- ಬಂಡಾಯ ಸಚಿವರ ಒತ್ತಡಕ್ಕೆ ಮಣಿದ ಬಿಎಸ್ವೈ
ಬೆಂಗಳೂರು: ಖಾತೆ ಹಂಚಿಕೆ ಹಾಗೂ ಬದಲಾವಣೆಯಿಂದ ಅಸಮಾಧಾನಗೊಂಡಿದ್ದ ಸಚಿವರ ಬಂಡಾಯಕ್ಕೆ ಸಿಎಂ ಬಿಎಸ್ ಯಡಿಯೂರಪ್ಪ ಮಣಿದಿದ್ದಾರೆ. ಇದೀಗ ಮತ್ತೆ ಖಾತೆ ಹಂಚಿಕೆಯಲ್ಲಿ ಕೆಲವೊಂದು ಬದಲಾವಣೆಯನ್ನು ಮಾಡಲಾಗಿದೆ.
ಜೆ.ಸಿ ಮಾಧುಸ್ವಾಮಿ ಅವರಿಗೆ ವೈದ್ಯಕೀಯ ಶಿಕ್ಷಣದ ಜೊತೆಗೆ ಹಜ್ ಹಾಗೂ ವಕ್ಫ್ ಇಲಾಖೆಯನ್ನು ನೀಡಲಾಗಿದೆ. ಅರವಿಂದ ಲಿಂಬಾವಳಿಗೆ ಅರಣ್ಯ ಹಾಗೂ ಕನ್ನಡ ಮತ್ತು ಸಂಸ್ಕೃತಿ ಖಾತೆಯನ್ನು ನೀಡಲಾಗಿದೆ. ಕನ್ನಡ ಹಾಗೂ ಸಂಸ್ಕೃತಿ ಇಲಾಖೆ ಮೊದಲು ಮಾಧುಸ್ವಾಮಿಗೆ ನೀಡಲಾಗಿತ್ತು.
ಅಬಕಾರಿ ಖಾತೆ ನೀಡಿದ್ದಕ್ಕೆ ಬಹಿರಂಗ ಅಸಮಾಧಾನ ವ್ಯಕ್ತಪಡಿಸಿದ್ದ ಸಚಿವ ಎಂಟಿಬಿ ನಾಗರಾಜ್ ಅವರಿಗೆ ಪೌರಾಡಳಿತ ಹಾಗೂ ಸಕ್ಕರೆ ಇಲಾಖೆಯನ್ನು ನೀಡಲಾಗಿದೆ. ಇನ್ನು ಕೆ. ಗೋಪಾಲಯ್ಯ ಅವರಿಗೆ ಅಬಕಾರಿ ಖಾತೆಯನ್ನು ನೀಡಲಾಗಿದೆ. ಈ ಹಿಂದೆ ಅವರಿಗೆ ತೋಟಗಾರಿಕೆ ಹಾಗೂ ಸಕ್ಕರೆ ಇಲಾಖೆಯನ್ನು ನೀಡಲಾಗಿತ್ತು.
ಇನ್ನು ಸಚಿವ ಆರ್ ಶಂಕರ್ಗೆ ಪೌರಾಡಳಿತದ ಬದಲಾಗಿ ತೋಟಗಾರಿಕೆಯನ್ನು ನೀಡಲಾಗಿದೆ. ಜೊತೆಗೆ ಕೆ.ಸಿ ನಾರಾಯಣ ಗೌಡ ಅವರಿಗೆ ಯುವ ಜನ ಹಾಗೂ ಕ್ರೀಡೆ ಜೊತೆಗೆ ಮುಖ್ಯಮಂತ್ರಿ ಬಳಿ ಇದ್ದ ಯೋಜನಾ ಇಲಾಖೆ ಖಾತೆಯನ್ನು ನೀಡಲಾಗಿದೆ.
ಕೆ. ಸುಧಾಕರ್ಗೆ ನೀಡಲಾಗಿದ್ದ ವೈದ್ಯಕೀಯ ಶಿಕ್ಷಣ ಹಾಗೂ ಆರೋಗ್ಯ ಖಾತೆಯನ್ನು ಬದಲಾವಣೆ ಮಾಡಬಾರದು ಎಂದು ಅವರು ಪಟ್ಟು ಹಿಡಿದಿದ್ದರು. ಆದರೆ ಅವರ ಒತ್ತಡಕ್ಕೆ ಸಿಎಂ ಮಣಿದಿಲ್ಲ. ವೈದ್ಯಕೀಯ ಶಿಕ್ಷಣ ಖಾತೆಯನ್ನು ಮಾಧುಸ್ವಾಮಿಗೆ ಅವರಲ್ಲೇ ಮುಂದುವರಿಸಲಾಗಿದೆ.