ಕರ್ನಾಟಕ ಅನ್ನಭಾಗ್ಯಕ್ಕೆ ಆಮ್ ಆದ್ಮಿ ಅಕ್ಕಿ!
– ಪಂಜಾಬ್ ಎಎಪಿ ಸರ್ಕಾರ ಅಕ್ಕಿ ಒದಗಿಸಲು ಸಿದ್ಧ
– ಕರ್ನಾಟಕ ಆಮ್ ಆದ್ಮಿ ಅಧ್ಯಕ್ಷ ಪೃಥ್ವಿ ರೆಡ್ಡಿ ಹೇಳಿಕೆ
NAMMUR EXPRESS NEWS
ಕರ್ನಾಟಕದ ಅನ್ನಭಾಗ್ಯ ಯೋಜನೆಗೆ ಅಕ್ಕಿ ಕೊಡಲು ಪಂಜಾಬ್ ಆಮ್ ಆದ್ಮಿ ಸರ್ಕಾರ ಸಿದ್ದವಾಗಿದೆ.
ಕರ್ನಾಟಕ ಸರ್ಕಾರವು ಪ್ರಸ್ತಾಪಿಸಿರುವ ಹೊಸ ಅನ್ನಭಾಗ್ಯ ಯೋಜನೆಯನ್ನು ಈಡೇರಿಸಲು ಬೇಕಿರುವ ಹೆಚ್ಚುವರಿ ಅಕ್ಕಿ ನೀಡಲು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ನಿರಾಕರಿಸಿರುವುದು ಆಶ್ಚರ್ಯ ಮತ್ತು ದುಃಖದ ಸಂಗತಿಯಾಗಿದೆ. ನಮ್ಮಲ್ಲಿ ರಾಜಕೀಯ ಭಿನ್ನಾಭಿಪ್ರಾಯಗಳು ಇರಬಹುದು, ಆದರೆ ಅವುಗಳನ್ನು ಲೆಕ್ಕಿಸದೆ, ಎಲ್ಲಾ ಪಕ್ಷಗಳು ನಮ್ಮ ದೇಶದ ಜನರಿಗೆ ಸಹಾಯ ಮಾಡುವ ನೀತಿಗಳನ್ನು ಬೆಂಬಲಿಸಬೇಕು ಎಂದು ಆಮ್ ಆದ್ಮಿ ಪಾರ್ಟಿ ಬಲವಾಗಿ ನಂಬುತ್ತದೆ.
ಅಗತ್ಯವಿರುವ ಹೆಚ್ಚುವರಿ ಅಕ್ಕಿ ನೀಡಲು ನಿರಾಕರಿಸಿರುವುದು, ಬಿಜೆಪಿ ಸರ್ಕಾರದ ಬಡವರ ವಿರೋಧಿ ಧೋರಣೆ ಮಾತ್ರವಲ್ಲದೆ ಬಿಜೆಪಿಯೇತರ ಆಡಳಿತದ ರಾಜ್ಯಗಳ ಮೇಲೆ ಮಲತಾಯಿ ಧೋರಣೆಯನ್ನು ಎತ್ತಿ ತೋರಿಸುತ್ತದೆ. ಇಂತಹ
ವರ್ತನೆಯನ್ನು ನಾವು ಬಲವಾಗಿ ಖಂಡಿಸುತ್ತೇವೆ.
ನಮ್ಮ ರಾಜ್ಯದ ಜನರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು, ನಾನು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರೊಂದಿಗೆ ಈ ವಿಷಯದ ಬಗ್ಗೆ ವಿವರವಾದ ಚರ್ಚೆ ನಡೆಸಿದ್ದೇನೆ. ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದು, ಅಗತ್ಯ ಬಿದ್ದರೆ ಪಂಜಾಬ್ನಿಂದ ರಾಜ್ಯದಲ್ಲಿನ ಅಕ್ಕಿ ಕೊರತೆಯನ್ನು ಪೂರೈಸಲು ತಾತ್ವಿಕವಾಗಿ ಒಪ್ಪಿಗೆ ನೀಡಿದ್ದಾರೆ.
ಎಎಪಿ ಕರ್ನಾಟಕವು ನಮ್ಮ ರಾಜ್ಯದ ಜನರ ಆಹಾರ ಭದ್ರತೆಯ ಹಿತದೃಷ್ಟಿಯಿಂದ ತನ್ನ ಪಾತ್ರ ನಿಭಾಯಿಸಲು ಬದ್ಧವಾಗಿದೆ. ಆದ್ದರಿಂದ ದಯವಿಟ್ಟು ಈ ವಿಷಯವನ್ನು ಮುಂದಕ್ಕೆ ಕೊಂಡೊಯ್ಯಲು ನಾನು ವಿನಂತಿಸುತ್ತೇನೆ ಮತ್ತು ಈ ವಿಷಯವನ್ನು ಸುಗಮಗೊಳಿಸಲು ನಿಮಗೆ ಎಎಪಿ ಕರ್ನಾಟಕದಿಂದ ಯಾವುದೇ ಸಹಾಯ ಬೇಕಾದರೆ ನನಗೆ ತಿಳಿಸಿ ಎಂದು ಕರ್ನಾಟಕ ಆಮ್ ಆದ್ಮಿ ಅಭ್ಯರ್ಥಿ ಪೃಥ್ವಿ ರೆಡ್ಡಿ ತಿಳಿಸಿದ್ದಾರೆ.
ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ, ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮ ಅವರಿಗೆ ಪತ್ರ ಬರೆಯಲಾಗಿದೆ.