ಹೃದಯಾಘಾತಕ್ಕೆ ಬಲಿಯಾದ ಯುವ ನಟ!
– ಹಿಂದಿ, ತಮಿಳು ಕಿರುತೆರೆಯಲ್ಲಿ ಹೆಸರು ಮಾಡಿದ್ದ ಕನ್ನಡಿಗ
– ಕಾಡಾನೆಯ ದಾಳಿಗೆ 60 ವರ್ಷದ ವ್ಯಕ್ತಿ ಬಲಿ
– 1500 ಎಳೆ ನೀರು ಕದ್ದವರು ಗೂಗಲ್ ಪೇ ಮೂಲಕ ಸಿಕ್ಕಿ ಬಿದ್ದರು!
– ಸಾಲ: ಪತ್ರ ಬರೆದು ನಾಪತ್ತೆಯಾದ ಅಧಿಕಾರಿ!
NAMMUR EXPRESS NEWS
ಮಂಡ್ಯ: ಇತ್ತೀಚಿಗೆ ತಾನೇ ವಿಜಯ ರಾಘವೇಂದ್ರ ಪತ್ನಿ ಹೃದಯಾಘಾತವಾಗಿ ಮೃತಪಟ್ಟ ಘಟನೆ ಮಾಸುವ ಮುನ್ನವೇ 24 ವರ್ಷ ಯುವ ನಟ ಹೃದಯಾಘಾತದಿಂದ ದುರ್ಮರಣಕ್ಕೀಡಾದ ಘಟನೆ ನಡೆದಿದೆ. ಮೃತನನ್ನು ಪವನ್ ಎಂದು ಗುರುತಿಸಲಾಗಿದೆ. ಮೂಲತಃ ಇವರು ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲೂಕಿನ ಹರಿಹರಪುರ ಗ್ರಾಮದವರಾಗಿದ್ದು, ತಂದೆ ನಾಗರಾಜು, ತಾಯಿ ಸರಸ್ವತಿಯೊಂದಿಗೆ ಮುಂಬೈನಲ್ಲಿ ನೆಲೆಸಿದ್ದರು. ಮೃತ ಪವನ್ ಹಿಂದಿ ಹಾಗೂ ತಮಿಳು ಕಿರುತೆರೆಯಲ್ಲಿ ಕಲಾವಿದರಾಗಿ ಹೊರಹೊಮ್ಮುತ್ತಿದ್ದರು. ಅಲ್ಲದೆ ಬೆಳ್ಳಿ ತೆರೆ ಚಿತ್ರಗಳಲ್ಲಿ ಅಭಿನಯಿಸುವ ಕನಸು ಕೂಡ ಕಂಡಿದ್ದರು. ಆದರೆ ಪವನ್ ಗುರುವಾರ ನಸುಕಿನ ಜಾವ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಕಾಡಾನೆಯ ದಾಳಿಗೆ 60 ವರ್ಷದ ವ್ಯಕ್ತಿ ಬಲಿ!
ಕಾಡಾನೆ ದಾಳಿಗೆ ವ್ಯಕ್ತಿಯೋರ್ವ ಮೃತಪಟ್ಟಿರುವ ಘಟನೆ ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ತೋಕೆರೆ ಸಮೀಪ ನಡೆದಿದೆ. ಹನೂರು ತಾಲೂಕಿನ ಮಾರ್ಟಳ್ಳಿ ಗ್ರಾಮದ ಚೆನ್ನ ಮಾದಯ್ಯ (60)ಮೃತಪಟ್ಟ ದುರ್ದೈವಿ. ಚೆನ್ನಮಾದಯ್ಯ ಅನ್ಯ ಕಾರ್ಯ ನಿಮಿತ್ತ ತೋಕೆರೆ ಗ್ರಾಮಕ್ಕೆ ತೆರಳಿ ವಾಪಸ್ ಗ್ರಾಮಕ್ಕೆ ಬರುತ್ತಿದ್ದ ವೇಳೆ ಕಾಡಾನೆ ದಾಳಿ ನಡೆಸಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಈ ಸಂಬಂಧ ರಾಮಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
1500 ಎಳೆ ನೀರು ಕದ್ದವರು ಗೂಗಲ್ ಪೇ ಮೂಲಕ ಸಿಕ್ಕಿ ಬಿದ್ದರು!
ಬೆಂಗಳೂರಿನ ಜಯನಗರ ರಾಷ್ಟ್ರೀಯ ವಿದ್ಯಾಲಯ ಮೆಟ್ರೋ ನಿಲ್ದಾಣದ ಬಳಿ ರಾತ್ರೋರಾತ್ರಿ ಟಾಟಾ ಏಸ್ ವಾಹನದಲ್ಲಿ ಬಂದ ಖದೀಮರು ರಸ್ತೆ ಬದಿಯಲ್ಲಿ ಇಟ್ಟಿದ್ದ ಬರೋಬ್ಬರಿ 1,500 ಎಳನೀರನ್ನು ಕದ್ದುಕೊಂಡು ಹೋಗಿರುವ ಘಟನೆ ಆಗಸ್ಟ್ 7ರಂದು ಮುಂಜಾನೆ ಕಳ್ಳತನ ನಡೆದಿರುವುದು ವರದಿಯಾಗಿದೆ. ಈ ಬಗ್ಗೆ ಜಯನಗರ ಪೊಲೀಸ್ ಠಾಣೆಯಲ್ಲಿ ಮಾಲೀಕ ಸಲೀಂ ದೂರು ದಾಖಲಿಸಿದ್ದಾರೆ. ಕ್ಯಾಂಟರ್ ನಲ್ಲಿ ಬಂದ ಕಳ್ಳರು ಸುಮಾರು 1,500 ಎಳನೀರನ್ನು ಕಳ್ಳತನ ಮಾಡಿದ್ದಾರೆ. ನಂಬರ್ ಪ್ಲೇಟ್ಗೆ ಮಸಿ ಬಳಿದು ಖದೀಮರು ಕೃತ್ಯ ಎಸಗಿದ್ದಾರೆ.ಮೊದಲಿಗೆ ಇದನ್ನು ಸಣ್ಣ ಕೇಸ್ ಎಂದು ಪೊಲೀಸರು ಕಡೆಗಣಿಸಿದ್ದರು. ಆದರೆ ಬಳಿಕ ಯಾವುದೇ ಸುಳಿವೂ ಸಿಗದ ಆರೋಪಿಗಳನ್ನು ಬಂಧಿಸಿದ್ದೇ ರೊಚಕ ಎನಿಸಿಕೊಂಡಿದೆ.ಘಟನಾ ಸ್ಥಳದಲ್ಲಿ ಆರೋಪಿಗಳು ಯಾವುದೇ ಸುಳಿವು ಬಿಟ್ಟಿರಲಿಲ್ಲ. ಬಳಿಕ ಪೊಲೀಸರು ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದಾಗ ಗೂಗಲ್ ಪೇ ಬ್ಲೂ ದೊರೆತಿದೆ.
ಖದೀಮರ ಸೆರೆಗಾಗಿ ಪೊಲೀಸರು ಸುಮಾರು 60ಕ್ಕೂ ಹೆಚ್ಚು ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದ್ದಾರೆ. ಈ ವೇಳೆ ಕಳ್ಳರು ಮುಂಜಾನೆ ಉತ್ತರಹಳ್ಳಿ ಬಳಿ ಟೀ ಕುಡಿದ ದೃಶ್ಯ ಪತ್ತೆಯಾಗಿತ್ತು. ಅದೇ ಜಾಗದಲ್ಲಿ ಗೂಗಲ್ ಪೇನಲ್ಲಿ ಹಣ ಪಾವತಿ ಮಾಡಿದ್ದರು. ಬಳಿಕ ಅಲ್ಲಿಗೆ ತೆರಳಿದ ಪೊಲೀಸರು ಗೂಗಲ್ ಪೇ ನಂಬರ್ ಪಡೆದು ಯಾವ ಬ್ಯಾಂಕ್ ಖಾತೆಯಿಂದ ಹಣ ಸಂದಾಯ ಆಗಿದೆ ಎಂದುಪರಿಶೀಲಿಸಿದ್ದಾರೆ. ಈ ಮೂಲಕ ಪೊಲೀಸರು ಕಳ್ಳರ ಸುಳಿವನ್ನು ಪಡೆದಿದ್ದರು.ಘಟನೆಗೆ ಸಂಬಂಧಿಸಿದಂತೆ ತನಿಖೆ ನಡೆಸಿದ ಪೊಲೀಸರು ಇದೀಗ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಗೌತಮ್, ರಘು ಹಾಗೂ ಮಣಿಕಂಠ ಬಂಧಿತ ಆರೋಪಿಗಳು. ಈ ಮೂವರ ಮೇಲೆ ಈ ಹಿಂದೆ ಕೂಡಾ ಹಲವಾರು ಕೇಸ್ಗಳು ದಾಖಲಾಗಿವೆ. ರಘು ಮೇಲೆ ಕೊಲೆ ಯತ್ನ ಪ್ರಕರಣ ಕೂಡಾ ದಾಖಲಾಗಿದೆ.
ಸಾಲ: ಪತ್ರ ಬರೆದು ನಾಪತ್ತೆಯಾದ ಅಧಿಕಾರಿ!
ಚಾಮರಾಜನಗರ ತಾಲ್ಲೂಕು ಬಾನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜೀವಿಶ್ ಕುಮಾರ್ ಪತ್ರ ಬರೆದಿಟ್ಟು ನಾಪತ್ತೆಯಾಗಿರುವ ಘಟನೆ ನಡೆದಿದೆ. ಯಳಂದೂರು ತಾಲ್ಲೂಕು ಗೂಳಿಪುರ ಗ್ರಾಮದ ಜೀವಿಶ್ ಕುಮಾರ್ ನಾಪತ್ತೆಯಾದವರಾಗಿದ್ದಾರೆ. ಸಾಲದ ಒತ್ತಡ ತಡೆಯಲು ಆಗುತ್ತಿಲ್ಲ, ನನ್ನನ್ನು ಹುಡುಕಬೇಡಿ, ಎಲ್ಲರಿಗೂ ಧನ್ಯವಾದಗಳು ಎಂದು ಅವರು ಪತ್ರ ಬರೆದಿಟ್ಟಿದ್ದಾರೆ. ಜೀವಿಶ್ ಕುಮಾರ್ ಬೆಳಗ್ಗೆಯಿಂದ ನಾಪತ್ತೆಯಾಗಿದ್ದಾರೆ. ಇವರು ಕಳೆದ ಇಪ್ಪತ್ತು ವರ್ಷಗಳಿಂದ ಕೃಷಿ ಪತ್ತಿನ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆಲಸ ಮಾಡುತ್ತಿದ್ದರು.