ವೇದ, ಧರ್ಮ ರಕ್ಷಣೆ ಕರೆ ಕೊಟ್ಟ ತೀರ್ಥಹಳ್ಳಿ ಧರ್ಮ ಸಭೆ
– ತೀರ್ಥಹಳ್ಳಿಯಲ್ಲಿ ನಡೆದ ಧರ್ಮ ಸಭೆಯಲ್ಲಿ ಮೂರು ಮಠದ ಶ್ರೀಗಳ ಸಮಾಗಮ
– ರಾಮಚಂದ್ರಾಪುರಮಠ ಧರ್ಮಸಭೆಯಲ್ಲಿ ಸಾವಿರಾರು ಭಕ್ತರು
NAMMUR EXPRESS NEWS
ತೀರ್ಥಹಳ್ಳಿ: ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದಿದೆ. ನಿಜ. ಆದರೆ ನಮ್ಮ ಧರ್ಮಕ್ಕೆ ಇನ್ನೂ ಬಂದಿಲ್ಲ. ಅದು ಬರಬೇಕು ಎಂದಾದರೆ ವೇದಗಳ ಸಂರಕ್ಷಣೆ ಯಾಗಲೇಬೇಕು ಎಂದು ಕಾಂಚೀ ಕಾಮಕೋಟಿ ಪೀಠದ ಜಗದ್ಗುರು ಶಂಕರವಿಜಯೇಂದ್ರ ಸರಸ್ವತಿ ಸ್ವಾಮೀಜಿ ಹೇಳಿದ್ದಾರೆ. ಇತ್ತೀಚಿಗೆ ರಾಮಚಂದ್ರಾಪುರಮಠದ ತೀರ್ಥಹಳ್ಳಿ ರಥ ಬೀದಿಯ ಶಾಖಾ ಮಠದಲ್ಲಿ ಏರ್ಪಡಿಸಿದ್ದ ಜಗದ್ಗುರು ತ್ರಯರ ಸಾನ್ನಿಧ್ಯದ ಧರ್ಮಸಭೆಯಲ್ಲಿ ಅವರು ಆಶೀರ್ವಚನ ನೀಡಿದರು. ಸರ್ವರ ಒಳಿತು ಬಯಸುವ ಬ್ರಾಹ್ಮಣ ಸಮಾಜ ಮೊದಲು ಶ್ರದ್ದೆಯಿಂದ ಇದನ್ನು ಅನುಸರಿಸಬೇಕು. ಇದು ಸ್ವಾರ್ಥಕ್ಕಾಗಿ ಅಲ್ಲ ದೇಶದ ಪ್ರತಿಯೊಬ್ಬರ ಒಳಿತಿಗಾಗಿ. ನಿಜವಾಗಿಯೂ ಸನಾತನ ಧರ್ಮದ ಉದ್ದೇಶ ಕೂಡ ಸರ್ವರ ಒಳಿತನ್ನು ಬಯಸುವ ಕಾರ್ಯದಿಂದ ಕೂಡಿದೆ. ಕರ್ನಾಟಕ ಅನ್ನದಾನಕ್ಕೆ ಹೆಸರು ಪಡೆದ ರಾಜ್ಯ, ಆ ಅನ್ನ ಆರೋಗ್ಯವೂ ಆಗಿರಬೇಕು ಎಂದಾದರೆ ಭೂಮಿಯ ಫಲವತ್ತತೆ ಇರಬೇಕು. ಅದು ರಾಸಾಯನಿಕದಿಂದಲ್ಲ ಸಾವಯವದಿಂದ ಎಂದರು.
ಶಕಟಪುರ ಬದರಿ ಪೀಠದ ಶ್ರೀ ಕೃಷ್ಣಾನಂದತೀರ್ಥ ಸ್ವಾಮೀಜಿ ಸಂದೇಶನೀಡಿ, ಮನುಷ್ಯನ ಮನದೊಳಗೆ ಭಕ್ತಿಯ ಮಾಲೆ ಇಲ್ಲದಿದ್ದರೆ ಭಗವಂತನಿಗೆ ದುರ್ಜನರು ಯಾರು, ಸಜ್ಜನರು ಯಾರು ಎನ್ನುವುದು ತಿಳಿಯುವುದಿಲ್ಲ. ಎಲ್ಲರೂ ಸೇರಿ ಧರ್ಮ ಉಳಿಸೋಣ ಎಂದರು. ರಾಮಚಂದ್ರಾಪುರಮಠದ ಶ್ರೀರಾಘವೇಶ್ವರ ಭಾರತೀ ಸ್ವಾಮೀಜಿ ಆಶೀರ್ವಚನ ನೀಡಿ, ನಮ್ಮ ದೇಶದ ಅನೇಕ ಮಠಗಳಲ್ಲಿ ಮೂಲ ಉದ್ದೇಶ ಮರೆತು ಹೋಗಿದೆ, ವೇದ ರಕ್ಷಣೆ, ಧರ್ಮ ರಕ್ಷಣೆಯ ಚಿಂತನೆಯೇ ಉದ್ದೇಶವಾಗಿರಬೇಕು ಎಂದರು.
ಮಠಗಳ ವಿದ್ವಾನ್ ಕೃಷ್ಣಾನಂದ ಶರ್ಮ ಪ್ರಾಸ್ತಾವಿಕ ಮಾತನಾಡಿದರು. ಹವ್ಯಕ ಮಹಾಮಂಡಲದ ಅಧ್ಯಕ್ಷ ಮೋಹನ್ ಭಾಸ್ಕರ ಹೆಗಡೆ, ಪ್ರವೀಣ ಭೀಮನಕೋಣೆ, ಹರಿಪ್ರಸಾದ್ ಪೆರಿಯಪ್ಪು, ಪ್ರಶಾಂತ ಮೂಡಲಮನೆ, ವಿಷ್ಣಭಟ್ ಮತ್ತಿತರರು ಇದ್ದರು. ಸಂಸದ ಬಿ.ವೈ. ರಾಘವೇಂದ್ರ, ಎಂಎಡಿಬಿ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ, ಹಾಲು ಒಕ್ಕೂಟದ ಅಧ್ಯಕ್ಷ ಎಚ್.ಎನ್. ವಿದ್ಯಾಧರ, ಗುರುಗಳಿಂದ ಆಶೀರ್ವಾದ ಪಡೆದರು. ಮಲೆನಾಡು ಹಾಗೂ ಕರಾವಳಿ ಭಾಗದ ಸಾವಿರಾರು ಮಂದಿ ಭಾಗಿಯಾಗಿದ್ದರು.