ಟಾಪ್ 5 ನ್ಯೂಸ್ ಕರ್ನಾಟಕ
– ಕಲಬುರಗಿ : ಜಿಲ್ಲಾಸ್ಪತ್ರೆಯಲ್ಲಿ ನವಜಾತ ಶಿಶು ಅಪಹರಣ!
– ಬಳ್ಳಾರಿ : ಬಳ್ಳಾರಿ ಆಸ್ಪತ್ರೇಲಿ ದುರಂತ ಮತ್ತೊಬ್ಬ ಬಾಣಂತಿ ಸಾವು
– ದಾವಣಗೆರೆ : ಪತಿಯ ಸಾವಿನ ಸುದ್ದಿ ಕೇಳಿ ಕುಸಿದು ಬಿದ್ದು ಪತ್ನಿ ಸಾವು
– ಚಿತ್ರದುರ್ಗ: ಲಾರಿಗೆ ಕಾರು ಡಿಕ್ಕಿ ವೈದ್ಯ ಸ್ಥಳದಲ್ಲೇ ದುರ್ಮರಣ
– ಚನ್ನಗಿರಿ: ಕಾರು ಡಿಕ್ಕಿ ಹೊಡೆದು ಎಂಟು ವರ್ಷದ ಬಾಲಕಿ ಸಾವು
NAMMUR EXPRESS NEWS
ಕಲಬುರಗಿ: ಕಲಬುರಗಿ ಜಿಮ್ಸ್ ಜಿಲ್ಲಾಸ್ಪತ್ರೆ ಆವರಣದಲ್ಲಿರುವ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಿಂದ ಸೋಮವಾರ ನವಜಾತ ಶಿಶುವಿನ ಅಪಹರಣವಾಗಿದೆ. ನರ್ಸ್ ವೇಷದಲ್ಲಿ ಬಂದಿದ್ದ ಇಬ್ಬರು ಮಹಿಳೆಯರು ಆಸ್ಪತ್ರೆಯ ಪ್ರಸೂತಿ ನಂತರದ ವಾರ್ಡ್ಗೆ ಬಂದು ಬ್ಲಡ್ ಟೆಸ್ಟ್ ಮಾಡಿಕೊಂಡು ಬರೋದಿದೆ ಬನ್ನಿ ಎಂದು ಶಿಶುವಿನ ಪೋಷಕರಿಗೆ ಯಾಮಾರಿಸಿ ಸಿನಿಮೀಯ ರೀತಿಯಲ್ಲಿ ಅಪಹರಿಸಿ ಪರಾರಿಯಾಗಿದ್ದಾರೆ. ಚಿಂಚೋಳಿಯ ಕಸ್ತೂರಿಬಾಯಿ ಭಾನುವಾರ ರಾತ್ರಿ 12ಕ್ಕೆ ಹೆರಿಗೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಸೋಮವಾರ ಬೆಳಗ್ಗೆ 5ರ ಸುಮಾರಿಗೆ ಸುಸೂತ್ರ ಹೆರಿಗೆಯಾಗಿ ಗಂಡು ಮಗು ಜನಿಸಿದೆ. ಸೋಮವಾರ ಮಧ್ಯಾಹ್ನ ಸುಮಾರು 3ಕ್ಕೆ ಪ್ರಸೂತಿ ಬಳಿಕ ವಾರ್ಡ್ ನಲ್ಲಿ ಬಂಧುಗಳ ಜೊತೆಗಿದ್ದಾಗಲೇ ಇಬ್ಬರು ಮಹಿಳೆಯರು ಕೃತ್ಯ ಎಸಗಿದ್ದಾರೆ. ಮಗುವಿನ ಅಜ್ಜಿ ಚಂದ್ರ ಕಲಾರಿಂದ ಶಿಶುವನ್ನು ಎತ್ತಿಕೊಂಡು ಅಲ್ಲಿಂದ ಪರಾರಿಯಾಗಿದ್ದಾರೆ. ಮಂಗಳವಾರ ಬೆಳಗ್ಗೆ ವೈದ್ಯಕೀಯ ಶಿಕ್ಷಣ ಸಚಿವ ಡಾ| ಶರಣಪ್ರಕಾಶ ಪಾಟೀಲ್ ಅವರು ಆಸ್ಪತ್ರೆಗೆ ಭೇಟಿ ನೀಡಿ, ಮಗುವಿನ ಕಿಡ್ನಾಪ್ ಪ್ರಕರಣದ ತನಿಖೆಗೆ ಆದೇಶಿಸಿದರು.
– ಬಳ್ಳಾರಿ : ಬಳ್ಳಾರಿ ಆಸ್ಪತ್ರೇಲಿ ದುರಂತ ಮತ್ತೊಬ್ಬ ಬಾಣಂತಿ ಸಾವು
ಬಳ್ಳಾರಿ: ಜಿಲ್ಲಾಸ್ಪತ್ರೆಯಲ್ಲಿ ಸಿಸೇರಿಯನ್ ಮಾಡಿಸಿ ಕೊಂಡ ಬಳಿಕ ಮತ್ತೋರ್ವ ಬಾಣಂತಿ ಮೃತಪಟ್ಟಿದ್ದಾರೆ. ಹೊಸಪೇಟೆ ಮೂಲದ ಮುಸ್ಕಾನ್ (22) ಮೃತರು. 15 ದಿನಗಳ ಅಂತರದಲ್ಲಿ ಮೃತಪಟ್ಟ ಬಾಣಂತಿಯರ ಸಾವಿನ ಸಂಖ್ಯೆ 4ಕ್ಕೆ ಏರಿಕೆ ಯಾಗಿದೆ. ನ.10ರಂದು ಮುಸ್ಕಾನ್ ಅವರು ಜಿಲ್ಲಾಸ್ಪತ್ರೆಯಲ್ಲಿ ಸಿಸೇರಿಯನ್ ಮಾಡಿಸಿಕೊಂಡಿದ್ದರು. ಬಳಿಕ ಆರೋಗ್ಯ ದಲ್ಲಿ ಏಕಾಏಕಿ ಏರುಪೇರಾಗಿತ್ತು. ಬಳಿಕ ನ.11ರಂದು ಬಿಮ್ಸ್ ಗೆ ದಾಖಲಿಸಲಾಗಿತ್ತು. ಬಿಮ್ಸ್ನಲ್ಲಿ 1 ದಿನ ಇದ್ದು ಚಿಕಿತ್ಸೆ ಪಡೆದಿದ್ದ ಮುಸ್ಕಾನ್, ಕಿಡ್ನಿ ಸಮಸ್ಯೆ ಹಿನ್ನೆಲೆಯಲ್ಲಿ ಡಯಾಲಿಸಿಸ್ ಮಾಡಿಸಲು ಕುಟುಂಬಸ್ಥರು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಸೋಮವಾರ ರಾತ್ರಿ ಮೃತಪಟ್ಟಿದ್ದಾರೆ. ಕಳೆದ ನ.7-13 ರವರೆಗೆ ಹೆರಿಗೆಗೆಂದು ಜಿಲ್ಲಾಸ್ಪತ್ರೆಗೆ ದಾಖಲಾದ 9 ಬಾಣಂತಿ ಯರ ಪೈಕಿ ಮುಸ್ಕಾನ್ ಕೂಡ ಒಬ್ಬರು. ಈ ಮೊದಲು ಲಲಿತಮ್ಮ, ನಂದಿನಿ, ರೋಜಾ ಸಾವನ್ನಪ್ಪಿದ್ದರು. ಇದೀಗ ಮತ್ತೊಬ್ಬ ಬಾಣಂತಿ ಮೃತಪಟ್ಟಿದ್ದಾರೆ. ಮತ್ತೊಬ್ಬ ಬಾಣಂತಿ ಸುಮಯಾ ಎಂಬುವರು ಬಿಮ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.
– ದಾವಣಗೆರೆ : ಪತಿಯ ಸಾವಿನ ಸುದ್ದಿ ಕೇಳಿ ಕುಸಿದು ಬಿದ್ದು ಪತ್ನಿ ಸಾವು
ದಾವಣಗೆರೆ : ಸಾವಿನಲ್ಲೂ ದಂಪತಿ ಒಂದಾಗಿರುವಂತಹ ಘಟನೆ ಜಿಲ್ಲೆಯ ಚನ್ನಗಿರಿ ತಾಲೂಕಿನ ದೇವರಹಳ್ಳಿಯಲ್ಲಿ ನಡೆದಿದೆ. ಕಸ್ತೂರಿ ರಂಗಪ್ಪ (65) ಮತ್ತು ಜಯಮ್ಮ (58) ಮೃತ ದಂಪತಿ. ಪಡಿತರ ಪಡೆಯಲು ನ್ಯಾಯಬೆಲೆ ಅಂಗಡಿಗೆ ಕಸ್ತೂರಿ ರಂಗಪ್ಪ ಹೋಗಿದ್ದಾರೆ. ಈ ವೇಳೆ ಕುಸಿದುಬಿದಿದ್ದು, ಅವರನ್ನು ಆಸ್ಪತ್ರೆಗೆ ಸಾಗಿಸುವಾಗ ಮೃತಪಟ್ಟಿದ್ದಾರೆ. ಇನ್ನು ಪತಿ ಸಾವಿನ ಸುದ್ದಿಯನ್ನು ಕುಟುಂಬಸ್ಥರು ಪತ್ನಿಗೆ ತಿಳಿಸಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆ ಪತ್ನಿ ಜಯಮ್ಮ ಕುಸಿದುಬಿದ್ದು ಅವರು ಕೂಡ ಸಾವನ್ನಪ್ಪಿದ್ದಾರೆ. ಆ ಮೂಲಕ ಸಾವಿನಲ್ಲೂ ಒಂದಾಗಿದ್ದಾರೆ.
– ಚಿತ್ರದುರ್ಗ: ಲಾರಿಗೆ ಹಿಂಬದಿಯಿಂದ ಕಾರು ಡಿಕ್ಕಿ ವೈದ್ಯ ಸಾವು
ಚಿತ್ರದುರ್ಗ: ಚಲಿಸುತ್ತಿರುವ ಲಾರಿಗೆ ಹಿಂಬದಿಯಿಂದ ಕಾರು ಡಿಕ್ಕಿ ಹೊಡೆದ ಪರಿಣಾಮ ಕಾರ್ನಲ್ಲಿದ್ದ ಚಿತ್ರದುರ್ಗ ಮೂಲದ ವೈದ್ಯ ಡಾ. ಜಿ.ಆರ್.ತಿಮ್ಮೇಗೌಡ (34) ಸಾವನ್ನಪ್ಪಿದ್ದಾರೆ. ದಾವಣಗೆರೆ ನಗರದ ಹೊರ ವಲಯದ ಬಾಡ ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿ 48 ರಲ್ಲಿ ಘಟನೆ ನಡೆದಿದೆ. ದಾವಣಗೆರೆಯಲ್ಲಿ ನಡೆದ ರಾಷ್ಟ್ರೀಯ ರಾಷ್ಟ್ರೀಯ ಮಕ್ಕಳ ಶ್ವಾಸಕೋಶ ತಜ್ಞ ಸಮಾವೇಶದಲ್ಲಿ ಪಾಲ್ಗೊಂಡು ವಾಪಸ್ಸಾಗುವ ವೇಳೆ ಘಟನೆ ನಡೆದಿದೆ. ಚಿತ್ರದುರ್ಗ ಜಿಲ್ಲೆಯ ಸಿರಿಗೆರೆ ಸರ್ಕಾರ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಡಾ.ತಿಮ್ಮೇಗೌಡ ವೈದ್ಯರಾಗಿದ್ದಾರೆ. ಡಿಕ್ಕಿಯ ರಭಸಕ್ಕೆ ಕಾರಿನ ಮುಂಭಾಗ ಸಂಪೂರ್ಣ ಜಖಂಗೊಂಡಿದೆ. ಸ್ಥಳಕ್ಕೆ ದಾವಣಗೆರೆ ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದಾರೆ.
– ಚನ್ನಗಿರಿ: ಕಾರು ಡಿಕ್ಕಿ ಹೊಡೆದು ಎಂಟು ವರ್ಷದ ಬಾಲಕಿ ಸಾವು
ಚನ್ನಗಿರಿ: ಕಾರು ಡಿಕ್ಕಿ ಹೊಡೆದು ಎಂಟು ವರ್ಷದ ಬಾಲಕಿ ಸಾವನ್ನಪ್ಪಿರುವಂತಹ ಘಟನೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಗೆದ್ಲೆಟ್ಟಿ ಗ್ರಾಮದ ಬಳಿ ನಡೆದಿತ್ತು. ರೂಪಾ (08) ಸಾವನ್ನಪ್ಪಿದ್ದ ಬಾಲಕಿ. ಈ ಹಿಂದೆ ಕೂಡ ಒಂದು ಮಗು ಸಾವನ್ನಪ್ಪಿತ್ತು. ಇದೇ ಕಾರಣಕ್ಕೆ ರೊಚ್ಚಿಗೆದ್ದ ಜನ ಮರದ ತುಂಡು, ವಾಹನ ಅಡ್ಡ ನಿಲ್ಲಿಸಿ ರಸ್ತೆ ತಡೆದು ಪ್ರತಿಭಟನೆ ಮಾಡಿದ್ದಾರೆ. ಸ್ಥಳಕ್ಕೆ ಸಂತೆಬೆನ್ನೂರು ಹಾಗೂ ಚನ್ನಗಿರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ಮಾಡಿದ್ದರು. ಕೆಲ ಹೊತ್ತು ರಸ್ತೆ ಸಂಚಾರ ಸ್ಥಗಿತವಾಗಿತ್ತು.