ಸಾರ್ವಜನಿಕ ಆಸ್ತಿ ರಕ್ಷಣೆ ಸರ್ಕಾರದ ಹೊಣೆ
– ಹೈಕೋರ್ಟ್ ಮಹತ್ವದ ತೀರ್ಪು: ಏನಿದು ತೀರ್ಪು?
– ಇನ್ಮುಂದೆ ಪ್ರತಿಭಟನೆ ವೇಳೆ ಸಾರ್ವಜನಿಕ ಅಸ್ತಿ ಹಾಳು ಮಾಡಿದ್ರೆ ಕಾನೂನು ಕ್ರಮ?
NAMMUR EXPRESS NEWS
ಬೆಂಗಳೂರು: ಬೆಂಗಳೂರು ನಗರ ಬಂದ್ ವೇಳೆ ಅಗತ್ಯ ಸುರಕ್ಷತಾ ಕ್ರಮ ಸರ್ಕಾರದ ಕರ್ತವ್ಯ ಎಂದು ಹೈಕೋರ್ಟ್ ಅಭಿಪ್ರಾಯ ವ್ಯಕ್ತಪಡಿಸಿದೆ. ಸಾಮಾಜಿಕ ಕಾರ್ಯಕರ್ತ ರವಿಕುಮಾರ್ ಕಂಚನಹಳ್ಳಿ ಸಲ್ಲಿಸಿದ್ದ ಮಧ್ಯಂತರ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ನರೇಂದರ್ ಮತ್ತು ವಿಜಯ್ ಕುಮಾರ್ ಎ ಪಾಟೀಲ್ ಅವರಿದ್ದ ವಿಭಾಗೀಯ ಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ. ತಮಿಳುನಾಡಿಗೆ ಕಾವೇರಿ ನದಿ ನೀರು ಹರಿಸುವುದನ್ನು ವಿರೋಧಿಸಿ ಕನ್ನಡ ಮತ್ತು ರೈತರ ಪರ ಸಂಘಟನೆಗಳು ಹಮ್ಮಿಕೊಂಡಿರುವ ಬೆಂಗಳೂರು ಬಂದ್ನಿಂದಾಗಿ ಸಾರ್ವಜನಿಕರ ಜೀವನ ಅಸ್ತವ್ಯಸ್ತವಾಗದಂತೆ, ಸರ್ಕಾರಿ ಹಾಗೂ ಖಾಸಗಿ ಆಸ್ತಿಪಾಸ್ತಿಗೆ ಹಾನಿಯಾಗದಂತೆ ಅಗತ್ಯ ಸುರಕ್ಷತಾ ಕ್ರಮ ಕೈಗೊಳ್ಳುವುದು ಸರ್ಕಾರದ ಕರ್ತವ್ಯ ಎಂದು ಹೈಕೋರ್ಟ್ ಅಭಿಪ್ರಾಯ ವ್ಯಕ್ತಪಡಿಸಿದೆ. ವಿ
ಚಾರಣೆ ವೇಳೆ ರಾಜ್ಯ ಸರ್ಕಾರದ ಪರ ಅಡ್ವಕೇಟ್ ಜನರಲ್ ಕೆ. ಶಶಿಕಿರಣ್ ಶೆಟ್ಟಿ ಹಾಜರಾಗಿ, ನಗರದಲ್ಲಿ ಪ್ರತಿಭಟನಾ ಮೆರವಣಿಗೆ, ರ್ಯಾಲಿ ನಡೆಸಲು ಅನುಮತಿ ನೀಡಿಲ್ಲ. ಸ್ವಾತಂತ್ರ್ಯ ಉದ್ಯಾನದಲ್ಲಿ ಮಾತ್ರ ಶಾಂತಿಯುತ ಪ್ರತಿಭಟನೆಗೆ ಅವಕಾಶವಿದೆ. ಸಾರ್ವಜನಿಕ ಸಂಚಾರಕ್ಕೆ ಸಮಸ್ಯೆಯಾಗದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ನ್ಯಾಯಪೀಠಕ್ಕೆ ಭರವಸೆ ನೀಡಿದರು. ಅರ್ಜಿದಾರರ ಪರ ವಕೀಲ ಜಿ ಆರ್ ಮೋಹನ್, ಬಂದ್ಗೆ ಕರೆ ನೀಡಿರುವ ಸಂಘಟನೆಗಳು ರಸ್ತೆ ಮೂಲಕ ಮೆರವಣಿಗೆ ನಡೆಸಲಿವೆ. ಇದರಿಂದ ಜನಸಾಮಾನ್ಯರ ಪ್ರಯಾಣಕ್ಕೆ ತೊಂದರೆಯಾಗುವ ಸಾಧ್ಯತೆಯಿದೆ. ಈ ಹಿಂದೆ ಬಂದ್ ನಡೆದಾಗ ಸಾರ್ವಜನಿಕರ ಸಂಚಾರಕ್ಕೆ ತೊಂದರೆ ಉಂಟಾಗಿತ್ತು. ಜನರ ಜೀವನ ಅಸ್ತವ್ಯಸ್ಥವಾಗಿತ್ತು. ಅಹಿತಕರ ಘಟನೆಗಳು ನಡೆದು ಸರ್ಕಾರಿ ಮತ್ತು ಖಾಸಗಿ ಆಸ್ತಿಪಾಸ್ತಿಗೆ ಹಾನಿಯಾಗಿತ್ತು.
ಬಂದ್ ವೇಳೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳುವಂತೆ ಸರ್ಕಾರಕ್ಕೆ ಹೈಕೋರ್ಟ್ 2020ರ ಫೆ.20ರಂದು ಆದೇಶಿಸಿತ್ತು. ಸರ್ಕಾರಿ-ಖಾಸಗಿ ಆಸ್ತಿಗೆ ಉಂಟಾದ ನಷ್ಟ ಅಂದಾಜಿಸಿ, ವಸೂಲಿ ಮಾಡಲು ಕೇಮು ಕಮೀಷನರ್ ನೇಮಕಕ್ಕೂ ಆದೇಶಿಸಿತ್ತು ಎಂದು ನ್ಯಾಯಪೀಠದ ಗಮನಕ್ಕೆ ತಂದರು. ಅದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಬಂದ್ ಸಂದರ್ಭದಲ್ಲಿ ಸಾರ್ವಜನಿಕರ ಜೀವನ ಅಸ್ತವ್ಯಸ್ತವಾಗದಂತೆ, ಸರ್ಕಾರಿ ಹಾಗೂ ಖಾಸಗಿ ಆಸ್ತಿಪಾಸ್ತಿಗೆ ಹಾನಿಯಾಗದಂತೆ ಎಲ್ಲಾ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವುದು ಸರ್ಕಾರದ ಕರ್ತವ್ಯವಾಗಿದೆ ಎಂದು ಹೇಳಿದೆ.