ದೇಶದ ಆರ್ಥಿಕ ತಜ್ಞ, ಪ್ರಧಾನಿ ಮನಮೋಹನ್ ಸಿಂಗ್ ಇನ್ನಿಲ್ಲ!
– ತೀವ್ರ ಅನಾರೋಗ್ಯದಿಂದ ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ನಿಧನ
– ಎಲ್ಲೆಡೆ ಸಂತಾಪ: ಮರೆಯಾದ ದೇಶದ ಹಿರಿಯ ನಾಯಕ..!
NAMMUR EXPRESS NEWS
ನವದೆಹಲಿ: ಮಾಜಿ ಪ್ರಧಾನಿ ಹಾಗೂ ಖ್ಯಾತ ಅರ್ಥಶಾಸ್ತ್ರಜ್ಞ ಮನಮೋಹನ್ ಸಿಂಗ್ (92) ಅವರು ದೆಹಲಿಯ ಏಮ್ಸ್ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಈ ಮೂಲಕ ದೇಶದ ಮಹಾನ್ ಚೇತನ ಮರೆಯಾಗಿದೆ.
ವಿಶ್ವ ಮಟ್ಟದಲ್ಲಿ ಭಾರತದ ಆರ್ಥಿಕತೆಯನ್ನು ಪ್ರತಿನಿಧಿಸಿದ್ದ ಕಾಂಗ್ರೆಸ್ ನಾಯಕ, ಮಾಜಿ ಪ್ರಧಾನಿ ಸಿಂಗ್ ಆರೋಗ್ಯ ಹದಗೆಟ್ಟಿದ್ದ ಹಿನ್ನೆಲೆಯಲ್ಲಿ ಗುರುವಾರ ಸಂಜೆ ಅವರನ್ನು ತುರ್ತು ಚಿಕಿತ್ಸಾ ಘಟಕಕ್ಕೆ ಕರೆತರಲಾಗಿತ್ತು. ತೀವ್ರ ಉಸಿರಾಟದ ಸಮಸ್ಯೆಯಿಂದಾಗಿ ಕಾರಣ ಐಸಿಯುನಲ್ಲಿ ಚಿಕಿತ್ಸೆ ಮುಂದುವರಿದಿತ್ತು. ಆದರೆ, ರಾತ್ರಿ ಹೊತ್ತಿಗೆ ಅವರು ಕೊನೆಯುಸಿರೆಳೆದಿದ್ದಾರೆ.
ಮನಮೋಹನ್ ಸಿಂಗ್ ಅವರು 1991-96ರ ಅವಧಿಯಲ್ಲಿ ಪಿವಿ ನರಸಿಂಹರಾವ್ ನೇತೃತ್ವದ ಸರ್ಕಾರದಲ್ಲಿ ದೇಶದ ಹಣಕಾಸು ಸಚಿವರಾಗಿ ಪ್ರಾಮುಖ್ಯತೆಯನ್ನು ಗಳಿಸಿದರು. ಯುಪಿಎಯ ಎರಡು ಅವಧಿಯ ಪ್ರಧಾನಿಯಾಗಿ ಅವರು (2004 ಮತ್ತು 2014) ಸೇವೆ ಸಲ್ಲಿಸಿದರು. ಈ ವರ್ಷದ (2024) ಆರಂಭದ ವರೆಗೆ ರಾಜ್ಯಸಭೆಯ ಸದಸ್ಯರಾಗಿ ಸೇವೆ ಸಲ್ಲಿಸಿದರು. ಏಪ್ರಿಲ್ನಲ್ಲಿ ರಾಜ್ಯಸಭೆಯಿಂದ ನಿವೃತ್ತರಾದರು. ಗಾಂಧಿ ಕುಟುಂಬ ಹೊರತು ಪಡಿಸಿ ಕಾಂಗ್ರೆಸ್ನಲ್ಲಿ ಹೆಚ್ಚು ಅವಧಿಯ ಪ್ರಧಾನಿ ಆಗಿದ್ದ ಹೆಗ್ಗಳಿಕೆ ಇವರದ್ದಾಗಿದೆ.
ಎಲ್ಲೆಡೆ ಸಂತಾಪ: ಕಾಂಗ್ರೆಸ್ ನಾಯಕರು, ದೇಶದ ಮಾಜಿ ಪ್ರಧಾನಿ ನಿಧನಕ್ಕೆ ಎಲ್ಲೆಡೆ ಸಂತಾಪ ವ್ಯಕ್ತವಾಗುತ್ತಿದೆ.