22ನೇ ವಯಸ್ಸಿನಲ್ಲಿ ಎಮ್ಮೆ ಕದ್ದಿದಕ್ಕೆ 80ನೇ ವಯಸ್ಸಲ್ಲಿ ಜೈಲು!
– ಬೀದರ್ ಅಲ್ಲಿ 58 ವರ್ಷಗಳ ಬಳಿಕ ಎಮ್ಮೆ ಕಳ್ಳನ ಬಂಧನ!
NAMMUR EXPRESS NEWS
1965ರಲ್ಲಿ ನಡೆದ ಕಳ್ಳತನ, ಎರಡು ಎಮ್ಮೆ ಒಂದು ಕರು ಕಳ್ಳತನವಾಗಿತ್ತು. ಆ ಕಳ್ಳತನದ ಆರೋಪಿಗಳನ್ನು ಬರೋಬ್ಬರಿ 58 ವರ್ಷದ ಬಳಿಕ ಬೀದರ್ ಪೊಲೀಸರು ಬಂಧಿಸಿದ್ದಾರೆ. ಇದೊಂದು ವಿಚಿತ್ರ ಪ್ರಕರಣ ಆಗಿದೆ!. 1965ರಲ್ಲಿ ನಡೆದ ಎಮ್ಮೆ ಕಳ್ಳತನ ಪ್ರಕರಣದ ಆರೋಪಿಯನ್ನು 2023ರಲ್ಲಿ ಬಂಧಿಸಲಾಗಿದೆ. ಆರೋಪಿಯನ್ನು ಬಂಧಿಸಲು ಇಷ್ಟು ವರ್ಷ ಬೇಕಾ ಎಂಬ ಪ್ರಶ್ನೆಯ ಜತೆಯಲ್ಲೇ ಕಾನೂನಿನ ಕೈಗಳಿಂದ ಯಾರೂ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎನ್ನುವುದನ್ನೂ ಸಾಬೀತುಪಡಿಸಿದೆ.
ಏನಿದು ಘಟನೆ?:
58 ವರ್ಷಗಳಿಂದ ಪೊಲೀಸರ ಕೈಗೆ ಸಿಗದೇ, ನ್ಯಾಯಾಲಯಕ್ಕೂ ಹಾಜರಾಗದೇ ತಲೆಮರೆಸಿಕೊಂಡಿದ್ದ ಆರೋಪಿಯ ಹೆಸರು, ಲಾಂಗ್ ಪೆಂಡಿಂಗ್ ರಿಪೋರ್ಟ್ಗೆ (ಎಲ್ಪಿಆರ್ ) ಸೇರಿ ಹೋಗಿತ್ತು. ಪ್ರಕರಣ ದಾಖಲಾಗಿ, ಜಾಮೀನು ದೊರೆತ ಬಳಿಕ ಆರೋಪಿಯು ಕೋರ್ಟ್ಗೆ ಹಾಜರಾಗದೇ ತಲೆ ಮರೆಸಿಕೊಂಡಿದ್ದ. ಸಮನ್ಸ್ ನೋಟಿಸ್, ವಾರೆಂಟ್ ನೀಡಿದ್ದರೂ ಕ್ಯಾರೆ ಎಂದಿರಲಿಲ್ಲ. ಹೀಗಾಗಿ, ಈ ಪ್ರಕರಣವನ್ನು ಮಹೆಕರ್ ಠಾಣೆಯ ಪೊಲೀಸರು ನಿಶ್ಚಲ ಕಡತಕ್ಕೆ ಸೇರಿಸಿದ್ದರು. ಬೀದರ್ ಎಸ್ಪಿ ಚನ್ನಬಸವಣ್ಣ ಎಸ್ಎಲ್ ಅವರು ಇಂತಹ ಎಲ್ಪಿಆರ್ ಪ್ರಕರಣಗಳ ಪತ್ತೆಗಾಗಿ ವಿಶೇಷ ತಂಡವನ್ನು ರಚಿಸಿದ್ದರು. ಆ ತಂಡ ಆರೋಪಿಯನ್ನು ಬಂಧಿಸಿದೆ.
ಎಮ್ಮೆ ಜತೆ ಕರುವನ್ನು ಕದ್ದಿದ್ದರು!
1965ರ ಏಪ್ರಿಲ್ 25ರಂದು ಮೆಹಕರ್ನಲ್ಲಿ 2 ಎಮ್ಮೆ 1 ಕರು ಕಳುವಾದ ಕುರಿತು ಮುರಳೀಧರರಾವ್ ಮಾಣಿಕರಾವ್ ಕುಲಕರ್ಣಿ ಎನ್ನುವವರು ಮೆಹಕರ್ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದರು. ಮಹಾರಾಷ್ಟ್ರದ ಉದಗೀರ್ ಮೂಲದ ಕಿಶನ್ ಚಂದರ್ (30) ಹಾಗೂ ಗಣಪತಿ ವಿಠಲ ವಾಗೋರೆ (20) ಎನ್ನುವವರು ಕಳ್ಳತನ ಮಾಡಿದ್ದರು. ಇವರನ್ನು 1965ರಲ್ಲೇ ಬಂಧಿಸಲಾಗಿತ್ತು. ಆದರೆ, ಜಾಮೀನು ಪಡೆದ ಬಳಿಕ ಈ ಆರೋಪಿಗಳು ಕೋರ್ಟ್ಗೆ ಬಾರದೇ ತಲೆ ಮರೆಸಿಕೊಂಡಿದ್ದರು.
ಸಮನ್ಸ್, ವಾರಂಟ್ ಜಾರಿ ಮಾಡಿದ್ದರೂ ಬಾರದೇ ತಲೆ ಮರೆಸಿಕೊಂಡಿದ್ದರು. ಈ ಪೈಕಿ ಮೊದಲ ಆರೋಪಿ ಕಿಶನ್ ಚಂದರ್ 2006 ಏಪ್ರಿಲ್ 11ರಂದು ಮೃತಪಟ್ಟಿದ್ದರಿಂದ ಆತನ ವಿರುದ್ಧದ ಪ್ರಕರಣ ರದ್ದಾಯಿತು. ಮೆಹಕರ್ ಪೊಲೀಸ್ ಠಾಣೆಯ ಪಿಎಸ್ಐ ಶಿವಕುಮಾರ, ಚಂದ್ರಶೇಖರ, ಎಎಸ್ಐ ಅಂಬಾದಾಸ ಅವರ ತಂಡವು ತನಿಖೆ ನಡೆಸಿ ಆರೋಪಿಯನ್ನು ಮಹಾರಾಷ್ಟ್ರದ ಲಾತೂರಿನ ಟಾಕಳಗಾಂವ್ನಲ್ಲಿ ಪತ್ತೆ ಮಾಡಿದ್ದಾರೆ
ಆರೋಪಿಗೆ ಈಗ 80 ವಯಸ್ಸು!
ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿ, ನ್ಯಾಯಾಲಯಕ್ಕೆ ಹಾಜರಾಗದೇ ತಲೆ ಮರೆಸಿಕೊಂಡಿದ್ದ ಆರೋಪಿ ಗಣಪತಿ ವಿಠಲ್ ವಾಗೋರೆ ಕಳ್ಳತನ ಮಾಡುವಾಗ 22 ವರ್ಷ ವಯಸ್ಸಿತ್ತು. ಈಗ ಆತನಿಗೆ ಅಂದಾಜು 80 ವರ್ಷ ಆಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಬೀದರ್ ಎಸ್ಪಿ ಎಸ್ಎಲ್ ಚನ್ನಬಸವಣ್ಣ, ಸುಮಾರು ವರ್ಷಗಳಿಂದ ಬಾಕಿ ಇರುವ ಪ್ರಕರಣಗಳು, ಆರೋಪಿಗಳು ಕೋರ್ಟ್ಗೆ ಹಾಜರಾಗದೇ ಇರುವ ಎಲ್ ಪಿಆರ್ ಪ್ರಕರಣಗಳ ಪತ್ತೆಗೆ ವಿಶೇಷ ತಂಡ ರಚಿಸಲಾಗಿದೆ. ಈ ತಂಡವು ಇದೀಗ 58 ವರ್ಷಗಳ ಬಳಿಕ ಆರೋಪಿಯನ್ನು ಪತ್ತೆ ಮಾಡಿರುವುದು ಸೇರಿ ಇಂತಹ ಒಟ್ಟು 7 ಪ್ರಕರಣಗಳನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದೆ ಎಂದು ಹೇಳಿದ್ದಾರೆ.