ಎನ್. ಆರ್. ಪುರ: ಮೊಬೈಲ್ ಟವರ್ ಹತ್ತಿ ರಾಷ್ಟ್ರಧ್ವಜ ಹಾರಿಸಿದ ಯುವಕ!
– ಕಟೀಲು ಅಮ್ಮನಿಗೆ ದೇಶದ ಬಣ್ಣ: ಧ್ವಜವಂದನೆಗೈದ ಆನೆ ಮಹಾಲಕ್ಷ್ಮೀ
– ಸ್ವಾತಂತ್ರ್ಯ ದಿನದ ದಿನವೇ ಜೈಲಿಂದ 12 ಮಂದಿ ಬಿಡುಗಡೆ
– ಕೋಳಿ, ತರಕಾರಿಯಲ್ಲಿ ಮೂಡಿದ ರಾಷ್ಟ್ರ ಭಾವುಟದ ಬಣ್ಣ
– 600 ಅಡಿ ಬೆಟ್ಟದ ಮೇಲೆ ಹಾರಿತು ಭಾವುಟ
NAMMUR EXPRESS NEWS
ಚಿಕ್ಕಮಗಳೂರು : ದೇಶದ ಹಬ್ಬ ಸ್ವಾತಂತ್ರ್ಯ ದಿನವನ್ನು ವಿವಿಧ ಕಡೆ ವಿಭಿನ್ನ ರೀತಿಯಲ್ಲಿ ಆಚರಣೆ ಮಾಡಲಾಗುತ್ತದೆ.
ಅದೇ ರೀತಿ ಚಿಕ್ಕಮಗಳೂರು ಜಿಲ್ಲೆ ಎನ್.ಆರ್ ಪುರ ತಾಲೂಕಿನ ಕಡಹಿನಬೈಲು ಎಂಬಲ್ಲಿ ಯುವಕನೊಬ್ಬ ಎಸ್ಎನ್ಎಲ್ ಟವರ್ ಮೇಲೆ ಹತ್ತಿ ದ್ವಜಾರೋಹಣ ಮಾಡಿದ್ದಾನೆ. ಹಿರೇಬಿಸು ಜೋಗಿ ಎನ್ನುವವರು ಟವರ್ ಮೇಲೆ ರಾಷ್ಟ್ರಧ್ವಜ ಹಾರಿಸಿದ್ದಾರೆ. 77ನೇ ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ ರಾಷ್ಟ್ರಧ್ವಜ ಹಾರಿಸಿದ್ದಾರೆ. ಎನ್ ಆರ್ ಪುರ ತಾಲೂಕಿನ ಕಡಹಿನ ಬೈಲು ಗ್ರಾಮ ಪಂಚಾಯಿತಿ ಹಿಂಭಾಗದಲ್ಲಿ ಟವರ್ ಮೇಲೆ ರಾಷ್ಟ್ರಧ್ವಜ ಹಾರಿಸಿದ್ದಾರೆ. ಕಳೆದ 13 ವರ್ಷಗಳಿಂದ ಇನ್ನೂರು ಅಡಿ ಟವರ್ ಮೇಲೆ ರಾಷ್ಟ್ರಧ್ವಜ ಹಾರಿಸಲಾಗುತ್ತಿದೆ.
ಶಿವಮೊಗ್ಗ ಕಾರಾಗೃಹದಿಂದ 12 ಕೈದಿಗಳ ಬಿಡುಗಡೆ
ಸ್ವಾತಂತ್ರ್ಯ ದಿನಾಚರಣೆ ಹಿನ್ನಲೆ ಸನ್ನಡತೆ ಆಧಾರದ ಮೇಲೆ ಶಿವಮೊಗ್ಗ ಕೇಂದ್ರ ಕಾರಾಗೃಹದಿಂದ 12 ಮಂದಿ ಕೈದಿಗಳನ್ನು ಬಿಡುಗಡೆ ಮಾಡಲಾಗಿದೆ. ಇದರಲ್ಲಿ ಐವತ್ತು ವರ್ಷ ಮೇಲ್ಪಟ್ಟ ಹಾಗು ಶೇಕಡಾ 50 ರಷ್ಟು ಅವಧಿಯನ್ನು ಜೈಲಿನಲ್ಲಿ ಕಳೆದಿರುವ ಮಹಿಳಾ ಕೈದಿಯೂ ಇದ್ದಾರೆ 60 ವರ್ಷ ಮೇಲ್ಪಟ್ಟ ಮೂರು ಮಂದಿ ಸೇರಿದಂತೆ ಒಟ್ಟು 12 ಮಂದಿಯನ್ನು ಬಿಡುಗಡೆಗೊಳಿಸಲಾಗಿದೆ. ರಾಜ್ಯದಲ್ಲಿ ಒಟ್ಟು 70 ಕೈದಿಗಳನ್ನು ಸನ್ನಡತೆ ಅಡಿಯಲ್ಲಿ ಬಿಡುಗಡೆಗೊಳಿಸಲಾಗಿದೆ.
ಕೇಸರಿ, ಬಿಳಿ, ಹಸಿರು ಬಣ್ಣದಲ್ಲಿ ತ್ರಿರಂಗದ ಕೋಳಿಗಳು!
ದಕ್ಷಿಣ ಕನ್ನಡ ಜಿಲ್ಲೆ ಬಂಟ್ವಾಳದ ಬಿಸಿರೋಡಿನ ಕೋಳಿ ಅಂಗಡಿಯೊಂದರಲ್ಲಿ 77ನೇ ಸ್ವಾತಂತ್ರೋತ್ಸವದ ಅಂಗವಾಗಿ ಕೇಸರಿ, ಬಿಳಿ, ಹಸಿರು ಬಣ್ಣದಲ್ಲಿ ತ್ರಿರಂಗದ ಕೋಳಿಗಳು ಕಂಗೊಳಿಸುವ ದೃಶ್ಯ ಕಂಡು ಬಂದಿದೆ.
ಬಿಸಿರೋಡಿನಲ್ಲಿರುವ ಅಜ್ಜಿ ಬೆಟ್ಟು ನಿವಾಸಿ ವಿದ್ಯಾ ಪ್ರಮೋದ್ ಅವರ ಮಗಳು ಪ್ರೀತಂ ಅವರ ಮಾಲಕತ್ವದ ನಂದನ್ ಚಿಕನ್ ಅಂಗಡಿಯಲ್ಲಿ ಕೋಳಿಗಳು ಎಲ್ಲರ ಗಮನ ಸೆಳೆದಿದೆ. ಮೂರು ಕೋಳಿಗಳಿಗೆ ಪ್ರೀತಂ ಅವರೇ ಸ್ವತಃ ಆಯಿಲ್ ಪೈಂಟ್ ನ್ನು ಹಚ್ಚಿದ್ದು, ಬಣ್ಣ ಹಚ್ಚಿರುವ ಈ ಕೋಳಿಗಳನ್ನು ಗ್ರಾಹಕರಿಗೆ ನೀಡುವುದಿಲ್ಲ ಎಂದು ಹೇಳಿದ್ದಾರೆ.
ಕಟೀಲು ಅಮ್ಮನಿಗೆ ದೇಶದ ಬಣ್ಣ: ಧ್ವಜವಂದನೆಗೈದ ಆನೆ ಮಹಾಲಕ್ಷ್ಮೀ
ಕಟೀಲು ಶ್ರೀ ದುರ್ಗಾಪರಮೇಶ್ವರೀ ಕ್ಷೇತ್ರದ ಸಮೂಹ ಶಿಕ್ಷಣ ಸಂಸ್ಥೆಗಳಲ್ಲಿ ದೇವಳದ ಆನೆ ಮಹಾಲಕ್ಷ್ಮೀ ರಾಷ್ಟ್ರ ಧ್ವಜವನ್ನು ಹಿಡಿದು ಎಲ್ಲರ ಗಮನ ಸೆಳೆದರೆ, ಕಟೀಲು ಅಮ್ಮನವರು ಕೇಸರಿ ಬಿಳಿ ಹಸುರು, ಬಣ್ಣದ ಹೂವುಗಳಿಂದ ವಿಶೇಷ ವಾಗಿ ಅಲಂಕಾರ ಮಾಡಿದ್ದು ಭಕ್ತರು ಕಣ್ಣುಂಬಿಕೊಂಡರು. ದೇವಳದ ಮತ್ತೊಂದು ಆಕರ್ಷಣೆಯಾಗಿರುವ ಆನೆ ಮಹಾಲಕ್ಷ್ಮೀ ರಾಷ್ಟ್ರಧ್ವಜವನ್ನು ಹಿಡಿದು ಭಾಗವಹಿಸಿದ್ದು ಮಾತ್ರವಲ್ಲದೆ, ಧ್ವಜ ವಂದನೆ ಗೈದಿರುದು ವಿಶೇಷವಾಗಿತ್ತು. ಕಟೀಲು ದೇವರಿಗೂ ಕೇಸರಿ ಬಿಳಿ ಹಸುರು, ಬಣ್ಣದ ಹೂವುಗಳಿಂದ ವಿಶೇಷ ವಾಗಿ ಅಲಂಕಾರ ಮಾಡಲಾಗಿದ್ದು ಕ್ಷೇತ್ರಕ್ಕೆ ಆಗಮಿಸುವ ಭಕ್ತರ ಗಮನ ಸೆಳೆಯಿತು.
ಧ್ವಜಾರೋಹಣ ನೆರವೇರಿಸಿದ ಶತಾಯುಷಿ ಅಜ್ಜಿ
ಶಸ್ತ್ರಚಿಕಿತ್ಸೆಗೆ ಬಂದಿದ್ದ ಶತಾಯುಷಿ ಮಹಿಳೆಯೊಬ್ಬರು ಗುಣಮುಖರಾಗಿ ಆಸ್ಪತ್ರೆಯಲ್ಲಿ ಧ್ವಜಾರೋಹಣ ನೆರೆವೇರಿಸಿದ ಅಪರೂಪದ ಘಟನೆ ಬಾಗಲಕೋಟೆ ನಗರದ ವಾಸನದ ಆಸ್ಪತ್ರೆಯಲ್ಲಿ ಮಂಗಳವಾರ ನಡೆದಿದೆ.
600 ಅಡಿ ಬೆಟ್ಟದ ಮೇಲೆ ಹಾರಿದ ಭಾವುಟ!
ರಾಮನಗರದಲ್ಲಿ ಬರೊಬ್ಬರಿ 600 ಅಡಿ ಎತ್ತರದ ಬೆಟ್ಟದ ಮೇಲೆ ತ್ರಿವರ್ಣ ಧ್ವಜವನ್ನು ಹಾರಿಸಲಾಗಿತ್ತು. ಇದೀಗ ಇಲ್ಲೊಬ್ಬ ಬೈಕ್ ಸವಾರ ಮೇಲೆ ರಾಷ್ಟ್ರಧ್ವಜ ಹಿಡಿದು ಸಂಭ್ರಮಿಸಿದ್ದಾನೆ.
ತರಕಾರಿಯಲ್ಲಿಮೂಡಿದ ಭಾರತದ ಭಾವುಟ!
ಚಿಕ್ಕಮಗಳೂರು ಜಿಲ್ಲೆ ಕೊಪ್ಪದಲ್ಲಿ ತರಕಾರಿಯಲ್ಲಿ ಭಾರತದ ಭಾವುಟದ ಬಣ್ಣದಿಂದ ತರಕಾರಿ ಅಂಗಡಿಯೊಂದರಲ್ಲಿ ಜೋಡಿಸಿದ್ದು ಗಮನ ಸೆಳೆಯಿತು.