ಜೈ ಭಾರತ್…ವಿಕಸಿತ ಭಾರತವೇ ನಮ್ಮ ಹೆಜ್ಜೆ!
– ಕೆಂಪುಕೋಟೆಯಲ್ಲಿ ಮೊಳಗಿದ ಮೋದಿ ಭಾಷಣ
– ದೇಶದ ಮನೆ ಮನೆಯಲ್ಲಿ ಮೊಳಗಿದ ದೇಶ ಪ್ರೇಮ
– ಸತತ 11ನೇ ಭಾರಿಗೆ ಧ್ವಜಾರೋಹಣ ಮಾಡಿದ ಮೋದಿ
NAMMUR EXPRESS NEWS
ನವ ದೆಹಲಿ: 78ನೇ ಸ್ವಾತಂತ್ರೋತ್ಸವ ನಿಮಿತ್ತ ಪ್ರಧಾನಿ ಮೋದಿಯವರು ದೆಹಲಿಯ ಕೆಂಪುಕೋಟೆಯಲ್ಲಿ ಧ್ವಜಾರೋಹಣ ಮಾಡಿದರು. ಕೆಂಪುಕೋಟೆಗೆ ಆಗಮಿಸಿದ ಪ್ರಧಾನಿ ಮೋದಿಗೆ ಮೂರು ಸೇನಾಪಡೆಗಳು ಗೌರವ ಸಲ್ಲಿಸಿದವು. ಇದಕ್ಕೂ ಮುನ್ನ ರಾಜ್ಘಾಟ್ಗೆ ತೆರಳಿ ಮೋದಿ ನಮನ ಸಲ್ಲಿಸಿದರು.
ಕೆಂಪುಕೋಟೆಯ ಮೇಲೆ ಹಾರಾಡಿದ ತ್ರಿವರ್ಣ ಧ್ವಜಕ್ಕೆ ಸೇನಾ ಹೆಲಿಕಾಪ್ಟರ್ನಿಂದ ಹೂಮಳೆಗೈದು ಗೌರವ ಸೂಚಿಸಲಾಯಿತು. ನರೇಂದ್ರ ಮೋದಿಯವರು ಸತತ 11ನೇ ಭಾರಿಗೆ ಸ್ವಾತಂತ್ರೋತ್ಸವ ಧ್ವಜಾರೋಹಣ ಮಾಡಿದ್ದು ಇದಕ್ಕೂ ಮುನ್ನ ಭಾರತೀಯರಿಗೆ ಸ್ವಾತಂತ್ರ್ಯ ದಿನದ ಶುಭಾಶಯವನ್ನ ತಮ್ಮ ಸೋಷಿಯಲ್ ಮೀಡಿಯಾ ಮೂಲಕ ತಿಳಿಸಿದ್ದರು. ಹಾಗೇ, ದೆಹಲಿ ಕೆಂಪುಕೋಟೆಯಲ್ಲಿ ಧ್ವಜಾರೋಹಣ ನೆರವೇರಿಸಿದ ಬಳಿಕ ಪ್ರಧಾನಿ ಮೋದಿ ದೇಶವನ್ನ ಉದ್ದೇಶಿಸಿ ಮಾತನಾಡಿದರು.
ಮೊದಲು ಸ್ವಾತಂತ್ರ್ಯ ಹೋರಾಟಗಾರರನ್ನ ಸ್ಮರಿಸಿ, ಗೌರವ ಸಲ್ಲಿಸಿದ ಪ್ರಧಾನಿ ಮೋದಿ, ಭಾರತದ ಭವಿಷ್ಯ ಗುರಿಯ ಬಗ್ಗೆ ಮಾತನಾಡಿದರು. 2047ರ ಹೊತ್ತಿಗೆ ಭಾರತ ವಿಕಸಿತ ಭಾರತವಾಗಿ ಪರಿವರ್ತನೆ ಆಗುತ್ತದೆ ಎಂಬ ಬಲವಾದ ಆತ್ಮವಿಶ್ವಾಸ ತಮಗೆ ಇರುವುದಾಗಿ ತಿಳಿಸಿದರು. 40 ಕೋಟಿ ಭಾರತೀಯರು ಸೇರಿ ಗುಲಾಮಗಿರಿಯ ಸರಪಳಿಯನ್ನ ಮುರಿದು ಭಾರತಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದಾರೆ ಎಂದಾದ ಮೇಲೆ, 140 ಕೋಟಿ ಭಾರತೀಯರಿಂದ ‘ವಿಕಸಿತ ಭಾರತ’ ನಿರ್ಮಾಣ ಮಾಡಲು ಸಾಧ್ಯವಿಲ್ಲವೇ? ಎಂದೂ ಅವರು ಪ್ರಶ್ನೆ ಮಾಡಿದರು.
ವಿಕಸಿತ ಭಾರತ ನಿರ್ಮಾಣ
ವಿಕಸಿತ ಭಾರತ ನಿರ್ಮಾಣ ಬರೀ ಒಂದು ವಾಕ್ಯವಲ್ಲ.. ಮಾತೂ ಅಲ್ಲ. ಇದು 140 ಕೋಟಿ ಜನರ ಕನಸು. ಅದರ ಸಾಕಾರಕ್ಕೆ ಜನರೇ ಮುಂದಾಗಿದ್ದಾರೆ. ವಿಕಸಿತ ಭಾರತ ಗುರಿಯನ್ನ ತಲುಪಲು ಉತ್ಸುಕರಾಗಿದ್ದಾರೆ. ಈಗಾಗಲೇ ಈ ಸಂಬಂಧ ಸರ್ಕಾರಕ್ಕೆ ಅನೇಕಾನೇಕರು ಸಲಹೆಗಳನ್ನ ಕೊಡುತ್ತಿದ್ದಾರೆ. ಆಡಳಿತದಲ್ಲಿ ಇನ್ನಷ್ಟು ಸಕಾರಾತ್ಮಕ ಬದಲಾವಣೆಗಳಾಗಬೇಕು, ಯಾವುದೇ ಅಪರಾಧಗಳು ನಡೆದಾಗ ತ್ವರಿತವಾಗಿ ನ್ಯಾಯ ತೀರ್ಮಾನ ಆಗಬೇಕು. ಪಾರಂಪರಿಕ ಅಥವಾ ಸಾಂಪ್ರದಾಯಿಕ ಔಷಧಿಗಳಿಗೆ ಪ್ರಚಾರ ಸಿಗಬೇಕು ಎಂಬಿತ್ಯಾದಿ ಸಲಹೆಗಳು ಹೆಚ್ಚಾಗಿ ಬಂದಿದ್ದು ಅವೆಲ್ಲವನ್ನೂ ಪರಿಗಣಿಸಲಾಗುವುದು ಎಂದು ಪ್ರಧಾನಿ ಮೋದಿ ಹೇಳಿದರು.
ಲೋಕಲ್ ಫಾರ್ ವೋಕಾಲ್
ದೇಶೀಯ, ಸ್ಥಳೀಯ ಉತ್ಪನ್ನಗಳಿಗೆ ಆದ್ಯತೆ-ಮನ್ನಣೆ ಸಿಗಬೇಕು ಎಂದ ಕಾರಣಕ್ಕೆ ನಾವು ಶುರು ಮಾಡಿದ Vocal for Local ಯಶಸ್ವಿಯಾಗಿದೆ. ನಾವು ವೋಕಲ್ ಫಾರ್ ಲೋಕಲ್ ಎಂಬ ಮಂತ್ರವನ್ನ ಕೊಟ್ಟೆವು. ಇಂದು ಈ ಉಪಕ್ರಮ ಇಡೀ ಆರ್ಥಿಕತೆಯ ಮಂತ್ರವಾಗಿ ಮಾರ್ಪಾಡಾಗಿದೆ. ಇದು ಖುಷಿಕೊಟ್ಟ ವಿಷಯ. ಪ್ರತಿ ಜಿಲ್ಲೆಯಲ್ಲೂ ಕೂಡ ವೋಕಲ್ ಫಾರ್ ಲೋಕಲ್ ಅನುಷ್ಠಾನಕ್ಕೆ ಬಂದಿದೆ. ಸ್ಥಳೀಯ ಉತ್ಪನ್ನಗಳಿಗೆ ಆದ್ಯತೆ ಸಿಗುತ್ತಿದೆ. ಒಂದು ಜಿಲ್ಲೆ-ಒಂದು ಉತ್ಪನ್ನ ಅನ್ನುವಂಥ ವಾತಾವರಣ ಸೃಷ್ಟಿಯಾಗಿದೆ ಎಂದೂ ಪ್ರಧಾನಿ ಹೇಳಿದ್ದಾರೆ.
ಪ್ರಾಕೃತಿಕ ವಿಕೋದ ಬಗ್ಗೆ ಆತಂಕ
ದೆಹಲಿಯ ಕೆಂಪುಕೋಟೆಯಲ್ಲಿ ಮಾತನಾಡಿದ ಪ್ರಧಾನಿ ಮೋದಿ ಪ್ರಾಕೃತಿಕ ವಿಕೋಪಗಳ ಭೀಕರತೆಯ ಬಗ್ಗೆ ಆತಂಕ ವ್ಯಕ್ತಪಡಿಸಿದರು. ಕಳೆದ ಕೆಲವು ವರ್ಷಗಳಿಂದ ಮತ್ತು ಈ ವರ್ಷ ನಾವು ಪ್ರಾಕೃತಿಕ ವಿಕೋಪದಿಂದ ಸಂಕಷ್ಟಕ್ಕೀಡಾಗಬೇಕಾಯಿತು. ಇದರ ಭೀಕರತೆಗೆ ಅನೇಕ ಜನರು ನಲುಗಿದ್ದಾರೆ. ನೂರಾರು ಜನ ಪ್ರಾಣ ಕಳೆದುಕೊಂಡಿದ್ದಾರೆ. ಇಡೀ ದೇಶಕ್ಕೆ ನಷ್ಟವಾಗಿದೆ ಎಂದು ಹೇಳಿದರು. ಹಾಗೇ, ಸಂತ್ರಸ್ತರಿಗೆ ಸಾಂತ್ವನ ತಿಳಿಸಿ ನಿಮ್ಮೊಂದಿಗೆ ನಾವು ನಿಲ್ಲುತ್ತೇವೆ ಎಂಬ ಭರವಸೆಯನ್ನೂ ಕೊಟ್ಟರು..
ಡಿಜಿಟಲೀಕರಣದಿಂದ ಬ್ಯಾಂಕಿಂಗ್ ಕ್ಷೇತ್ರಕ್ಕೆ ಹೊಸ ಬಲ
ನಾವು ಆಯ್ದುಕೊಂಡ ಸುಧಾರಣೆ ಹಾದಿಯು ಪ್ರಗತಿಯ ನೀಲನಕ್ಷೆಯಾಗಿದೆ. ಬಡವರು, ಮಧ್ಯಮ ವರ್ಗ, ವಂಚಿತರು ಎಲ್ಲರಿಗೂ ತಳಮಟ್ಟದ ಸುಧಾರಣೆ ತಂದಿದ್ದೇವೆ. ಯುವಜನರ ಅಕಾಂಕ್ಷೆಗಾಗಿ ಅವರ ಜೀವನದಲ್ಲಿ ಸುಧಾರಣೆ ತರುವ ಹಾದಿ ಅಯ್ಕೆ ಮಾಡಿದ್ದೇವೆ. ಪ್ರವಾಸೋದ್ಯಮ, ಶಿಕ್ಷಣ, ಆರೋಗ್ಯ, ಎಂಎಸ್ಎಂಇ, ಸಾರಿಗೆ, ಕೃಷಿ- ಹೀಗೆ ಪ್ರತಿ ವಲಯದಲ್ಲು ಹೊಸ ಆಧುನಿಕ ವ್ಯವಸ್ಥೆಯನ್ನು ಸೃಷ್ಟಿಸಲಾಗುತ್ತಿದೆ. ತಂತ್ರಜ್ಞಾನದ ಸಮಗ್ರತೆಯ ಅತ್ಯುತ್ತಮ ಅಂಶಗಳನ್ನು ನಾವು ಅಳವಡಿಸಿಕೊಳ್ಳುವ ನಿಟ್ಟಿನಲ್ಲಿ ಸಾಗಬೇಕಿದೆ. ಈ ಹಿಂದೆ ಜನರು ಮೂಲ ಸೌಲಭ್ಯಗಳಿಗಾಗಿ ಸರ್ಕಾರವನ್ನು ಅಂಗಲಾಚಬೇಕಿತ್ತು. ಈಗ ಅವು ಅವರ ಮನೆಬಾಗಿಲಿಗೆ ಬರುತ್ತಿವೆ ಎಂದು ತಿಳಿಸಿದರು.
ಭಾರತ ಅಭಿವೃದ್ಧಿಯ ಪರ್ವ
ಕೊರೊನಾ ಅವಧಿಯಲ್ಲಿ ಹೋರಾಡಿದ್ದನ್ನು ಮರೆಯಲು ಹೇಗೆ ಸಾಧ್ಯ? ಭಾರತ ಇಡೀ ಜಗತ್ತಿನಲ್ಲಿಯೇ ಅತ್ಯಂತ ವೇಗವಾಗಿ ಕೋಟಿಗಟ್ಟಲೆ ಜನರಿಗೆ ಲಸಿಕೆಗಳನ್ನು ನೀಡಿದೆ. ಭಯೋತ್ಪಾದಕರು ಬಂದು ನಮ್ಮ ಮೇಲೆ ದಾಳಿ ನಡೆಸುತ್ತಿದ್ದಂತಹ ದೇಶ ಇದು. ಭಾರತೀಯ ಸೇನೆ ಸರ್ಜಿಕಲ್ ಹಾಗೂ ಏರ್ ಸಟ್ರೈಕ್ ಮಾಡುವಷ್ಟು ಬೆಳೆದಿದೆ. ಬಾಹ್ಯಾಕಾಶ ಹಾಗೂ ಸೇನೆಯಲ್ಲಿ ಅಗಾಧ ಬದಲಾವಣೆ ತರಲಾಗಿದೆ. ಭಾರತೀಯ ಸೇನೆ ಉಗ್ರರ ತಾಣಗಳಿಗೆ ನುಗ್ಗಿ ಹೊಡೆಯುತ್ತೆ. ನಮಗೆ ದೇಶ ಮೊದಲು ಇದು ನಮ್ಮ ಸಂಕಲ್ಪ. ಭಾರತದ ಶಕ್ತಿ ಏನೆಂದು ಇಡೀ ಜಗತ್ತಿಗೆ ಗೊತ್ತಿದೆ. ಸಶಸ್ತ್ರ ಪಡೆಗಳು ಸರ್ಜಿಕಲ್ ದಾಳಿಗಳನ್ನು ನಡೆಸಿದಾಗ, ವಾಯುದಾಳಿಗಳನ್ನು ಮಾಡಿದಾಗ ಯುವಜನರು ಹೆಮ್ಮೆಪಟ್ಟಿದ್ದರು. ಇದಕ್ಕಾಗಿಯೇ ದೇಶದ 140 ಕೋಟಿ ಜನತೆ ಹೆಮ್ಮೆಯಿಂದ ಇದ್ದಾರೆ ಎಂದು ಪ್ರಧಾನಿ ಮೋದಿ ದೇಶವನ್ನು ಉದ್ದೇಶಿಸಿ ಮಾತನಾಡಿದ್ದಾರೆ .