ಬಿಪಿಎಲ್ ತಿದ್ದುಪಡಿ: ರಾಜ್ಯದೆಲ್ಲೆಡೆ ಸರ್ವರ್ ಡೌನ್ ಡೌನ್!
– ರೇಷನ್ ಕಾರ್ಡ್ ತಿದ್ದುಪಡಿ ಮಾಡಲಾಗದೆ ಜನರ ಪರದಾಟ: ವಾರ ಸಮಯ ಕೊಟ್ಟರೂ ಒಂದು ಅರ್ಜಿಯೂ ಆಗಲ್ಲ!
NAMMUR EXPRESS NEWS
ಬೆಂಗಳೂರು: ರಾಜ್ಯದೆಲ್ಲೆಡೆ ಪಡಿತರ ತಿದ್ದುಪಡಿಗೆ ರಾಜ್ಯ ಸರ್ಕಾರ ಒಂದು ವಾರಗಳ ಅವಕಾಶ ನೀಡಿದ್ದು, ಆದರೆ ಯಾವುದೇ ಸೇವಾ ಕೇಂದ್ರಗಳಲ್ಲಿ ತಿದ್ದುಪಡಿ ಮತ್ತು ಸೇರ್ಪಡೆಗೆ ಅವಕಾಶವಾಗಿಲ್ಲ. ಕಾರಣ ಸರ್ಕಾರದ ಸರ್ವರ್ ಡೌನ್…!
ಸರ್ಕಾರ ಇಂತಹ ಒಂದು ಜನ ಉಪಯೋಗಿ ಯೋಜನೆಗಳನ್ನು ಜಾರಿಗೆ ತಂದರೂ ತಂತ್ರಜ್ಞಾನವನ್ನು ಅಭಿವೃದ್ಧಿಪಡಿಸದೆ ಇರುವ ಕಾರಣ ಜನತೆಗೆ ಲಾಭ ಸಿಗುತ್ತಿಲ್ಲ. ಜೊತೆಗೆ ಜನತೆಗೆ ಪದೇಪದೇ ಸೈಬರ್ ಸೆಂಟರ್ ಗಳಿಗೆ ಸೇವಾ ಕೇಂದ್ರಗಳಿಗೆ ಅಲೆದಾಡಿ ಸಮಯ ವ್ಯರ್ಥವಾಗುತ್ತಿದೆ. ಇದರಿಂದಾಗಿ 2,000 ಹಣಕ್ಕಾಗಿ ತಮ್ಮ ದುಡಿಮೆ ಹಾಗೂ ಸಮಯವನ್ನು ಕಳೆಯಬೇಕಾಗಿದೆ.
ಪ್ರತಿ ದಿನ ಸಾವಿರಾರು ಸಂಖ್ಯೆಯಲ್ಲಿ ಜನ ಬೆಳಿಗ್ಗೆ 10 ಗಂಟೆಯಿಂದ ಸಂಜೆ 7 ಗಂಟೆವರೆಗೆ ಕಾದರೂ ಸೇವಾ ಕೇಂದ್ರಗಳಲ್ಲಿ ಸರ್ವರ್ ಸಮಸ್ಯೆ ಕಾಡುತ್ತಿದೆ. ಮಹಿಳೆಯರು, ಶಿಶುಗಳು, ಮಕ್ಕಳು, ವಯೋವೃದ್ಧರು ಬೆಳಿಗ್ಗೆ ಸಂಜೆ ತನಕ ಸೇವಾ ಕೇಂದ್ರಗಳಲ್ಲಿ ಸಾಲುಗಟ್ಟಿ ನಿಂತಿದ್ದರೂ ಕೆಲಸ ಆಗುತ್ತಿಲ್ಲ. ಇದರಿಂದ ನೊಂದ ಫಲಾನುಭವಿಗಳು ಸರ್ಕಾರಕ್ಕೆ ಹಿಡಿ ಶಾಪ ಹಾಕುತ್ತಿದ್ದಾರೆ.
ಹೀಗಾಗಿ ಸರ್ಕಾರ ತಕ್ಷಣ ಸ್ಪಂದಿಸಬೇಕು. ಆಯಾ ಜಿಲ್ಲಾಧಿಕಾರಿಗಳು ತಮ್ಮ ಜಿಲ್ಲೆಯಲ್ಲಿ ಸರ್ವರ್ ಸಮಸ್ಯೆ ಬಗ್ಗೆ ಸರ್ಕಾರಕ್ಕೆ ವರದಿ ಸಲ್ಲಿಸಬೇಕು. ಜೊತೆಗೆ ತಿದ್ದುಪಡಿಗೆ ಅವಕಾಶವನ್ನು ಇನ್ನಷ್ಟು ದಿನ ವಿಸ್ತರಣೆ ಮಾಡಿ, ಸರ್ವರ್ ಸಮಸ್ಯೆಯನ್ನು ಬಗೆಹರಿಸಬೇಕು ಎಂಬ ಆಗ್ರಹ ಸಾರ್ವಜನಿಕ ವಲಯದಿಂದ ಕೇಳಿಬಂದಿದೆ. ಕೆಲವು ತಾಲೂಕಲ್ಲಿ ಒಂದು ಅರ್ಜಿ ವಿಲೇವಾರಿ ಆಗುತ್ತಿಲ್ಲ. ತಕ್ಷಣ ಸರ್ಕಾರ ಗಮನಿಸಬೇಕು, ಸರ್ವರ್ ಸರಿ ಮಾಡಬೇಕು. ಇಲ್ಲವೇ ತಿದ್ದುಪಡಿ ಅವಕಾಶವ ವಿಸ್ತರಿಸಬೇಕು ಎಂದು ಜನ ಆಗ್ರಹಿಸಿದ್ದಾರೆ.
ಸರ್ಕಾರದ ಎಲ್ಲಾ ವೆಬ್, ಸರ್ವರ್ ಕಥೆ ಇಷ್ಟೇ!
ಸರ್ಕಾರದ ಬಹುತೇಕ ವೆಬ್, ಸರ್ವರ್ ಅತ್ಯಂತ ಕಳಪೆ ಗುಣಮಟ್ಟದಲ್ಲಿವೆ. ಎಲ್ಲಾ ಇಲಾಖೆಯ ತಂತ್ರಜ್ಞಾನ ವಿಭಾಗದಲ್ಲಿ ಭಾರೀ ಗೋಲ್ ಮಾಲ್ ಶಂಕೆ ವ್ಯಕ್ತವಾಗುತ್ತಿದೆ. ಕೂಡಲೇ ಸರ್ವರ್ ಸರಿಪಡಿಸಿ ಲಕ್ಷ ಲಕ್ಷ ಜನರ ಸಮಸ್ಯೆ ಬಗೆಹರಿಸಬೇಕಿದೆ.