ರಾಜ್ಯದಲ್ಲಿ ಮಳೆಗೆ ಜನ ಜೀವನ ಸ್ತಬ್ದ!
– ಅಪಾಯ ಮಟ್ಟದಲ್ಲಿ ಹರಿಯುತ್ತಿರುವ ನದಿಗಳು
– ಅನೇಕ ಜಿಲ್ಲೆಯ ಶಾಲೆಗಳಿಗೆ ರಜೆ: ಭಾರೀ ಎಚ್ಚರಿಕೆ
– ಮನೆ, ರಸ್ತೆ ಕುಸಿತ: ಮನೆಯಿಂದ ಹೊರ ಬಾರದ ಜನ
– ಕರಾವಳಿ, ಮಲೆನಾಡಲ್ಲಿ ಅಪಾರ ಹಾನಿ!
NAMMUR EXPRESS NEWS
ರಾಜ್ಯದಲ್ಲಿ ಮಳೆ ಅಬ್ಬರಕ್ಕೆ ಜನ ಜೀವನ ಸ್ತಬ್ದವಾಗಿದೆ.
ಮಲೆನಾಡು, ಕರಾವಳಿ, ಉತ್ತರ ಕರ್ನಾಟಕ ಸೇರಿ ಅನೇಕ ಕಡೆಗಳಲ್ಲಿ ನದಿಗಳು ಅಪಾಯ ಮಟ್ಟದಲ್ಲಿ ಹರಿಯುತ್ತಿವೆ.
ರಾಜ್ಯದಲ್ಲಿ ಅತೀ ಹೆಚ್ಚು ಮಳೆ ಸುರಿಯುತ್ತಿರುವ ಶಿವಮೊಗ್ಗ, ಉಡುಪಿ, ಕೊಡಗು, ಧಾರವಾಡ, ಹುಬ್ಬಳಿ, ಉತ್ತರ ಕನ್ನಡ, ಬೆಳಗಾವಿ ಸೇರಿ ಅನೇಕ ಜಿಲ್ಲೆಗಳ ಜಿಲ್ಲಾಧಿಕಾರಿಗಳ ವಿವೇಚನೆಯಂತೆ ಕೆಲ ತಾಲೂಕಲ್ಲಿ ಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ. ಕರಾವಳಿ ಮತ್ತು ಮಲೆನಾಡ ಜಿಲ್ಲೆಗಳಲ್ಲಿ ಧಾರಾಕಾರವಾಗಿ ಗಾಳಿ ಸಹಿತ ಮಳೆ ಸುರಿಯುತ್ತಿದ್ದ ಹಿನ್ನಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಮಕ್ಕಳ ಹಿತದೃಷ್ಟಿಯಿಂದ ಆಯಾ ತಾಲೂಕಿನ ತಹಸೀಲ್ದಾರರು ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳು ಚರ್ಚಿಸಿ ಶಾಲಾ, ಅಂಗನವಾಡಿ, ಕಾಲೇಜುಗಳಿಗೆ ರಜೆ ಘೋಷಿಸಿದ್ದಾರೆ.
ನದಿ, ತೊರೆಗಳು ಅಪಾಯ ಮಟ್ಟದಲ್ಲಿ!
ದಿನದಿಂದ ದಿನಕ್ಕೆ ಮುಂಗಾರು ಬಿರುಸುಗೊಳ್ಳುತ್ತಿದ್ದು, ನದಿ, ತೊರೆಗಳು ತುಂಬಿ ಹರಿಯುತ್ತಿವೆ. ಹಲವೆಡೆ ಪ್ರವಾಹದಿಂದಾಗಿ ರಸ್ತೆ ಮತ್ತು ಸೇತುವೆ ಸಂಪರ್ಕ ಕಡಿತಗೊಂಡಿದೆ. ಮರ, ಬರೆ, ವಿದ್ಯುತ್ ಕಂಬಗಳು ಬೀಳುತ್ತಲೇ ಇದ್ದು, ರಸ್ತೆ ಮತ್ತು ಕಾಲು ಸೇತುವೆಗಳು ಕೊಚ್ಚಿ ಹೋದ ಘಟನೆಯೂ ನಡೆದಿದೆ. ನದಿಗಳು ಅಪಾಯದ ಮಟ್ಟದಲ್ಲಿ ಹರಿಯುತ್ತಿದ್ದು, ನದಿ ತೀರದ ನಿವಾಸಿಗಳು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಗೊಳ್ಳುವಂತೆ ಸ್ಥಳೀಯ ಆಡಳಿತ ಸೂಚನೆ ನೀಡಿದೆ.
ಜುಲೈ 1ರಿಂದ ಜು.22ರವರೆಗೆ ವಾಡಿಕೆಗಿಂತ ಹೆಚ್ಚು ಮಳೆ!
ಜುಲೈ 1ರಿಂದ ಜುಲೈ 22ರ ವರೆಗೆ ಕರ್ನಾಟಕದಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದ್ದು, ರಾಜ್ಯದ ಜಲಾಶಯಗಳ ಒಳಹರಿವು ಹೆಚ್ಚಳವಾಗಿದೆ ಎಂದು ಹವಮಾನ ಇಲಾಖೆ ಮಾಹಿತಿ ನೀಡಿದೆ.
ಜುಲೈ 1ರಿಂದ ಜುಲೈ 22ರವೆರೆಗೆ ವಾಡಿಕೆಯಂತೆ ಸರಾಸರಿ 192ಮಿಲಿ ಮೀಟರ್ ಮಳೆಯಾಗಬೇಕಿತ್ತು. ಆದ್ರೆ, ಇದೀಗ ಜುಲೈ 1ರಿಂದ ಜುಲೈ 22ರವರೆಗೆ 215ಮಿಲಿ ಮೀಟರ್ ಮಳೆಯಾಗಿದೆ ಎಂದು ರಾಜ್ಯ ಹವಮಾನ ಇಲಾಖೆ ಮಾಹಿತಿ ನೀಡಿದೆ. ಅದರಲ್ಲೂ ಕರ್ನಾಟಕದ ಪಶ್ಚಿಮ ಘಟ್ಟದಲ್ಲಿ ಮಳೆರಾಯ ಅಬ್ಬರಿಸಿ ಬೊಬ್ಬಿರಿಯುತ್ತಿದ್ದಾನೆ. ಇದರಿಂದ ಜೀವನದಿಗಳಿಗೆ ಜೀವ ಕಳೆ ಬಂದಿದ್ದು, ಉಕ್ಕಿ ಹರಿಯುತ್ತಿವೆ. ಈ ಹಿನ್ನೆಲೆಯಲ್ಲಿ ಕೆಲವು ಸೇತುವೆಗಳ ಮುಳುಗಡೆಯಾಗಿದ್ದು, ಸಂಚಾರ ಬಂದ್ ಆಗಿವೆ.
ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಮಳೆಯ ಪ್ರಮಾಣ ಹೆಚ್ಚಳವಾಗಿದೆ. ರಾಜ್ಯದಲ್ಲಿ ಈ ಬಾರಿ ಜುಲೈನಲ್ಲಿ ವಾಡಿಕೆಗಿಂತ ಹೆಚ್ಚುವರಿ ಮಳೆ ಆಗಿದ್ದರಿಂದ ರಾಜ್ಯದ ಬಹುತೇಕ ಡ್ಯಾಂಗಳ ಒಳಹರಿವು ಹೆಚ್ಚಳವಾಗಿದೆ. ಜಲಾಶಯದ ಒಳಹರಿವಿನ ಪ್ರಮಾಣ ಶೇ.15ರಿಂದ ಶೇ.20ರಷ್ಟು ಹೆಚ್ಚಳವಾಗಿದೆ ಎಂದು ರಾಜ್ಯದ ಹವಾಮಾನ ಇಲಾಖೆ ತಿಳಿಸಿದೆ.
ರಾಜ್ಯದಲ್ಲಿ ಮುಳುಗಿದ ಪ್ರವಾಸಿ ತಾಣಗಳು!
ಮೈದುಂಬಿ ಹರಿಯುತ್ತಿವೆ ಬೆಳಗಾವಿಯ ಸಪ್ತನದಿಗಳು
ಮಹಾರಾಷ್ಟ್ರದ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಧಾರಾಕಾರ ಮಳೆಯಾಗುತ್ತಿರುವ ಹಿನ್ನೆಲೆ ಜಿಲ್ಲೆಯ ಸಪ್ತನದಿಗಳು ಮೈದುಂಬಿ ಹರಿಯುತ್ತಿವೆ. ಇದರಿಂದ ಬೆಳಗಾವಿ ಜಿಲ್ಲೆಯಲ್ಲಿ ಪ್ರವಾಹ ಭೀತಿ ಎದುರಾಗಿದೆ.
ಭಾಗಮಂಡಲ ತ್ರಿವೇಣಿ ಸಂಗಮ ಜಲಾವೃತ
ದಕ್ಷಿಣ ಮಂದಾಕಿನಿ ಕಾವೇರಿ ನದಿ ನೀರಿನ ಮಟ್ಟದಲ್ಲಿ ಗಣನೀಯ ಏರಿಕೆಯಾಗದ ಹಿನ್ನೆಲೆ ಭಾಗಮಂಡಲ ತ್ರಿವೇಣಿ ಸಂಗಮ ಜಲಾವೃತಗೊಂಡಿದೆ. ಭಾಗಮಂಡಲ-ನಾಪೋಕ್ಲು ರಸ್ತೆ ಮುಳುಗಿದೆ. ಮಡಿಕೇರಿ ತಾಲೂಕಿನ ಹೊದವಾಡ ರಸ್ತೆಯೂ ಮುಳುಗಿದೆ. ಸುಂಟಿಕೊಪ್ಪ-ಮಾದಾಪುರ ರಸ್ತೆ ಮಧ್ಯೆ ಮರ ಧರೆಗುರುಳಿದೆ. ಗಾಳಿ ಮಳೆಗೆ ಹಲವೆಡೆ ವಿದ್ಯುತ್ ಕಂಬಗಳು ಧರೆಗುರುಳಿವೆ.
ಕುಕ್ಕೆ ಕುಮಾರಧಾರಾ ಸ್ನಾನಘಟ್ಟ ಮುಳುಗಡೆ
ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಕುಕ್ಕೆ ಸುಬ್ರಹ್ಮಣ್ಯದ ಕುಮಾರಧಾರಾ ನದಿಯಲ್ಲಿ ನೀರಿನ ಮಟ್ಟ ಹೆಚ್ಚಳವಾಗಿದೆ, ಈ ಹಿನ್ನೆಲೆ ಕುಮಾರಧಾರಾ ಸ್ನಾನಘಟ್ಟ ಮುಳುಗಡೆಯಾಗಿದೆ. ನದಿ ದಡಕ್ಕೆ ಹೋಗದಂತೆ ಭಕ್ತರಿಗೆ ಸೂಚನೆ ನೀಡಲಾಗಿದೆ. ಸ್ನಾನಘಟ್ಟದ ಬಳಿ ಗೃಹರಕ್ಷಕ ಹಾಗೂ ಎಸ್ಡಿಆರ್ಎಫ್ ತಂಡವನ್ನು ನಿಯೋಜಿಸಲಾಗಿದೆ. ಸುಬ್ರಹ್ಮಣ್ಯ-ಮಂಜೇಶ್ವರ ರಾಜ್ಯ ಹೆದ್ದಾರಿ ಸಂಪೂರ್ಣ ಬಂದ್ ಆಗಿದೆ.
ಮಲೆನಾಡಲ್ಲಿ ಮಳೆ ಅಬ್ಬರ!
ಚಿಕ್ಕಮಗಳೂರಲ್ಲಿ ಮಹಾಮಳೆಗೆ ಭದ್ರಾನದಿ ಪ್ರವಾಹದ ಮಟ್ಟ ಮೀರಿ ಹರಿಯುತ್ತಿದೆ. ಕಳಸ ತಾಲೂಕಿನ ಹೆಬ್ಬಾಳೆ ಸೇತುವೆ ಮುಳುಗಡೆಯಾಗಿದ್ದು, ಕಳಸ-ಹೊರನಾಡು ನಡುವಿನ ಸಂಪರ್ಕ ಬಂದ್ ಆಗಿದೆ. ವಾಹನ ಸಂಚಾರ ನಿರ್ಬಂಧಿಸಿದ್ದು, ಸೇತುವೆ ಬಳಿ ಪೊಲೀಸರ ನಿಯೋಜನೆ ಮಾಡಿದ್ದು, ಬದಲಿ ಮಾರ್ಗವಾಗಿ ಹೋಗುವಂತೆ ಸೂಚಿಸಲಾಗಿದೆ. ಶೃಂಗೇರಿಯಲ್ಲಿ ಅನೇಕ ಭಾಗ ಮುಳುಗಿದೆ.ಉತ್ತರ ಕನ್ನಡ ಜಿಲ್ಲೆಯಲ್ಲಿ ವರುಣನ ಆರ್ಭಟ ಮುಂದುವರೆದಿದ್ದು, ಕಾಳಿ ನದಿ ಉಕ್ಕಿ ಹರಿಯುತ್ತಿದೆ. ಇದರಿಂದ ಕದ್ರಾ ಡ್ಯಾಂ ಸಂಪೂರ್ಣ ಭರ್ತಿಯಾಗಿದೆ. ಕದ್ರಾ ಜಲಾಶಯದಿಂದ 30,000 ಕ್ಯೂಸೆಕ್ ನೀರು ಬಿಡುಗಡೆ ಮಾಡಲಾಗುತ್ತಿದೆ. ಕದ್ರಾ ಡ್ಯಾಂನಿಂದ ನೀರು ಬಿಡುಗಡೆ ಹಿನ್ನೆಲೆ ಮಹಾಮಾಯ ದೇಗುಲದ ಆವರಣ ಜಲಾವೃತಗೊಂಡಿದೆ. ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ಶಾರದಾಂಬೆ ದೇವಾಲಯ ಬಳಿ ತುಂಗಾ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ದೇವಾಲಯದ ವಾಹನ ಪಾರ್ಕಿಂಗ್ನಲ್ಲಿ ನಿಲ್ಲಿಸಿದ್ದ ಪ್ರವಾಸಿಗರ ವಾಹನಗಳು ಮುಳುಗಡೆಯಾಗಿವೆ. ಹಾಗೆ ಗಾಂಧಿ ಮೈದಾನ, ಪ್ಯಾರ್ಲಲ್ ರಸ್ತೆಗೂ ನದಿ ನೀರು ನುಗ್ಗಿದೆ.
ಕುದುರೆಮುಖದಲ್ಲಿ ಭಾರಿ ಮಳೆ ಹಿನ್ನೆಲೆ ಭದ್ರಾ ನದಿಯ ಹರಿವಿನಲ್ಲಿ ಏರಿಕೆಯಾಗಿದೆ. ಭದ್ರಾ ನದಿ ಅಪಾಯಮಟ್ಟ ಮೀರಿ ಹರಿಯುತ್ತಿದ್ದು, ಜಾಂಬಳೆ ಸಮೀಪದ ಕಳಸ-ಕುದುರೆಮುಖ-ಮಂಗಳೂರು ರಸ್ತೆ ಮೇಲೆ ನೀರು ಹರಿಯುತ್ತಿದೆ. ನೀರಿನ ಮಧ್ಯೆಯೂ ವಾಹನಗಳು ಸಂಚರಿಸುತ್ತಿವೆ.
ಕರಾವಳಿಯಲ್ಲಿ ಭಾರೀ ಹಾನಿ!
ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಅನೇಕ ತಾಲೂಕಲ್ಲಿ ಮಳೆಯಿಂದ ಭಾರೀ ಹಾನಿ ಸಂಭವಿಸಿದೆ.
ಸೇತುವೆಗಳು ಮುಳುಗಡೆಯಾಗಿವೆ. ಮನೆಗಳು ಕುಸಿದಿವೆ. ಭಾರೀ ಪ್ರಮಾಣದ ನಷ್ಟ ಸಂಭವಿಸಿದೆ.
ಇದನ್ನೂ ಓದಿ : ಕರಾವಳಿಯಲ್ಲಿ ಕೊರಗಜ್ಜನ ಪವಾಡ.!
HOW TO APPLY : NEET-UG COUNSELLING 2023