ಮದುವೆಯಾಗು ಎಂದಿದ್ದಕ್ಕೆ ಆತ್ಮಹತ್ಯೆ!
ಇಬ್ಬರು ಮಹಿಳೆಯರ ವಿರುದ್ಧ ಕೇಸ್
– ತುಮಕೂರು: ಟಿಜಿಎಂಸಿ ಬ್ಯಾಂಕ್ ವಿರುದ್ಧ ವಂಚನೆ ಪ್ರಕರಣ
– ಕೆಲಸದಿಂದ ವಜಾ: ಕಚೇರಿಗೆ ಬೆಂಕಿ ಹಾಕಿದ ನೌಕರರು!
– ಬಿಎಂಟಿಸಿ ಬಸ್ ಹರಿದು 3 ವರ್ಷದ ಮಗು ಸಾವು.!
– ಹಿಂದೂ ಕಾರ್ಯಕರ್ತ ಪುನೀತ್ ವಿರುದ್ಧ ಆತ್ಮಹತ್ಯೆ ಯತ್ನ ಕೇಸ್
NAMMUR EXPRESS NEWS
ಬೆಂಗಳೂರು: ಬೆಂಗಳೂರಲ್ಲಿ ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆಗೆ ದಾಖಲಾಗಿದ್ದ 28 ವರ್ಷದ ವ್ಯಕ್ತಿ ಶನಿವಾರ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಇಬ್ಬರು ಮಹಿಳೆಯರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮೃತರನ್ನು ರಾಮಮೂರ್ತಿನಗರ ಪೊಲೀಸ್ ಠಾಣಾ ವ್ಯಾಪ್ತಿಯ ನಿವಾಸಿ ಸಂತೋಷ್ ಎಂದು ಗುರುತಿಸಲಾಗಿದೆ.ಅವರು ಅಕ್ಟೋಬರ್ 3 ರಂದು ಆತ್ಮಹತ್ಯೆಗೆ ಯತ್ನಿಸಿದ್ದರು. ಮತ್ತು ಅವರ ಕೆಲಸದ ಸ್ಥಳದ ಇಬ್ಬರು ಮಹಿಳೆಯರು ಜವಾಬ್ದಾರರು ಎಂದು ಅವರ ಕುಟುಂಬ ಆರೋಪಿಸಿದೆ.
ವರದಿಯ ಪ್ರಕಾರ, ಕೆಲವು ತಿಂಗಳ ಹಿಂದೆ ಅವರು ಬೇರೆಯಾಗುವವರೆಗೂ ಸಂತೋಷ್ ತನ್ನ ಕೆಲಸದ ಸ್ಥಳದ ಮಹಿಳೆಯೊಂದಿಗೆ ಸಂಬಂಧ ಹೊಂದಿದ್ದರು. ತರುವಾಯ, ಅವನು ಅದೇ ಕೆಲಸದ ಸ್ಥಳದಲ್ಲಿ ಇನ್ನೊಬ್ಬ ಮಹಿಳೆಗೆ ಹತ್ತಿರವಾದನು, ಇದು ಅವನ ಮಾಜಿ ಗೆಳತಿಗೆ ಕೋಪ ತರಿಸಿತು. ಅವಳು ಅವನ ಸಹೋದ್ಯೋಗಿಗಳ ಮುಂದೆ ಅವನನ್ನು ಗದರಿಸಿದಳು.
ಮೃತನ ಕುಟುಂಬದವರು ಪೊಲೀಸರಿಗೆ ಮಾಹಿತಿ ನೀಡಿದ್ದು, ಆತನ ಮಾಜಿ ಗೆಳತಿ ಪದೇ ಪದೇ ಕರೆ ಮಾಡಿ ಮದುವೆಯಾಗುವಂತೆ ಒತ್ತಡ ಹೇರುತ್ತಿದ್ದಳು, ಮತ್ತೊಬ್ಬ ಮಹಿಳೆ ಕೂಡ ಆತನನ್ನು ಮದುವೆಯಾಗುವಂತೆ ಒತ್ತಾಯಿಸಿದ್ದಾಳೆ.
ಇಬ್ಬರು ಮಹಿಳೆಯರ ವಿರುದ್ಧ ಐಪಿಸಿ ಸೆಕ್ಷನ್ 306 (ಆತ್ಮಹತ್ಯೆಗೆ ಪ್ರಚೋದನೆ) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ತುಮಕೂರು: ಟಿಜಿಎಂಸಿ ಬ್ಯಾಂಕ್ ವಿರುದ್ಧ ವಂಚನೆ ಪ್ರಕರಣ
ತುಮಕೂರು: ತುಮಕೂರು ಗ್ರೇನ್ ಮರ್ಚಂಟ್ ಕೋ-ಆಪರೇಟಿವ್ ಬ್ಯಾಂಕ್ (ಟಿಜಿಎಂಸಿ) ಅಧ್ಯಕ್ಷ, ಉಪಾಧ್ಯಕ್ಷ, ನಿರ್ದೇಶಕರು, ಸಿಇಒ ಹಾಗೂ ಲೆಕ್ಕಪರಿಶೋಧಕರ ವಿರುದ್ಧ ನಗರದ ಹೊಸಬಡಾವಣೆ ಪೊಲೀಸ್ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಾಗಿದೆ.ಜಿ.ಎಸ್.ಬಸವರಾಜು ಎಂಬುವರು 24 ಜನರ ವಿರುದ್ಧ ಪ್ರಕರಣ ದಾಖಲಿಸಿದ್ದು, ತನಿಖೆ ನಡೆಸಿ ಬ್ಯಾಂಕ್ಗೆ ವಂಚನೆ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿದ್ದಾರೆ.ಬ್ಯಾಂಕ್ ಸದಸ್ಯರಿಗೆ ನಂಬಿಕೆ ದ್ರೋಹ ಮಾಡಿ, ಸುಳ್ಳು ಲೆಕ್ಕವನ್ನು ಸೃಷ್ಟಿಸಿ ವಂಚಿಸಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.
ಕೆಲಸದಿಂದ ವಜಾ: ಕಚೇರಿಗೆ ಬೆಂಕಿ ಹಾಕಿದ ನೌಕರರು!
ಬೆಂಗಳೂರು: ಕೆಲಸದಿಂದ ವಜಾಗೊಂಡಿದ್ದಕ್ಕೆ ಆಕ್ರೋಶಗೊಂಡ ಇಬ್ಬರು ನೌಕರರು, ಪೃಥ್ವಿ ಪಾರ್ಕ್ ಸ್ಕೋರ್ ರಿಯಲ್ ಎಸ್ಟೇಟ್ ಕಂಪನಿಗೆ ಬೆಂಕಿ ಹಾಕಿದ್ದು ಪೀಠೋಪಕರಣಗಳು ಸುಟ್ಟಿವೆ. ಆರೋಪಿಗಳ ವಿರುದ್ಧ ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ರಾಹುಲ್ ಪೂಜಾರಿ ಹಾಗೂ ಪೀಟರ್ ಜಾನ್ ಎಂಬುವರು ಕೆಲಸದಿಂದ ವಜಾಗೊಂಡಿದ್ದರು.ಇದೇ ಸಿಟ್ಟಿನಿಂದ ಸೆ.27ರಂದು ಕಚೇರಿಗೆ ಬಂದು ಯಾರೂ ಇಲ್ಲದ ವೇಳೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ. ಇದರಿಂದ 11 ಲಕ್ಷ ಮೌಲ್ಯದ ಪೀಠೋಪಕರಣಗಳು ಭಸ್ಮವಾಗಿವೆ ಎಂದು ಮಾಲೀಕರು ದೂರು ನೀಡಿದ್ದಾರೆ.
ಬೆಂಗಳೂರು: ಬಿಎಂಟಿಸಿ ಬಸ್ ಹರಿದು ಮಗು ಸಾವು
ಬೆಂಗಳೂರು : ಬಿಎಂಟಿಸಿ ಬಸ್ ಹರಿದ ಪರಿಣಾಮ ಮೂರು ವರ್ಷದ ಗಂಡು ಮಗು ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಭಾನುವಾರ ಸಂಜೆ ಗಾರ್ವೇಭಾವಿಪಾಳ್ಯ ಜಂಕ್ಷನ್ ನಲ್ಲಿ ನಡೆದಿದೆ.ಆಯಾನ್ ಪಾಷಾ (3) ಮೃತ ಮಗು ಎಂದು ಗುರುತಿಸಲಾಗಿದೆ.ಆಯಾನ್ ಪಾಷಾ ದೊಡ್ಡಮ್ಮ ರುಸ್ಮಾರೊಂದಿಗೆ ಭಾನುವಾರ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದನು. ಈ ವೇಳೆ ಹಿಂಬದಿಯಿಂದ ಬಂದ ಬಿಎಂಟಿಸಿ ಬಸ್ ಇವರ ವಾಹನಕ್ಕೆ ಡಿಕ್ಕಿಯಾಗಿದೆ. ದ್ವಿಚಕ್ರ ವಾಹನದ ಹಿಂಬದಿಯಲ್ಲಿ ಕುಳಿತಿದ್ದ ಮಗು ಕೆಳಗೆ ಬಿದ್ದಿದ್ದು, ಈ ವೇಳೆ ಬಸ್ನ ಚಕ್ರ ಮಗುವಿನ ತಲೆ ಮೇಲೆ ಹರಿದಿದೆ.
ತಲೆ ಮೇಲೆ ಬಸ್ ಹರಿದ ಪರಿಣಾಮ ಮಗು ಸ್ಥಳದಲ್ಲೇ ಸಾವನ್ನಪ್ಪಿದೆ. ಕೂಡಲೇ ದೊಡ್ಡಮ್ಮ ರುಸ್ಮಾ ಅವರು ಮಗುವನ್ನು ತಮ್ಮ ಮಡಿಲಿನಲ್ಲಿ ಎತ್ತುಕೊಂಡು ರೋದಿಸತೊಡಗಿದರು. ಘಟನೆ ಸಂಬಂಧ ಹುಳಿಮಾವು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬಿಎಂಟಿಸಿ ಚಾಲಕನನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಘಟನೆ ಕುರಿತು ಇನ್ನಷ್ಟು ಮಾಹಿತಿ ಲಭ್ಯವಾಗಬೇಕಿದೆ.
ಹಿಂದೂ ಕಾರ್ಯಕರ್ತ ಪುನೀತ್ ವಿರುದ್ಧ ಆತ್ಮಹತ್ಯೆ ಯತ್ನ ಕೇಸ್
ಬೆಂಗಳೂರು: ತಮ್ಮ ವಿರುದ್ಧ ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿರುವ ಪ್ರಕರಣಗಳ ಸ್ಪಷ್ಟಿಕರಣ ನೀಡವಂತೆ ಕಳೆದ ಕೆಲ ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಹಿಂದೂ ಕಾರ್ಯಕರ್ತ ಪುನೀತ್ ಕೆರೆಹಳ್ಳಿ ವಿರುದ್ಧ ಉಪ್ಪಾರಪೇಟೆ ಠಾಣೆಯಲ್ಲಿ ಆತ್ಮಹತ್ಯೆ ಯತ್ನ ಪ್ರಕರಣ ದಾಖಲಾಗಿದೆ.ಅ.3ರಂದು ಉಪ್ಪಾರಪೇಟೆ ಠಾಣೆ ಪೊಲೀಸರು ಸ್ವಾತಂತ್ರ್ಯ ಉದ್ಯಾನದಲ್ಲಿ ಉಪವಾಸ ಸತ್ಯಾಗ್ರಹ ನಡೆಸಿದ್ದ ಪುನೀತ್ ಕೆರೆಹಳ್ಳಿ ಅವರನ್ನು ವಶಕ್ಕೆ ಪಡೆದು ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಿದ್ದರು. ಆಸ್ಪತ್ರೆಯಲ್ಲಿ ಉಪವಾಸ ಅಂತ್ಯಗೊಳಿಸಿ ಆಹಾರ-ನೀರು ಸೇವಿಸುವಂತೆ ವೈದ್ಯರು ಮನವೊಲಿಸಲು ಪ್ರಯತ್ನಿಸಿದ್ದಾರೆ. ಆಹಾರ-ನೀರು ಸೇವಿಸದಿದ್ದಲ್ಲಿ ಜೀವಕ್ಕೆ ಅಪಾಯವಾಗಲಿದೆ ಎಂದು ವೈದ್ಯರು ಹೇಳಿದ್ದಾರೆ.
ಆದರೂ ಪುನೀತ್ ಕೆರೆಹಳ್ಳಿ, ಸರ್ಕಾರ ತಮ್ಮ ವಿರುದ್ಧ ವಿವಿಧ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳನ್ನು ದಾಖಲಿಸಿದೆ. ಈ ಪ್ರಕರಣಗಳ ಸಂಬಂಧ ಸ್ಪಷ್ಟಿಕರಣ ನೀಡುವವರೆಗೂ ನಾನು ಆಹಾರ-ನೀರು ಸೇವಿಸುವುದಿಲ್ಲ. ನಾನು ಯಾವುದೇ ವೈದ್ಯಕೀಯ ಚಿಕಿತ್ಸೆ ಪಡೆಯುವುದಿಲ್ಲ. ನನ್ನ ಪ್ರಾಣ ಹೋದರೂ ಪರವಾಗಿಲ್ಲ. ನಾನು ಹೀಗೆಯೇ ಇರುತ್ತೇನೆ ಎಂದು ಪುನೀತ್ ಪಟ್ಟು ಹಿಡಿದಿದ್ದಾರೆ. ಈ ಬಗ್ಗೆ ವಿಕ್ಟೋರಿಯಾ ಆಸ್ಪತ್ರೆ ವೈದ್ಯರು ನೀಡಿದ ವರದಿ ಮೇರೆಗೆ ಉಪ್ಪಾರಪೇಟೆ ಠಾಣೆ ಪೊಲೀಸರು, ಪುನೀತ್ ಕೆರೆಹಳ್ಳಿ ವಿರುದ್ಧ ಆತ್ಮಹತ್ಯೆಗೆ ಯತ್ನ ಪ್ರಕರಣ ದಾಖಲಿಸಿದ್ದಾರೆ. ಕೊಲೆ, ಬೆದರಿಕೆ, ಸುಲಿಗೆ ಸೇರಿ 10 ಪ್ರಕರಣಗಳ ಆರೋಪಿಯಾಗಿರುವ ಪುನೀತ್ ಕೆರೆಹಳ್ಳಿ ವಿರುದ್ಧ ಸಿಸಿಬಿ ಪೊಲೀಸರು ಗೂಂಡಾ ಕಾಯ್ದೆ ಜಾರಿಗೊಳಿಸಿ ಬಂಧಿಸಿ ಜೈಲಿಗೆ ಕಳುಹಿಸಿದ್ದರು. ಜೈಲಿನಿಂದ ಹೊರಗಡೆ ಬಂದ ಪುನೀತ್ ಕೆರೆಹಳ್ಳಿ ಸರ್ಕಾರ ತನ್ನ ವಿರುದ್ಧ ಉಪವಾಸ ಸತ್ಯಾಗ್ರಹ ಆರಂಭಿಸಿದ್ದರು.