ಟಾಪ್ 5 ನ್ಯೂಸ್ ಕರ್ನಾಟಕ
– ಹೊಸಪೇಟೆ: ಹಗ್ಗ ತುಂಡಾಗಿ ಸ್ತಂಭದಿಂದ ಬಿದ್ದ ತ್ರಿವರ್ಣ ಧ್ವಜ
– ಬೆಳಗಾವಿ: ಮತ್ತೊಂದು ಮಕ್ಕಳ ಮಾರಾಟ ಜಾಲ ಪತ್ತೆ!
– ಬೀದರ್: ಬಿಹಾರದಿಂದ ಬೈಕಲ್ಲಿ ಬಂದಿದ್ದ ದರೋಡೆಕೋರರು!
– ಮೈಸೂರು: ಹೃದಯಾಘಾತದಿಂದ 10ನೇ ಕ್ಲಾಸ್ ವಿದ್ಯಾರ್ಥಿನಿ ಸಾವು
– ದೇಶದ ಮೊದಲ ಹೃದಯ ಬೈಪಾಸ್ ಸರ್ಜರಿ ಡಾಕ್ಟರ್ ನಿಧನ
NAMMUR EXPRESS NEWS
ಹೊಸಪೇಟೆ: ನಗರದ ಪುನೀತ್ ರಾಜಕುಮಾರ ಜಿಲ್ಲಾ ಕ್ರೀಡಾಂಗಣದಲ್ಲಿರುವ ದೇಶದ ಎರಡನೇ ಅತಿ ಎತ್ತರದ (405 ಅಡಿ) ಧ್ವಜಸ್ತಂಭದಲ್ಲಿ ಧ್ವಜಾರೋಹಣ ವೇಳೆ ಏರುತ್ತಿದ್ದ ರಾಷ್ಟ್ರಧ್ವಜ ಅರ್ಧದಲ್ಲೇ ಹಗ್ಗ ತುಂಡರಸಿ ಕೆಳಗೆ ಬಿದ್ದ ಘಟನೆ ಭಾನುವಾರ ಬೆಳಗ್ಗೆ ನಡೆದಿದೆ. ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವ ಜಮೀರ್ಅಹ್ಮದ್ ಖಾನ್ ಧ್ವಜಾರೋಹಣ ನೆರವೇರಿಸಿದರು. ಆದರೆ, ತಾಂತ್ರಿಕ ಕಾರಣದಿಂದ ಅರ್ಧದಲ್ಲಿಯೇ ಹಗ್ಗ ತುಂಡಾಗಿ ಧ್ವಜ ತುಂಡರಸಿ ಕೆಳಗೆ ಬಿತ್ತು. ಈ ಅವಘಡಕ್ಕೆ ಕಾರಣರಾದ ಸಿಬ್ಬಂದಿ, ಅಧಿಕಾರಿಗಳ ವಿರುದ್ಧ ತನಿಖೆ ಕೈಗೊಂಡು, ಕ್ರಮ ವಹಿಸಲು ಜಿಲ್ಲಾಧಿಕಾರಿಗೆ ಸಚಿವರು ಸೂಚಿಸಿದರು.
– ಬೆಳಗಾವಿ : ಬೆಳಗಾವಿಯಲ್ಲಿ ಮತ್ತೊಂದು ಮಕ್ಕಳ ಮಾರಾಟ ಜಾಲ ಪತ್ತೆ!
ಬೆಳಗಾವಿ : ಬೆಳಗಾವಿ ಜಿಲ್ಲೆಯಲ್ಲಿ ಮತ್ತೊಂದು ಮಗು ಮಾರಾಟ ಜಾಲ ಪತ್ತೆಯಾಗಿದ್ದು, ಹುಕ್ಕೇರಿ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಮಹಾರಾಷ್ಟ್ರ ಮೂಲದ ಆರೋಪಿಗಳಾದ ಸಂಗೀತಾ ಗೌಳಿ, ಸಂಗೀತಾ ತಾವಡೆ, ಮೋಹನ್ ತಾವಡೆ ಬಂಧಿತರು. ಉಳಿದ ಆರೋಪಿಗಳಾದ ನಂದಕುಮಾರ ಡೋರಲೇಕರ, ನಂದಿನಿ ಡೋರಲೇಕರಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ. ಮಕ್ಕಳ ಮಾರಾಟ ಗ್ಯಾಂಗ್ ವಿಧವೆಯರನ್ನೇ ಟಾರ್ಗೆಟ್ ಮಾಡುತ್ತದೆ. ಮಗು ಇದ್ದು ಗಂಡನಿಲ್ಲದ ಮಹಿಳೆಯರಿಗೆ ಎರಡನೇ ಮದುವೆ ಮಾಡಿಸುತ್ತೆ. ಹುಕ್ಕೇರಿ ತಾಲೂಕಿನ ಸುಲ್ತಾನಪುರ ಗ್ರಾಮದ ಅರ್ಚನಾ ಎಂಬುವರನ್ನು ರಾಜು ಮಗು ಜೊತೆ ಎರಡನೇ ಮದುವೆ ಮಾಡಿಸಿತ್ತು. ಅರ್ಚನಾ ಅವರ ಮೊದಲ ದಾಂಪತ್ಯದ ಸಾಕ್ಷಿಯಾಗಿ ಗಂಡು ಮಗು ಜನಿಸಿತ್ತು. ಈ ಗಂಡು ಮಗು ಅರ್ಚನಾ ಅವರ ಬಳಿ ಇದೆ. ಆದರೆ, ಈ ಮಗು ಅನಾರೋಗ್ಯದಿಂದ ಬಳಲುತ್ತಿತ್ತು. ಚಿಕಿತ್ಸೆ ಕೊಡಿಸುವುದಾಗಿ ಹೇಳಿ ಆರೋಪಿಗಳಾದ ತಾವಡೆ ದಂಪತಿ ಮಗುವನ್ನು ಮಹಾರಾಷ್ಟ್ರದ ಕೊಲ್ಲಾಪುರ ಜಿಲ್ಲೆಯ ಗಡಹಿಂಗ್ಲಜ್ಗೆ ಕರೆದುಕೊಂಡು ಹೋಗಿದ್ದರು. ಅಲ್ಲಿ, ಸಂಗೀತಾ ಗೌಳಿ ಮನೆಯಲ್ಲಿ ನಂದಕುಮಾರ ಡೋರಲೇಕರ ದಂಪತಿಗೆ 3 ಲಕ್ಷ ರೂ.ಗೆ ಮಗು ಮಾರಾಟ ಮಾಡಿದ್ದರು. ಮಗು ಮಾರಾಟದಿಂದ ಬಂದ ಹಣವನ್ನು ಮೂವರು ಆರೋಪಿಗಳು ಹಂಚಿಕೊಂಡಿದ್ದರು. ಈ ಸಂಬಂಧ ಹುಕ್ಕೇರಿ ಪೊಲೀಸರು ಕೇಸ್ ದಾಖಲಿಸಿಕೊಂಡು ತನಿಖೆ ನಡೆಸಿದ್ದು, ಮೂವರನ್ನು ಬಂಧಿಸಿದ್ದಾರೆ. ಉಳಿದವರಿಗಾಗಿ ಹುಡುಕಾಟ ನಡೆಸಿದ್ದಾರೆ. ವಾರದ ಹಿಂದೆ ಇದೇ ಊರಲ್ಲಿ ಸಂಗೀತಾ ಎಂಬುವರ ಮಗು ಮಾರಾಟವಾಗಿತ್ತು. ಸಂಗೀತಾ ಅವರಿಗೂ ಕೂಡ ಎರಡನೇ ಮದುವೆ ಮಾಡಿಸಿ, ಅವರ ಮೊದಲ ಮಗುವನ್ನು 4 ಲಕ್ಷ ರೂ.ಗೆ ಮಾರಲಾಗಿತ್ತು. ಈ ಪ್ರಕರಣದಲ್ಲಿ ಹುಕ್ಕೇರಿ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸಿದ್ದರು.
– ಬಿಹಾರದಿಂದ ಬೈಕ್ ನಲ್ಲಿ ಬಂದಿದ್ದ ಬೀದರ್ ದರೋಡೆಕೋರರು!
ಬೀದರ್ನಲ್ಲಿ 93 ಲಕ್ಷ ಎಟಿಎಂ ಹಣ ಲೂಟಿ ಮಾಡಿ ಪರಾರಿಯಾಗಿದ್ದ ಇಬ್ಬರು ಬಿಹಾರಿ ಡಕಾಯಿತರು ಮೊದಲು ಬಿಹಾರದ ಹಾಜಿಪುರದಿಂದ ಹೈದರಾಬಾದ್ವರೆಗೆ 1500 ಕಿ.ಮೀ.ನಷ್ಟು ಬೈಕ್ನಲ್ಲಿ ಸಂಚರಿಸಿ ಬಂದಿದ್ದರು ಎಂಬ ರೋಚಕ ಸಿಸಿಟಿವಿ ಸಾಕ್ಷ್ಯ ಲಭಿಸಿದೆ. ನಂತರ ಅಲ್ಲಿಂದ ಕರ್ನಾಟಕದ ಬೀದರ್ಗೆ ಆಗಮಿಸಿ ಎಟಿಎಂಗೆ ಹಣ ತುಂಬಲು ಬಂದಿದ್ದ ಹಣವನ್ನು ಸಿನಿಮೀಯ ರೀತಿಯಲ್ಲಿ ಲೂಟಿ ಮಾಡಿದ್ದರು. ಬಳಿಕ ಹೈದರಾಬಾದ್ಗೆ ತೆರಳಿ ಅಲ್ಲಿ ಅಪ್ಟಲ್ ಗಂಜ್ನಲ್ಲಿ ಕೊಲೆಗೆ ಯತ್ನಿಸಿ ಪರಾರಿ ಆಗಿದ್ದರು ಎಂದು ತಿಳಿದುಬಂದಿದೆ. ಪರಿಚಯಸ್ಥರ ಬೈಕ್: ಬಿಹಾರದ ಹಾಜಿಪುರ ಜಿಲ್ಲೆಯವರಾದ ಇಬ್ಬರೂ ಆರೋಪಿಗಳು ಅಪರಾಧ ಎಸಗುವ ಒಂದು ತಿಂಗಳಿಗೂ ಮುನ್ನ ತಮ್ಮ ಪರಿಚಯಸ್ಥರಿಂದ ಬೈಕ್ ಪಡೆದುಕೊಂಡು ಹೈದರಾಬಾದ್ವರೆಗೆ ಬರೋಬ್ಬರಿ 1.5 ಸಾವಿರ ಕಿ.ಮೀ. ಸಂಚರಿಸಿದ್ದರು ಎಂದು ತನಿಖೆ ಯಿಂದ ತಿಳಿದುಬಂದಿದೆ. ಅಫಲ್ ಗಂಜ್ನಲ್ಲಿ ನಡೆದ ಕೊಲೆ ಯತ್ನದ ಬಳಿಕ ಆರೋಪಿಗಳ ಪತ್ತೆಗೆ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ ಪೊಲೀಸರು ಈ ಮಾಹಿತಿಯನ್ನು ತಿಳಿಸಿದ್ದಾರೆ.
– ಮೈಸೂರು: ಪಿರಿಯಾಪಟ್ಟಣ ಬಳಿ ಹೃದಯಾಘಾತದಿಂದ ಎಸ್ಎಸ್ ಎಲ್ ಸಿ ವಿದ್ಯಾರ್ಥಿನಿ ಸಾವು
ಮೈಸೂರು : ಹೃದಯಾಘಾತದಿಂದ ಎಸ್ಎಸ್ಎಲ್ಸಿ ವಿದ್ಯಾರ್ಥಿನಿ ಮೃತಪಟ್ಟ ಘಟನೆ ಪಿರಿಯಾಪಟ್ಟಣ ತಾಲೂಕಿನ ಕೆಲ್ಲೂರು ಗ್ರಾಮದಲ್ಲಿ ಸೋಮವಾರ ಸಂಭವಿಸಿದೆ. ನಾಗರಾಜ್, ವಸಂತ ದಂಪತಿ ಪುತ್ರಿ ದೀಪಿಕಾ (15) ಮೃತಪಟ್ಟ ವಿದ್ಯಾರ್ಥಿನಿ. ರಾವಂದೂರು ಕರ್ನಾಟಕ ಪಬ್ಲಿಕ್ ಶಾಲೆಯ ವಿದ್ಯಾರ್ಥಿನಿ ದೀಪಿಕಾ ಇದ್ದಕ್ಕಿದ್ದಂತೆ ಅಸ್ವಸ್ಥಳಾಗಿದ್ದಾಳೆ. ತಕ್ಷಣವೇ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಮಾರ್ಗ ಮಧ್ಯೆ ಸಾವು ಸಂಭವಿಸಿದೆ
– ದೇಶದ ಮೊದಲ ಹೃದಯ ಬೈಪಾಸ್ ಸರ್ಜರಿ ಮಾಡಿದ್ದ ಡಾಕ್ಟರ್ ಚೆರಿಯನ್ ನಿಧನ
50 ವರ್ಷಗಳ ಹಿಂದೆ ದೇಶದಲ್ಲಿ ಮೊದಲ ಬಾರಿ ಹೃದಯ ಬೈಪಾಸ್ ಶಸ್ತ್ರಚಿಕಿತ್ಸೆ ನಡೆಸಿದ್ದ, ದೇಶದಲ್ಲೇ ಮೊದಲ ಶ್ವಾಸಕೋಶ ಕಸಿ ನಡೆಸಿದ್ದ ಖ್ಯಾತ ಹೃದಯ ತಜ್ಞ ಡಾ. ಕೆ.ಎಂ. ಚೆರಿಯನ್ ಭಾನುವಾರ ಬೆಂಗಳೂರಿನಲ್ಲಿ ಹೃದಯಾಘಾತದಿಂದ ನಿಧನರಾದರು. ಹೃದಯರೋಗ ಚಿಕಿತ್ಸೆಯಲ್ಲಿ ಅವರನ್ನು ಭಾರತದಲ್ಲೇ ಅವರನ್ನು ಪಿತಾಮಹ ಎಂದು ಬಣ್ಣಿಸಲಾಗುತ್ತಿತ್ತು. ಡಾ. ಚೆರಿಯನ್ ಮಣಿಪಾಲದಲ್ಲಿ ಶಿಕ್ಷಣ ಪೂರೈಸಿದ್ದು, ಚೆನ್ನೈನಲ್ಲಿ ಆಸ್ಪತ್ರೆಯನ್ನು ಸ್ಥಾಪಿಸಿದ್ದರು. ಅವರಿಗೆ 1991ರಲ್ಲಿ ಅವರಿಗೆ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಗಿತ್ತು. ಪ್ರಧಾನಿ ಮೋದಿ ಚೆರಿಯನ್ ನಿಧನಕ್ಕೆ ಸಂತಾಪ ವ್ಯಕ್ತಪಡಿಸಿದ್ದಾರೆ.