ಚಿನ್ನ-ಬೆಳ್ಳಿ ದರ ಗಣನೀಯ ಇಳಿಕೆ
– ಕೆಲ ಮಳಿಗೆಗಳಲ್ಲಿ ಆಭರಣ ಚಿನ್ನವನ್ನು ಪ್ರತಿ ಗ್ರಾಂಗೆ 6999 ರೂ. ನಂತೆ ಮಾರಾಟ
– ಚಿನ್ನದ ದರವು ಜನವರಿ ಮೊದಲ ವಾರದವರೆಗೆ ಕಡಿಮೆಯಾಗುವ ಸಾಧ್ಯತೆ
NAMMUR EXPRESS NEWS
ಬೆಂಗಳೂರು: ಕಳೆದ ಏಳೆಂಟು ತಿಂಗಳಿನಿಂದ ಏರುಗತಿಯಲ್ಲಿದ್ದ ಚಿನ್ನ, ಬೆಳ್ಳಿ ದರವು ವಾರದಿಂದೀಚೆಗೆ ಭಾರಿ ಪ್ರಮಾಣದಲ್ಲಿ ಇಳಿಕೆಯಾಗಿದೆ. ಆಭರಣ ಚಿನ್ನವು (22 ಕ್ಯಾರೆಟ್) ಪ್ರತಿ ಗ್ರಾಂ.ಗೆ 7,440 ರೂ. ದಾಟಿತ್ತು. ಶನಿವಾರ ಚಿನಿವಾರ ಪೇಟೆಯಲ್ಲಿ 22 ಕ್ಯಾರಟ್ನ ಚಿನ್ನದ ದರ 7,100 ರೂ.ಗಳಿಗೆ ಇಳಿಕೆಯಾಗಿದೆ. ಬುಲಿಯನ್ (24 ಕ್ಯಾರೆಟ್) ಚಿನ್ನದ ದರ ಪ್ರತಿ ಗ್ರಾಂಗೆ 8,000 ರೂ.ಗಳಿಗೆ ಏರಿಕೆಯಾಗಿತ್ತು. ಈಗ 7,590 ರೂ. ಆಗಿದ್ದು, 410 ರೂ. ನಷ್ಟು ಕಡಿಮೆಯಾಗಿದೆ. ಹಾಗೆಯೇ, ಬೆಳ್ಳಿ ದರವು ಗ್ರಾಂಗೆ 99 ರೂ. ನಿಂದ 88.70 ರೂ.ಗೆ ಇಳಿಕೆಯಾಗಿದೆ. ಇದು ಖರೀದಿದಾರರು ಮತ್ತು ಹೂಡಿಕೆದಾರರಲ್ಲಿ ಸಂತಸ ತಂದಿದೆ. ಸದ್ಯ ವಿವಾಹ ಋುತು ಇಲ್ಲ. ಆದಾಗ್ಯೂ, ಚಿನ್ನ ಖರೀದಿ ಉತ್ತೇಜಿಸಲು ಕೆಲವೊಂದು ಆಭರಣ ಮಳಿಗೆಗಳು ಕಡಿಮೆ ದರದಲ್ಲಿ ಮಾರಾಟ ಮಾಡುತ್ತಿವೆ. ಕೆಲ ಮಳಿಗೆಗಳಲ್ಲಿ ಶನಿವಾರ ಆಭರಣ ಚಿನ್ನವನ್ನು ಪ್ರತಿ ಗ್ರಾಂಗೆ 6999 ರೂ. ನಂತೆ ಮಾರಾಟ ಮಾಡಲಾಗಿದೆ. ಚಿನ್ನದ ದರವು ಜನವರಿ ಮೊದಲ ವಾರದವರೆಗೆ ಕಡಿಮೆಯಾಗುವ ಸಾಧ್ಯತೆಗಳಿವೆ.
– ಟ್ರಂಪ್ ನೀತಿಗಳ ಮೇಲೆ ದರ ಏರಿಳಿತ
ಭಾರತ ಸೇರಿದಂತೆ ವಿಶ್ವದಾದ್ಯಂತ ಹೂಡಿಕೆಗೆ ಚಿನ್ನವೇ ಹೆಚ್ಚು ಸುರಕ್ಷಿತ ಎಂಬುದು ಜಗಜ್ಜಾಹೀರಾಗುತ್ತಿದೆ. ಚಿನ್ನ ಕೇವಲ ಆಭರಣಕ್ಕಷ್ಟೇ ಅಲ್ಲ, ಇದು ಆಪತ್ಕಾಲದ ಹಣವೂ ಹೌದು. ಈ ಹಿನ್ನೆಲೆಯಲ್ಲಿ ಖರೀದಿದಾರರನ್ನು ಹೆಚ್ಚು ಸೆಳೆಯುತ್ತಿದೆ. ಇತ್ತೀಚಿನ ದಿನಗಳಲ್ಲಿ ಭೂಮಿಯ ಮೇಲೆ ಹೂಡಿಕೆ ಮಾಡುವುದು ಕೂಡ ಅಷ್ಟು ಸುರಕ್ಷಿತವಲ್ಲಎಂಬ ಭಾವನೆ ಇದೆ. ಹೀಗಾಗಿ ಚಿನ್ನದ ಮೇಲೆ ಹೂಡಿಕೆ ಮಾಡಿದರೆ, ಯಾವುದೇ ಅಪಾಯವಿಲ್ಲವೆಂಬುದು ಹಲವರ ಅಭಿಪ್ರಾಯ. ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುತ್ತಿದ್ದವರೆಲ್ಲರೂ ಸುರಕ್ಷತೆ ದೃಷ್ಟಿಯಿಂದ ಚಿನ್ನ ಖರೀದಿಯತ್ತ ಒಲವು ತೋರಿದ್ದರು. ಹೀಗಾಗಿ, ಬೇಡಿಕೆ ಹೆಚ್ಚಾಯಿತು. ಆದರೆ ಪೂರೈಕೆ ಕಡಿಮೆಯಾಗಿದ್ದರಿಂದ ಹಳದಿ ಲೋಹದ ದರ ನಾಗಾಲೋಟದಲ್ಲಿ ಏರಿಕೆಯಾಗಿತ್ತು. ಮುಂದಿನ ಕೆಲವು ವರ್ಷಗಳಲ್ಲಿ ಚಿನ್ನದ ದರ ಗ್ರಾಂಗೆ 10 ಸಾವಿರ ರೂ. ತಲುಪುವ ಸಾಧ್ಯತೆಗಳಿವೆ ಎನ್ನಲಾಗಿತ್ತು. ಅಮೆರಿಕದ ಚುನಾಯಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಜನವರಿ 20ರಂದು ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಅವರು ಷೇರುಗಳಿಗೆ ತೆರಿಗೆ ವಿಧಿಸಿದರೆ, ಗ್ರಾಹಕರು ಷೇರುಗಳ ಬದಲು ಚಿನ್ನದ ಮೇಲೆ ಹೂಡಿಕೆ ಮಾಡಲು ಮುಂದಾಗುತ್ತಾರೆ. ಆಗ ಚಿನ್ನದ ದರ ಏರಿಕೆಯಾಗಬಹುದು. ಹೀಗಾಗಿ ಟ್ರಂಪ್ ಅವರು ಜಾರಿಗೆ ತರುವ ಹೊಸ ನೀತಿ-ನಿಯಮಗಳ ಮೇಲೆ ಚಿನ್ನದ ದರಗಳು ನಿರ್ಧರಿತವಾಗಲಿವೆ,” ಎಂದು ಕರ್ನಾಟಕ ರಾಜ್ಯ ಆಭರಣ ವರ್ತಕರ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಡಾ. ಬಿ.ರಾಮಾಚಾರಿ ತಿಳಿಸಿದ್ದಾರೆ. ಕ್ರಿಸ್ಮಸ್ ರಜೆ ಹಿನ್ನೆಲೆಯಲ್ಲಿ ಚಿನ್ನದ ಖರೀದಿ ಮತ್ತು ಹೂಡಿಕೆಗಳ ಪ್ರಮಾಣ ಸ್ವಲ್ಪ ಇಳಿಕೆಯಾಗಿದೆ. ಹೀಗಾಗಿ ಚಿನ್ನ-ಬೆಳ್ಳಿ ದರ ಕುಸಿದಿದೆ. ಇದು ತಾತ್ಕಾಲಿಕ ಇಳಿಕೆಯಷ್ಟೇ. ಜನವರಿ ಮೊದಲ ವಾರದವರೆಗೆ ದರ ಇಳಿಕೆ ಮುಂದುವರಿಯುತ್ತದೆ. ನಂತರ ಏರಿಳಿತವಾಗತ್ತದೆ ಎಂದು ಡಾ. ಬಿ.ರಾಮಾಚಾರಿ, ಪ್ರಧಾನ ಕಾರ್ಯದರ್ಶಿ, ಕರ್ನಾಟಕ ರಾಜ್ಯ ಆಭರಣ ವರ್ತಕರ ಒಕ್ಕೂಟ ಹೇಳಿದ್ದಾರೆ.