ಬಿಟ್ ಕಾಯಿನ್ ಹ್ಯಾಕರ್ ಶ್ರೀಕಿ ನಿವಾಸದ ಮೇಲೆ ಎಸ್ಐಟಿ ದಾಳಿ
– ಅಪ್ರಾಪ್ತ ಯುವತಿಯನ್ನು ವಿವಾಹವಾದ ಆರೋಪ; ಗ್ರಾಪಂ ಅಧ್ಯಕ್ಷ ವಿರುದ್ಧ ದೂರು ದಾಖಲು
– ದಕ್ಷಿಣ ಕನ್ನಡ: ಪಪ್ಪಾಯ ತಿಂದು ಯುವತಿ ಸಾವು
– ಬಿಸಿಯೂಟ ಸೇವಿಸಿ ಮಕ್ಕಳು ಅಸ್ವಸ್ಥ
26 ಮಕ್ಕಳು ಆಸ್ಪತ್ರೆಗೆ ದಾಖಲು!
– ಯುವಕನ ಮೇಲೆ ಲಾಂಗ್ ನಿಂದ ಅಟ್ಯಾಕ್: ದೃಶ್ಯ ಸೆರೆ
NAMMUR EXPRESS NEWS
ಬೆಂಗಳೂರು: ಬಿಟ್ ಕಾಯಿನ್ ಹಗರಣದ ಪ್ರಮುಖ ಆರೋಪಿ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ ಮತ್ತವನ ಸಹಚರ ಸುನೀಶ್ ಹೆಗ್ಡೆ ನಿವಾಸದ ಮೇಲೆ ಎಸ್ಐಟಿ ತಂಡ ಮಂಗಳವಾರ ದಾಳಿ ನಡೆಸಿದೆ. ನ್ಯಾಯಾಲಯದಿಂದ ಸರ್ಚ್ ವಾರೆಂಟ್ ಪಡೆದುಕೊಂಡ ಎಸ್ಐಟಿ ಅಧಿಕಾರಿಗಳ ತಂಡ, ಸೆ. 12ರಂದು ಪ್ರಮುಖ ಆರೋಪಿಗಳಾದ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ, ಸುನೀಶ್ ಹೆಗ್ಡೆ ಮತ್ತು ಪ್ರಸಿದ್ಧ ಮನೆ ಮೇಲೆ ದಾಳಿ ಮಾಡಿದ್ದಾರೆ. ಸಂಜಯ್ ನಗರದಲ್ಲಿರುವ ಸುನೀಶ್ ಹೆಗ್ಡೆ, ಪ್ರಸಿದ್ ಹಾಗೂ ಜಯನಗರದಲ್ಲಿರುವ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ ಮನೆಯಲ್ಲಿ ಪರಿಶೀಲನೆ ನಡೆಸಿದ್ದಾರೆ. ಈ ಮೂವರ ಮನೆಗಳಲ್ಲಿ ನಡೆಸಿದ ಪರಿಶೀಲನೆಯ ಬಗ್ಗೆ ಪ್ರತಿಕ್ರಿಯೆ ನೀಡಲು ಎಸ್ಐಟಿ ಅಧಿಕಾರಿಗಳು ನಿರಾಕರಿಸಿದ್ದಾರೆ.
ಬಿಸಿಯೂಟ ಸೇವಿಸಿ ಮಕ್ಕಳು ಅಸ್ವಸ್ಥ 26 ಮಕ್ಕಳು ಆಸ್ಪತ್ರೆಗೆ ದಾಖಲು!
ಚಿತ್ರದುರ್ಗ ನಗರದ ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ ಹಾಗೂ ಮೌಲಾನ ಆಜಾದ್ ಪ್ರೌಢಶಾಲೆಯಲ್ಲಿ ಮಂಗಳವಾರ ಮಧ್ಯಾಹ್ನದ ಬಿಸಿಯೂಟ ಸೇವಿಸಿ ಮಕ್ಕಳು ಅಸ್ವಸ್ಥಗೊಂಡಿದ್ದು, 26 ವಿದ್ಯಾರ್ಥಿಗಳನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಬಿಸಿಯೂಟಕ್ಕೆ ವಿದ್ಯಾರ್ಥಿಗಳಿಗೆ ಅನ್ನ ಮತ್ತು ಬೇಳೆ ಸಾರು ನೀಡಲಾಗಿತ್ತು. ಊಟದ ಜತೆಗೆ ಶೇಂಗಾ ಚಿಕ್ಕಿ ಕೂಡ ಮಕ್ಕಳು ಸೇವಿಸಿದ್ದರು. ಸರ್ಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬಿಸಿಯೂಟ ಸೇವಿಸಿದ 110 ವಿದ್ಯಾರ್ಥಿಗಳಲ್ಲಿ 23 ಮಕ್ಕಳಿಗೆ ಹೊಟ್ಟೆ ನೋವು ಕಾಣಿಸಿಕೊಂಡಿದೆ.
ತಕ್ಷಣ ಅವರನ್ನು ಸಮೀಪದ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಮೌಲಾನ ಆಜಾದ್ ಪ್ರೌಢಶಾಲೆಯಲ್ಲಿ ಮಧ್ಯಾಹ್ನದ ಬಿಸಿಯೂಟ ಸೇವಿಸಿದ 200 ಮಕ್ಕಳಲ್ಲಿ ಮೂವರಿಗೆ ಹೊಟ್ಟೆನೋವು ಕಾಣಿಸಿಕೊಂಡಿದೆ. ಬಿಸಿಯೂಟ ಸೇವಿಸಿದ ಮಕ್ಕಳು ಮಧ್ಯಾಹ್ನದ ತರಗತಿಗೆ ಹಾಜರಾಗಿದ್ದರು. 3 ಗಂಟೆಯ ಬಳಿಕ ಹೊಟ್ಟೆನೋವು ಕಾಣಿಸಿಕೊಂಡಿದೆ. ತಕ್ಷಣ ಎಲ್ಲರನ್ನೂ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಆಹಾರ ಕಲುಷಿತಗೊಂಡಿರುವ ಸಾಧ್ಯತೆ ಇದೆ ಎಂಬುದಾಗಿ ವೈದ್ಯರು ಅನುಮಾನ ವ್ಯಕ್ತಪಡಿಸಿದ್ದಾರೆ.
ಅಪ್ರಾಪ್ತಳ ವಿವಾಹವಾದ ಆರೋಪ; ಗ್ರಾಪಂ ಅಧ್ಯಕ್ಷ ವಿರುದ್ಧ ದೂರು ದಾಖಲು!
ನಂಜನಗೂಡು : ಅಪ್ರಾಪ್ತ ಯುವತಿಯನ್ನು ವಿವಾಹವಾದ ಆರೋಪ ಹಾಡ್ಯ ಗ್ರಾಮ ಪಂಚಾಯತ್ ಅಧ್ಯಕ್ಷ ಹರೀಶ್ ಕುಮಾರ್ ವಿರುದ್ಧ ನಂಜನಗೂಡು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ನಂಜನಗೂಡು ತಾಲೂಕಿನಲ್ಲಿ ಅಪ್ರಾಪ್ತ ಬಾಲಕಿಯನ್ನು ಮದುವೆಯಾಗಿದ್ದಕ್ಕಾಗಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರ ವಿರುದ್ಧ ಮಕ್ಕಳ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಷ) ಕಾಯ್ದೆ, 2012 ಮತ್ತು ಅತ್ಯಾಚಾರ ಆರೋಪದಡಿ ಪ್ರಕರಣ ದಾಖಲಿಸಲಾಗಿದೆ.
ಅಪ್ರಾಪ್ತ ಹಾಗೂ ಗ್ರಾಮ ಪಂಚಾಯತ್ ಅಧ್ಯಕ್ಷನ ಮದುವೆ 2023ರ ಫೆಬ್ರವರಿ 15ರಲ್ಲಿ ನಡೆದಿದ್ದು, ಇದೀಗಾ ಬಾಲಕಿ ಗರ್ಭಿಣಿಯಾಗಿದ್ದಾಳೆ.ಶಾಲಾ ದಾಖಲಾತಿ ಪ್ರಕಾರ ಬಾಲಕಿಯ ಜನ್ಮ ದಿನಾಂಕವು 2005ರ ಮೇ 19 ಆಗಿದ್ದು ಆಕೆಗೆ ಇನ್ನು 18 ವರ್ಷ ತುಂಬದ ಹಿನ್ನಲೆಯಲ್ಲಿ ಅಧ್ಯಕ್ಷ ಹರೀಶ್ ಕುಮಾರ್ ವಿರುದ್ಧ ಕ್ರಮ ಜರುಗಿಸಬೇಕು ಎಂದು ದೂರಿನಲ್ಲಿ ತಿಳಿಸಲಾಗಿದೆ.
ಪಪ್ಪಾಯ ತಿಂದು ಯುವತಿ ಅಸ್ವಸ್ಥ: ಬಳಿಕ ಸಾವು!
ಮಂಗಳೂರಿನಲ್ಲಿ ಕೆಲಸ ನಿರ್ವಹಿಸುತ್ತಿದ್ದ ಯುವತಿಯೊಬ್ಬಳು ಡೆಂಗ್ಯೂಗೆ ಬಲಿಯಾಗಿದ್ದಾಳೆ ಎಂದು ಆರೋಗ್ಯ ಇಲಾಖೆ ಹೇಳಿದೆ. ಬಂಟ್ವಾಳ ತಾಲೂಕಿನ ಪೆರುವಾಯಿ ಮುಕ್ಕುಡಾಪು ನಿವಾಸಿ ಆಶಾ (20) ಮೃತಪಟ್ಟವಳು. ಮನೆಯಲ್ಲಿ ಹಸಿ ಪಪ್ಪಾಯ ತಿಂದು ತೀವ್ರವಾಗಿ ಅಸ್ವಸ್ಥಳಾಗಿದ್ದಳು. ಈ ಹಿನ್ನಲೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಂಗಳವಾರ ಮೃತಪಟ್ಟಿದ್ದಾಳೆ.
ಜ್ವರ ಬಂದು ಕಡಿಮೆಯಾಗಿದ್ದು, ಶನಿವಾರ ಮನೆಯಲ್ಲಿ ಹಸಿ ಪಪ್ಪಾಯಿಯನ್ನು ತಿಂದು ವಾಂತಿ ಹಾಗೂ ಅಲರ್ಜಿಗೊಳಗಾಗಿದ್ದಾಳೆ. ಪುತ್ತೂರು ಆಸ್ಪತ್ರೆಗೆ ಹೋಗುವ ಸಂದರ್ಭ ಕೋಮಾಕ್ಕೆ ಜಾರಿದ್ದು, ಅಲ್ಲಿಂದ ಮಂಗಳೂರಿಗೆ ವರ್ಗಾವಣೆ ಮಾಡಲು ಸೂಚಿಸಿದ್ದಾರೆ. ಈ ಸಂದರ್ಭ ಮುಖ ಊದಿಕೊಂಡಿತ್ತೆನ್ನಲಾಗಿದೆ. ಮಂಗಳೂರಿನಲ್ಲಿ ಚಿಕಿತ್ಸೆ ಫಲಕಾರಿಯಾಗದೆ, ಮಂಗಳವಾರ ಮೃತಪಟ್ಟಿದ್ದಾಳೆ ಎಂದು ತಿಳಿದು ಬಂದಿದೆ.
ಯುವಕನ ಮೇಲೆ ಲಾಂಗ್ ನಿಂದ ಅಟ್ಯಾಕ್! ಸಿಸಿಟಿವಿಯಲ್ಲಿ ಭೀಕರ ದೃಶ್ಯ ಸೆರೆ
ಬೆಂಗಳೂರು: ಬಾರ್ನಲ್ಲಿ ನಡೆದ ಸಣ್ಣ ಜಗಳದಿಂದಾಗಿ ಯುವಕನೊಬ್ಬನನ್ನು ಕೆಲವು ಯುವಕರ ತಂಡವೊಂದು ಅಟ್ಟಾಡಿಸಿ ಲಾಂಗ್ ನಿಂದ ಹಲ್ಲೆ ನಡೆಸಿದ ಘಟನೆ ಕಾಮಾಕ್ಷಿಪಾಳ್ಯದಲ್ಲಿ ನಡೆದಿದೆ. ಅವಾಜ್ ಹಾಕಿದ್ದಕ್ಕೆ ರೋಹಿತ್ ಗೌಡ ಎಂಬಾತನ ಮೇಲೆ ಕಾಮಾಕ್ಷಿಪಾಳ್ಯದ ರಾಜು ಮತ್ತು ತಂಡದವರು ನಡುರಸ್ತೆಯಲ್ಲಿ ಲಾಂಗ್ ಬೀಸುತ್ತಾ ಹಲ್ಲೆ ಮಾಡಿದ್ದಾರೆ.
ಕಳೆದ ವಾರ ರೋಹಿತ್ ಬಾರ್ವೊಂದರಲ್ಲಿ ಇದ್ದಾಗ ರಾಜು, ಧನುಷ್, ಗುರುಪ್ರಸಾದ್ ಅವಾಜ್ ಹಾಕಿ ಹೋಗಿದ್ದ. ಇದರಿಂದ ಈ ಮೂವರು ಮನಸ್ಸಿನಲ್ಲಿ ದ್ವೇಷ ಕಾರುತ್ತಿದ್ದರು. ರೋಹಿತ್ ನನ್ನು ಹೀಗೆ ಬಿಟ್ಟರೇ ನಮ್ಮನ್ನೇ ಮುಗಿಬಿಡುತ್ತಾನೆ ಎಂದುಕೊಂಡು ಆತನ ಹತ್ಯೆಗೆ ಸ್ಕೆಚ್ ಹಾಕಿದರು. ಕಳೆದ ಸೆ. 9ರ ಮಧ್ಯಾಹ್ನದಂದು ಸ್ನೇಹಿತರ ಜತೆ ಬರುತ್ತಿದ್ದ ರೋಹಿತ್ ನನ್ನು ಕಂಡೊಡನೆ ಸ್ಕೂಟರ್ ನಿಂದ ಇಳಿದ ರಾಜು, ಧನುಷ್, ಗುರುಪ್ರಸಾದ್ ಮಾರಕಾಸ್ತ್ರದಿಂದ ದಾಳಿ ನಡೆಸಿದ್ದಾರೆ. ಕಾಮಾಕ್ಷಿಪಾಳ್ಯದ ಅಮ್ಮ ಮಹೇಶ್ವರಿ ದೇವಾಲಯದ ಮುಂದೆಯೇ ಅಟ್ಯಾಕ್ ಮಾಡಿ ಮನಬಂದಂತೆ ಲಾಂಗ್ ಬೀಸಿದ್ದಾರೆ.