ಬೆಂಗಳೂರು: ರಾಜ್ಯ ವಿಧಾನ ಸಭೆ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಕಾಂಗ್ರೆಸ್ ಘೋಷಿಸಿದ್ದ ಐದು ಗ್ಯಾರಂಟಿಗಳ ಪೈಕಿ ಒಂದಾಗಿರುವ ‘ಗೃಹ ಲಕ್ಷ್ಮೀ’ ಯೋಜನೆಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಜೂ.16 ಶುಕ್ರವಾರದಿಂದ ಆರಂಭಿಸುವುದಾಗಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ವರ್ ತಿಳಿಸಿದ್ದಾರೆ.
ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಗೃಹ ಲಕ್ಷ್ಮಿ ಯೋಜನೆಗೆ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಜೂ.16 ಶುಕ್ರವಾರದಿಂದ ಆರಂಭಿಸಲಾಗುವುದು. ಅರ್ಜಿ ಸಲ್ಲಿಸಲು ಯಾವುದೇ ಕೊನೆಯ ದಿನಾಂಕ ಇರುವುದಿಲ್ಲ. ಅರ್ಜಿ ಸಲ್ಲಿಸಲು ಪ್ರಕ್ರಿಯೆ ವರ್ಷ ಪೂರ್ತಿ ನಿರಂತರವಾಗಿರುತ್ತದೆ’, ‘ಈ ಬಗ್ಗೆ ಯಾವುದೇ ಗೊಂದಲಗಳಿದ್ದರೆ ಸಹಾಯವಾಣಿ ಸಂಖ್ಯೆ 1902ಕ್ಕೆ ಕರೆ ಮಾಡಬಹುದು ಎಂದು ಅವರು ಮಾಹಿತಿ ನೀಡಿದರು.
‘ಸೇವಾಸಿಂಧು ಪೋರ್ಟಲ್, ಬೆಂಗಳೂರು ಒನ್, ಕರ್ನಾಟಕ ಒನ್, ಗ್ರಾಮ ಒನ್ ಕೇಂದ್ರಗಳಲ್ಲಿ ಉಚಿತವಾಗಿ ಅರ್ಜಿ ಸಲ್ಲಿಸಬಹುದು. ಮಹಿಳೆ ಆಧಾರ್ ಕಾರ್ಡ್, ಪತಿ ಆಧಾರ್ ಕಾರ್ಡ್ ಮಾಹಿತಿ ನೀಡಬೇಕು’ ಎಂದು ಅವರು ತಿಳಿಸಿದರು.
ಗೃಹಲಕ್ಷ್ಮೀ ಯೋಜನೆಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ
- ಗೃಹಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಸಲು ಬಯಸುವವರು ಸೇವಾಸಿಂಧು ವೆಬ್ಸೈಟ್ ಮೂಲಕ ಅರ್ಜಿ ಸಲ್ಲಿಸುವ ಅವಕಾಶವಿದೆ.
- ಮೊದಲು ಸೇವಾಸಿಂಧು ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ.
https://sevasindhuservices.karnataka.gov.in/
- ಮೊದಲ ಬಾರಿ ಅರ್ಜಿ ಸಲ್ಲಿಸುತ್ತಿದ್ದರೆ ನಿಮ್ಮ ಅಕೌಂಟ್ ಕ್ರಿಯೇಟ್ ಮಾಡಬೇಕು. ಇದಕ್ಕಾಗಿ New user ? Register here ಇಲ್ಲಿ ಕ್ಲಿಕ್ ಮಾಡಿ. ನಿಮ್ಮ ಆಧಾರ್ ಕಾರ್ಡ್ ಮತ್ತು ಮೊಬೈಲ್ ಸಂಖ್ಯೆ ಹಾಕಿ ಅಕೌಂಟ್ ಕ್ರಿಯೇಟ್ ಮಾಡಿಕೊಳ್ಳಿ.
- ನಿಮ್ಮ ಮೊಬೈಲ್ ಸಂಖ್ಯೆ ಮತ್ತು ಪಾಸ್ವರ್ಡ್ ಅಥವಾ ಓಟಿಪಿ ಮೂಲಕ ಲಾಗಿನ್ ಆಗಿ. ಅದರಲ್ಲಿ ಗೃಹಲಕ್ಷ್ಮೀ ಯೋಜನೆ ಆಯ್ಕೆ ಮಾಡಿ.
- ಗೃಹಲಕ್ಷ್ಮೀ ಯೋಜನೆಯ ಟ್ಯಾಬ್ನಲ್ಲಿ ಅರ್ಜಿ ಫಾರಂ ಅನ್ನು ಡೌನ್ಲೋಡ್ ಮಾಡಿಕೊಂಡು ಭರ್ತಿ ಮಾಡಿ.
- ಅರ್ಜಿಯಲ್ಲಿ ಅರ್ಜಿದಾರರ ಎಲ್ಲಾ ಮಾಹಿತಿಗಳನ್ನು ಭರ್ತಿ ಮಾಡಿ. ಅರ್ಜಿ ಫಾರಂನಲ್ಲಿ ತಿಳಿಸಿರುವ ಎಲ್ಲಾ ದಾಖಲೆಗಳೊಂದಿಗೆ, ಭರ್ತಿ ಮಾಡಿದ ಅರ್ಜಿ ಫಾರಂ ಹಾಗೂ ದಾಖಲೆಗಳನ್ನು ಸಲ್ಲಿಸಿ.
ಗೃಹಲಕ್ಷ್ಮೀ ಯೋಜನೆಗೆ ಬೇಕಾಗುವ ಅಗತ್ಯ ದಾಖಲೆಗಳು
- ಆಧಾರ್ ಕಾರ್ಡ್
- ರೇಷನ್ ಕಾರ್ಡ್
- ಬ್ಯಾಂಕ್ ಪಾಸ್ ಪುಸ್ತಕ
- ವಿಳಾಸ ದಾಖಲಾಗಿರುವ ಗುರುತಿನ ಚೀಟಿ
ಟ್ಯಾಕ್ಸ್ ಪಾವತಿಸುವವರು, ಜಿಎಸ್ಟಿ ರಿಟರ್ನ್ಸ್ ಸಲ್ಲಿಸುವವರು ಈ ಯೋಜನೆಗೆ ಅರ್ಹರಾಗುವುದಿಲ್ಲ. ಯೋಜನೆಯ ಫಲಾನುಭವಿಗಳು ಬ್ಯಾಂಕ್ ಖಾತೆಯೊಂದಿಗೆ ಆಧಾರ್ ಕಾರ್ಡ್ ಜೋಡಣೆ ಮಾಡುವುದು ಕಡ್ಡಾಯವಾಗಿದೆ.