– ಬಣ್ಣ ಬಣ್ಣದ ಹೆಬ್ಬಾವು, ಕಿಂಗ್ ಕೋಬ್ರಾ ವಿಮಾನದಲ್ಲಿ ಕಳ್ಳ ಸಾಗಣೆ!
– ಬ್ಯಾಂಕಾಕ್ನಿಂದ ತಂದಿದ್ದ 78 ವನ್ಯಜೀವಿ ಪತ್ತೆ!
– ವನ್ಯಜೀವಿಗಳ ಅಕ್ರಮ ಸಾಗಾಟ ತಡೆ ಕಾಯಿದೆ ಅಡಿಯಲ್ಲಿ ಕೇಸ್
– ಉಸಿರಾಡಲು ಸೂಕ್ತ ಗಾಳಿ ಇಲ್ಲದೆ ಮೃತಪಟ್ಟ ಕಾಪುಚಿನ್ ಕೋತಿಗಳು!
NAMMUR EXPRESS NEWS
ದೇವನಹಳ್ಳಿ: ಆಕರ್ಷಕ ಬಣ್ಣದ 55 ಬಗೆಯ ಹೆಬ್ಬಾವು ಮರಿಗಳು, ರೋಷದಿಂದ ಬುಸ್ಗುಡುತ್ತಿದ್ದ 17 ಕಿಂಗ್ ಕೋಬ್ರಾ, ಉಸಿರಾಡಲು ಗಾಳಿ ಇಲ್ಲದೆ ಚೀಲದಲ್ಲಿಯೇ ಮೃತಪಟ್ಟ ಆರು ಕಪ್ಪು ಕಾಪುಚಿನ್ ಕೋತಿ ಮರಿಗಳು. ಥಾಯ್ಲೆಂಡ್ ರಾಜಧಾನಿ ಬ್ಯಾಂಕಾಕ್ನಿಂದ ಬುಧವಾರ ರಾತ್ರಿ ಏರ್ ಏಷ್ಯಾ ವಿಮಾನದಲ್ಲಿ ದೇವನಹಳ್ಳಿಯ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಪ್ರಯಾಣಿಕರೊಬ್ಬರ ಬ್ಯಾಗ್ ಪರಿಶೀಲಿಸಿದಾಗ ಕಂಡುಬಂದ ಪ್ರಾಣಿಗಳಿವು…! ಬ್ಯಾಂಕಾಕ್ನಿಂದ ಕದ್ದು ತಂದ ಒಟ್ಟು 78 ಕಾಡುಪ್ರಾಣಿಗಳನ್ನು ಕಸ್ಟಮ್ಸ್ ಅಧಿಕಾರಿಗಳು ಪತ್ತೆ ಮಾಡಿ ಸುರಕ್ಷಿತವಾಗಿ ವಾಪಸ್ ಬ್ಯಾಂಕಾಕ್ಗೆ ಕಳಿಸಿದ್ದಾರೆ.
ಪ್ಲಾಸ್ಟಿಕ್ ಬ್ಯಾಸ್ಕೆಟ್ನಲ್ಲಿ ತರಲಾಗಿದ್ದ ಆರು ಕಪ್ಪು ಕಾಪುಚಿನ್ ಕೋತಿಗಳು ಉಸಿರಾಡಲು ಸೂಕ್ತ ಗಾಳಿ ಇಲ್ಲದೆ ಬ್ಯಾಸ್ಕೆಟ್ನಲ್ಲಿಯೇ ಮೃತಪಟ್ಟಿವೆ. ಕಾಪುಚಿನ್ ಕೋತಿಗಳಿಗೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಭಾರಿ ಬೇಡಿಕೆ ಇದೆ. ಮೂರು ಲಕ್ಷದಿಂದ ಹತ್ತು ಲಕ್ಷ ರೂಪಾಯಿವರೆಗೆ ಮಾರಾಟವಾಗುತ್ತವೆ. ವನ್ಯಜೀವಿಗಳ ಅಕ್ರಮ ಸಾಗಾಟ ತಡೆ ಕಾಯಿದೆ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ವಿಮಾನ ನಿಲ್ದಾಣದ ಮೂಲಗಳು ತಿಳಿಸಿವೆ.