ಮುಳುಗಿದ ಸೇತುವೆ ಮೇಲೆ ಜೀಪ್ ಓಡಿಸಿ ಅರೆಸ್ಟ್!
– ಕಳಸ-ಹೊರನಾಡು ಮದ್ಯೆ ಇರುವ ಭದ್ರಾ ನದಿಯ ಹೆಬ್ಬಾಳೆ ಸೇತುವೆ
– ವ್ಯಕ್ತಿ ಬಂಧಿಸಿದ ಕಳಸ ಪೊಲೀಸರು: ಏನಿದು ಕೇಸ್?
– ಪೊಲೀಸ್ ನಿಯಮ ಮೀರಿದ್ರೆ ಕೇಸ್ ದಾಖಲು
NAMMUR EXPRESS NEWS
ಕಳಸ: ನಿರಂತರವಾಗಿ ಸುರಿಯುತ್ತಿರುವ ಮಳೆಯ ಕಾರಣ ಕಳಸ-ಹೊರನಾಡು ಮದ್ಯೆ ಇರುವ ಭದ್ರಾ ನದಿಯ ಹೆಬ್ಬಾಳೆ ಸೇತುವೆ ಮೇಲೆ ಜೀಪ್ ಚಾಲನೆ ಮಾಡಿದ ವ್ಯಕ್ತಿಯನ್ನು ಕಳಸ ಪೊಲೀಸರು ಬಂಧಿಸಿದ್ದಾರೆ. ಈ ಬಗ್ಗೆ ಪೊಲೀಸರು ಪತ್ರಿಕಾ ಪ್ರಕಟಣೆ ಹೊರಡಿಸಿದ್ದು, ಕಳಸದಿಂದ ಹೊರನಾಡಿಗೆ ಸಂಪರ್ಕ ಕಲ್ಪಿಸುವ ಹೆಬ್ಬಾಳೆ ಸೇತುವೆಯು ಭದ್ರಾ ನದಿಯ ನೀರಿನಿಂದ ತುಂಬಿ ಸೇತುವೆ ಮೇಲೆ ಹರಿಯುತ್ತಿತ್ತು.ಕಳಸ ದಿಂದ ಹೊರನಾಡಿಗೆ ಹೋಗುವ ರಸ್ತೆಯು ಸಂಪರ್ಕ ಕಡಿತಗೊಂಡಿತ್ತು.
ಈ ಬಗ್ಗೆ ಮುಂಜಾಗೃತತಾ ಕ್ರಮವಾಗಿ ಹೆಬ್ಬಾಳೆ ಸೇತುವೆಯ ಮೇಲೆ ಸಾರ್ವಜನಿಕರು ಹಾಗೂ ವಾಹನ ಸಂಚಾರವನ್ನು ನಿಷೇಧಿಸಿ ಯಾವುದೆ ಪ್ರಾಣ ಹಾನಿಯಾಗದಂತೆ ತಡೆಗಟ್ಟುವ ಸಲುವಾಗಿ ಕಳಸ ಹೊರನಾಡು ಸಂಪರ್ಕ ಕಲ್ಪಿಸುವ ಹೆಬ್ಬಾಳೆ ಸೇತುವೆಯ ಎರಡೂ ಬದಿಯಲ್ಲಿ ಬ್ಯಾರಿಕೇಡ್ ಅಳವಡಿಸಿ ಪೊಲೀಸ್ ಸಿಬ್ಬಂದಿಗಳನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು. ಹಾಗೂ ಕಳಸದಿಂದ ಹೊರನಾಡಿಗೆ ಹೊಗುವ ಹಾಗೂ ಹೊರನಾಡಿನಿಂದ ಕಳಸಕ್ಕೆ ಬರುವ ಪ್ರವಾಸಿಗರಿಗೆ ಹಾಗೂ ಸಾರ್ವಜನಿಕರಿಗೆ ಬದಲಿ ಮಾರ್ಗವನ್ನು ಕಲ್ಪಿಸಲಾಗಿತ್ತು.
ಜುಲೈ 25ರಂದು ಬೆಳಗ್ಗೆ 11.00 ಗಂಟೆ ಯಿಂದ 11.30 ಸಮಯ ಮಧ್ಯದಲ್ಲಿ, KA18 P7284 ಜೀಪ್ ಅನ್ನು ಅದರ ಚಾಲಕ ಹೆಬ್ಬಾಳೆ ಸೇತುವೆ ಮೇಲೆ ಮುಂಜಾಗೃತ ಕ್ರಮವಾಗಿ ಬ್ಯಾರಿಕೇಡ್ ಗಳನ್ನು ಅಳವಡಿಸಿ ಸಂಚಾರ ನಿಷೇಧಿಸಿದರೂ ಸಹ ಮೇಲಿನ ವಾಹನದ ಚಾಲಕನಾದ ಪವನ್ ಕುಮಾರ್ ಎಂಬಾತ ಮುಂಜಾಗೃತ ಕ್ರಮವಾಗಿ ಅಳವಡಿಸಿದ ಬ್ಯಾರಿಕೇಡ್ ಗಳನ್ನು ತೆಗೆದು ಭದ್ರಾನದಿಯ ನೀರು ಹೆಬ್ಬಾಳೆ ಸೇತುವೆ ಮೇಲೆ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದರೂ ಸಹ ಅಜಾಗರೂಕತೆಯಿಂದ ಹಾಗೂ ನಿರ್ಲಕ್ಷತನದಿಂದ ಪ್ರಾಣಕ್ಕೆ ಅಪಾಯವಿದೆ ಎಂದು ಗೊತ್ತಿದ್ದರೂ ಸಹ ವಾಹನ ಚಾಲನೆ ಮಾಡಿಕೊಂಡು ಹೋಗಿರುತ್ತಾನೆ. ಅಜಾಗರೂಕತೆಯಿಂದ ಹಾಗೂ ನಿರ್ಲಕ್ಷತನದಿಂದ ಜೀಪ್ ಅನ್ನು ಚಾಲನೆ ಮಾಡಿಕೊಂಡು ಹೋದ ಪವನ್ ಕುಮಾರ್ ಮೇಲೆ ಕಳಸ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಆರೋಪಿಯನ್ನು ದಸ್ತಗಿರಿ ಮಾಡಿ ಮೇಲ್ಕಂಡ ಜೀಪ್ ಅನ್ನು ಸೀಜ್ ಮಾಡಲಾಗಿದೆ.
ಪೊಲೀಸ್ ಇಲಾಖೆ ಆದೇಶ ಉಲ್ಲಂಘನೆ ಮಾಡಿದ್ರೆ ಕೇಸ್!
ಆದ್ದರಿಂದ ಪೊಲೀಸ್ ಇಲಾಖೆಯವರು ಮುಂಜಾಗೃತ ಕ್ರಮವಾಗಿ ಯಾವುದೇ ಸ್ಥಳಗಳಲ್ಲಿ ಬ್ಯಾರಿಕೇಡ್ ಗಳನ್ನು ಅಳವಡಿಸಿ ನಿರ್ದೇಶನ ನೀಡಿರುವುದನ್ನು ಯಾವುದೆ ಸಾರ್ವಜನಿಕರು ಉಲ್ಲಂಘಿಸಿದ್ದಲ್ಲಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು. ಹಾಗಾಗಿ ಪ್ರತಿಯೊಬ್ಬ ಸಾರ್ವಜನಿಕರು ಇಲಾಖೆಯವರು ನೀಡಿರುವ ನಿರ್ದೇಶನಗಳನ್ನು ಪಾಲಿಸಿ ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಬೇಕಾಗಿ ಕೋರಿದೆ.