ವಿರೋಧದ ನಡುವೆಯೂ ತಮಿಳುನಾಡಿಗೆ ಕಾವೇರಿ ನೀರು
– ರಾತ್ರಿ ಸದ್ದಿಲ್ಲದೆ ನೀರು ಹರಿಸುತ್ತಿರುವ ಸರಕಾರ
NAMMUR EXPRESS : ಬೆಂಗಳೂರು : ಮಳೆಯಿಲ್ಲದೆ ರಾಜ್ಯ ಸಂಕಷ್ಟಕ್ಕೆ ಸಿಲುಕಿದ್ದರೂ ಸರಕಾರ ರೈತರ ತೀವ್ರ ವಿರೋಧ ಲೆಕ್ಕಿಸದೆ ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿದೆ. ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಆದೇಶದಂತೆ ಬುಧವಾರ ರಾತ್ರಿಯಿಂದಲೇ ಸದ್ದಿಲ್ಲದೆ ತಮಿಳುನಾಡಿಗೆ ಕಾವೇರಿ ನದಿ ನೀರು ಬಿಡಲಾರಂಭಿಸಿದೆ. ಪ್ರಾಧಿಕಾರದ ಆದೇಶವನ್ನು ಪಾಲನೆ ಮಾಡಲು ಮುಂದಾಗಿರುವ ರಾಜ್ಯ ಸರಕಾರ, ನಿತ್ಯ 5 ಸಾವಿರ ಕ್ಯೂಸೆಕ್ನಂತೆ ಮುಂದಿನ 15 ದಿನಗಳ ಕಾಲ ತಮಿಳುನಾಡಿಗೆ ನೀರು ಬಿಡುಗಡೆ ಮಾಡಬೇಕಿದೆ. ರೈತರ ಪ್ರತಿಭಟನೆಯ ನಡುವೆಯೂ ಕರ್ನಾಟಕ ಕಾಂಗ್ರೆಸ್ ಸರಕಾರ ತಮಿಳುನಾಡಿಗೆ ಹರಿಸುತ್ತಿರುವ ನೀರಿನ ಪ್ರಮಾಣವನ್ನು ಹೆಚ್ಚಿಸಿದೆ.
ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಕೆಆರ್ಎಸ್ ಜಲಾಶಯದಿಂದ ಕಾವೇರಿ ನದಿಗೆ 7,279 ಕ್ಯೂಸೆಕ್ ನೀರು ಹರಿಬಿಡಲಾಗುತ್ತಿದೆ. ಕೆಆರ್ಎಸ್ ಜಲಾಶಯದ ನೀರಿನ ಮಟ್ಟ 100 ಅಡಿಗೆ ಕುಸಿದಿದೆ. ಗರಿಷ್ಟ 124.80 ಅಡಿ ನೀರಿನ ಮಟ್ಟ ಹೊಂದಿರುವ ಕೆಆರ್ಎಸ್ ಜಲಾಶಯದ ಇಂದಿನ ನೀರಿನ ಮಟ್ಟ 100,95 ಅಡಿ ಇದೆ.