- ಮಲ್ಲಿಕಾರ್ಜುನ ಖರ್ಗೆ ಮತ್ತು ಶಶಿ ತರೂರ್ ಮಧ್ಯೆ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕಾಗಿ ಹಣಾಹಣಿ
NAMMUR EXPRESS NEWS
ಹೊಸದಿಲ್ಲಿ: ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ನಡೆಯಲಿರುವ ಚುನಾವಣೆಯಲ್ಲಿ ಸ್ಪರ್ಧಿಸಲಿರುವ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಶನಿವಾರ ರಾಜ್ಯಸಭೆಯ ವಿಪಕ್ಷ ನಾಯಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ ಎಂದು ಸುದ್ದಿಸಂಸ್ಥೆ ಎಎನ್ ಐ ವರದಿ ಮಾಡಿದೆ.
ಖರ್ಗೆ ಅವರು ಕಾಂಗ್ರೆಸ್ ನ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ರಾಜೀನಾಮ ಪತ್ರ ಕಳುಹಿಸಿದ್ದಾರೆ.
ಉದಯಪುರದಲ್ಲಿ ನಡೆದ ಚಿಂತನಾ ಶಿಬಿರದಲ್ಲಿ ‘ಒಬ್ಬ ನಾಯಕನಿಗೆ ಒಂದು ಹುದ್ದೆ’ ಎಂಬ ನಿರ್ಣಯ ಕೈಗೊಂಡಿರುವ ಹಿನ್ನೆಲೆಯಲ್ಲಿ ಖರ್ಗೆ ಅವರು ರಾಜ್ಯಸಭೆಯ ವಿಪಕ್ಷ ನಾಯಕನ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.
ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಖರ್ಗೆ ಸ್ಪರ್ಧಿಸಲಿದ್ದು, ಶುಕ್ರವಾರ ನಾಮಪತ್ರ ಸಲ್ಲಿಸಿದ್ದಾರೆ.
ಮಲ್ಲಿಕಾರ್ಜುನ ಖರ್ಗೆ ಮತ್ತು ಶಶಿ ತರೂರ್ ಮಧ್ಯೆ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕಾಗಿ ಹಣಾಹಣಿ:
ನವದೆಹಲಿ: ಕರ್ನಾಟಕದ ‘ಸೋಲಿಲ್ಲದ ಸರದಾರ’ ಕಾಂಗ್ರೆಸ್ ಅಧ್ಯಕ್ಷಗಿರಿಗೆ ಗಾಂಧಿ ಕುಟುಂಬದ ಅಭ್ಯರ್ಥಿಯಾಗಿ ಸ್ಪರ್ಧೆಗಿಳಿದಿದ್ದಾರೆ. ಮಲ್ಲಿಕಾರ್ಜುನ ಖರ್ಗೆ ಅವರು ಆಯ್ಕೆಯಾದರೆ, ಎಸ್ ನಿಜಲಿಂಗಪ್ಪ (1968-69) ನಂತರ ಕರ್ನಾಟಕದಿಂದ ಆಯ್ಕೆಯಾದ ಎಐಸಿಸಿಯ ಎರಡನೇ ಅಧ್ಯಕ್ಷರಾಗುತ್ತಾರೆ.
ರಾಜಕೀಯದಲ್ಲಿ 50 ವರ್ಷಕ್ಕೂ ಹೆಚ್ಚು ಅನುಭವ ಹೊಂದಿರುವ ಖರ್ಗೆ ಅವರು ದಕ್ಷಿಣ ಭಾರತದಿಂದ ಅಧ್ಯಕ್ಷ ಗಾದಿಗೆ ಸ್ಪರ್ಧಿಸುವ ಆರನೇ ಕಾಂಗ್ರೆಸ್ಸಿಗ ಒಂದು ವೇಳೆ ಕಾಂಗ್ರೆಸ್ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಆಯ್ಕೆಯಾದಲ್ಲಿ ಖರ್ಗೆಯವರು ಜಗಜೀವನ್ ರಾಮ್ ನಂತರ ಉನ್ನತ ಹುದ್ದೆಯನ್ನು ಅಲಂಕರಿಸಿದ ಎರಡನೇ ದಲಿತ ನಾಯಕರಾಗಲಿದ್ದಾರೆ.
ತಮ್ಮ ಸುದೀರ್ಘ ರಾಜಕೀಯ ಜೀವನದಲ್ಲಿ ಕೇಂದ್ರ ಮತ್ತು ರಾಜ್ಯ ಸರಕಾರಗಳಲ್ಲಿ ಹಲವಾರು ಉನ್ನತ ಹುದ್ದೆಗಳನ್ನು ನಿಭಾಯಿಸಿದ ಅನುಭವ ಖರ್ಗೆಯವರಿಗಿದೆ. ಕೇಂದ್ರ ಸಚಿವರಾಗಿ ಕರ್ತವ್ಯ ನಿರ್ವಹಿಸಿದ್ದಲ್ಲದೆ, ಎರಡು ಬಾರಿ ಕರ್ನಾಟಕದ ವಿರೋಧ ಪಕ್ಷದ ನಾಯಕರೂ ಆಗಿದ್ದರು. ಕೇಂದ್ರದಲ್ಲಿ ಬಿಜೆಪಿ ಸರಕಾರದ ಆಡಳಿತ ಬಂದ ಬಳಿಕ ಲೋಕಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿಯೂ ಕೆಲಸ ಮಾಡಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷ ಗಾದಿಯ ಚುನಾವಣೆಯಲ್ಲಿ ಶಶಿ ತರೂರ್ ಕೂಡಾ ಇದ್ದು, ಖರ್ಗೆ ಮತ್ತು ತರೂರ್ ಮಧ್ಯೆ ನೇರ ಹಣಾಹಣಿ ನಡೆಯಲಿದೆ. ಯಥಾಸ್ಥಿತಿ ಕಾಯ್ದುಕೊಳ್ಳಬೇಕಾಗಿದ್ದಲ್ಲಿ ಖರ್ಗೆಯವರಿಗೆ ಮತ ನೀಡಿ, ಬದಲಾವಣೆ ಬೇಕಿದ್ದಲ್ಲಿ ನನಗೆ ಮತ ನೀಡಿ ಎಂದು ತರೂರ್ ಹೇಳಿದ್ದಾರೆ. ಇವರಿಬ್ಬರ ಮಧ್ಯೆ ವಿಜಯಲಕ್ಷ್ಮಿಯಾರ ಕೊರಳಿಗೆ ಮಾಲೆ ಹಾಕುತ್ತಾಳೆನ್ನುವುದು ಸ್ವಲ್ಪ ದಿನದಲ್ಲೇ ತಿಳಿಯಲಿದೆ.