ದಸರಾ ರಜೆ: ಮಕ್ಕಳಿಗೆ ಖುಷಿಯೋ ಖುಷಿ..!
– ಪ್ರವಾಸಿ ತಾಣಗಳು, ಬಸ್ ಗಳು ಫುಲ್ ಫುಲ್
– ಮರೆಯಾದ ದೇಶಿಯ ಆಟಗಳು: ಮೊಬೈಲ್, ಟಿವಿ ವೀಕ್ಷಣೆಗಷ್ಟೇ ಸೀಮಿತವಾಗುತ್ತಿರುವ ಮಕ್ಕಳು?!
NAMMUR EXPRESS NEWS
ಸಾಮಾನ್ಯವಾಗಿ ಮಕ್ಕಳಿಗೆ ರಜೆ ಎಂದರೆ ಖುಷಿಯೋ ಖುಷಿ. ಇಡೀ ದಿನ ಓದು, ಬರಹದ ಒತ್ತಡದಲ್ಲಿದ್ದ ಮಕ್ಕಳಿಗೆ ರಜಾ ಕಾಲದ ಬಿಡುವು ಒಂದು ರೀತಿಯಲ್ಲಿ ಸ್ವಾತಂತ್ರ್ಯ ಸಿಕ್ಕ ಅನುಭವ. ಇದೀಗ ಅಕ್ಟೋಬರ್ ತಿಂಗಳಿನಿಂದ ದಸರಾ ರಜೆ ಪ್ರಾರಂಭವಾಗಿದ್ದು ಮಕ್ಕಳಿಗೆ ಇದು ಸಂತಸದ ಸಮಯ. ಪಠ್ಯದ ಗುಂಗಿನಲ್ಲಿಯೇ ಇರುತ್ತಿದ್ದವರು, ಸ್ವಲ್ಪ ವಿಭಿನ್ನವಾಗಿ ನಾನಾ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ರಜಾ ಅವಧಿ ಕಳೆಯುತ್ತಾರೆ.
ಸಾಮಾನ್ಯವಾಗಿ ರಜೆ ಬಾಧವ್ಯ ಬೆಸುಗೆಯ ಕಾಲವಾಗಿದ್ದು ತಮ್ಮ ಅಜ್ಜ ಅಜ್ಜಿ, ದೊಡ್ಡಮ್ಮ ಚಿಕ್ಕಮ್ಮ, ಸಂಬಂಧಿಕರು, ಅಕ್ಕಪಕ್ಕದವರ ಮನೆಗೆ ಹೋಗಿ ಬಾಂಧವ್ಯ ಬೆಸುಗೆ ಸಮಯವಾಗಿದೆ. ಆದರೆ ಇಂದಿನ ತಾಂತ್ರಿಕ ಯುಗದಲ್ಲಿ ಕೆಲ ಮಕ್ಕಳಿಗೆ ತಮ್ಮ ಸಂಬಂಧಿಗಳ ಪರಿಚಯ, ಒಡನಾಟ ಎಲ್ಲವೂ ಮರೆಯಾಗುತ್ತಿದೆ. ಆದರೆ ಮಕ್ಕಳಿಗೆ ರಜೆ ಸಿಗುವುದರಿಂದ ಮನೆಯಲ್ಲಿ ಇದ್ದು ಬೇಜಾರಾಗಿ ಸಂಬಂಧಿಕರ ಮನೆಗೆ ಹೋಗಿರುವುದರಿಂದ ಬಾಂದವ್ಯ ಹೆಚ್ಚಾಗುತ್ತದೆ. ಅನೇಕ ಮಕ್ಕಳು ಪರಸ್ಪರ ತಮ್ಮ ಸಂಬಂಧಿಗಳ ಮನೆಗೆ ತೆರಳಿದ್ದಾರೆ.
ಪ್ರವಾಸಿ ತಾಣದಲ್ಲಿ ಜನವೋ ಜನ!
ದೂರದ ನಗರಗಳಲ್ಲಿ ವಾಸಿಸಿರುವ ಮಕ್ಕಳು ಊರಿಗೆ ಬಂದು ಹಳ್ಳಿಯ ಸೊಗಡನ್ನು ನೋಡುತ್ತಿದ್ದಾರೆ. ಇಲ್ಲಿನ ಬೆಟ್ಟ, ಗುಡ್ಡ, ಹಳ್ಳ ಹೀಗೆ ಪರಿಸರದ ನಡುವೆ ಖುಷಿ ಖುಷಿಯಿಂದ ಎಂಜಾಯ್ ಮಾಡುತ್ತಿದ್ದಾರೆ. ಶಾಲಾ ಮಕ್ಕಳಿಗೆ ದಸರಾ ರಜೆ ಹಿನ್ನೆಲೆಯಲ್ಲಿ ರಾಜ್ಯದ ಬಹುತೇಕ ಮಂದಿ ಕುಟುಂಬ ಸಮೇತರಾಗಿ ಪ್ರವಾಸಿ ತಾಣ, ದೇವಸ್ಥಾನಗಳತ್ತ ಮುಖಮಾಡಿದ್ದು, ಎಲ್ಲೆಡೆ ಜನದಟ್ಟಣೆ ಕಂಡು ಬಂದಿದೆ. ಶನಿವಾರ, ಭಾನುವಾರ ರಜೆ ಇರುವುದರಿಂದ ವೀಕ್ ಎಂಡ್ ಫುಲ್ ಆಗಿದೆ. ತಂದೆ ತಾಯಿ ಜತೆ ಪ್ರೇಕ್ಷಣಿಯ ಸ್ಥಳಗಳು, ಜಲಪಾತಗಳು ಹೀಗೆ ಪ್ರವಾಸಿ ತಾಣಗಳತ್ತ ಒಂದು ಸುತ್ತು ಹಾಕುತ್ತಿದ್ದು ಪ್ರವಾಸಿ ತಾಣಗಳೆಲ್ಲವೂ ತುಂಬಿ ತುಳುಕುತ್ತಿದೆ. ಹಾಗೂ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಇರುವುದರಿಂದ ಹೆಚ್ಚಾಗಿ ಕೆಎಸ್ಆರ್ಟಿಸಿ ಬಸ್ ಗಳಲ್ಲಿ ಪ್ರಯಾಣಿಸುತ್ತಿದ್ದು ಕೆಎಸ್ಆರ್ಟಿಸಿ ಬಸ್ಗಳಲ್ಲಂತೂ ಕಾಲಿಡಲು ಸಾಧ್ಯವಾಗದಷ್ಟು ಫುಲ್ ರಶ್ ಆಗಿದೆ.
ಸಾಂಸ್ಕೃತಿಕ ಚಟುವಟಿಕೆಗೆ ಅವಕಾಶ
ದಸರಾ ರಜೆಯ ದಿನಗಳಲ್ಲೂ ಕೆಲ ಮಕ್ಕಳು ಭರತನಾಟ್ಯ, ಸಂಗೀತ, ಟ್ಯೂಷನ್ಗಳನ್ನು ಮುಂದುವರೆಸಿದ್ದರು. ಕೆಲವು ವಿದ್ಯಾರ್ಥಿಗಳು ಪ್ರತಿಭೆ ಪ್ರದರ್ಶನಕ್ಕೆ ಸಿಕ್ಕ ವೇದಿಕೆಯನ್ನು ಸದ್ಬಳಕೆ ಮಾಡಿಕೊಂಡರು. ವಿವಿಧ ಸಂಘ ಸಂಸ್ಥೆಗಳು ಆಯೋಜಿಸಿದ್ದ ಹಾಡು, ಪ್ರಬಂಧ, ಭಾಷಣ, ಚಿತ್ರಕಲಾ ಹೀಗೆ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ತಮ್ಮಲ್ಲಿನ ಪ್ರತಿಭೆಯನ್ನು ಹೆಚ್ಚಿಸಿಕೊಳ್ಳುತ್ತಿದ್ದು ಕೆಲವರು ಯೋಗಶಿಬಿರ, ಕೆಲ ಕಡೆಗಳಲ್ಲಿ ನಡೆದ ವೇದ ಶಿಬಿರಗಳಲ್ಲಿ ಭಾಗವಹಿಸುತ್ತಿದ್ದು ಜ್ಞಾನ, ಕ್ರಿಯಾಶೀಲತೆ ಹೆಚ್ಚಿಸಿಕೊಳ್ಳುತ್ತಿದ್ದಾರೆ.
ಮರೆಯಾಗುತ್ತಿದೆ ಹಿಂದಿನ ಆಟಗಳು!
ಹಿಂದೆಲ್ಲಾ ರಜೆ ಬಂತೆಂದರೆ ಸಾಕು ಮಕ್ಕಳು ಗ್ರಾಮೀಣ ಭಾಗದ ಕ್ರೀಡೆಗಳಾದ ಲಗೋರಿ, ಚಿಣ್ಣಿ ದಾಂಡು, ಬೆಟ್ಟೆ ಆಟ, ಕಲ್ಲು ಆಟ, ಖೋ ಖೋ ಮುಂತಾದ ದೇಶಿ ಕ್ರೀಡೆಗಳನ್ನು ಮಕ್ಕಳು ಆಡದೆ, ಹೆಚ್ಚಾಗಿ ಕ್ರಿಕೆಟ್, ಬ್ಯಾಡ್ಮಿಂಟನ್, ಕೇರಂ, ಚೆಸ್ ಆಟಗಳಲ್ಲಿ ಮಕ್ಕಳು ತೊಡಗಿಸಿಕೊಂಡಿದ್ದಾರೆ. ಇನ್ನು ಹಲವಾರು ವಿದ್ಯಾರ್ಥಿಗಳು ಹೆಚ್ಚಾಗಿ ರಜಾ ಅವಧಿಯನ್ನು ಕಂಪ್ಯೂಟರ್, ಇಂಟರ್ನೆಟ್, ಟಿವಿ ವೀಕ್ಷಣೆಗಷ್ಟೇ ಸೀಮಿತ ಮಾಡಿಕೊಂಡಿದ್ದಾರೆ.