ಕರ್ನಾಟಕ ಕ್ಕೆ ಸುವರ್ಣ ಸಂಭ್ರಮ.!
– ಕರ್ನಾಟಕ ಎಂದು ಹೆಸರು ನಾಮಕರಣಗೊಂಡು 50 ವರ್ಷ
– ವರ್ಷವಿಡೀ ಕಾರ್ಯಕ್ರಮ: ಸರ್ಕಾರದ ತೀರ್ಮಾನ
– ಕರ್ನಾಟಕಕ್ಕೆ ಕೊಡುಗೆ ನೀಡಿದ 50 ಮಹಿಳೆಯರಿಗೆ ಪ್ರಶಸ್ತಿ
NAMMUR EXPRESS NEWS
ಬೆಂಗಳೂರು: ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ ಎಂಬ ಹೆಸರಿನಲ್ಲಿ 2023 ನ.1 ರಿಂದ 2024 ನ.1ರವರೆಗೆ ಕರ್ನಾಟಕ ಸಂಭ್ರಮ ಆಚರಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಕರ್ನಾಟಕ ಎಂದು ನಾಮಕರಣಗೊಂಡು 50 ವರ್ಷ ತುಂಬುತ್ತಿರುವ ಹಿನ್ನೆಲೆಯಲ್ಲಿ ಕನ್ನಡ ಮತ್ತು ಸಂಸ್ಕೃತಿ, ಪ್ರವಾಸೋದ್ಯಮ ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿ ಕಾರ್ಯಕ್ರಮ ಆಯೋಜಿಸುವ ಕುರಿತು ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು. ದೇಶೀ ಕ್ರೀಡೆಗಳನ್ನು ಹಮ್ಮಿಕೊಳ್ಳಬೇಕು. ಕರ್ನಾಟಕದ ಸಂಸ್ಕೃತಿ ಹೆಚ್ಚು ಬಿಂಬಿಸಬೇಕು, ಕನ್ನಡ ನಾಡು, ಸಂಸ್ಕೃತಿ ಮತ್ತು ಪ್ರಾದೇಶಿಕ ಭವ್ಯತೆಯನ್ನು ಈ ಸಂದರ್ಭದಲ್ಲಿ ಯುವ ಪೀಳಿಗೆಗೂ ಮುಟ್ಟಿಸುವ ರೀತಿ ಅರ್ಥಪೂರ್ಣ ಮತ್ತು ಸಂಭ್ರಮದ ಕಾರ್ಯಕ್ರಮ ಆಯೋಜಿಸಿ ಎಂದು ನಿರ್ದೇಶನ ನೀಡಿದರು. ನಾಡಿನ ಸಾಹಿತಿಗಳೊಂದಿಗೆ ಈ ಬಗ್ಗೆ ಚರ್ಚಿಸಿ ಅವರ ಸಲಹೆಗಳನ್ನು ಪಡೆಯಲಾಗಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಶಿವರಾಜ್ ತಂಗಡಗಿ ತಿಳಿಸಿದ್ದಾರೆ.
ಸ್ಮಾರಕ ಅಭಿವೃದ್ಧಿ, ಜೀರ್ಣೋದ್ಧಾರ
ವಿಧಾನಸೌಧ ಹಾಗೂ ಶಾಸಕರ ಭವನದ ಮಧ್ಯೆ ತಾಯಿ ಭುವನೇಶ್ವರಿ ಪ್ರತಿಮೆ ಸ್ಥಾಪಿಸುವುದು, ಮೈಸೂರಿನಲ್ಲಿ ದೇವರಾಜ ಅರಸರ ಪ್ರತಿಮೆ ಸ್ಥಾಪನೆ, ಧಾರವಾಡದ ಅದರಗುಂಚಿ ಶಂಕರಗೌಡ, ಬಳ್ಳಾರಿಯ ಹುತಾತ್ಮ ರಂಜಾನ್ ಸಾಬ್ ಹಾಗೂ ಗದಗ ಜಿಲ್ಲೆಯ ಅಂದಾನಪ್ಪ ದೊಡ್ಡಮೇಟಿ ಅವರ ಸ್ಮಾರಕ ಅಭಿವೃದ್ಧಿ, ಜೀಣೋದ್ಧಾರ ಕಾರ್ಯ ಹಮ್ಮಿಕೊಳ್ಳುವುದು ಸೇರಿ ಹಲವು ಕಾರ್ಯಕ್ರಮ ರೂಪಿಸಲು ಸಭೆಯಲ್ಲಿ ತೀರ್ಮಾನಿಸಲಾಯಿತು.
ಅ.17ರಂದು ಲಾಂಛನ ಬಿಡುಗಡೆ
ಕರ್ನಾಟಕ ಸಂಭ್ರಮ-50ರ ಲಾಂಛನವನ್ನು ಅ.17ರಂದು ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಬಿಡುಗಡೆ ಮಾಡಲು ನಿರ್ಧರಿಸಲಾಯಿತು. ಹಲ್ಮಡಿ ಶಾಸನದ ಪ್ರತಿಕೃತಿಗಳ ಸ್ಥಾಪನೆ, ಲೇಸರ್ ಶೋ/ಧ್ವನಿ, ಬೆಳಕು ಕಾರ್ಯಕ್ರಮ, ಕರ್ನಾಟಕಕ್ಕೆ ಕೊಡುಗೆ ನೀಡಿದ 50 ಮಹಿಳೆಯರಿಗೆ ಪ್ರಶಸ್ತಿ ನೀಡಲು ಸಭೆ ನಿರ್ಧರಿಸಿತು.
ಹಿಂದಿನ ಸರ್ಕಾರವೇ ಮಾಡಬೇಕಿತ್ತು!
ಐವತ್ತನೇ ವರ್ಷದ ಸಂಭ್ರಮವನ್ನು ಹಿಂದಿನ ಸರ್ಕಾರ 2022 ನ.1 ರಿಂದ 2023 ನ.1ರವರೆಗೆ ವೈಭವದಿಂದ ಆಚರಿಸಬೇಕಿತ್ತು. ಏಕೆ ಆಚರಿಸಲಿಲ್ಲ? ಈ ನಿರ್ಲಕ್ಷ್ಯ ಸರಿನಾ? ಎಂದು ಅಧಿಕಾರಿಗಳನ್ನು ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದರು. ಈಗ 50 ವರ್ಷ ತುಂಬಿ 51ನೇ ವರ್ಷಕ್ಕೆ ಕಾಲಿಡಲಿದ್ದು, ಹಿಂದಿನ ಸರ್ಕಾರ ಈ ವಿಚಾರದಲ್ಲಿ ಎಡವಿದೆ ಎಂದು ಆರೋಪಿಸಿದರು.