ಇನ್ನು ಮುಂದೆ ಮನೆ ಬಾಗಿಲಿಗೆ ಬರುತ್ತೆ ಪಡಿತರ
– ಹಿರಿಯ ನಾಗರಿಕರ ಕಷ್ಟಕ್ಕೆ ನೆರವಾಗಲು ನಾಗರೀಕ ಸ್ನೇಹಿ ಯೋಜನೆ
– 75 ವರ್ಷ ದಾಟಿದವರ ಮನೆಗೆ ತಂದು ಕೊಡ್ತಾರೆ!
NAMMUR EXPRESS NEWS
ಬೆಂಗಳೂರು: 75 ವರ್ಷ ದಾಟಿದವರ ಮನೆ ಬಾಗಿಲಿಗೆ ಅನ್ನಭಾಗ್ಯ ಯೋಜನೆಯಡಿ ಪಡಿತರ ತಲುಪಿಸಲು ಆಹಾರ ಇಲಾಖೆ ವತಿಯಿಂದ ಸಿದ್ಧತೆ ಮಾಡಿಕೊಳ್ಳಲಾಗಿದೆ. ಪಡಿತರ ವಿತರಣೆಯಲ್ಲಿ ಹಿರಿಯ ನಾಗರಿಕರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಆಹಾರ ಇಲಾಖೆ ಕ್ರಮ ಕೈಗೊಂಡಿದೆ. ನ್ಯಾಯಬೆಲೆ ಅಂಗಡಿಗಳಿಗೆ ಹೋಗುವ ಬದಲು ಮನೆ ಬಾಗಿಲಲ್ಲೇ ಪಡಿತರ ನೀಡಲು ಹಿರಿಯ ನಾಗರಿಕ ಸ್ನೇಹಿ ನೀತಿಯನ್ನು ಆಹಾರ ಇಲಾಖೆ ಜಾರಿಗೊಳಿಸಲು ಮುಂದಾಗಿದೆ.
ಪಡಿತರ ಕಾರ್ಡ್ ಹೊಂದಿರುವ ಕುಟುಂಬದ ಸದಸ್ಯರೊಬ್ಬರು ನ್ಯಾಯಬೆಲೆ ಅಂಗಡಿಗೆ ಹೋಗಿ ಬಯೋಮೆಟ್ರಿಕ್ ನೀಡಿದ ನಂತರ ತಮ್ಮ ಕುಟುಂಬಕ್ಕೆ ನಿಗದಿಪಡಿಸಿದ ಅಕ್ಕಿ ಸೇರಿ ಪಡಿತರ ಪಡೆದುಕೊಳ್ಳಬೇಕಿದೆ. ಹಿರಿಯರು ಪಡಿತರ ಪಡೆಯಲು ನ್ಯಾಯಬೆಲೆ ಅಂಗಡಿಗೆ ಹೋಗಲು ತೊಂದರೆ ಅನುಭವಿಸುವ ಹಿನ್ನೆಲೆಯಲ್ಲಿ ಮನೆ ಬಾಗಿಲಿಗೆ ಪಡಿತರ ತಲುಪಿಸಲು ಯೋಜನೆ ರೂಪಿಸಲಾಗಿದೆ.
ಯಾರಿಗೆ ಅವಕಾಶ?
ಪಡಿತರ ಚೀಟಿಯಲ್ಲಿ ನಮೂದಿಸಿದಂತೆ 75 ವರ್ಷ ಒಳಗಿನ ಸದಸ್ಯರು ಇಲ್ಲದ, 75 ವರ್ಷ ದಾಟಿದ ವೃದ್ಧರು, ದಂಪತಿಗಳಿಗೆ ಮನೆ ಬಾಗಿಲಿಗೆ ಪಡಿತರ ಪೂರೈಸಲಾಗುವುದು. ಪಡಿತರ ಚೀಟಿಯಲ್ಲಿ 75 ವರ್ಷದೊಳಗಿನ ಸದಸ್ಯರ ಹೆಸರು ನಮೂದಾಗಿದ್ದರೂ ಅವರು ಕೆಲಸ ಕಾರ್ಯಗಳ ನಿಮಿತ್ತ ವಲಸೆ ಹೋಗಿದ್ದಲ್ಲಿ ಅಂತಹ ಕುಟುಂಬಗಳ ವೃದ್ಧರು ಮನವಿ ಮಾಡಿದಲ್ಲಿ ಅವರ ಮನೆ ಬಾಗಿಲಿಗೂ ಪಡಿತರ ತಲುಪಿಸಲಾಗುವುದು ಎಂದು ಹೇಳಲಾಗಿದೆ.