೆ 4 ನಾಮಿನಿ ಗೆ ಅವಕಾಶ
NAMMUR EXPRESS NEWS
ನವದೆಹಲಿ: ಬ್ಯಾಂಕಿಂಗ್ ಕಾನೂನುಗಳ (ತಿದ್ದುಪಡಿ) ಮಸೂದೆ 2024ರ ಮೂಲಕ ಪ್ರಸ್ತಾಪಿಸಲಾದ ಬದಲಾವಣೆ ಗಳು ಬ್ಯಾಂಕಿಂಗ್ ವಲಯದ ಆಡಳಿತ ಬಲಪಡಿಸಲಿದೆ ಮತ್ತು ಗ್ರಾಹಕರ ಅನುಕೂಲತೆ ಹೆಚ್ಚಿಸಲಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಲೋಕಸಭೆಯ ಪರಿಗಣನೆಗೆ ಮತ್ತು ಅಂಗೀಕಾರಕ್ಕಾಗಿ ಮಸೂದೆ ಮಂಡಿಸಿದ ಸಚಿವರು, ಭಾರತೀಯ ರಿಸರ್ವ್ ಬ್ಯಾಂಕ್ ಕಾಯ್ದೆ-1934, ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆ-1949, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಕಾಯ್ದೆ, ಬ್ಯಾಂಕಿಂಗ್ ಕಂಪನಿಗಳು (ಸ್ವಾಧೀನ ಮತ್ತು ವರ್ಗಾವಣೆ) ಕಾಯ್ದೆ-1970 ಮತ್ತು ಬ್ಯಾಂಕಿಂಗ್ ಕಂಪನಿಗಳು (ಸ್ವಾಧೀನ ಮತ್ತು ವರ್ಗಾವಣೆ) ಕಾಯ್ದೆ-1980ರಲ್ಲಿ ಬದಲಾವಣೆಗಳನ್ನು ತರಲು ಒಟ್ಟು 19 ತಿದ್ದುಪಡಿಗಳನ್ನು ಪ್ರಸ್ತಾಪಿಸಲಾಗಿದೆ ಎಂದು ಹೇಳಿದರು.
ಬ್ಯಾಂಕ್ ಖಾತೆದಾರರು ತಮ್ಮ ಖಾತೆಯಲ್ಲಿ ನಾಲ್ಕು ನಾಮಿನಿಗಳನ್ನು ಹೊಂದಲು ಈ ಮಸೂದೆ ಪ್ರಸ್ತಾಪಿಸುತ್ತದೆ.
ಒಟ್ಟಾರೆ ಹೂಡಿಕೆದಾರರ ಹಿತಾಸಕ್ತಿಗಳನ್ನು ಕಾಪಾಡುವ ಹಲವು ಅಂಶಗಳು ಈ ಮಸೂದೆಯಲ್ಲಿವೆ. ಬ್ಯಾಂಕಿಂಗ್ ಕ್ಷೇತ್ರವು ವರ್ಷಗಳಲ್ಲಿ ವಿಕಸನಗೊಂಡಿರುವುದರಿಂದ ಮತ್ತು ಬ್ಯಾಂಕ್ ಆಡಳಿತ, ಹೂಡಿಕೆದಾರರ ರಕ್ಷಣೆಯನ್ನು ಸುಧಾರಿಸುವ ದೃಷ್ಟಿಯಿಂದ ಐದು ಕಾಯ್ದೆಗಳಿಗೆ ಕೆಲವು ತಿದ್ದುಪಡಿಗಳನ್ನು ಮಾಡುವುದು ಅಗತ್ಯವಾಗಿದೆ ಎಂದು ಸಚಿವರು ಮಾಹಿತಿ ಹಂಚಿಕೊಂಡಿದ್ದಾರೆ. ಬ್ಯಾಂಕಿಂಗ್ ಕಾನೂನುಗಳ (ತಿದ್ದುಪಡಿ) ಮಸೂದೆ, 2024ನ್ನು ಲೋಕಸಭೆ ಅಂಗೀಕರಿಸಿದೆ. ಬ್ಯಾಂಕ್ ಖಾತೆದಾರರಿಗೆ ನಾಲ್ಕು ಫಲಾನುಭವಿಗಳನ್ನು ನಾಮ ನಿರ್ದೇಶನ ಮಾಡುವ ನಿಬಂಧನೆಗಳನ್ನು ಈ ಕಾಯ್ದೆ ಪರಿಚಯಿಸಿದೆ. ಸಂವಿಧಾನದ (97ನೇ ತಿದ್ದುಪಡಿ) ಕಾಯ್ದೆ-2011ಕ್ಕೆ ಅನುಗುಣವಾಗಿ, ಅಧ್ಯಕ್ಷ ಮತ್ತು ಪೂರ್ಣಾವಧಿಯ ನಿರ್ದೇಶಕರನ್ನು ಹೊರತುಪಡಿಸಿ ಸಹಕಾರಿ ಬ್ಯಾಂಕ್ಗಳಲ್ಲಿನ ನಿರ್ದೇಶಕರ ಅಧಿಕಾರಾವಧಿಯನ್ನು 8 ರಿಂದ 10 ವರ್ಷಗಳವರೆಗೆ ವಿಸ್ತರಿಸಲು ತಿದ್ದುಪಡಿ ಪ್ರಸ್ತಾಪಿಸಿದೆ. ಕೇಂದ್ರ ಸಹಕಾರಿ ಬ್ಯಾಂಕ್ಗಳ ನಿರ್ದೇಶಕರು ರಾಜ್ಯ ಸಹಕಾರಿ ಬ್ಯಾಂಕ್ಗಳಲ್ಲಿ ಮಂಡಳಿಯ ಸ್ಥಾನಗಳನ್ನು ಹೊಂದಲು ಅನುಮತಿ ನೀಡಲೂ ಮಸೂದೆ ಪ್ರಸ್ತಾಪಿಸಿದೆ.