ಎಲ್ಲೆಡೆ ಕೃಷ್ಣ ಜನ್ಮಾಷ್ಟಮಿ ಸಡಗರ!
– ದೇಗುಲಗಳಲ್ಲಿ ವಿಶೇಷ ಪೂಜೆ
– ಕೃಷ್ಣ, ರಾಧೆ ವೇಷ ಧರಿಸಿ ಮಕ್ಕಳ ಸಂಭ್ರಮ
NAMMUR EXPRESS NEWS
ಜಗದೋದ್ಧಾರಕನ ಜನ್ಮದಿನ ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಎಲ್ಲೆಡೆ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಮನೆಗಳಲ್ಲಿ ಶ್ರೀ ಕೃಷ್ಣಾಷ್ಟಮಿಯನ್ನು ಶ್ರದ್ಧಾ, ಭಕ್ತಿ, ಸಂಭ್ರಮದಿಂದ ಆಚರಿಸಲಾಗುತ್ತದೆ. ಜನ್ಮಾಷ್ಟಮಿ ಪ್ರಯುಕ್ತ ಹಲವೆಡೆ ಮುದ್ದುಕೃಷ್ಣ ವೇಷ ಸ್ಪರ್ಧೆ ಸಹಿತ ಭಜನೆ ಮುಂತಾದ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿವೆ. ಪೋಷಕರು ತಮ್ಮ ಮಕ್ಕಳಿಗೆ ಕೃಷ್ಣ ಹಾಗೂ ರಾಧೆಯ ವೇಷ ಧರಿಸಿ ಕೃಷ್ಣನ ಅಲಂಕಾರ ಮಾಡುತ್ತಿದ್ದರೆ ಮಕ್ಕಳು ಮುದ್ದು ಕೃಷ್ಣನಂತೆ ಕಂಡು ಸಂಭ್ರಮಿಸುತ್ತಿದ್ದಾರೆ. ದೇವಸ್ಥಾನದಲ್ಲಿ ಕೃಷ್ಣ ಜನ್ಮಾಷ್ಟಮಿ ಆಚರಣೆ ಮಾಡಲಾಗುತ್ತಿದೆ. ಕೃಷ್ಣನ ದೇವಸ್ಥಾನಕ್ಕೆ ಜನ ಸಾಗರವೇ ಹರಿದು ಬರುತ್ತಿದೆ. ಭಕ್ತಾದಿಗಳು ಕೃಷ್ಣನನ್ನ ಕಣ್ತುಂಬಿಕೊಳ್ಳುತ್ತಿದ್ದಾರೆ.
ಇನ್ನೂ ಉಡುಪಿಯ ಶ್ರೀಕೃಷ್ಣ ಮಠದಲ್ಲಿ ಆ. 6ರಂದು ಬೆಳಗ್ಗೆ ಪರ್ಯಾಯ ಶ್ರೀ ಕೃಷ್ಣಾಪುರ ಮಠದ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರು ಲಕ್ಷತುಳಸಿ ಅರ್ಚನೆ ನಡೆಸಿ, ಮಹಾಪೂಜೆ ನೆರವೇರಿಸಿದ್ದಾರೆ. ಅನಂತರ ರಾತ್ರಿ ಪೂಜೆ ನಿವೇದನೆಗೆ ಉಂಡೆ ಕಟ್ಟುವುದಕ್ಕೆ ಶ್ರೀಪಾದರು ಲಡ್ಡಿಗೆ ಮುಹೂರ್ತ ಮಾಡಲಿದ್ದಾರೆ. ಶ್ರೀಗಳೂ ಸಹಿತ ಭಕ್ತರು, ಶಿಷ್ಯ ವರ್ಗ ಏಕಾದಶಿಯಂತೆ ನಿರ್ಜಲ ಉಪವಾಸವಿದ್ದು ಕೃಷ್ಣಾಷ್ಟಮಿ ವ್ರತ ಆಚರಿಸುವರು. ಆದ್ದರಿಂದ ರಾತ್ರಿಯೂ ಅರ್ಚನೆ, ಮಹಾಪೂಜೆಯನ್ನು ನಡೆಸುವ ಶ್ರೀಗಳು ಬೆಳಗ್ಗೆ ಮುಹೂರ್ತ ಮಾಡಿದ ಲಡ್ಡುಗಳನ್ನು ಶ್ರೀಕೃಷ್ಣನಿಗೆ ನಿವೇದಿಸುವರು. ಶ್ರೀಕೃಷ್ಣ ಮಠವನ್ನು ವಿವಿಧ ಪುಷ್ಪಗಳಿಂದ ಅಲಂಕರಿಸಲಾಗುತ್ತಿದೆ. ಕೃಷ್ಣ ಮಠದಲ್ಲಿ ಸೆ. 6, 7ರಂದು ಬೆಳಗ್ಗೆಯಿಂದ ರಾತ್ರಿವರೆಗೆ ದೇವರ ದರ್ಶನ ಎಂದಿನಂತೆ ಇರಲಿದೆ.